ಅಂಕಣ

ಮಾಡಿದ್ದುಣ್ಣೋ ಮಹಾರಾಯ: ಮನೋಲ್ಲಾಸ

Webdesk - Ravikanth
| ಬೀರಣ್ಣ ನಾಯಕ ಮೊಗಟಾ

ಶಿವಪುರ ಎನ್ನುವ ಸುಂದರ ಊರಿನಲ್ಲಿ ತಿಪ್ಪ ಎನ್ನುವ ಬಾವಿ ಕೆಲಸ ಮಾಡುವ ಹಾಗೂ ಕಾಶಿ ಎನ್ನುವ ಗಾರೆ ಕೆಲಸ ಮಾಡಿ ಜೀವನ ಸಾಗಿಸುವ ಕುಟುಂಬ ಅಕ್ಕಪಕ್ಕದಲ್ಲಿ ವಾಸವಾಗಿದ್ದರು. ತಿಪ್ಪ ಅಹಂಕಾರಿ. ಕಾಶಿ ಎಲ್ಲರೊಳು ಬೆರತು ಜೀವನದ ರಥ ಎಳೆಯುವವ.

ತಿಪ್ಪನ ಮನೆಯ ಮಾಡಿಗೆ ಹೊಂದಿಕೊಂಡು ದಂಪತಿ ಹಕ್ಕಿಗಳು ಬಹಳ ವರ್ಷದಿಂದ ಗೂಡು ಕಟ್ಟಿ ಬದುಕು ಸಾಗಿಸುತ್ತಿದ್ದವು. ಮೊಟ್ಟೆ ಹಾಕಿ ಮರಿ ಮಾಡಿದ ಎಷ್ಟೋ ಬಲಿತ ಮರಿಗಳು ಅಲ್ಲಿಂದ ಹಾರಿ ಹೋಗಿ ಹೊರ ಜಗತ್ತಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದವು. ಹುಳ ಹುಪ್ಪಡಿ, ಕ್ರಿಮಿಕೀಟಕಗಳೆ ಆ ಹಕ್ಕಿಗಳ ಆಹಾರವಾಗಿತ್ತು. ಅವು ತಿಪ್ಪನ ಮನೆಯ ಸುತ್ತುಮುತ್ತಲೆ ಸಿಗುವುದರಿಂದ ಹಕ್ಕಿಗಳು ಸುಖದಿಂದ ಜೀವನ ಸಾಗಿಸುತ್ತಿದ್ದವು.

ಹೀಗೆ ದಿನಕಳೆಯುತ್ತಿದ್ದಂತೆ ತಿಪ್ಪನ ಮನದಲ್ಲಿ ಈ ಹಕ್ಕಿಗಳಿಗೆ ನಮ್ಮ ಮನೆ ಬಿಟ್ಟರೆ ಬೇರೆ ಗತಿಯೇ ಇಲ್ಲ ಎಂಬ ಭಾವನೆ ಮೂಡತೊಡಗಿತು. ಅಂದಿನಿಂದ ಪ್ರತಿನಿತ್ಯ ಹಕ್ಕಿಗಳಿಗೆ ಅಪಮಾನ ಆಗುವ ಹಾಗೆ ಮಾತಾಡತೊಡಗಿದ. ಹಾಗೆ ಹೇಳಬೇಡಿ ಎಂದು ಹೆಂಡತಿ ಗೋಗೆರದರೂ ಅವಳ ಮಾತಿಗೆ ಬೆಲೆಯನ್ನೆ ನೀಡುತ್ತಿರಲಿಲ್ಲ.

ಹಕ್ಕಿಗಳು ತುಂಬಾ ನೋವಿನಿಂದ ತಿಪ್ಪನ ಮನೆ ಬಿಟ್ಟು ಕಾಶಿ ಮನೆಯ ಮಾಡಿನ ಅಂಚಿಗೆ ಗೂಡು ಕಟ್ಟಲಾರಂಭಿಸಿದವು. ಕಾಶಿ ಮತ್ತು ಅವನ ಮಡದಿ ಹಕ್ಕಿಗಳು ಗೂಡು ಕಟ್ಟುವಾಗ ಅವುಗಳಿಗೆ ಸಹಾಯ ಮಾಡಿದರು.

ಹೀಗೆ ಹಲವು ದಿನಗಳು ಉರುಳಿದವು. ತಿಪ್ಪನಿಗೆ ರಾತ್ರಿ ನಿದ್ದೆಯೇ ಬಾರದಂತಾಯಿತು. ಹುಳ ಹುಪ್ಪಡಿ, ಕ್ರಿಮಿ ಕೀಟಕಗಳು ಮನೆಯೊಳಗೆ ಸೇರಿ ತಿಪ್ಪನಿಗೆ ನಿದ್ದೆಯನ್ನೇ ಕೊಡದಂತೆ ಮಾಡಿದವು. ತಿಪ್ಪ ತನ್ನ ಪರಿಸ್ಥಿತಿಯನ್ನು ಮಡದಿಯೊಡನೆ ತೋಡಿಕೊಂಡು ಗೋಳಾಡಿದ. ಆಗ ತಿಪ್ಪನ ಹೆಂಡತಿಯು, ‘ಹಕ್ಕಿಗಳು ನಮ್ಮ ಮನೆಯಲ್ಲೆ ಇದ್ದರೆ ಈ ಹುಳ ಹುಪ್ಪಡಿ, ಕ್ರಿಮಿಕೀಟಗಳನೆಲ್ಲ ತಿಂದು ಮನೆಯೊಳಗೆ ಅವು ಬರದಂತೆ ನೋಡಿಕೊಳ್ಳುತ್ತಿದ್ದವು. ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ನಿಮ್ಮ ಗತಿ’ ಎಂದಳು. ತಿಪ್ಪನಿಗೆ ತನ್ನ ತಪ್ಪಿನ ಅರಿವಾಗಿ ಮುಖ ಕೆಳಗೆ ಮಾಡಿ ಕುಳಿತ.

ನಮ್ಮ ಬದುಕು ಒಬ್ಬರಿಗೊಬ್ಬರು ಪೂರಕವಾಗಿರಬೇಕು. ನಾನು, ನಾನೊಬ್ಬನೇ ಎನ್ನುವ ಅಹಂಕಾರ ಬದಿಗಿಟ್ಟು ಎಲ್ಲರೂ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸತ್ಯದ ಅರಿವು ನಮ್ಮದಾಗಬೇಕು.

(ಲೇಖಕರು ವಿಶ್ರಾಂತ ಪ್ರಾಂಶುಪಾಲರು)