ಅಂಕಣ

ಆಸೆಯ ಮಡಕೆ ತುಂಬದು...: ಮನೋಲ್ಲಾಸ

| ವಿದ್ಯಾ ಉಪೇಂದ್ರ ಜೋಶಿ

ಒಂದೂರಲ್ಲಿ ರೈತನೊಬ್ಬನಿದ್ದ. ಅವನಿಗೆ ಸ್ವಲ್ಪ ಜಮೀನಿತ್ತು. ಅದರಿಂದ ಕುಟುಂಬದ ಉದರ ಪೋಷಣೆಯಾಗುತ್ತಿತ್ತು. ಆದರೆ ಅದರಿಂದ ರೈತ ಸಂತುಷ್ಟನಾಗಿರಲಿಲ್ಲ. ಧನಿಕನಾಗಬೇಕೆಂಬ ಇಚ್ಛೆಯಿಂದ ಸದಾ ದುಃಖಿತನಾಗಿರುತ್ತಿದ್ದ. ಒಂದು ದಿನ ರೈತ ಹೊಲದಿಂದ ಮನೆಗೆ ಮರುಳುತ್ತಿದ್ದ. ಬಿಸಿಲು ಪ್ರಖರವಾಗಿತ್ತು. ದಣಿವಾರಿಸಿಕೊಳ್ಳಲು ಆಲದ ಮರದ ನೆರಳಿಗೆ ಕುಳಿತ ರೈತನಿಗೆ ಗಾಢವಾದ ನಿದ್ದೆ ಆವರಿಸಿತು. ಎಚ್ಚರವಾದಾಗ ಸಂಜೆಯಾಗಿತ್ತು. ಆಗ ಅವನಿಗೆ ಒಂದು ಧ್ವನಿ ಕೇಳಿಸಿತು- ‘ನಿನಗೆ ಸಂಪತ್ತು ಬೇಕೇ?’ ರೈತ ಸುತ್ತಲೂ ನೋಡಿದ. ಯಾರೂ ಕಾಣಿಸಲಿಲ್ಲ. ಅವನು ಹೆದರಿದ. ಧ್ವನಿ ಮತ್ತೆ ಕೇಳಿಸಿತು - ‘ನಿನಗೆ ಸಂಪತ್ತು ಬೇಕೆ?’ ಎಂದು. ಬಹುಶಃ ದೇವರೇ ಈ ಮಾತನ್ನು ಹೇಳಿರಬಹುದೆಂದುಕೊಂಡು, ‘ಹಣ ಬೇಕು’ಎಂದ. ‘ಮನೆಯಲ್ಲಿ ನಿನಗಾಗಿ 7 ಚಿನ್ನದ ಮಡಕೆಗಳು ಕಾದಿವೆ’ ಎಂದಿತು ದನಿ.

ರೈತ ಲಗುಬಗೆಯಿಂದ ಮನೆಗೆ ಹೋದ. ಅಲ್ಲಿ ನಿಜವಾಗಿಯೂ ಏಳು ಮಡಕೆಗಳಿದ್ದವು. ಅವುಗಳನ್ನು ತೋರಿಸುತ್ತಾ ಹೆಂಡತಿಗೆ ಹೇಳಿದ, ‘ನೋಡು ದೇವರು ನಮ್ಮ ಇಚ್ಛೆ ಅರಿತುಕೊಂಡು ಈ ಸಂಪತ್ತನ್ನು ದಯಪಾಲಿಸಿದ್ದಾನೆ.’ ಮಡಕೆಗಳನ್ನು ಒಂದೊಂದಾಗಿ ತೆಗೆದು ನೋಡತೊಡಗಿದರು. ಆರು ಮಡಕೆಗಳು ಚಿನ್ನದ ನಾಣ್ಯಗಳಿಂದ ತುಂಬಿದ್ದವು. ಏಳನೆಯದು ಮಾತ್ರ ಅರ್ಧ ಆಗಿತ್ತು. ಆದರೂ ಅವರು ಸಂತುಷ್ಟರಾಗದೆ, ಅರ್ಧ ಇರುವ ಮಡಕೆಯನ್ನು ತುಂಬುವುದು ಹೇಗೆ ಎಂದು ಚಿಂತೆಗೆ ಒಳಗಾಗಿ ದುಡಿದ ಹಣವನ್ನು ಜೀವನಕ್ಕೆ ಬಳಸಿಕೊಳ್ಳದೆ ಅದರಿಂದ ಚಿನ್ನ ಖರೀದಿಸಿ ಮಡಕೆಗೆ ಸುರಿಯತೊಡಗಿದರು. ಹಲವು ವರ್ಷ ಕಳೆದರೂ ಮಡಕೆ ತುಂಬಲಿಲ್ಲ.

