ಅಂಕಣ

ಸತ್ಯದ ಮಹಿಮೆ: ಮನೋಲ್ಲಾಸ

| ಸುಮಂಗಲಾ.ಕೆ ಅಡೂರು

ಒಂದು ದಿನ ಖಜಾನೆಯನ್ನು ಕೊಳ್ಳೆ ಹೊಡೆಯುವ ಉದ್ದೇಶದಿಂದ ಕಳ್ಳನೊಬ್ಬ ಮಧ್ಯರಾತ್ರಿ ಅರಮನೆಯತ್ತ ಸಾಗುತ್ತಿದ್ದ. ಅದೇ ಸಮಯಕ್ಕೆ ಆ ದೇಶದ ರಾಜನೂ ಮಾರುವೇಷದಲ್ಲಿ ಪ್ರಜೆಗಳ ಸ್ಥಿತಿಗತಿ ಅರಿಯಲೆಂದು ಅದೇ ದಾರಿಯಲ್ಲಿ ಬರುತ್ತಿದ್ದ. ಈ ಮಧ್ಯರಾತ್ರಿ ಸಂಚರಿಸುತ್ತಿರುವ ಇವನಾರಿರಬಹುದೆಂದು ರಾಜ ಮಾತಾಡಿಸಿದ. ತಾನು ಅರಮನೆಯಲ್ಲಿ ಕಳ್ಳತನಕ್ಕೆ ಹೊರಟಿರುವುದಾಗಿ ಕಳ್ಳ ಸತ್ಯವನ್ನೇ ಹೇಳಿದ. ಆಗ ರಾಜ ‘ನಾನೂ ನಿನ್ನೊಡನೆ ಬರಬಹುದೇ’ ಎಂದು ಕೇಳಿದ. ಅದಕ್ಕೆ ಆ ಕಳ್ಳ ‘ಖಂಡಿತವಾಗಿ ಬಾ. ನಿನಗೆ ಕಳ್ಳತನ ಅಭ್ಯಾಸವಿಲ್ಲವೆಂದು ಕಾಣುತ್ತದೆ. ನೀನು ಹೊರಗೆ ನಿಂತುಕೊಂಡು ಯಾರಾದರೂ ಅತ್ತ ಬರುತ್ತಿದ್ದಾರೋ ಎಂದು ನೋಡುತ್ತಿರು. ಸಿಕ್ಕಿದುದರಲ್ಲಿ ಅರ್ಧ ನಿನಗೆ’ ಎಂದ. ತನ್ನ ಚಾಕಚಕ್ಯತೆಯಿಂದ ಅರಮನೆಯ ಕೋಶಾಗಾರದ ಒಳಗೆ ಹೊಕ್ಕ. ಕಳ್ಳ ಸ್ವಲ್ಪ ಹೊತ್ತಿನಲ್ಲಿ ಗಂಟಿನೊಂದಿಗೆ ಹೊರಗೆ ಬಂದ. ಕಳ್ಳ ಎಲ್ಲಾ ವಸ್ತುಗಳನ್ನು ಸಮ ಸಂಖ್ಯೆಯಲ್ಲಿ ತಂದಿದ್ದು ಸುಲಭದಲ್ಲಿ ಹಂಚಿಕೊಳ್ಳಲು ಸಾಧ್ಯವಾಯಿತು. ಆತ ಅತ್ಯಮೂಲ್ಯವಾದ ಎರಡು ರತ್ನಹಾರಗಳನ್ನು ತೋರಿಸಿ ಹೇಳಿದ. ‘ಗೆಳೆಯಾ, ಇಂಥಾ ಹಾರ ಇನ್ನೂ ಒಂದಿತ್ತು. ಆದರೆ ಮೂರು ಹಾರಗಳನ್ನು ಹಂಚಿಕೊಳ್ಳಲು ಆಗುವುದಿಲ್ಲವಲ್ಲ ಎಂದು ಒಂದನ್ನು ಅಲ್ಲೇ ಬಿಟ್ಟೆ’ ಎಂದ. ಕಳ್ಳನ ಪ್ರಾಮಾಣಿಕತೆಗೆ ರಾಜ ಮನದಲ್ಲೇ ಬೆರಗಾದ. ಆಮೇಲೆ ಕಳ್ಳ ತನ್ನ ದಾರಿ ಹಿಡಿದ. ರಾಜ ಅರಮನೆಗೆ ಹಿಂದಿರುಗಿದ.

