ಅಂಕಣ

ದರ್ಶನ ವೈವಿಧ್ಯದ ಪರಿ: ಮನೋಲ್ಲಾಸ

Webdesk - Ravikanth
| ಸೌಮ್ಯಾ ಪ್ರದೀಪ್

ಸೊಂಪಾಗಿ ಬೆಳೆದಿರುವ ತೆಂಗಿನ ಮರಗಳ ತೋಟದ ಬಳಿ ಸಾಗುತ್ತಿರುವ ಬಾಯಾರಿದ ಒಬ್ಬ ದಾರಿಹೋಕನಿಗೆ ತೆಂಗಿನಮರ ನೋಡಿ ಇದರಲ್ಲಿ ಎಷ್ಟೊಂದು ಎಳನೀರಿದೆ! ಅದನ್ನು ಕುಡಿದು ಬಾಯಾರಿಕೆ ಹೋಗಲಾಡಿಸಿ ಕೊಳ್ಳಬಹುದೆಂದು ಅವನ ದೃಷ್ಟಿ ಎಳನೀರಿನ ಮೇಲಿರುತ್ತದೆ. ಕಸ ಗುಡಿಸುವವನಿಗೆ ಇದರಲ್ಲಿ ಎಷ್ಟೊಂದು ಗರಿಗಳಿವೆ ಅದರಿಂದ ಒಳ್ಳೆಯ ಪೊರಕೆ ಮಾಡಿಕೊಳ್ಳಬಹುದು ಎಂದೆನಿಸುತ್ತದೆ. ಆಯುರ್ವೇದ ವೈದ್ಯನಿಗೆ ಮರದ ಹೊಂಬಾಳೆ ಮೇಲೆ ದೃಷ್ಟಿ ಹರಿದು ಅದನ್ನು ಔಷಧಕ್ಕೆ ಬಳಸಬಹುದು ಎಂದೆನಿಸುತ್ತದೆ. ಹೀಗೆ ಎಲ್ಲರೂ ತಮಗೆ ಬೇಕಾದ ಪ್ರಯೋಜನದ ದೃಷ್ಟಿಯಿಂದ ಮರವನ್ನು ನೋಡುತ್ತಾರೆ. ಆದರೆ ವ್ಯವಸಾಯಗಾರನ ಲಕ್ಷ್ಯ ಮಾತ್ರ ತೆಂಗಿನಮರದ ಬೇರಿನೆಡೆಗೇ ಇರುತ್ತದೆ. ಬೇರಿಗೆ ಚೆನ್ನಾಗಿ ಆರೈಕೆ ಮಾಡಿದರೆ ಇಡೀ ವೃಕ್ಷ ಚೆನ್ನಾಗಿರುತ್ತದೆ ಎಂಬುದು ಅವನ ನೋಟ, ಒಂದೇ ವಿಷಯದ ಬಗ್ಗೆ ಅನೇಕರು ತಮ್ಮ ಪ್ರಕೃತಿಗೆ ಅನುಗುಣವಾಗಿ ನಾನಾ ರೀತಿಯ ನೋಟವನ್ನು ಹೊಂದುತ್ತಾರೆ ಎಂಬುದನ್ನು ಶ್ರೀರಂಗ ಮಹಾಗುರುಗಳು ಹೀಗೆ ಅನೇಕ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ.

ಅಂತೆಯೇ ಮಾನವ ಜೀವನದ ಬಗ್ಗೆಯೂ ಅನೇಕ ಸ್ತರದ ಜನರು ತಮ್ಮದೇ ಆದ ದರ್ಶನವನ್ನು ಇಟ್ಟುಕೊಂಡಿರುತ್ತಾರೆ. ದಿನ ನಿತ್ಯದ ಕೂಲಿಯನ್ನು ನಂಬಿ ಬದುಕುವವರು, ಇಂದಿನ ಹೊಟ್ಟೆಪಾಡಾದರೆ ಸಾಕು, ಸಾರ್ಥಕ ಜೀವನವೆಂದೂ, ಅದಕ್ಕಿಂತ ಸ್ವಲ್ಪ ಮೇಲ್ವರ್ಗ ದವರು ಸ್ವಲ್ಪ ಉಳಿತಾಯ, ಒಳ್ಳೆಯ ಬಟ್ಟೆ, ಮನೆಬಾಡಿಗೆಗೆ ವ್ಯವಸ್ಥೆಯಾದರೆ ಸಾರ್ಥಕ ಎಂದು ಕೊಳ್ಳುತ್ತಾರೆ. ಅದಕ್ಕಿಂತ ಇನ್ನೂ ಆರ್ಥಿಕವಾಗಿ ಸದೃಢರಾಗಿರುವವರು ಸ್ವಂತಮನೆ, ಕಾರು, ಹೆಚ್ಚಿನ ಉಳಿತಾಯ, ವಿದೇಶ ಪ್ರವಾಸ ಇತ್ಯಾದಿಯಾಗಿ ಅವರವರ ಮಟ್ಟಕ್ಕೆ ತಕ್ಕಂತೆ ಸಾರ್ಥಕ ಜೀವನದ ಪರಿಕಲ್ಪನೆ ಇಟ್ಟುಕೊಂಡಿರುತ್ತಾರೆ. ಆದರೆ ಅಂತರ್ಬಾಹ್ಯ ದೃಷ್ಟಿಯನ್ನು ಹೊಂದಿದ್ದ ಮಹರ್ಷಿಗಳ ಜೀವನದರ್ಶನ, ಪೂರ್ಣವಾದ ಜೀವನದರ್ಶನ. ಹೇಗೆ ಬೀಜದಿಂದ ಆರಂಭವಾದ ಮರದ ಜೀವನ ಅಂಕುರ, ಕಾಂಡ, ಹೂವು, ಕಾಯಿ ಇತ್ಯಾದಿಯಾಗಿ ವಿಕಾಸಗೊಂಡು ಬೀಜದಲ್ಲಿಯೇ ಹೋಗಿ ನಿಂತಾಗ ಪೂರ್ಣವಾಗುತ್ತದೆಯೋ ಅಂತೆಯೇ ಪರಮಾತ್ಮ ನಿಂದ ಪ್ರಾರಂಭವಾದ ನಮ್ಮ ಜೀವನ- ಬಾಲ್ಯ, ಯೌವನ ಇತ್ಯಾದಿಯಾಗಿ ಜೀವನದ ಎಲ್ಲ ಅವಸ್ಥೆಗಳನ್ನು ದಾಟಿ ಮತ್ತೆ ಹೋಗಿ ಪರಮಾತ್ಮನಲ್ಲಿಯೇ ನೆಲೆ ನಿಂತಾಗ ಪೂರ್ಣವಾದ ಹಾಗೂ ಸಾರ್ಥಕವಾದ ಜೀವನವಾಗುತ್ತದೆ ಎಂಬುದನ್ನು ತಪಸ್ಯೆ ಯಿಂದ ಅರಿತು ಅದಕ್ಕೆ ಅನುಗುಣವಾದ ಜೀವನವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ.

ರಘುವಂಶ ಮಹಾಕಾವ್ಯದಲ್ಲಿ ಕಾಳಿದಾಸನು ರಘುವಂಶದ ರಾಜರ ಜೀವನವ್ಯವಸ್ಥೆಯನ್ನು ಹೀಗೆ ಚಿತ್ರಿಸಿದ್ದಾನೆ- ಅವರು ಬಾಲ್ಯದಲ್ಲಿಯೇ ಜೀವನಕ್ಕೆ ಬೇಕಾದ ಸಮಗ್ರವಾದ ವಿದ್ಯೆಯನ್ನು ಅಭ್ಯಸಿಸುತ್ತಿದ್ದರು, ಯೌವನದಲ್ಲಿ ಧರ್ಮಕ್ಕೆ ಅವಿರೋಧವಾದ ವಿಷಯಸುಖಗಳನ್ನು ಅನುಭವಿಸುತ್ತಿದ್ದರು, ವಾರ್ಧಕ್ಯದಲ್ಲಿ ಮುನಿಗಳಂತೆ ಆತ್ಮಚಿಂತನೆ ನಡೆಸುತ್ತ ಅಂತ್ಯದಲ್ಲಿ ಯೋಗಮಾರ್ಗದಿಂದ ಶರೀರವನ್ನು ತ್ಯಜಿಸಿ ಜೀವವನ್ನು ಭಗವಂತನಲ್ಲಿ ನೆಲೆಗೊಳಿಸುತ್ತಿದ್ದರು ಎಂದು ವರ್ಣಿಸಿದ್ದಾನೆ. ಜ್ಞಾನಿಗಳು ಹಾಕಿಕೊಟ್ಟ ಜೀವನದ ಯೋಜನೆಯ ಸಂವಿಧಾನವನ್ನು ಮಹಾಕವಿಯಾದ ಕಾಳಿದಾಸನ ಈ ಮಾತು ಬಹು ಸ್ಪುಟವಾಗಿ, ಸಾರವತ್ತಾಗಿ ಪ್ರತಿಬಿಂಬಿಸುತ್ತದೆಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.

(ಲೇಖಕಿ ಸಂಸ್ಕೃತಿ ಚಿಂತಕಿ)