‘ಓದುವುದು ಕಷ್ಟದ ಕೆಲಸ. ಓದಿದ ಮೇಲಾದರೂ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆ ಅನ್ನೋದು ಗೊತ್ತಿಲ್ಲ. ಹೀಗಿರುವಾಗ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದುವುದರಲ್ಲಿ ಪ್ರಯೋಜನವಿಲ್ಲ. ಆದರೆ ಹಣವಿಲ್ಲದೇ ಬದುಕಿನ ಬಂಡಿ ಮುಂದೆ ಸಾಗದು. ಇದಕ್ಕೊಂದು ದಾರಿಯನ್ನು ಈಗಲೇ ಕಂಡುಕೊಳ್ಳಬೇಕು. ದುಡಿಯದೇ ಬೆವರು ಸುರಿಸದೇ ವಿಲಾಸಿ ಜೀವನ ನಡೆಸಬೇಕು’ ಎಂದುಕೊಂಡ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸಿದರು. ಅತಿ ಸುಲಭವಾದ ಮಾರ್ಗವೆಂದೆರೆ ಕಳ್ಳತನವೆಂದು ಆರಂಭಿಸಿದರು. ಆರಂಭದಲ್ಲಿ ಸಣ್ಣಪುಟ್ಟ ಕಳ್ಳತನದ ಕೈ ಚಳಕಗಳೊಂದಿಗೆ ಆರಂಭವಾಯಿತು. ಕಾಲಕ್ರಮೇಣ ದೊಡ್ಡ ದರೋಡೆಕೋರರಾಗಿ ಬೆಳೆದರು. ಒಮ್ಮೆ ಆಶ್ರಮವೊಂದರಲ್ಲಿ ಕಳ್ಳತನ ಮಾಡಿ ಎಲ್ಲವನ್ನೂ ದೋಚಿಕೊಂಡು ಇನ್ನೇನು ಪಾರಾಗಬೇಕು ಎನ್ನುವಷ್ಟರಲ್ಲಿ ಮಠದ ಗುರುಗಳು ದಾರಿಯಲ್ಲಿ ಪ್ರತ್ಯಕ್ಷರಾದರು! ತಾವು ಸಿಕ್ಕಿಬಿದ್ದೆವು ಎಂದು ಪೇಚಾಡುತ್ತ ಆ ವೃದ್ಧ ತಮ್ಮನ್ನು ಇನ್ನು ಪೊಲೀಸರ ವಶಕ್ಕೊಪ್ಪಿಸುವನೆಂದು ಚಿಂತಿಸತೊಡಗಿದರು. ‘ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕು. ಇಲ್ಲದಿದ್ದರೆ ಜೈಲಿನ ಸರಳುಗಳು ನಮಗೆ ಕಾಯಂ ಆಗುತ್ತವೆ’ ಎಂದು ಗುಸುಗುಸು ಮಾತನಾಡತೊಡಗಿದರು. ಕೈಯಲ್ಲೊಂದು ಚೀಲ ಹಿಡಿದಿದ್ದ ಆ ಗುರುಗಳು- ‘ಈ ಚೀಲವನ್ನು ಇಲ್ಲೇ ಏಕೆ ಬಿಟ್ಟಿರಿ? ನಿಮಗೆ ಉಪಯೋಗಕ್ಕೆ ಬರುವುದಾದರೆ ಇದನ್ನೂ ಕೊಂಡೊಯ್ಯಿರಿ’ ಎಂದರು. ಗುರುಗಳ ಮಾತುಗಳನ್ನು ಕೇಳಿದ ಅವರು ಬೆಚ್ಚಿಬಿದ್ದರು. ಅವರ ಮಾತಿನಲ್ಲಿ ಪ್ರಾಮಾಣಿಕತೆ ಎದ್ದು ಕಾಣುತ್ತಿರುವುದನ್ನು ಅರಿತರು. ಪಾಪಪ್ರಜ್ಞೆ ಕಾಡಿತು. ತಪು್ಪದಾರಿ ಹಿಡಿದಿದ್ದಕ್ಕೆ ಪಶ್ಚಾತಾಪವಾಯಿತು. ಹಾಗಾಗಿ, ತಾವು ಮಾಡಿದ ಪಾಪಕೃತ್ಯಕ್ಕೆ ಮರುಗಿ ಅವರೆಲ್ಲರೂ ಗುರುಗಳ ಕಾಲಿಗೆರಗಿದರು. ಮಠದ ಶಿಷ್ಯರಾದರು.
