ಅಂಕಣ

ಮಾತೃ ಋಣ: ಮನೋಲ್ಲಾಸ

Webdesk - Ravikanth
| ಕೆ. ಸುಮಂಗಲಾ ಅಡೂರು

ಮಾತೆಗೆ ಮಿಗಿಲಾದ ದೇವರಿಲ್ಲ. ಮಾತೃ ದೇವೋ ಭವ, ಭೂಮೇರ್ಗರೀಯಸೀ ಮಾತಾ, ಕುಮಾತಾ ನ ಭವತಿ... ಇತ್ಯಾದಿ ನುಡಿಗಳು ತಾಯಿಯ ಹಿರಿಮೆಯನ್ನು ಸಾರಿ ಹೇಳುತ್ತವೆ. ಒಮ್ಮೆ ಮಹಾಭಾರತದ ಭೀಮಸೇನನಿಗೆ ತನ್ನ ತಾಯಿಯ ಋಣವನ್ನು ತೀರಿಸುವ ಬಯಕೆಯಾಯಿತು. ತಾನಿಷ್ಟೊಂದು ಬಲಾಢ್ಯನಾಗಿರುವಾಗ ತಮಗಾಗಿ ಬಹಳ ಕಷ್ಟಪಟ್ಟಿರುವ ತನ್ನ ತಾಯಿಯನ್ನು ಸಂತೋಷಗೊಳಿಸುವ ಮನಸ್ಸಾಯಿತು. ಅದಕ್ಕಾಗಿ ಆತ ಮಾತೆ ಕುಂತಿಯನ್ನು ಎತ್ತಿಕೊಂಡು ಭೂಮಿಗೆ ಮೂರು ಸಾರಿ ಪ್ರದಕ್ಷಿಣೆ ಹಾಕಿ ಬಂದ. ನಂತರ ತಾಯಿಯನ್ನು ಕೆಳಗಿಳಿಸಿ, ‘ಅಮ್ಮಾ, ಈಗ ನಿನ್ನ ಋಣ ತೀರಿತೇ?’ ಎಂದು ಕೇಳಿದ. ಅದಕ್ಕೆ ಉತ್ತರವಾಗಿ ಕುಂತಿ ನಗುತ್ತಾ, ‘ಮಗನೇ, ನಿನ್ನನ್ನು ಗರ್ಭದಲ್ಲಿ ಇಟ್ಟುಕೊಂಡು ಒಂದು ಕೊಡ ನೀರು ತಂದಷ್ಟು ಋಣ ತೀರಿತು’ ಎಂದಳು. ಭೀಮನಿಗೆ ತನ್ನ ಅಜ್ಞಾನದ ಅರಿವಾಯಿತು. ಕೂಡಲೇ ಮಾತೆ ಕುಂತಿಯ ಚರಣಗಳಿಗೆ ನಮಸ್ಕರಿಸಿ, ‘ಅಮ್ಮಾ, ನಿನ್ನ ಋಣ ತೀರಿಸಲು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸು’ ಎಂದ.

ಹೌದು! ತಾಯಿ ಹಾಗೂ ತಂದೆಯ ಋಣ ತೀರಿಸಲು ಯಾವ ಮಕ್ಕಳಿಗೂ ಸಾಧ್ಯವಿಲ್ಲ. ಯಾಕೆಂದರೆ ನವ ಮಾಸಗಳ ಪರ್ಯಂತ ತನ್ನ ಗರ್ಭದಲ್ಲಿ ಇಟ್ಟುಕೊಂಡು ಸಾಕಷ್ಟು ನೋವನ್ನು ಅನುಭವಿಸಿ ಬಳಿಕ ಹೆರಿಗೆಯ ಸಂಕಟವನ್ನು ಸಹಿಸಿ ಆ ಮಗುವಿನ ಮುಖ ನೋಡಿ ಅವೆಲ್ಲಾ ಮರೆತು ಮಮತೆಯಿಂದ ಸಲಹುವವಳು ತಾಯಿ. ತಮ್ಮ ಕೊನೆಯ ಉಸಿರಿನ ತನಕವೂ ಮಕ್ಕಳ ಶ್ರೇಯಸ್ಸಿಗಾಗಿ ದುಡಿಯುವವರು ತಾಯಿ ಮತ್ತು ತಂದೆ.

ಆದ್ದರಿಂದ ತಾಯಿ ತಂದೆಯರ ಮನವನ್ನು ನೋಯಿಸದೆ ಅವರು ಹೆಮ್ಮೆಪಡುವಂತೆ ಬಾಳುವುದು ಮಕ್ಕಳ ಕರ್ತವ್ಯ. ಇದರಿಂದಲೇ ಬದುಕಿಗೆ ಸಾರ್ಥಕತೆ. ಮಾತಾ-ಪಿತರು ಮಕ್ಕಳ ಒಳಿತನ್ನು ಬಯಸುತ್ತಾರೆ. ಮಕ್ಕಳಿಂದ ಸನ್ನಡತೆಯ ಹೊರತು ಬೇರೇನನ್ನೂ ಬಯಸುವುದಿಲ್ಲ. ಆದ್ದರಿಂದ ಒಳ್ಳೆಯ ಮಕ್ಕಳಾಗೋಣ, ಒಳ್ಳೆಯ ಪ್ರಜೆಗಳಾಗೋಣ, ಒಳ್ಳೆಯ ಮನುಷ್ಯರಾಗೋಣ. ಈ ಮೂಲಕ ಮಾತ್ರವೇ ನಮ್ಮ ತಾಯಿ- ತಂದೆಯರ ಋಣವನ್ನು ತೀರಿಸಲು ಸಾಧ್ಯ.

(ಲೇಖಕರು ಹವ್ಯಾಸಿ ಬರಹಗಾರರು)