ಶ್ರೀರಂಗ ಮಹಾಗುರುಗಳು ಈ ಮಾತು ರಘುವಂಶದ ರಾಜರಿಗೆ ಮಾತ್ರವಲ್ಲದೆ, ಇಡೀ ಮನುಜಕುಲಕ್ಕೆ ಆದರ್ಶವಾಗಿದೆ ಎನ್ನುತ್ತಿದ್ದರು. ರಘುವಂಶದ ಅರಸರು ಶೈಶವದಲ್ಲಿಯೇ ಜೀವನಕ್ಕೆ ಸಂಬಂಧಿಸಿದ ಸಮಸ್ತ ವಿದ್ಯೆಗಳನ್ನೂ ಅಭ್ಯಾಸ ಮಾಡುತ್ತಿದ್ದರು. ವಿದ್ಯೆ ಎಂದರೆ ಯಾವುದು ನಮ್ಮನ್ನು ಬಂಧನಗಳಿಂದ ಬಿಡಿಸುತ್ತದೆಯೋ ಅದು (ಯಾ ವಿದ್ಯಾ ಸಾ ವಿಮುಕ್ತಯೇ). ಭಾರತೀಯವಾದ ಎಲ್ಲಾ ವಿದ್ಯೆಗಳ ಮೂಲವೂ ಒಳಬೆಳಗುವ ಪರಂಜ್ಯೋತಿಯೇ ಆಗಿದೆ. ಅಲ್ಲಿಂದಲೇ ವಿದ್ಯೆಗಳೆಲ್ಲ ಅರಳಿವೆ. ಆ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಾ ಹೋದಾಗ ಅದು ತನ್ನ ವಿಕಾಸದ ಹೆಜ್ಜೆಗಳಲ್ಲೆಲ್ಲಾ ಪರಮ ಆನಂದದ ಪರಿಮಳವನ್ನು ನೀಡಿ ಕೊನೆಯಲ್ಲಿ ಮತ್ತೆ ನಮ್ಮನ್ನು ನಮ್ಮ ಮೂಲ ನೆಲೆಯಾದ ಪರಮ ಶಾಂತಿಯಲ್ಲೇ ನಿಲ್ಲಿಸುತ್ತದೆ ಎಂಬುದು ಜ್ಞಾನಿಗಳ ಅನುಭವದ ಮಾತು. ಇಂತಹ ವಿದ್ಯಾಭ್ಯಾಸವೇ ನಮ್ಮ ಪ್ರಾಚೀನ ಗುರುಕುಲಗಳಲ್ಲಿ ನಡೆಯುತ್ತಿದ್ದುದು. ಅಂತಹ ವಿದ್ಯೆಗಳ ಪ್ರಯೋಜನವು ಜೀವನದ ಎಲ್ಲಾ ಹಂತಗಳಲ್ಲೂ ಆದಾಗ ಜೀವನ ಸರ್ವಾಂಗ ಸುಂದರ.
ಆ ವಿದ್ಯೆಯ ಬಲದ ಮೇಲೆಯೇ ರಘುವಂಶದ ರಾಜರು ಯೌವ್ವನದಲ್ಲಿ ವಿಷಯಸುಖಗಳನ್ನು ಅನುಭವಿಸುತ್ತಿದ್ದರು. ವಿದ್ಯೆಯಿಲ್ಲದೇ ವಿಷಯಸುಖ ಅನುಭವಿಸುವುದಾದರೆ ಅವುಗಳಿಂದ ದುಃಖವೇ ಹೆಚ್ಚಾಗುವ ಸಂಭವವಿರುತ್ತದೆ. ಹೊಟ್ಟೆ ಹಸಿವಾಯಿತೆಂದು ಕಂಡದ್ದೆಲ್ಲಾ ತಿಂದರೆ ಹಸಿವೇ ಹುಟ್ಟದ ಅಜೀರ್ಣ ಸ್ಥಿತಿ ಬರಬಹುದು. ಇಂದ್ರಿಯ ಸುಖಗಳೆಲ್ಲವೂ ಹೀಗೆಯೇ. ಅದು ಎಲ್ಲಿಂದ ಆರಂಭಿಸಿ ಎಲ್ಲಿ ಮುಗಿಸಬೇಕೆಂದು ತಿಳಿಯದಿದ್ದಾಗ ದುಃಖ, ರೋಗ ರುಜಿನಗಳಲ್ಲಿ ಪರ್ಯವಸಾನವಾಗುತ್ತದೆ. ಒಳಗಿನ ಆತ್ಮಸುಖಕ್ಕೆ ಅವಿರೋಧವಾಗಿ ಇಂದ್ರಿಯ ಸುಖ ಅನುಭವಿಸಲು ವಿದ್ಯೆಯ ಸಹಾಯ ಬೇಕು. ಅದನ್ನು ಜೀವನದ ಆರಂಭದಲ್ಲೇ ಅಭ್ಯಾಸ ಮಾಡುವುದೂ ಅತ್ಯಂತ ಮುಖ್ಯ. ಇಂತಹ ವಿದ್ಯೆಯು ನಮಗೆ ಜೀವನದಲ್ಲಿ ಸಾರ-ಅಸಾರಗಳ ವಿವೇಕವನ್ನು ಕೊಡುತ್ತದೆ.
ಅಂತಹ ವಿವೇಕದಿಂದಲೇ ವಾರ್ಧಕ್ಯದಲ್ಲಿ, ಕ್ಷಣಿಕವಾದ ಇಂದ್ರಿಯ ಸುಖಗಳ ಹಿಂದೆ ಓಡದೇ, ಸಾರಭೂತವಾದ, ಆತ್ಯಂತಿಕವಾದ ಒಳಸುಖದೆಡೆಗೆ ಮನಸ್ಸನ್ನು ಹರಿಸಲು ಸಾಧ್ಯವಾಗುತ್ತದೆ. ಇಂತಹ ಸಾರ್ಥಕವಾದ ಜೀವನವನ್ನು ಸರ್ವಾಂಗ ಸುಂದರವಾಗಿ ನಡೆಸಿದ ನಂತರ ಯೋಗದ ಸಹಾಯದಿಂದ ರಘುವಂಶದ ದೊರೆಗಳು ಶರೀರವನ್ನು ತ್ಯಾಗ ಮಾಡುತ್ತಿದ್ದರು. ಮಾಗಿದ ಹಣ್ಣೊಂದು ತಾನಾಗಿ ತೊಟ್ಟನ್ನು ಕಳಚಿ ಬೀಳುವಂತೆ. ಈಗಿನ ನಮ್ಮ ತಥಾಕಥಿತ ವಿದ್ಯಾಭ್ಯಾಸವೆಲ್ಲವೂ ಧನ ಸಂಪಾದನೆಗಷ್ಟೇ ಸೀಮಿತ. ಸಂಪಾದಿಸಿದ ಹಣದಲ್ಲಿ ಇಂದ್ರಿಯ ಸುಖಗಳ ಹಿಂದೆ ಕೊನೆ ಮೊದಲಿಲ್ಲದ ಓಟ. ಭಾರತೀಯ ವಿದ್ಯೆಗಳ ಅಭ್ಯಾಸವನ್ನು ಬಾಲಕನೊಬ್ಬ ಮಾಡಲು ತೊಡಗಿದರೆ ದೊಡ್ದವರೇ ‘ಈಗ ಅದೆಲ್ಲಾ ಏಕಪ್ಪಾ, ಅದೆಲ್ಲ ಕಣ್ಣು ಮಂಜಾದಾಗ, ಕೈಕಾಲುಗಳು ಶಕ್ತಿಹೀನವಾದಾಗ, ಕಡೆಗಾಲದಲ್ಲಿ ಮಾಡಬೇಕಾದವು’ ಎನ್ನುವ ಪರಿಸ್ಥಿತಿ ಇದೆ. ರಘುವಂಶದ ರಾಜರ ಉದಾತ್ತ, ನೆಮ್ಮದಿಯ ಜೀವನವನ್ನು ನಮ್ಮ ಜೀವನಾದರ್ಶವಾಗಿ ಇಟ್ಟುಕೊಳ್ಳುವ ಸದ್ಬುದ್ಧಿಯನ್ನು ಭಗವಂತ ನಮಗೆಲ್ಲ ಕರುಣಿಸಲಿ.
(ಲೇಖಕರು- ಸಂಸ್ಕೃತಿ ಚಿಂತಕರು, ಅಷ್ಟಾಂಗಯೋಗ ವಿಜ್ಞಾನಮಂದಿರಂ)