ಕ್ಷಮೆ ಎಲ್ಲರನ್ನೂ ಗೆಲ್ಲುತ್ತದೆ. ಕ್ಷಮೆ ಸಾಧು-ಸಂತರ, ಸಜ್ಜನರ ಸದ್ಗುಣವಾಗಿದೆ. ಕ್ಷಮಿಸುವಷ್ಟು ದೊಡ್ಡಗುಣ ನಮ್ಮಲ್ಲಿಲ್ಲ ಎಂದು ಶಿಕ್ಷಿಸುತ್ತಲೇ ಹೋಗುತ್ತೇವೆ. ಹೀಗೆ ಮತ್ತೆ ಮತ್ತೆ ಶಿಕ್ಷಿಸುವುದರಿಂದ ತಪ್ಪು ಒಪ್ಪಾಗುವುದಿಲ್ಲ. ಕಠಿಣ ಶಿಕ್ಷೆಗೆ ಸಾಧ್ಯವಾಗದ್ದನ್ನು ಅಂತರಾಳದಿಂದ ಹೊರಹೊಮ್ಮುವ ಕ್ಷಮೆಯ ಮಾತುಗಳು ಮಾಡುತ್ತವೆ, ಆ ಮೂಲಕ ಕಣ್ತೆರೆಸುತ್ತವೆ. ತಪ್ಪಾದುದನ್ನು ಮಾಡಲು ಸರಿಯಾದ ಮಾರ್ಗವಿಲ್ಲ. ವಜ್ರವನ್ನು ವಜ್ರದಿಂದ ಕತ್ತರಿಸಬಹುದು. ಮುಳ್ಳನ್ನು ಮುಳ್ಳಿನಿಂದ ತೆಗೆಯಬಹುದು. ಆದರೆ ಕೆಸರನ್ನು ಕೆಸರಿನಿಂದ ತೊಳೆಯಲು ಸಾಧ್ಯವಿಲ್ಲ. ಅಂತೆಯೇ ತಪ್ಪನ್ನು ತಪ್ಪಿನಿಂದ ತಿದ್ದಲಾಗದು. ತಪು್ಪದಾರಿಯಲ್ಲಿ ಇರುವವರನ್ನು ಸರಿ ಮಾಡಲು ನಾವೂ ತಪು್ಪದಾರಿಯಲ್ಲಿ ಹೋದರೆ ಸರಿ ಆಗದು. ತಪ್ಪಿನಿಂದ ತಪ್ಪನ್ನು ಎಂದೂ ಸರಿ ಮಾಡಲಾಗುವುದಿಲ್ಲ. ಆದ್ದರಿಂದ ಕ್ಷಮೆಯೆಂಬ ಪ್ರಾಮಾಣಿಕ ಸ್ನೇಹಿತನ ನೆರವು ಪಡೆಯಬೇಕು. ನಮ್ಮನ್ನು ನಾವು ಕ್ಷಮಿಸಿಕೊಂಡಂತೆ ಇತರರನ್ನೂ ಕ್ಷಮಿಸುವ ಗುಣ ಕಲಿತುಕೊಳ್ಳಬೇಕು. ಕ್ಷಮೆಯನ್ನು ನಂಬಿದ ವ್ಯಕ್ತಿ ಕ್ಷಮೆಯನ್ನು ನಂಬದ ವ್ಯಕ್ತಿಗಿಂತ ಹೆಚ್ಚು ಹೃದಯಗಳನ್ನು ಒಳ್ಳೆಯ ದಾರಿಗೆ ತರುತ್ತಾನೆ. ಮನಸ್ಸನ್ನೂ ಗೆಲ್ಲುತ್ತಾನೆ. ಕ್ಷಮೆಯ ಬೆಲೆ ಸಾಫಲ್ಯದ ಹೊರತು ಮತ್ತೇನಿಲ್ಲ.
ತಪ್ಪು ಯಾರದೇ ಇರಲಿ ಸರಿಹೆಜ್ಜೆ ನಮ್ಮದಾಗಿರಲಿ. ಅತಿ ಕಷ್ಟಕರವಾದ ಕೆಲಸವೆಂದರೆ ಕ್ಷಮಿಸಬೇಕೆಂದು ಮನಸ್ಸು ಹಾತೊರೆಯುತ್ತಿರುವಾಗ ಅದನ್ನು ತಡೆದು ನಿಲ್ಲಿಸುವುದು. ಸರಿಯೋ ತಪ್ಪೋ ಕ್ಷಮಿಸುವವನು ಯಾವಾಗಲೂ ಸರಿ. ಕ್ಷಮಿಸೋಣ, ಜೀವನವನ್ನು ಆನಂದಿಸೋಣ ಅಲ್ಲವೇ?
(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)