ಅವನು ಪಾರ್ಥ. ಶಿವನಿಂದ ಗಾಂಡೀವಧನುಸ್ಸು ಪಡೆದು ಗಾಂಡೀವಿ ಎನಿಸಿಕೊಂಡ ಮಹಾಪರಾಕ್ರಮಿ. ದ್ರೋಣಾಚಾರ್ಯರ ಪ್ರೀತಿಯ ಶಿಷ್ಯ. ಲೋಕದಲ್ಲೇ ಪ್ರಸಿದ್ಧ ಧನುರ್ಧಾರಿ. ಪಾಂಡವ-ಕೌರವರ ಯುದ್ಧದ ಸಂದರ್ಭ. ಇನ್ನೂ ಯುದ್ಧ ಪ್ರಾರಂಭವಾಗಿಲ್ಲ. ಯಾವುದೇ ಕಾರ್ಯ ಮಾಡಬೇಕಾದರೂ ಹಿರಿಯರಿಗೆ ನಮಸ್ಕರಿಸಿ ಆರಂಭಿಸಿಬೇಕು ಎಂಬ ಶಿಕ್ಷಣವನ್ನು ತಂದೆ ಪಾಂಡುರಾಜನಿಂದ ಕಲಿತವರು ಪಾಂಡವರು. ಹೀಗಾಗಿ ಯುದ್ಧ ಆರಂಭಿಸುವ ಮುನ್ನ ದ್ರೋಣಾಚಾರ್ಯರು, ಭೀಷ್ಮಾಚಾರ್ಯರು ಮುಂತಾದ ಹಿರಿಯರಿಗೆ ಬಾಣಗಳ ಮೂಲಕ ನಮಸ್ಕರಿಸಿದ ಅರ್ಜುನ. ಆಗ ಅವರು ಮನದುಂಬಿ ‘ವಿಜಯೀ ಭವ’ ಎಂದು ಹರಸಿದರು, ಆಶೀರ್ವದಿಸಿದರು. ಆಶ್ಚರ್ಯವೆಂದರೆ, ಅವರು ಕೌರವಪಕ್ಷದಲ್ಲಿ ನಿಂತು ಯುದ್ಧ ಮಾಡುವವರಿದ್ದಾರೆ. ನಮಸ್ಕಾರ ಮಾಡಿರುವುದು ಅರ್ಜುನ. ಎದುರಾಳಿಗಳಾದ ಪಾಂಡವರ ಸೇನಾಮುಖ್ಯಸ್ಥ. ಅವನಿಗೆ ‘ವಿಜಯಶಾಲಿಯಾಗು’ ಎಂದು ಆಶೀರ್ವಾದ ಮಾಡಿದರೆ, ಅದರಿಂದ ತಾವು ಸೋಲಬೇಕು ಎನ್ನುವುದು ಸಿದ್ಧ. ಆದರೂ ಕಿರಿಯರು ನಮಸ್ಕರಿಸಿದಾಗ ಆಶೀರ್ವಾದ ಮಾಡಬೇಕಾದದ್ದು ಕರ್ತವ್ಯ ಎಂಬ ದೃಷ್ಟಿಯಿಂದ ಆಶೀರ್ವದಿಸಿದರು. ಅದರ ಫಲವಾಗಿ ಪಾಂಡವರು ವಿಜಯಿಗಳಾದರು.
ಇದು ಮಹಾಭಾರತದ ಸತ್ಯಘಟನೆ. ಯುದ್ಧದಂಥ ಕಠಿಣಸಂದರ್ಭದಲ್ಲಿಯೂ ಎದುರಾಳಿಗಳಿಗೆ ಆಶೀರ್ವಾದ ಮಾಡಿ ಜಯ ಕೊಡಿಸುತ್ತಾರೆಂದರೆ, ಕಿರಿಯರು ಹಿರಿಯರಿಗೆ ಮಾಡುವ ನಮಸ್ಕಾರಕ್ಕೆ, ನಮಸ್ಕಾರದಿಂದ ಸಂತೋಷಗೊಂಡು ಹಿರಿಯರು ಕಿರಿಯರಿಗೆ ಮಾಡುವ ಆಶೀರ್ವಾದಕ್ಕೆ ಎಷ್ಟು ಮಹತ್ವವಿದೆ ಎಂಬುವುದನ್ನು ಅರಿಯಬಹುದು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಮಸ್ಕಾರಕ್ಕೆ ವಿಶೇಷವಾದ ಮನ್ನಣೆ ಇದೆ. ಮಕ್ಕಳು ತಂದೆ-ತಾಯಿಗಳಿಗೆ, ಶಿಷ್ಯರು ಗುರುಗಳಿಗೆ ನಮಸ್ಕಾರ ಮಾಡುವುದು, ಮನೆಗೆ ಬಂದ ಅತಿಥಿಗಳಿಗೆ, ಹಿರಿಯರಿಗೆ ನಮಸ್ಕಾರ ಮಾಡುವುದು ನಮ್ಮ ಸನಾತನಧರ್ಮ. ಮಕ್ಕಳಿಗೆ ಈ ಸಂಸ್ಕಾರವನ್ನು ಚಿಕ್ಕವಯಸ್ಸಿನಿಂದಲೇ ಕಲಿಸಬೇಕಾದದ್ದು ಪಾಲಕರ ಕರ್ತವ್ಯ. ‘ನ ಹಿ ದೇವತಾವಂದನಂ ವ್ಯಸನಿತಯಾ ಕ್ರಿಯತೇ’ ಎಂದು ಸುಧೆಯಲ್ಲಿ ಜಯತೀರ್ಥರು ಕಿವಿಮಾತು ಹೇಳಿದ್ದಾರೆ. ‘ನಮಸ್ಕಾರ ಅದೊಂದು ಸುಮ್ಮನೆ ಕಾಟಾಚಾರಕ್ಕೆ ಮಾಡುವ ಕ್ರಿಯೆ ಅಲ್ಲ. ಅಥವಾ ಅದೊಂದು ವ್ಯಸನವೂ ಅಲ್ಲ’. ‘ಮನಃಪ್ರವಣತಾ ಹಿ ವಂದನಮ್ ಮನಸ್ಸು ಬಾಗಿ ಆ ಮೂಲಕ ದೇಹ ಬಾಗಬೇಕು’. ಕಿರಿಯರಿಗೆ ಹಿರಿಯರ ಬಗ್ಗೆ ಗೌರವವಿರಬೇಕು. ಅಂದಾಗ ಮಾತ್ರ ಮನಸ್ಸು ಬಾಗುತ್ತದೆ. ಮನಸ್ಸು ಬಾಗಿದರೆ ನಮಗೇ ಗೊತ್ತಿಲ್ಲದಂತೆ ದೇಹವೂ ಬಾಗುತ್ತದೆ. ಅದು ನಿಜವಾದ ನಮಸ್ಕಾರ.
ಸ್ವವಂದನಂ ಯಥಾ ಪಿತ್ರಾ ಕಾರಿತಂ ಶಿಶುಕರõಕಮ್ |
ತಂದೆ ಪುಟ್ಟ ಮಗನಿಗೆ ಅದನ್ನು ಕಲಿಸಿಕೊಡಬೇಕು. ಹಿರಿಯರು ಬಂದಾಗ ಹೀಗೆ ನಮಸ್ಕಾರ ಮಾಡಬೇಕು ಎಂದು ತಾನು ಮಾಡಿ ತೋರಿಸಿಕೊಡಬೇಕು. ಆ ಮೂಲಕ ಮಗುವಿನಿಂದಲೂ ನಮಸ್ಕಾರ ಮಾಡಿಸಿ, ಸಂಸ್ಕಾರ ಕೊಡಬೇಕು ಎನ್ನುತ್ತದೆ ಶಾಸ್ತ್ರ.
ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡಿದರೆ ಹಿರಿಯರು ಸಂತೋಷದಿಂದ ಮನಃಪೂರ್ವಕವಾಗಿ ಆಶೀರ್ವದಿಸುತ್ತಾರೆ. ಹರಸುತ್ತಾರೆ. ಆ ಹಿರಿಯರ ಆಶೀರ್ವಾದ ಇವನ ಎಲ್ಲವಿಧ ಅಭಿವೃದ್ಧಿಗೆ ಕಾರಣವಾಗುತ್ತದೆ. ಇಂತಹ ಸಂಸ್ಕಾರವನ್ನು ನಾವು ನಮ್ಮ ಮಕ್ಕಳಿಗೆ ನೀಡೋಣ. ಭಾರತದ ಸತ್ಪ್ರಜೆಗಳನ್ನಾಗಿಸೋಣ.
(ಲೇಖಕರು ಸಂಸ್ಕೃತ ವಿದ್ವಾಂಸರು)