ಅದೊಂದು ಬಂಗಾರದ ಗೂಡು. ಅದರಲ್ಲಿ ಒಂದು ವಿಶೇಷವಾದ ಗಿಣಿ. ಅದು ಮನುಷ್ಯರಂತೆ ಮಾತಾಡುತ್ತಿತ್ತು. ಅದು ಅರಮನೆಯ ರಾಣೀವಾಸದಲ್ಲಿತ್ತು. ಅರಮನೆಯಲ್ಲಿ ತಿಂಗಳಿಗೆ ಎರಡು ಬಾರಿ ಪಂಡಿತರ ಹರಿಕಥೆ ಇರುತ್ತಿತ್ತು. ಹರಿಕಥೆ ಮುಗಿಯುತ್ತಲೇ ಪಂಡಿತರು ‘ಹರಿಯ ನೆನೆದರೆ ಬಂಧನ ಮುಕ್ತಿ’ ಎಂದು ಹೇಳುತ್ತಿದ್ದರು. ಅದನ್ನು ಕೇಳಿ ಗಿಣಿ ಗಟ್ಟಿಯಾಗಿ ಅಪಹಾಸ್ಯದಿ ನಕ್ಕು ‘ಪಂಡಿತರು ಸುಳ್ಳು ಹೇಳುತ್ತಿದ್ದಾರೆ’ ಅನ್ನುತ್ತಿತ್ತು. ಹೀಗೆ 3 -4 ಸಲ ನಡೆಯಲು ಪಂಡಿತರು ತಮ್ಮ ಗುರುಗಳ ಬಳಿಗೆ ಅರಮನೆಯಲ್ಲಿ ನಡೆಯುವ ವಿಚಾರ ತಿಳಿಸಿದರು. ಆಗ ಗುರುಗಳು ತಾವು ಅರಮನೆಗೆ ಬರುವುದಾಗಿ ತಿಳಿಸಿದರು.
ಅಲ್ಲಿ ಹರಿಕಥೆ ಮುಗಿಯುತ್ತಲೇ ಪಂಡಿತರು ‘ಹರಿಯ ನೆನೆದರೆ ಬಂಧನ ಮುಕ್ತಿ’ ಅನ್ನುತ್ತಲೇ, ಪಂಜರದಲ್ಲಿನ ಗಿಣಿಯು ನಗುತ್ತಾ ‘ಪಂಡಿತರು ಸುಳ್ಳು ಹೇಳುತ್ತಿದ್ದಾರೆ’ ಅಂದಿತು. ಆಗ ಗುರುಗಳು, ‘ಯಾಕೆ ಹೀಗೆ ಹೇಳುತ್ತಿದ್ದೀಯ’ ಎಂದರು. ಅದಕ್ಕೆ ಗಿಣಿಯು, ‘ನಾನು ಹಿಂದೆ ಹಾರಿಕೊಂಡು ಹೋಗಿ ಒಂದು ಆಶ್ರಮ ಸೇರಿದೆ. ಅಲ್ಲಿ ಬಹಳಷ್ಟು ಮಂತ್ರಗಳನ್ನು ಹೇಳುತ್ತಿದ್ದರು. ನಾನು ಅದನ್ನು ಕೇಳಿ ಮತ್ತೆ ಅದನ್ನು ಹೇಳಲಾರಂಭಿಸಿದೆ. ಇದನ್ನು ನೋಡಿದ ಶಿಷ್ಯರು ವ್ಹಾ... ಮಾತಾಡುವ ಗಿಣಿ ಎಂದು ಹೇಳಿ ನನ್ನನ್ನು ಕಬ್ಬಿಣದ ಗೂಡಿನಲ್ಲಿ ಹಾಕಿದರು. ಒಮ್ಮೆ ಆಶ್ರಮಕ್ಕೆ ಒಬ್ಬ ಶ್ರೀಮಂತ ಬಂದ. ಆತ ಮಾತಾಡುವ ನನ್ನನ್ನು ಅಲ್ಲಿಂದ ಕೊಂಡುಹೋಗಿ ಬೆಳ್ಳಿಪಂಜರದಲ್ಲಿಟ್ಟ. ಒಮ್ಮೆ ಅರಮನೆಯಲ್ಲಿ ಔತಣಕೂಟವಿತ್ತು. ಅದಕ್ಕೆ ಆ ಶ್ರೀಮಂತನಿಗೂ ಆಹ್ವಾನವಿತ್ತು. ಆತ ಪಂಜರ ಸಮೇತ ನನ್ನನ್ನು ಅರಮನೆಗೆ ಕೊಂಡುಹೋಗಿ ರಾಜನಿಗೆ ಉಡುಗೊರೆಯಾಗಿ ಕೊಟ್ಟ. ಮಹಾರಾಣಿ ಬಹಳ ಸಂತಸದಿಂದ ನನ್ನನ್ನು ಚಿನ್ನದ ಪಂಜರದಲ್ಲಿ ಬಂಧಿಸಿಟ್ಟರು. ಪಂಜರಗಳು ಬದಲಾದವೇ ವಿನಃ ನಾನು ಮಾತ್ರ ಇದ್ದದ್ದು ಗೂಡಿನಲ್ಲಿಯೇ. ನಾನು ಪಂಡಿತರು ಹೇಳಿದಂತೆ ಹರಿನಾಮ ಉಚ್ಚರಿಸಿದೆ. ಆದರೂ ಬಂಧನದಿಂದ ಬಿಡುಗಡೆ ಆಗಲೇ ಇಲ್ಲ’ ಎಂದು ನೊಂದು ನುಡಿಯಿತು. ಗುರುಗಳು ಗಿಣಿಯನ್ನು ಹತ್ತಿರಕ್ಕೆ ತಂದು ಅದರ ಕಿವಿಯಲ್ಲಿ ಏನೋ ಹೇಳಿ ಹೊರಟು ಹೋದರು.
ಮರುದಿನ ಬೆಳಗಾಗುತ್ತಲೇ ಅರಮನೆಯ ಸೇವಕರು ಗೂಡನ್ನು ನೋಡುತ್ತಾರೆ; ಗಿಣಿ ಅದರಲ್ಲಿ ಸತ್ತು ಬಿದ್ದಂತಿತ್ತು. ಸೇವಕರು ತಕ್ಷಣವೇ ಮಹಾರಾಣಿಗೆ ತಿಳಿಸಿದರು. ಬೇಸರಗೊಂಡ ಮಹಾರಾಣಿ ಸತ್ತ ಗಿಣಿಯನ್ನು ಸಂಸ್ಕಾರ ಮಾಡುವಂತೆ ತಿಳಿಸಿದಳು. ಆಗ ಗೂಡಿನ ಬಾಗಿಲನ್ನು ತೆರೆದ ತಕ್ಷಣವೇ ಸತ್ತಂತಿದ್ದ ಗಿಣಿ ದಿಗ್ಗನೆ ಎದ್ದು ಗೂಡಿಂದ ಪುರ್ರೆಂದು ಹಾರಿಹೋಯಿತು. ಹಾಗೆ ಹಾರಿ ಹೋಗುತ್ತಿರುವಾಗ ಅದು ಗಟ್ಟಿಯಾಗಿ ಹೇಳಿತು, ‘ಸರಿಯಾದ ಗುರು ಸಿಕ್ಕರೆ ಮಾತ್ರ ಬಂಧನದಿಂದ ಮುಕ್ತಿ ದೊರೆಯುತ್ತದೆ’ ಎಂದು. ಜೀವನದಲ್ಲಿ ಯಶಸ್ಸನ್ನು ಪಡೆಯಲು ಗುರು ಅತಿ ಮುಖ್ಯ. ಇಲ್ಲದಿದ್ದರೆ, ಜೀವನದ ದಾರಿಯಲ್ಲಿ ಅನೇಕ ಸವಾಲು, ಅಡೆತಡೆಗಳು- ಗೊಂದಲಗಳು ಎದುರಾಗಿ ಸಾಧನೆ ಕೈಗೆಟುಕದೆ ಇರಬಹುದು.
(ಲೇಖಕರು ಉಪನ್ಯಾಸಕರು)