ಆ ಕಾಲವೊಂದಿತ್ತು. ಹೆಚ್ಚು ಓದಿದವ ಪರಮ ಜ್ಞಾನಿ, ಸತ್ಯಸಂಧ ಜೊತೆಗೆ ಪ್ರಾಮಾಣಿಕ ಎಂಬ ಭಾವ. ಬದಲಾದ ಕಾಲಘಟ್ಟದಲ್ಲಿ ಶಿಕ್ಷಣದ ಉದ್ದೇಶ ಹಳಿ ತಪ್ಪಿದಾಗ ಎಲ್ಲವೂ ತಿರುವು ಮುರುವು! ಅದಕ್ಕೊಂದು ನಿದರ್ಶನ ಈ ಘಟನೆ.
ನಗರವೊಂದರ ಪದವಿ ಕಾಲೇಜಿನ ಕೊನೇ ವರ್ಷದ ವಿದ್ಯಾರ್ಥಿಗಳು ಪ್ರಾಧ್ಯಾಪಕರೊಂದಿಗೆ ಬಸ್ಸಿನಲ್ಲಿ ಹಳ್ಳಿಯ ದರ್ಶನಕ್ಕೆ ಹೊರಟಿದ್ದರು. ದಾರಿಯ ಮಧ್ಯದಲ್ಲಿ ಕಬ್ಬಿನ ಗದ್ದೆಗಳ ನಡುವೆ ಆಲೆಮನೆ ಕಾಣಿಸಿತು. ಕಬ್ಬಿನ ಹಾಲು ಕುಡಿಯುವ ಮನಸ್ಸಾಗಿ ಬಸ್ಸು ನಿಲ್ಲಿಸಿ ವಿದ್ಯಾರ್ಥಿಗಳು ಆಲೆಮನೆಯತ್ತ ಹೊರಟರು. ಅಲ್ಲಿನ ಗದ್ದೆಗಳ ಪರಿಸರದಲ್ಲಿ ಎತ್ತೊಂದು ಗಾಣಕ್ಕೆ ಕಟ್ಟಿದ್ದರಿಂದ ಆ ಎತ್ತು ತನ್ನಷ್ಟಕ್ಕೆ ತಾನು ಸುತ್ತುತ್ತಿತ್ತು. ಅದರ ಕೊರಳಿಗೆ ಕಟ್ಟಿದ್ದ ಘಂಟೆ ಸದ್ದು ಮಾಡುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ರೈತನಲ್ಲಿ ವಿದ್ಯಾರ್ಥಿಗಳು ತಾವು ಕಬ್ಬಿನ ಹಾಲನ್ನು ಕುಡಿಯಲು ಬಂದಿರುವ ಬಗ್ಗೆ ತಿಳಿಸಿ, ಹಣ ಕೊಟ್ಟು ರೈತನಿಂದ ಕಬ್ಬಿನ ಹಾಲನ್ನು ಪಡೆದು ಯಥೇಚ್ಛ ಕುಡಿದು ಸಂತೃಪ್ತರಾದರು. ಆ ನಡುವೆ ವಿದ್ಯಾರ್ಥಿಯೋರ್ವ ಆ ರೈತನಿಗೆ ‘ಯಜಮಾನರೇ, ನೀವು ಇಲ್ಲಿದ್ದೀರಿ, ಅಲ್ಲಿ ನಿಮ್ಮ ಎತ್ತು ಒಂದೇ ತನ್ನಷ್ಟಕ್ಕೇ ತಿರುಗುತ್ತಿದೆ. ನೀವು ಹತ್ತಿರ ಇಲ್ಲದ್ದನ್ನು ಗಮನಿಸಿ ಅದು ತಿರುಗುವುದನ್ನು ನಿಲ್ಲಿಸಿದರೆ ಏನು ಮಾಡುತ್ತೀರಾ?’ ಎಂದು ಕೇಳಿದ. ‘ನಾನು ಅದರ ಕೊರಳಿಗೆ ಘಂಟೆ ಕಟ್ಟಿದ್ದೇನೆ. ಅದು ಸುತ್ತುವುದನ್ನು ನಿಲ್ಲಿಸಿದರೆ ಘಂಟೆಯ ಶಬ್ದ ನಿಂತು, ನನಗೆ ಗೊತ್ತಾಗುತ್ತದೆ’ ಎಂದ ಆ ರೈತ.