ಒಂದು ದಿನ ಒಬ್ಬ ಸಾಧು ಅವರ ಮನೆಗೆ ಬಂದ. ರೈತ ದಂಪತಿ ಚಿಂತಿತರಾಗಿರುವುದನ್ನು ಕಂಡು, ‘ಏಕೆ 7ನೆಯ ಮಡಕೆ ಇನ್ನೂ ತುಂಬಲಿಲ್ಲವೇ?’ ಎಂದು ಕೇಳಿದ. ಈ ವಿಷಯ ಸಾಧುವಿಗೆ ತಿಳಿದಿದ್ದು ಹೇಗೆ? ಎಂದು ರೈತ ದಂಪತಿ ಯೋಚಿಸತೊಡಗಿದರು. ಅವರ ಮನಸ್ಸಿನ ಇಂಗಿತವನ್ನರಿತ ಸಾಧು ಹೇಳಿದ- ‘ನನಗೆ ಈ ವಿಷಯ ಹೇಗೆ ತಿಳಿಯಿತು ಎಂದು ನಿಮಗೆ ಅಶ್ಚರ್ಯವಾಗಿರಬಹುದಲ್ಲವೇ? ಆ ಮಡಕೆಗಳನ್ನು ನಿಮಗೆ ನೀಡಿದವನೇ ನಾನು. ಆ ಏಳನೆಯ ಮಡಕೆ ತುಂಬಲಾರದು. ಅದು ಆಸೆಯ ಮಡಕೆ. ಇದ್ದ ಸಂಪತ್ತಿನಿಂದ ಸುಖವಾಗಿರುವುದನ್ನು ಬಿಟ್ಟು ಆ ಆಸೆಯ ಮಡಕೆಯನ್ನು ತುಂಬಿಸಲು ಹೋಗಿ ಜೀವನವನ್ನು ವೃಥಾ ಹಾಳುಮಾಡಿಕೊಂಡಿರಿ. ಆಸೆಯೆಂಬುದು ಮನುಷ್ಯನ ಮನಸ್ಸನ್ನು ವ್ಯಾಕುಲಗೊಳಿಸುತ್ತದೆ. ಆದ್ದರಿಂದ ನೆಮ್ಮದಿಯಾಗಿರಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಯಸಬೇಕು’ ಎಂದು ಹೇಳಿ ಸಾಧು ಹೊರಟುಹೋದ. ಕೂಡಲೇ ಏಳು ಮಡಕೆಗಳು ಕೂಡ ಮಾಯವಾದವು. ಅತಿಆಸೆಯೆಂಬುದು ತೂತು ಬಿದ್ದ ಮಡಕೆಯಂತೆ ಸುರಿದಷ್ಟೂ ಸೋರುತ್ತಾ ಹೋಗುತ್ತದೆ. ಇಂಥ ವ್ಯರ್ಥ ಪ್ರಯತ್ನಕ್ಕಿಂತ ಭಗವಂತ ಈಗಾಗಲೇ ತುಂಬಿಕೊಟ್ಟಿರುವುದನ್ನು ವಿವೇಕಯುತವಾಗಿ ಬಳಸುವ ಜತೆಗೆ ದೈವಕೃಪೆಗಾಗಿ ಭಗವಂತನಿಗಾಗಿ ಸ್ವಲ್ಪ ಸಮಯ ಮೀಸಲಿಡೋಣ.

(ಲೇಖಕರು ಹವ್ಯಾಸಿ ಬರಹಗಾರರು)