ಒಂದೂರಿನಲ್ಲಿ ಬಹಳ ವರ್ಷದಿಂದ ಅಂಗಡಿಯನ್ನಿಟ್ಟಿದ್ದ ವ್ಯಕ್ತಿ ವ್ಯಾಪಾರದಲ್ಲಿ ಮೋಸ ಮಾಡುತ್ತಿದ್ದ. ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಮಾತನಾಡಿಸುತ್ತಿದ್ದ ಕಾರಣಕ್ಕೆ ಅದು ಅವರಿಗೆ ತಿಳಿಯುತ್ತಿರಲಿಲ್ಲ. ಒಂದೊಮ್ಮೆ ತಿಳಿದವರು ‘ನಮ್ಮವ’ ಎಂಬ ಕಾರಣಕ್ಕೆ ಸುಮ್ಮನಾಗುತ್ತಿದ್ದರು. ಅದೇ ರಸ್ತೆಯಲ್ಲಿ ಪರವೂರಿನ ವ್ಯಕ್ತಿಯೊಬ್ಬ ಹೊಸದಾಗಿ ಅಂಗಡಿ ತೆರೆದ. ಅವನು ವ್ಯಾಪಾರದಲ್ಲಿ ತುಂಬ ಪ್ರಾಮಾಣಿಕ. ಯಾವುದೇ ಮೋಸದ ವ್ಯವಹಾರವಿರಲಿಲ್ಲ. ಆದರೆ ವ್ಯಕ್ತಿತ್ವದಲ್ಲಿ ಭಾರಿ ಕಟ್ಟುನಿಟ್ಟು. ಮತ್ತೊಬ್ಬರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಆದರೆ ಒಂದು ದಿನ ಆಕಸ್ಮಿಕವಾಗಿ, ಅವನ ಅರಿವಿಲ್ಲದ ಹಾಗೆ ಸಾಸಿವೆ ಚೀಲಕ್ಕೆ ರಾಗಿ ಸೇರಿಹೋಯಿತು. ವ್ಯಾಪಾರಿ ಅದನ್ನು ತಿಳಿಯದೇ ಎಂದಿನಂತೆ ಗ್ರಾಹಕರಿಗೆ ಕೊಟ್ಟ. ಕೊಂಡವರು ಮರುದಿನ ಬಂದು ಆಕ್ಷೇಪ ಎತ್ತಿದರು. ‘ವಸ್ತುಗಳಿಗೆ ಕಲಬೆರಿಕೆ ಮಾಡಿ ಮೋಸ ಮಾಡುತ್ತಿದ್ದೀಯ’ ಎಂದು ನಿಂದಿಸಿದರು. ವ್ಯಾಪಾರಿಯು ತನ್ನ ಅರಿವಿಗೆ ಬಾರದೇ ನಡೆಯಿತು ಎಂದು ಪರಿಪರಿಯಾಗಿ ಹೇಳಿದರೂ ಜನರು ಒಪು್ಪವ ಸ್ಥಿತಿಯಲ್ಲಿರಲಿಲ್ಲ. ‘ಈ ಅಂಗಡಿಯಲ್ಲಿ ಮೋಸ ಮಾಡುತ್ತಾರೆ’ ಎಂಬ ಸುದ್ದಿ ಸಣ್ಣದಾಗಿ ಊರಿನಲ್ಲಿ ಹಬ್ಬಿತು. ಇದರಿಂದ ಅವನ ಮೇಲೆ ಗ್ರಾಹಕರಿಗೆ ಅನುಮಾನ ಹೆಚ್ಚಿತು. ವ್ಯಾಪಾರದ ಸಣ್ಣಪುಟ್ಟ ವಿಷಯಗಳಿಗೂ ತಗಾದೆ ತೆಗೆದರು. ಜೊತೆಗೆ ಯಾವುದೋ ಊರಿನಿಂದ ಬಂದು ಇಲ್ಲಿ ಮೋಸದ ವ್ಯಾಪಾರ ಮಾಡುತ್ತಿದ್ದಾನೆ ಎಂದು ಚರ್ಚೆ ಆರಂಭಿಸಿದರು. ‘ಇವನು ನಮ್ಮವನಲ್ಲ’ ಎಂದು ವ್ಯಾಪಾರದಿಂದ ದೂರವಿಟ್ಟರು. ಇದರಿಂದ ದಿನೇದಿನೆ ಅವನ ವ್ಯವಹಾರ ಕುಸಿಯುತ್ತ ಸಾಗಿ, ಹೆಚ್ಚು ದಿನ ಅಂಗಡಿ ನಡೆಸಲು ಸಾಧ್ಯವಾಗಲಿಲ್ಲ. ಅವನು ಮನನೊಂದು ಅಂಗಡಿಯನ್ನು ಮುಚ್ಚಿ ಊರಿಗೆ ಹೊರಟುಹೋದ. ಜನರು ತಾವು ಗೆಲುವನ್ನು ಪಡೆದವರಂತೆ ಎಂದಿನಂತೆ ಮತ್ತೊಂದು ಅಂಗಡಿಯಲ್ಲಿ ವ್ಯಾಪಾರ ಮಾಡಿದರು. ಮೊದಲಿದ್ದ ವ್ಯಾಪಾರಿ ಎಂದಿನ ತನ್ನ ಮೋಸದ ವ್ಯಾಪಾರ ಮುಂದುವರಿಸಿದ.