ಅತಿ ಬುದ್ಧಿವಂತನಾಗಿದ್ದ ಆ ವಿದ್ಯಾರ್ಥಿ ಮತ್ತೆ ಪ್ರಶ್ನಿಸಿದ - ‘ಆ ಎತ್ತು ನಿಮಗೆ ಮೋಸ ಮಾಡುವುದಿಲ್ಲವೆಂದು ಭಾವಿಸಿದ್ದೀರಾ? ಎತ್ತು ಗಾಣವನ್ನು ಸುತ್ತದೇ ನಿಂತಲ್ಲೇ ನಿಂತು, ಬರೀ ತನ್ನ ತಲೆಯನ್ನು ಅಲ್ಲಾಡಿಸಿದರೆ, ಆಗ ಘಂಟೆಯ ಸದ್ದು ಬರುವುದಿಲ್ಲವೇ? ’ ಎಂದ. ಆಗ ರೈತ ‘ಹಾಗೆ ಮೋಸ ಮಾಡಲು ನನ್ನ ಎತ್ತು ನಿನ್ನಂತೆ ಬಿಎ ಓದಿಲ್ಲ’ ಎಂದ. ಆ ರೈತನ ಮಾರ್ವಿುಕ ಉತ್ತರ ಆ ವಿದ್ಯಾರ್ಥಿಗೆ ಮರ್ವಘಾತ ನೀಡಿತ್ತು.
ಹೌದು, ಹೆಚ್ಚು ಓದಿದವ ಹೆಚ್ಚು ಮೋಸ ಮಾಡಬಲ್ಲ ಎಂಬ ವ್ಯಾಖ್ಯಾನ ಸಾಮಾಜಿಕ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎನಿಸದು. ವಿದ್ಯೆ, ಅಕ್ಷರ ಜ್ಞಾನ ನಮಗೆ ವಿವೇಕವನ್ನು ತಂದು ಕೊಡಬೇಕು. ಆ ವಿವೇಕ ಎಲ್ಲರ ಒಳಿತನ್ನು ಬಯಸುವ ದೀವಿಗೆಯಾಗಬೇಕು. ಕಲಿತ ವಿದ್ಯೆ ಅನ್ಯಾಯದ ಹಾದಿ ತುಳಿಯುವ ಮಾರ್ಗದರ್ಶಿ ಸೂತ್ರವಾದರೆ ಆ ವಿದ್ಯೆ ಸಮಾಜಕ್ಕೆ ನಿಶ್ಚಿತವಾಗಿ ಅಪಾಯವೇ. ಹಾಗಾಗಿ ಕಲಿತ ವಿದ್ಯೆ ಸರ್ವರ ಹಿತ ಬಯಸುವ ದಿವ್ಯಾಸ್ತ್ರವಾಗಬೇಕು. ವಿದ್ಯಾವಂತ ಎಂದರೆ ಸುಸಂಸ್ಕೃತ ಎಂದು ಕರೆಸಿಕೊಳ್ಳುವಷ್ಟು ಮೇರುತ್ವ ಬರಬೇಕು. ಹೆಚ್ಚು ಓದಿಕೊಂಡವ ಪರಮ ಜ್ಞಾನಿಯಾಗಬೇಕು. ಮಾತ್ರವಲ್ಲ, ಆತನನ್ನು ಸದ್ಗುಣಿಯನ್ನಾಗಿಸಬೇಕು. ಇದೇ ಅಲ್ಲವೇ ನಿಜವಾದ ಶಿಕ್ಷಣ?