ಒಂದು ರಾಜ್ಯವನ್ನು ಸಮರ್ಥವಾಗಿ ಆಳುತ್ತಿದ್ದ ಮಹಾರಾಜನಿಗೆ ಮುಪು್ಪ ಆವರಿಸಿತು. ಅವನಿಗೆ ಮಕ್ಕಳಿಲ್ಲದ ಕಾರಣ ಮುಂದಿನ ರಾಜನ ಆಯ್ಕೆಗಾಗಿ ರಾಜ್ಯವನ್ನೆಲ್ಲ ಜಾಲಾಡಿ ಮೂರು ವೀರ ಯುವಕರನ್ನು ಕರೆತರಲಾಯಿತು. ಆ ಮೂವರೂ ಸಮಾನ ಪರಾಕ್ರಮಿಗಳಾಗಿದ್ದರು. ಯಾರನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಬೇಕೆಂಬ ಗೊಂದಲವಾಗಿ, ರಾಜ ಅವರನ್ನು ಬೇರೆ ಮಾನದಂಡಗಳಿಂದ ಪರೀಕ್ಷಿಸಿ ಆಯ್ಕೆ ಮಾಡಲು ನಿಶ್ಚಯಿಸಿದ. ಮೂವರು ವೀರರನ್ನು ಕರೆದು ಒಂದೊಂದು ಬಂಗಾರ ಹಾರವನ್ನು ನೀಡಿ, ‘ಈ ಹಾರವನ್ನು ನೀವು ನಿತ್ಯ ಧರಿಸಬೇಕು. ಎಲ್ಲಿಯೂ ತೆಗೆದಿರಿಸಬಾರದು. ಆರು ತಿಂಗಳ ನಂತರ ನೀವು ಧರಿಸಿರುವ ಹಾರವನ್ನು ಪರೀಕ್ಷಿಸಿ, ಉತ್ತರಾಧಿಕಾರಿಯ ಆಯ್ಕೆ ಮಾಡುತ್ತೇನೆ’ ಎಂದು ಘೊಷಿಸಿದ. ಮೂವರೂ ನಿತ್ಯ ಹಾರವನ್ನು ಧರಿಸಲಾರಂಭಿಸಿದರು. ಆರು ತಿಂಗಳ ನಂತರ ನಿಗದಿತ ದಿನದಂದು ಹಾರದೊಂದಿಗೆ ರಾಜನ ಎದುರು ಹಾಜರಾದರು. ಇಬ್ಬರ ಹಾರ ಮೊದಲಿನಂತೆಯೇ ಇತ್ತು. ಒಬ್ಬನ ಹಾರ ಮಾತ್ರ ಕಳೆಗುಂದಿತ್ತು. ಆತ ‘ಮಹಾರಾಜರೇ, ಕ್ಷಮಿಸಿ. ನಾನು ಧರಿಸಿದ ಕೆಲವೇ ದಿನಗಳಲ್ಲಿ ಈ ಹಾರ ಬಣ್ಣ ಕಳೆದುಕೊಂಡಿತು’ ಎಂದ. ರಾಜ, ‘ಇದರರ್ಥ ನೀನು ಈ ರಾಜ್ಯದ ರಾಜನಾಗಲು ಅರ್ಹನಲ್ಲ ಎಂದಲ್ಲ. ಮೂವರಲ್ಲಿ ನೀನು ಮಾತ್ರ ರಾಜನಾಗಲು ಯೋಗ್ಯವಾಗಿದ್ದೀಯ. ನಿಮ್ಮ ಪ್ರಾಮಾಣಿಕತೆಯನ್ನು ಪರೀಕ್ಷಿಸಲು ಎಲ್ಲರಿಗೂ ನಕಲಿ ಹಾರ ನೀಡಿದ್ದೆ. ರಾಜ ಕೇವಲ ಪರಾಕ್ರಮಿಯಾಗಿದ್ದರೆ ಸಾಲದು. ಪ್ರಾಮಾಣಿಕ, ಸತ್ಯಸಂಧನೂ ಆಗಿರಬೇಕು’ ಎಂದು ಉಳಿದ ಇಬ್ಬರ ಕಡೆ ತಿರುಗಿದ. ಆಗ ಅವರು ತಲೆತಗ್ಗಿಸಿ, ರಾಜನಾಗುವ ಆಸೆಯಿಂದ ತಾವು ಅದೇ ಮಾದರಿಯ ಬೇರೆ ಹಾರ ಮಾಡಿಸಿಕೊಂಡು ಧರಿಸಿ ಬಂದಿರುವುದಾಗಿ ತಿಳಿಸಿದರು.
ಇದೊಂದು ನೀತಿಕಥೆಯೆನಿಸಿದರೂ ಮನುಷ್ಯನ ಮನೋ ಭಿನ್ನತೆಗಳನ್ನು ತೆರೆದಿಡುತ್ತದೆ. ಇಬ್ಬರು ತಮ್ಮ ಕುಂದುಕೊರತೆ, ನಿಜಸ್ಥಿತಿಗಳನ್ನು ಮುಚ್ಚಿಟ್ಟು ರಾಜನಾಗುವ ಆಸೆ ಹೊಂದಿದವರು. ಅವರಿಗೆ ಸಿಂಹಾಸನ ಮಾತ್ರ ಗುರಿಯಾಗಿದ್ದರಿಂದ ವಾಸ್ತವವನ್ನು ತಮಗೆ ಬೇಕಾದ ಹಾಗೆ ಬದಲಾಯಿಸಲು ನೋಡಿದರು. ಆದರೆ ರಾಜ ನಡೆಸಿದ ಪರೀಕ್ಷೆಯಲ್ಲಿ ಅತೀಬುದ್ಧಿವಂತಿಕೆ ತೋರಿದ ಇಬ್ಬರಿಗಿಂತ ಪ್ರಾಮಾಣಿಕತೆ ತೋರಿದ ಒಬ್ಬನಿಗೆ ಗೆಲುವಾಯಿತು. ಕಾರಣ ಆತ ಇದ್ದುದ್ದನ್ನು ಇದ್ದಹಾಗೆಯೇ ಒಪ್ಪಿಕೊಳ್ಳುವ ಮನೋಭಾವದವನಾಗಿದ್ದ. ಸೋಲು ಯಾರಿಗೂ ಇಷ್ಟವಾಗುವುದಿಲ್ಲ. ಎಲ್ಲರಿಗೂ ತಾನು ಗೆಲ್ಲಬೇಕು ಎಂಬ ಬಯಕೆ ಇರುವುದು ಸಹಜ. ಇಂಥ ಬಯಕೆಗಳು ಬದುಕನ್ನು ಸದಾ ಚಲನಶೀಲವಾಗಿಸುತ್ತವೆ. ಆದರೇ ಗೆಲ್ಲಲೇಬೇಕು.. ಹೆಚ್ಚಿನದನ್ನು ಪಡೆಯಲೇಬೇಕು ಎಂಬ ಆಸೆಯಿಂದ ಮುಖವಾಡ ತೊಟ್ಟು, ಅಡ್ಡದಾರಿಯ ತಂತ್ರಗಳಿಂದ ಗೆದ್ದರೆ, ಆ ಗೆಲುವು ಒಮ್ಮೊಮ್ಮೆ ಜಗವನ್ನು ನಂಬಿಸಬಹುದು. ಆದರೆ ಅಂತರಾತ್ಮವನ್ನು ಎಂದೂ ತೃಪ್ತಿಪಡಿಸುವುದಿಲ್ಲ. ಸುಳ್ಳೆಂಬ ಜೊಳ್ಳು ಗಾಳಿಯಲ್ಲಿ ತೇಲಬಹುದು. ಆದರೆ ಮೊಳಕೆಯೊಡೆಯಲು ಅಂತಃಸತ್ವ ಹೊಂದಿದ ಗಟ್ಟಿ ಕಾಳಿಗೆ ಮಾತ್ರ ಸಾಧ್ಯ. ಸೋಲಿನ ಹಿಂದೆ ಪ್ರಾಮಾಣಿಕತೆಯಿದ್ದಲ್ಲಿ ಅದು ಸೋಲಲ್ಲ. ಅದು ಪ್ರಾಮಾಣಿಕತೆಗೆ ಸಂದ ಗೆಲುವು ಎಂಬುದನ್ನು ನೆನಪಿಡೋಣ.
ಅರ್ಹತೆಯಿರಲು ಗೆಲುವು ನಮ್ಮದು/ಗುರಿಯ ಸೇರಲು ವಕ್ರ ದಾರಿಗಳೇಕೆ ನಮ್ಮ ನಾವು ಗೆಲ್ಲಬೇಕಿದೆ ಮೊದಲು/ಬೇಡ ಬಯಕೆ ತನ್ನದಲ್ಲದ ಯಶಕೆ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)