ಶ್ರೀಮಂತನೊಬ್ಬ ಸಾಯುವ ಸಮಯದಲ್ಲಿ ವಿಲ್ ಪತ್ರದ ಜೊತೆ ಹಳೆಯ ಪಾದರಕ್ಷೆಗಳನ್ನು ಮಗನಿಗೆ ನೀಡಿ, ‘ಉಯಿಲಿನಲ್ಲಿ ನನ್ನೆಲ್ಲ ಆಸ್ತಿಯನ್ನು ನಿನಗೆ ಬರೆದಿದ್ದೇನೆ. ಆದರೆ ನನ್ನ ಕೊನೆಯ ಆಸೆಯೊಂದಿದೆ. ನಾನು ಸತ್ತ ಮೇಲೆ ನನ್ನ ಪಾದಕ್ಕೆ ಈ ಹಳೆಯ ಚಪ್ಪಲಿಯನ್ನು ತೊಡಿಸಿ ಅಂತ್ಯಕ್ರಿಯೆ ನೆರವೇರಿಸು’ ಎಂದು ಹೇಳುತ್ತಾನೆ. ಮಗ ಕಣ್ಣೀರನ್ನು ಒರೆಸಿಕೊಳ್ಳುತ್ತ, ‘ನಿನ್ನಾಸೆಯನ್ನು ಖಂಡಿತ ನೆರವೇರಿಸುತ್ತೇನೆ’ ಎಂದು ಮಾತು ಕೊಡುತ್ತಾನೆ. ತಂದೆ ಕೊನೆಯುಸಿರೆಳೆದ ದಿನ, ಅಂತ್ಯಕ್ರಿಯೆಯ ವಿಧಿವಿಧಾನ ಮಾಡಿದ ಪಂಡಿತರಿಗೆ ಮಗ ಅಪ್ಪನಿಗೆ ಹಳೆಯ ಚಪ್ಪಲಿ ತೊಡಿಸಲು ಕೋರುತ್ತಾನೆ. ಆದರೆ ಪಂಡಿತರು ‘ಸಾಧ್ಯವೇ ಇಲ್ಲ. ಇದು ಅಂತ್ಯಕ್ರಿಯೆಯ ಸಂಪ್ರದಾಯದಲ್ಲೇ ಇಲ್ಲ’ ಎಂದು ನಿರಾಕರಿಸುತ್ತಾರೆ. ಊರಿನ ಮಂದಿಯೂ ಸೇರಿ ರ್ಚಚಿಸುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಓಡೋಡಿ ಬಂದ ಆ ಶ್ರೀಮಂತನ ಸ್ನೇಹಿತ ಮಗನಿಗೆ ಪತ್ರ ನೀಡಿ, ‘ನಿಮ್ಮ ತಂದೆಯವರು ಕೆಲ ದಿನಗಳ ಹಿಂದೆ ಈ ಪತ್ರವನ್ನು ನೀಡಿ, ತನ್ನ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮಗನಿಗೆ ನೀಡಲು ತಿಳಿಸಿದ್ದರು’ ಎನ್ನುತ್ತಾನೆ. ಆ ಪತ್ರದಲ್ಲಿ, ‘ಪ್ರಿಯ ಪುತ್ರನೇ ನೋಡಿದೆಯಾ? ದೊಡ್ಡ ಫ್ಯಾಕ್ಟರಿ, ಭವ್ಯಬಂಗಲೆ, ಕಾರು, ಚಿನ್ನ, ಒಡವೆ ಇವೆಲ್ಲದರ ಒಡೆಯನಾಗಿದ್ದರೂ ನಾನು ಒಂದು ಜೊತೆ ಹಳೆಯ ಚಪ್ಪಲಿಯನ್ನು ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ, ಇಷ್ಟೇ ಬದುಕಿನ ಸತ್ಯ! ನಿನಗೂ ಒಂದು ದಿನ ಸಾವು ಬರುತ್ತದೆ. ಆಗ ನೀನು ಕೇವಲ ಬಿಳಿಬಟ್ಟೆಯಲ್ಲಿ ಇಹಲೋಕ ತ್ಯಜಿಸಬೇಕು. ಈಗಲೇ ಎಚ್ಚರಗೊಳ್ಳು. ಯಾರನ್ನೂ ನೋಯಿಸಬೇಡ. ಅನ್ಯಾಯ ಮತ್ತು ಅಧರ್ಮದಿಂದ ಹಣ ಸಂಪಾದನೆ ಮಾಡಬೇಡ, ನೀನು ಗಳಿಸಿದ ಹಣದಲ್ಲಿ ಕೆಲ ಭಾಗವನ್ನು ನಿರ್ಗತಿಕರಿಗೆ, ಇಲ್ಲದವರಿಗೆ ದಾನ ಮಾಡು, ಸತ್ಕಾರ್ಯಗಳಿಗೆ ಹಣವನ್ನು ಬಳಸು. ಸತ್ತಾಗ ನಿನ್ನ ಹಿಂದೆ ಬರುವುದು ನಿನ್ನ ಕರ್ಮಗಳು ಮಾತ್ರ!’ ಎಂದು ಇತ್ತು.
ಮೃತಂ ಶರೀಮುತ್ಸಜ್ಯ ಕಾಷ್ಠಲೋಷ್ಠಸಮಂ ಕ್ಷಿತೌ
ವಿಮುಖಾ ಬಾಂಧವ ಯಾನ್ತಿ ಧರ್ಮಸ್ತಮನುಗಚ್ಚತಿ
ತಸ್ಮಾದ್ಧರ್ಮಂ ಸಹಾಯಾರ್ಥ ನಿತ್ಯಂ ಸಂಚಿನುಯಾಚ್ಛನ್ಧೆಃ
ಧಮೇಣ ಹಿ ಸಹಾಯೇನ ತಮಸ್ತರತಿ ದುಸ್ತರಮ್
‘ವ್ಯಕ್ತಿಯು ಸತ್ತಾಗ ಆತನ ಬಂಧುಗಳು ದೇಹವನ್ನು ಸುಟ್ಟು ತಮ್ಮ ಮನೆಗೆ ತೆರಳುತ್ತಾರೆ. ವ್ಯಕ್ತಿಯು ತನ್ನ ಜೀವಿತ ಕಾಲದಲ್ಲಿ ಆಚರಿಸಿದ ಧರ್ಮವು ಮಾತ್ರ ಆತನ ಜೊತೆಯಲ್ಲಿ ಉಳಿಯುತ್ತದೆ. ಆದ್ದರಿಂದ ಮನುಷ್ಯನು ತನ್ನ ಜೀವಿತಕಾಲದಲ್ಲಿ ಧರ್ಮಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅಗತ್ಯ’.
ಬುದ್ಧ ಬಹಳ ಮಾರ್ವಿುಕವಾಗಿ ಹೇಳಿದ್ದಾನೆ- ಈ ಜಗತ್ತಿಗೆ ಬರುವಾಗ ನಮಗಿದ್ದುದು ಉಸಿರು ಮಾತ್ರ. ಈ ಜಗತ್ತನ್ನು ಬಿಟ್ಟು ಹೋಗುವಾಗ ಉಸಿರು ಇರುವುದಿಲ್ಲ, ಆದರೆ ಒಳ್ಳೆಯ ಹೆಸರಿರಲಿ.
ಯತೋ ಧರ್ಮ ಸ್ತತೋ ಜಯಃ- ‘ಧರ್ಮಕ್ಕೆ ಯಾವಾಗಲೂ ಜಯ ನಿಶ್ಚಿತ.’
(ಲೇಖಕರು ನಿವೃತ್ತ ಪ್ರಾಧ್ಯಾಪಕರು)