ಅಂಕಣ

ಸಂತೃಪ್ತಿ ಎಂಬ ದೊಡ್ಡ ಶ್ರೀಮಂತಿಕೆ: ಮನೋಲ್ಲಾಸ

Webdesk - Ravikanth
| ಸುಮನ ಹಂಪಿಹೋಳಿ

ಒಮ್ಮೆ ಮಹರ್ಷಿ ನಾರದರು ಭಗವಾನ್ ಶ್ರೀಕೃಷ್ಣನನ್ನು ಕೇಳಿದರಂತೆ- ‘ಈ ಪ್ರಪಂಚದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರಲ್ಲ, ಯಾಕೆ?’. ಆಗ ಶ್ರೀಕೃಷ್ಣ ಮುಗುಳ್ನಗುತ್ತ, ‘ಸುಖ-ದುಃಖ ಎಲ್ಲರ ಬಳಿಯೂ ಇದೆ. ಆದರೆ ಇನ್ನೊಬ್ಬರ ಸಂತೋಷ ಕಂಡು ಹೆಚ್ಚು ದುಃಖಿಗಳಾಗಿದ್ದಾರೆ ಅಷ್ಟೇ!’ ಅಂತ ಹೇಳಿದ. ನಿಜ ಅಲ್ಲವೇ? ಈ ಜಗತ್ತಿನಲ್ಲಿ ಕ್ರಿಮಿಕೀಟಗಳಿಂದ ಹಿಡಿದು ಮಾನವನವರೆಗಿನ ಎಲ್ಲ ಪ್ರಾಣಿಗಳು ಹುಟ್ಟಿನಿಂದ ಸಾಯುವವರೆಗೆ ಸುಖ, ಸಂಪಾದನೆಗೆ ಹೆಣಗಾಡುತ್ತಿರುತ್ತವೆ. ಅವು ಮಾಡುವ ಕ್ರಿಯೆ, ಉಪಭೋಗಿಸುವ ಸಾಧನಗಳು ಮಾತ್ರ ಭಿನ್ನವಾಗಿರುತ್ತವೆ. ಮಾನವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಅವನ ಸುಖ-ದುಃಖದ ಸಾಧನಗಳು ಯಾವವು? ಅವು ಕಾಲ, ಕಾಲಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ. ಶೈವದಲ್ಲಿ ತಾಯಿಯೇ ಸುಖದ ಸರ್ವಸ್ವವೆಂದು ಬಗೆದರೆ, ಬಾಲ್ಯದಲ್ಲಿ ಆಟ, ಪಾಠ, ತಿಂಡಿ-ತಿನಿಸುಗಳೇ ಸಕಲ ಸುಖದ ಆಗರವೆಂದು ಭಾವಿಸುತ್ತಾನೆ. ಯೌವನದಲ್ಲಿ ತನಗೆ ಅನುರೂಪಳಾದ, ಸುಗುಣಿ, ಸುಂದರಿಯಾದ ಪತ್ನಿ ದೊರಕಿದರೆ ತಾನು ಸುಖಿಯಾಗಬಲ್ಲೆ ಎಂದು ತಿಳಿದರೆ, ಮದುವೆಯಾದ ನಂತರ ಸ್ವಾದಿಷ್ಟ ಭೋಜನ, ಸಂಪತ್ತು, ಅಂತಸ್ತು ಇಂತಹ ಅನೇಕ ಸುಖ-ಭೋಗದ ಸಾಧನೆಗಳನ್ನು ಸಂಪಾದಿಸಿದರೆ ತಾನು ನಿಜವಾಗಿಯೂ ಸುಖಿ ಎಂದು ಆಶಿಸುತ್ತಾನೆ. ಇವೆಲ್ಲ ದೊರಕಿದಾಗಲೂ ಅವನಿಗೆ ತೃಪ್ತಿ ಸಿಗುವುದೇ? ಖಂಡಿತವಾಗಿಯೂ ಇಲ್ಲ...! ಸಮಾಜದಲ್ಲಿ ತನಗೆ ವರ್ಚಸ್ಸು ಬೇಕು, ತಾನೊಬ್ಬ ಗಣ್ಯವ್ಯಕ್ತಿ ಎನಿಸಿಕೊಂಡು ಜನರ ಸ್ತುತಿಗೆ ಪಾತ್ರನಾಗಬೇಕು ಎಂಬ ವಾಂಛೆ.