ಕೆಲವೊಮ್ಮೆ ನಮಗೂ ಹೀಗೆ ಆಗುತ್ತದೆ. ಕೆಲವು ವಿಷಯಗಳಿಗೆ ಕೊಡುವ ಪ್ರಾಶಸ್ತ್ಯ ಕ್ಷುಲ್ಲಕವಾಗಿರುತ್ತದೆ. ಆದರೂ ಅನಗತ್ಯವಾಗಿ ನಮ್ಮ ಭಾವನೆಗಳನ್ನು ಅದಕ್ಕೆ ಜೋಡಿಸಿ ಮಹತ್ವವಾಗಿರದ ವಿಷಯಗಳು ಕೂಡ ಮಹತ್ವವಾಗುವಂತೆ ಮಾಡುತ್ತೇವೆ. ನಿಜವಾಗಿ ಮಹತ್ವ ನೀಡಲೇ ಬೇಕಾದ ವಿಷಯಗಳು ನಮಗೆ ಪ್ರಾಧಾನ್ಯವಾಗಿರುವುದಿಲ್ಲ. ಅಲ್ಲಿ ನಮ್ಮ ನಿಲುವುಗಳು ತಟಸ್ಥವಾಗಿರುತ್ತವೆ. ಸಾಸಿವೆಯಲ್ಲಿ ರಾಗಿ ಸೇರಿದ್ದು ಅರಿವಿಲ್ಲದೇ ನಡೆದಿದ್ದರೂ ಅದನ್ನು ವಿಮಶಿಸುವಾಗ ಈ ವ್ಯಾಪಾರಿ ‘ನಮ್ಮ ಊರಿನವನಲ್ಲ’ ಎಂಬ ಭಾವನೆ ಹೆಚ್ಚು ಪ್ರಚೋದನೆಗೆ ಕಾರಣವಾಯಿತು. ಹಾಗಾಗಿಯೇ ಇಲ್ಲಿ ವಸ್ತು ಮತ್ತು ವಿಷಯಗಳು ಬದಲಾದವು. ಜೊತೆಗೆ ನಿಜವಾಗಿ ಮೋಸ ಮಾಡುತ್ತಿರುವ ವ್ಯಕ್ತಿಯ ವಿಷಯದಲ್ಲಿ ‘ನಮ್ಮವ’ ಎಂಬ ಭಾವನೆ, ಅವನ ಮೋಸವನ್ನು ಕೂಡ ಸ್ವೀಕರಿಸುವಂತೆ ಮಾಡಿತು. ಹೀಗಾಗಿ ಇಲ್ಲಿ ಭಾವನೆಗಳ ಮೇಲಾಟವಾಯಿತು.
ನಾವು ಒಂದು ನಿರ್ಧಾರಕ್ಕೆ ಬರುವಾಗ ಅಥವಾ ಸರಿ/ತಪ್ಪುಗಳನ್ನು ಗುರುತಿಸುವಾಗ, ಅಲ್ಲಿ ನಮ್ಮ ಭಾವನೆಗಳನ್ನು ಹೊರತುಪಡಿಸಿ ನೋಡುವ ಅಗತ್ಯವಿರುತ್ತದೆ. ನಿರ್ಧಾರಗಳ ಬಗ್ಗೆ ಪುನರ್ ವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ. ವಿವೇಕರಹಿತವಾದ ಅವಲೋಕನಗಳು ನಾವು ಹೆಚ್ಚು ಕಳೆದುಕೊಳ್ಳುವಂತೆ ಮಾಡುವುದು ಸುಳ್ಳಲ್ಲ.
(ಲೇಖಕರು ಸಾಫ್ಟ್ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು)