ಅಂಕಣ

ಮನೋಲ್ಲಾಸ | ಆತ್ಮವಿಶ್ವಾಸವೆಂಬ ಅದಮ್ಯ ಶಕ್ತಿ

kishan

| ಭಾರತಿ ಎ. ಕೊಪ್ಪ

ಸಸ್ಯ ಸಂಬಂಧಿತವಾದ ಸಂಶೋಧನೆಗಳಿಂದ ಜಗತ್ಪ್ರಸಿದ್ಧ ರಾದವರು ಭಾರತೀಯ ವಿಜ್ಞಾನಿ ಜಗದೀಶಚಂದ್ರ ಬೋಸ್. ಅವರು ಒಮ್ಮೆ ಇಂಗ್ಲೆಂಡಿನಲ್ಲಿ ಕೆಲಸ ಮಾಡುವಾಗ, ಸಸ್ಯಗಳೂ ಪ್ರಾಣಿಗಳಂತೆ ನೋವನ್ನು ಅನುಭವಿಸುತ್ತವೆ, ಚಿವುಟಿದಾಗ ಬಳಲುತ್ತವೆ, ಕೆಲವೇ ನಿಮಿಷಗಳಲ್ಲಿ ಸಾಯುತ್ತವೆ ಎಂದೆಲ್ಲ ತಾವು ಕಂಡುಕೊಂಡ ಪ್ರಾಯೋಗಿಕ ಸತ್ಯವನ್ನು, ಇತರ ವಿಜ್ಞಾನಿಗಳೊಂದಿಗೆ ಪ್ರಯೋಗ ಕೂಡ ಮಾಡಿ ತೋರಿಸಲಿದ್ದರು. ಈ ಪ್ರಯೋಗ ನೋಡಲು ವಿಜ್ಞಾನಿಗಳೂ,ಅನೇಕ ಗಣ್ಯ ವ್ಯಕ್ತಿಗಳೂ ಸೇರಿದ್ದರು.

ಬೋಸರ ಪ್ರಯೋಗಕ್ಕೆ ಭೂಮಿಕೆ ಸಿದ್ಧವಾಯಿತು. ಅವರು ಒಂದು ಗಿಡಕ್ಕೆ ವಿಷವನ್ನು ಚುಚ್ಚಿದರು. ಕೆಲವೇ ನಿಮಿಷಗಳಲ್ಲಿ ಗಿಡ ಸಾಯಬೇಕಿತ್ತು. ಆದರೆ ಹಾಗಾಗಲಿಲ್ಲ. ಗಿಡಕ್ಕೆ ಏನೂ ಆಗಲಿಲ್ಲ. ಸಭಾಂಗಣದಲ್ಲಿದ್ದವರೆಲ್ಲರೂ ನಗಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ಬೋಸರ ಮನೋಸ್ಥೈರ್ಯ ಕುಗ್ಗಲಿಲ್ಲ. ಅವರು ಕಂಗೆಡಲಿಲ್ಲ. ಕಾರಣ, ‘ವಿಷ ಈ ಗಿಡಕ್ಕೆ ಅಪಾಯವನ್ನುಂಟು ಮಾಡದಿದ್ದ ಮೇಲೆ ನನಗೂ ಏನೂ ಮಾಡಲಾರದು’ ಎಂಬುದು ಅವರ ವಿಶ್ವಾಸವಾಗಿತ್ತು. ತಮ್ಮ ಪ್ರಯೋಗದ ಬಗ್ಗೆ ಅವರಿಗೆ ಅದಮ್ಯ ಆತ್ಮವಿಶ್ವಾಸವಿತ್ತು.

ಅದೇ ಆತ್ಮವಿಶ್ವಾಸದಿಂದ ಆ ವಿಷದ ಮದ್ದನ್ನು ತಮಗೇ ಚುಚ್ಚಿಕೊಳ್ಳಲು ಸಿದ್ಧರಾದರು! ಕೂಡಲೇ ಒಬ್ಬಾತ ಎದ್ದುನಿಂತು, ತಾನು ವಿಷಕ್ಕೆ ಬದಲಾಗಿ ಅದೇ ಬಣ್ಣದ ನೀರನ್ನು ತುಂಬಿಸಿರುವುದಾಗಿ ಒಪ್ಪಿಕೊಂಡ! ಅನಂತರ ಬೋಸರು ನಿಜವಾದ ವಿಷವನ್ನು ಗಿಡಕ್ಕೆ ಚುಚ್ಚಿದಾಗ ಅದು ಬಾಡಿ, ಮುದುರಿ ಸತ್ತುಹೋಯಿತು. ಆತ್ಮವಿಶ್ವಾಸದಿಂದ ನಡೆಸಿದ ಪ್ರಯೋಗ ದೃಢವಾಯಿತು. ಯಶ ಕಂಡಿತು. ಯಾವುದಾದರೂ ಕೆಲಸವನ್ನು ಬಲವಾದ ಆತ್ಮವಿಶ್ವಾಸದಿಂದ ಮಾಡಿದ್ದರೂ, ಅದನ್ನು ಸಮಾಜದ ಮುಂದೆ ಪ್ರತಿಪಾದಿಸುವಾಗ ಅನೇಕ ಅಡೆತಡೆಗಳು ಉಂಟಾಗಬಹುದು. ಅಂತೆಯೇ ಆ ಕೆಲಸವನ್ನು ಇತರರು ಮೆಚ್ಚದಂತೆ ಮಾಡಲು, ನಮಗರಿವಿಲ್ಲದೆ ಹುಳಿ ಹಿಂಡುವವರೂ ಇರುತ್ತಾರೆ. ಹುಳಿಮಜ್ಜಿಗೆಯಲ್ಲೂ ನುಣುಪಾದ, ಸವಿಯಾದ ಬೆಣ್ಣೆಯನ್ನು ತೆಗೆಯುವಂತೆ, ಕುಹಕಿಗಳ ನಡುವೆಯೂ ಜಗ ಮೆಚ್ಚುವ ಸಾಧನೆ ನಮ್ಮದಾಗಬೇಕು.

ಮಾಡುವ ಪ್ರತಿ ಕೆಲಸದಲ್ಲಿಯೂ ಶ್ರದ್ಧೆ, ಆತ್ಮವಿಶ್ವಾಸ, ನಂಬಿಕೆಗಳಿದ್ದರೆ ನಿಶ್ಚಿತ ಗುರಿ ತಲುಪುವುದರಲ್ಲಿ ಸಂದೇಹವಿಲ್ಲ. ಆಗಷ್ಟೇ ನಡೆಯಲು ಕಲಿತ ಮಗು ಅದೆಷ್ಟೇ ಬಾರಿ ಬಿದ್ದರೂ, ಮತ್ತೆ ಯತ್ನಿಸುತ್ತ ಆತ್ಮವಿಶ್ವಾಸ, ಸ್ವಯಂನಂಬಿಕೆ ಗಳಿಸಿಕೊಂಡು ಅಳುತ್ತ, ನಗುತ್ತ ಕ್ರಮೇಣ ದೃಢವಾದ ಹೆಜ್ಜೆಗಳನ್ನಿಡುತ್ತದೆ. ಅಂತೆಯೇ ನಮ್ಮೊಳಗಿನ ನಂಬಿಕೆ, ಆತ್ಮವಿಶ್ವಾಸ ನಮ್ಮ ಜೀವನದ ಹೆಜ್ಜೆಗಳನ್ನು ಬಲಗೊಳಿಸುತ್ತದೆ; ಸೋತಾಗ ನಕ್ಕವರ ಎದುರು ಎದ್ದುನಿಲ್ಲಲು ಊರುಗೋಲಾಗುತ್ತದೆ. ‘ಜನರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನಿನ್ನ ನಂಬಿಕೆಗಳಿಗೆ ನೀನು ಬದ್ಧನಾಗಿರು. ಆಗ ಇಡೀ ಜಗತ್ತೇ ನಿನ್ನ ಕಾಲಿಗೆ ಬೀಳುವುದು. ಮೊದಲು ನಿನ್ನಲ್ಲಿ ನೀನು ನಂಬಿಕೆ ಇಟ್ಟುಕೋ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ, ಕಷ್ಟಗಳಿಗಂಜದೆ, ಕರ್ತವ್ಯವನ್ನು ಮರೆಯದೆ ಸ್ವಯಂನಂಬಿಕೆ ಮತ್ತು ಆತ್ಮವಿಶ್ವಾಸದಿಂದ ಯಶಸ್ಸಿನ ಶಿಖರವನ್ನು ಏರೋಣ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)