| ರೇಖಾ ಗಜಾನನ ಭಟ್ಟ
ಒಬ್ಬ ಮಹಿಳೆ ಬೆಕ್ಕುಗಳನ್ನು ಸಾಕಿ ಮಾರಾಟ ಮಾಡುತ್ತಿದ್ದಳು. ನೋಡಲು ಸುಂದರವಾದ ಬೆಕ್ಕುಗಳನ್ನು ಕೊಳ್ಳಲು ಊರ ಜನರು ಬರುತ್ತಿದ್ದರು. ಒಂದು ದಿನ ಅಂಗವಿಕಲ ಹುಡುಗನೊಬ್ಬ ಬೆಕ್ಕಿನ ಖರೀದಿಗಾಗಿ ಬಂದ. ಬೆಕ್ಕಿನ ಒಂದು ಕಾಲು ಊನವಾಗಿರುವುದನ್ನು ಗಮನಿಸಿ ಅದೇ ಬೆಕ್ಕನ್ನು ಆಯ್ದುಕೊಂಡ. ವ್ಯಾಪಾರಿ ಮಹಿಳೆ ಆಶ್ಚರ್ಯಚಕಿತಳಾಗಿ, ‘ನನ್ನಲ್ಲಿ ಸುಂದರ, ಸದೃಢವಾದ ಸಾಕಷ್ಟು ಬೆಕ್ಕುಗಳಿದ್ದರೂ ನೀನು ಏಕೆ ಈ ನ್ಯೂನತೆಯುಳ್ಳ ಬೆಕ್ಕನ್ನು ಆರಿಸಿಕೊಂಡೆ?’ ಎಂದು ಪ್ರಶ್ನಿಸಿದಳು. ಆಗ ಆ ಹುಡುಗ, ‘ನನಗೆ ಕಾಲಿನ ತೊಂದರೆಯಿಂದ ಓಡಲಾಗದು. ನಾನು ಸದಾ ನನ್ನ ಸಮಸ್ಯೆ ಅರ್ಥಮಾಡಿಕೊಳ್ಳುವವರನ್ನು ಹುಡುಕುತ್ತಿರುತ್ತೇನೆ. ಈ ಬೆಕ್ಕಿಗೂ ಕಾಲಿನ ನ್ಯೂನತೆಯಿದೆ. ಇದು ಕೂಡ ನನ್ನಂತೆಯೇ ತನ್ನನ್ನು ಅರ್ಥಮಾಡಿಕೊಳ್ಳುವವರನ್ನು ಬಯಸುತ್ತಿರಬಹುದು. ನಾವಿಬ್ಬರು ಉತ್ತಮ ಜೊತೆಗಾರರಾಗಬಹುದು’ ಎಂದು ಆ ಬೆಕ್ಕನ್ನು ಖರೀದಿಸಿ ಎತ್ತಿಕೊಂಡು ಹೋದ.
ಈ ಜಗತ್ತು ತನ್ನನ್ನು ಅರ್ಥಮಾಡಿಕೊಳ್ಳುವವರಿಗಾಗಿ ಹಂಬಲಿಸುತ್ತದೆ ಎನ್ನುವುದು ಸುಳ್ಳಲ್ಲ. ಅದೇರೀತಿ ದೋಷಗಳಲ್ಲಿ ಅಥವಾ ಗುಣಗಳಲ್ಲಿ ಸಾಮ್ಯತೆ ಹೊಂದಿದವರು ಬೇಗ ಆತ್ಮೀಯರಾಗುತ್ತಾರೆ. ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಬೇಗ ಅರ್ಥಮಾಡಿಕೊಳ್ಳುತ್ತಾರೆ ಎನ್ನುವುದು ನಿಜ. ಕೆಲವು ವರ್ಷಗಳ ಹಿಂದೆ ನಡೆದ ಸಿಯಾಟಲ್ ಸ್ಪೆಷಲ್ ಒಲಿಂಪಿಕ್ಸ್ನಲ್ಲಿ ಒಂಬತ್ತು ಅಂಗವಿಕಲ ಮಕ್ಕಳು 100 ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆ ಆರಂಭವಾದ ಕೂಡಲೇ ಎಲ್ಲರೂ ತಮ್ಮ ಮಿತಿಯಲ್ಲಿ ಓಡಲಾರಂಭಿಸಿದರು. ಒಬ್ಬ ಹುಡುಗ ಮುಗ್ಗರಿಸಿ ಬಿದ್ದು ನಿಲ್ಲಲಾರದೇ ಅಳಲಾರಂಭಿಸಿದ. ಅದನ್ನು ಕಂಡ ಉಳಿದ ಎಂಟು ಸ್ಪರ್ಧಾಳುಗಳು ತಾವು ಓಡುವುದನ್ನು ಮರೆತು ಆ ಹುಡುಗನನ್ನು ಸುತ್ತುವರಿದು ಸಮಾಧಾನ ಮಾಡಿದರು. ಡೌನ್ಸಿಂಡ್ರೋಮ್ಂದ ಬಳಲುತ್ತಿದ್ದ ಹುಡುಗಿಯೊಬ್ಬಳು ಅವನ ಕಣ್ಣೊರೆಸಿ, ‘ನಾವು ಅಂದುಕೊಂಡಿದ್ದನ್ನು, ಒಟ್ಟಾಗಿ ಇನ್ನೂ ಚೆನ್ನಾಗಿ ಮಾಡೋಣ’ ಎಂದಳು. ಆಗ ಎಲ್ಲ ಒಂಬತ್ತು ಮಕ್ಕಳು ಕೈ ಹಿಡಿದು ಜೊತೆಯಾಗಿ ಸ್ಪರ್ಧೆಯ ಅಂತಿಮ ಗೆರೆ ದಾಟಿದರು. ಪ್ರೇಕ್ಷಕರು ಚಪ್ಪಾಳೆ ತಟ್ಟಲು ಮರೆತು ಕಣ್ಣೀರಾದರು. ಈ ಘಟನೆಯೂ ಮೇಲಿನ ಕಥೆಯ ಮುಂದುವರಿದ ಭಾಗದಂತಿದೆ.
ಈ ಮಕ್ಕಳು ತಮ್ಮ ಪರಿಸ್ಥಿತಿ ಅನುಭವದಿಂದ ಆ ಹುಡುಗನ ನೋವನ್ನು ಅರ್ಥಮಾಡಿಕೊಂಡರು. ಹಾಗಂತ ಒಬ್ಬರನ್ನು ಅರ್ಥ ಮಾಡಿಕೊಳ್ಳಲು ಎಲ್ಲ ಸಲ ನಾವು ಅವರಂತೆ ಇರಬೇಕೆ? ಖಂಡಿತ ಇಲ್ಲ. ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮನಸ್ಸು ನಮಗಿರಬೇಕು ಅಷ್ಟೇ. ನಿರ್ವಾತವನ್ನು ಕ್ಷಣಾರ್ಧದಲ್ಲಿ ಗಾಳಿಯಲೆಯು ಆವರಿಸಿ ಹೇಗೆ ಸಂತೈಸುವುದೋ ಹಾಗೆ ನಾವು ನಮ್ಮ ಅವಶ್ಯಕತೆ ಇರುವೆಡೆ ಸ್ಪಂದಿಸಬೇಕು. ದೂರ ಹರಿಯುವ ಸಾಮರ್ಥ್ಯವಿಲ್ಲವೆಂದು ಕಡೆಗಣಿಸದೇ ವಿಶಾಲ ನದಿ ಹೇಗೆ ಚಿಕ್ಕ ಹಳ್ಳವನ್ನು ತನ್ನೊಳಗೆ ಒಂದಾಗಿಸಿಕೊಳ್ಳುವುದೋ ಹಾಗೆ ಪರರ ಮನಸ್ಥಿತಿ ಅರಿತು ಅರ್ಥಮಾಡಿಕೊಂಡು ಸಹಕರಿಸಿ ಮುನ್ನಡೆದರೆ ಬದುಕು ಸಾರ್ಥಕ.
ಅಂಧನು ಆಡಂಬರ ಆಭರಣಗಳ ಬೇಡಲಾರ
ನಡೆಯಲಾರದವ ಪಾದರಕ್ಷೆಗಳ ಮೋಹಿಸಲಾರ
ಅಂತರಂಗ ಸ್ಪಂದನೆಯ ಹುಡುಕುವರು ಇವರೆಲ್ಲ
ಅರಿಯಬೇಕಿದೆ ನಾವೆಲ್ಲ ದಿವ್ಯ ಮನದ ಸೊಲ್ಲ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)