ಈ ಸ್ಥಿತಿಯನ್ನು ಅವಲೋಕಿಸಿದರೆ ಮನುಷ್ಯ ತನ್ನಲ್ಲಿ ತಾನು ತಯಾರು ಮಾಡಿಕೊಳ್ಳುವ ಕಲ್ಮಶ ಹೃದಯವೇ ದುಃಖಕ್ಕೆ ಕಾರಣ. ಆತನ ದೈವಿಗುಣವೇ ಸುಖಕ್ಕೆ ಕಾರಣ. ಉನ್ನತ ಗುರಿ, ಅದನ್ನು ತಲುಪಲು ನಿರ್ಮಲ ಹೃದಯ ಇರಬೇಕು, ಆಗಲೇ ಜೀವನ ಸುಖದ ಸಾಗರವಾಗುವುದು. ಪರಿಶುದ್ಧ ಹೃದಯ ಹಾಗೂ ಉನ್ನತ ಗುರಿಯನ್ನು ಇಟ್ಟುಕೊಳ್ಳುವುದು ನಮ್ಮ ಕೆಲಸವೇ! ಅದು ಮತ್ತೊಬ್ಬರ ಕೆಲಸವಲ್ಲ. ಅನ್ಯರು ಎಷ್ಟು ಹಣವಂತರು? ಎಷ್ಟು ಬಲವಂತರು? ಎಷ್ಟು ಕೀರ್ತಿವಂತರು? ಎಂದು ಮಾತ್ಸರ್ಯದಿಂದ ಕೊರಗಿದರೆ ಅದು ದೇವರಿಗೆ ಎಸಗುವ ಅಪರಾಧವಾದೀತು.

ಯಾವಾಗ ಜನರಲ್ಲಿ ಧರ್ಮ-ಕರ್ಮಗಳಲ್ಲಿ ಶ್ರದ್ಧೆ ಕಡಿಮೆಯಾಗುವದೋ ಅಂದಿನಿಂದ ಸುಖ, ಸಂತೃಪ್ತಿಯೂ ಕಡಿಮೆಯಾಗುತ್ತದೆ. ಸುಖ ಬೇರೆ ಎಲ್ಲಿಯೂ ಇಲ್ಲ. ಅದು ನಮ್ಮೊಳಗೇ ಇದೆ. ದೇವರು ನಮಗೆ ಏನು ದಯಪಾಲಿಸಿದ್ದಾನೋ ಅದರಲ್ಲಿ ತೃಪ್ತಿಯಿಂದ ಇದ್ದರೆ ಅದೇ ಸುಖ. ಸುಖ ಎನ್ನುವುದು ಮನಸ್ಸಿನ ಸ್ಥಿತಿ.

ನಾವು ಬಯಸುವ ವಸ್ತು ಸಿಕ್ಕರೆ ಅದು ಸುಖ. ಅದೇ ವಸ್ತು ನಮಗೆ ದೊರೆಯದಿದ್ದಾಗ ಅಥವಾ ನಮ್ಮಿಂದ ದೂರವಾದಾಗ ಅದುವೇ ದುಃಖ. ಮನುಷ್ಯನು ಎರಡು ವಿಷಯಗಳಲ್ಲೂ ಅಸಹಾಯಕ ಎಂಬುದು ವಾಸ್ತವ. ಸುಖವನ್ನು ಕೊಳ್ಳಲಾರ, ದುಃಖವನ್ನು ಮರೆಯಲಾರ. ಕಷ್ಟ, ನೋವು, ನಿರಾಸೆ, ದುಃಖ ಎಲ್ಲವೂ ಎಲ್ಲರಿಗೂ ಇದೆ. ಇವುಗಳ ಮಧ್ಯೆ ಸಂತೋಷ, ತೃಪ್ತಿಯಿಂದ ಬದುಕುವುದೇ ಜೀವನ. ಅತಿದೊಡ್ಡ ಶ್ರೀಮಂತಿಕೆ ಯಾವುದಾದರೂ ಇದ್ದರೆ ಅದುವೇ ಸಂತೃಪ್ತಿ ಎಂಬುದನ್ನು ಮರೆಯದೆ ಅಂತರಂಗದಲ್ಲಿ ಸುಖವನ್ನು ಸ್ಥಾಪಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)