ಮರುದಿನ ಅರಮನೆಯ ಕೋಶಾಧಿಕಾರಿ ಖಜಾನೆಯ ಕಳ್ಳತನದ ವಿಚಾರ ಅರುಹಿದ. ರಾಜ ಅಚ್ಚರಿ ವ್ಯಕ್ತಪಡಿಸಿ ಏನೇನು ಕಳುವಾಗಿದೆ ಎಂದು ಕೇಳಿದ. ಕೋಶಾಧಿಕಾರಿ ತುಂಬಾ ಅಮೂಲ್ಯ ಒಡವೆಗಳು ಕಳವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಮೂರು ನವರತ್ನದ ಹಾರಗಳು ಇದ್ದವಲ್ಲಾ ಅವು ಮೂರೂ ಹೋಗಿವೆ ಎಂದ. ರಾಜನಿಗೆ ಕೂಡಲೇ ಕೋಶಾಧಿಕಾರಿಯ ದ್ರೋಹ ಅರ್ಥವಾಯಿತು. ಆ ಬಳಿಕ ಭಟರನ್ನು ಕರೆದು ತನಗೆ ಕಳ್ಳ ಕೊಟ್ಟಿದ್ದ ಸೊತ್ತುಗಳ ಒಂದು ಪಟ್ಟಿಯನ್ನು ಅವರಲ್ಲಿ ಕೊಟ್ಟು ಈ ಸೊತ್ತುಗಳು ಯಾರಲ್ಲಿ ಸಿಗುತ್ತವೋ ಅವನ್ನು ಸಭೆಗೆ ಕರೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿದ. ಸ್ವಲ್ಪ ಹೊತ್ತಿನಲ್ಲಿ ಭಟರು ಅದೇ ಕಳ್ಳನನ್ನು ಹಿಡಿದು ತಂದರು. ಕಳ್ಳನಿಗೆ ರಾಜನನ್ನು ನೋಡಿ ಜಂಘಾಬಲವೇ ಉಡುಗಿ ಹೋಯಿತು. ರಾಜ ಕೋಶಾಧಿಕಾರಿಯನ್ನು ಕೂಡ ಕರೆಸಿದ. ಹಿಂದಿನ ದಿನ ನಡೆದ ಎಲ್ಲಾ ವಿಷಯಗಳನ್ನೂ ಹೇಳಿ, ‘ಈತ ಕಳ್ಳನಾದರೂ ಇವನ ಪ್ರಾಮಾಣಿಕತೆ ಯಾರಾದರೂ ಮೆಚ್ಚುವಂಥದ್ದು. ಆದರೆ, ನಮ್ಮ ಆಶ್ರಯದಲ್ಲಿದ್ದು ಹಾರವನ್ನು ತಾನು ಬಚ್ಚಿಟ್ಟುಕೊಂಡು ಸುಳ್ಳು ಹೇಳಿದ ಈ ಕೋಶಾಧಿಕಾರಿಯನ್ನು ಕ್ಷಮಿಸಲು ಸಾಧ್ಯವಿಲ್ಲ. ಬೇಗ ಸರವನ್ನು ತಂದು ಕೊಟ್ಟು ಜೈಲುವಾಸವನ್ನು ತಪ್ಪಿಸಿಕೋ’ ಎಂದು ಗದರಿಸಿದ. ಆಧಿಕಾರಿ ಹೆದರಿ ಸರವನ್ನು ತಂದು ಕೊಟ್ಟು ಕ್ಷಮಾಪಣೆ ಕೇಳಿದ. ರಾಜ ಅವನನ್ನು ಹುದ್ದೆಯಿಂದ ಕೆಳಗಿಳಿಸಿ ಆ ಜಾಗದಲ್ಲಿ ಕಳ್ಳನನ್ನು ನೇಮಿಸಿದ. ಸತ್ಯವು ಕಳ್ಳನನ್ನು ಹೇಗೆ ಕಾಪಾಡಿತಲ್ಲವೇ? ಹಾಗೆಯೇ ನಾವೂ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಬಾಳೋಣ.