ಒಂದು ದಿನ ಮರಳುಗಾಡಿನಲ್ಲಿ ಒಂಟೆಯು ತನ್ನ ಮರಿಯ ಜೊತೆಗೆ ತುಂಬಾ ಸಂತೋಷದಿಂದ ಮಾತುಕತೆಯಾಡುತ್ತ ನಡೆದಾಡುತ್ತಿತ್ತು. ಹೀಗೆ ಸ್ವಲ್ಪ ದೂರ ಚಲಿಸಿದ ನಂತರ ಆಶ್ಚರ್ಯವೊಂದು ಕಾದಿತ್ತು. ಅದೇನೆಂದರೆ ಅಲ್ಲೊಂದು ಮೃಗಾಲಯವಿತ್ತು ಹಾಗೂ ಆ ಮೃಗಾಲಯದ ಕಬ್ಬಿಣದ ಕಂಬಿಯೊಳಗೆ ಒಂದು ದೊಡ್ಡ ಒಂಟೆಯೂ ಇತ್ತು. ಇದನ್ನು ಕಂಡ ಆ ಮರಿ ಒಂಟೆಗೆ ತಕ್ಷಣ ಹಲವಾರು ಪ್ರಶ್ನೆಗಳು ಮೂಡಿದವು. ಅದು ತನ್ನ ತಾಯಿಯನ್ನು ನೋಡುತ್ತಾ ಕೇಳಿತು- ‘ಈ ಮರುಭೂಮಿಯಲ್ಲಿಯೂ ಸುಂದರವಾದ ಜೀವನವನ್ನು ನಡೆಸಲು ನಮ್ಮ ದೇಹದಲ್ಲಿರುವ ವಿಶೇಷತೆಗಳೇನು ತಿಳಿಸು’ ಎಂದಿತು.
ಆಗ ತಾಯಿ ಒಂಟೆ, ‘ನೋಡು, ಇತರ ಪ್ರಾಣಿಗಳಿಗೆ ಹೋಲಿಸಿದರೆ ನಮ್ಮ ದೇಹದಲ್ಲಿ ಗೂನುಗಳಿವೆ. ಏಕೆಂದರೆ ಮರುಭೂಮಿಯಲ್ಲಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಇರುವುದರಿಂದ ನೀರು ಸಂಗ್ರಹಿಸಿಟ್ಟುಕೊಳ್ಳಲು ಈ ರಚನೆಯಿಂದ ಸಾಧ್ಯವಾಗಿದೆ. ಕಾಲುಗಳು ತುಂಬಾ ಉದ್ದವಾಗಿದ್ದು, ದೊಡ್ಡ, ಮೃದು ಮತ್ತು ದುಂಡಗಿನ ಪಾದಗಳನ್ನು ಹೊಂದಿರುವುದರಿಂದ ದೇಹವನ್ನು ಬಿಸಿ ನೆಲದಿಂದ ರಕ್ಷಿಸಿಕೊಳ್ಳಲು ಹಾಗೂ ಮರಳಿನಲ್ಲಿ ಸುಲಭವಾಗಿ ನಡೆದಾಡಲು ತುಂಬಾ ಸಹಾಯಕವಾಗಿದೆ. ಉದ್ದನೆಯ ದಪ್ಪದಾದ ರೆಪ್ಪೆ ಕೂದಲುಗಳು ಮರುಭೂಮಿಯಲ್ಲಿ ಗಾಳಿ ಬೀಸಿದಾಗ ಮರಳಿನಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ’ ಎಂದು ಹೇಳಿತು. ತಾಯಿ ಒಂಟೆಯ ಎಲ್ಲ ಉತ್ತರಗಳನ್ನು ಕೇಳಿದ ಮರಿ ಒಂಟೆಯು, ‘ದೇವರು ಮರುಭೂಮಿಯಲ್ಲಿಯೇ ಸುಖವಾಗಿ ಬದುಕನ್ನು ಸಾಗಿಸಲು ಅತ್ಯುತ್ತಮವಾದ ದೇಹದ ರಚನೆಯನ್ನು ಕೊಟ್ಟಿದ್ದಾನೆ. ಇಷ್ಟೆಲ್ಲಾ ಸುಂದರವಾದ ದೇಹವಿದ್ದರೂ ಆ ಒಂಟೆಯು ಮೃಗಾಲಯದಲ್ಲಿ, ಕಬ್ಬಿಣದ ಕಂಬಿಯ ಮಧ್ಯೆ ವಾಸಿಸುವುದರ ಉದ್ದೇಶವಾದರೂ ಏನು? ಅದರ ಕೊರಗಾದರೂ ಏನು?’ ಎಂದು ಕೇಳಿತು.
ಆಗ ತಾಯಿ ಒಂಟೆಯು, ‘ಮೃಗಾಲಯದ ಆ ಒಂಟೆಗೆ ತನ್ನಲ್ಲಿರುವ ಕೌಶಲದ ಬಗ್ಗೆಯೇ ಅರಿವಿಲ್ಲ. ಸೃಷ್ಟಿಯ ನಿಯಮದಲ್ಲಿ ಯಾವ ಜೀವಿಯೂ ಉಪಯೋಗವಿಲ್ಲದ್ದು ಎಂಬುದಿಲ್ಲ. ಪ್ರತಿಯೊಂದು ಜೀವಿಗೂ ತನ್ನದೇ ಆದ ಸಾಮರ್ಥ್ಯ, ಕೌಶಲಗಳಿರುತ್ತವೆ. ಆದರೆ, ತನ್ನಲ್ಲಿರುವ ಆ ವಿಶೇಷ ಕೌಶಲಗಳನ್ನು ಗುರುತಿಸುವಲ್ಲಿ ವಿಫಲವಾಗುವ ಜೀವಿಗಳು ಮಾತ್ರ ಇದ್ದುದನ್ನು ಬಿಟ್ಟು, ಇರಲಾರದಕ್ಕೆ ಹಂಬಲಿಸಿ ಸದಾಕಾಲ ಗೊಣಗಾಡುತ್ತಾ ಜೀವನವನ್ನು ಭಾರವೆಂದು ತಿಳಿದು ಜೀವಿಸುತ್ತವೆ. ಈ ಕಾರಣಕ್ಕಾಗಿಯೇ ಮೃಗಾಲಯದ ಆ ಒಂಟೆಯು ಮರುಭೂಮಿಯಲ್ಲಿಯೇ ಓಡಾಡಿಕೊಂಡು ಸುಖವಾಗಿರುವುದನ್ನು ಬಿಟ್ಟು, ಮೃಗಾಲಯದ ಕಂಬಿಗಳ ಮಧ್ಯದಲ್ಲಿ ಜೀವನವನ್ನು ವ್ಯರ್ಥವಾಗಿ ಕಳೆಯುತ್ತಿದೆ’ ಎಂದು ಹೇಳಿತು. ಬದುಕು ಸುಂದರವಾಗಿರಬೇಕೆಂದರೆ ಯಾವಾಗಲೂ ನಮ್ಮಲ್ಲಿರುವ ಕೌಶಲವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
(ಲೇಖಕರು ಹವ್ಯಾಸಿ ಬರಹಗಾರರು)