| ಸುಮುಖ ಹೆಬ್ಬಾರ್
ನಾವೂ ದುಷ್ಯಂತನಂತೆ ನಮ್ಮವರನ್ನೂ, ನಮ್ಮ ಪೂರ್ವೇತಿಹಾಸವನ್ನೂ ಮರೆತಿದ್ದೇವೆ. ನಾವೆಲ್ಲರೂ ತಾಯಿಯ ಗರ್ಭದ 8ನೇ ತಿಂಗಳಿನಲ್ಲಿ ಭಗವಂತನ ದರ್ಶನ ಪಡೆದಿರುತ್ತೇವೆಂದು ಗರ್ಭೇಪನಿಷತ್ತು ಪ್ರತಿಪಾದಿಸುತ್ತದೆ. ಹುಟ್ಟಿದನಂತರ ಮಾಯೆಯಿಂದ ಇದರ ವಿಸ್ಮರಣೆಯುಂಟಾಗಿರುತ್ತದೆ. ಆ ಅನುಭವದ ಸ್ಮರಣೆಯನ್ನು ತಂದುಕೊಡಲು ಮಹರ್ಷಿಗಳು ಅಭಿಜ್ಞಾನವಾಗಿ ದೇವಾಲಯಗಳನ್ನು ತಂದಿದ್ದಾರೆ. ಮಹರ್ಷಿಗಳು ಅಂತರಂಗದಲ್ಲಿ ಅಬಾಧಿತವಾಗಿ ಸಪ್ತಲೋಕದಲ್ಲೂ ವಿಹರಿಸಬಲ್ಲವರಾಗಿದ್ದರು. ಹೀಗೆ ಸಂಚರಿಸುತ್ತ ಅನೇಕ ದರ್ಶನಗಳನ್ನು ಪಡೆದರು. ಅವರು ಕಂಡ ಅತ್ಯಮೋಘವಾದ, ಪರಮ ರಮಣೀಯವಾದ ಒಳದರ್ಶನಗಳನ್ನು ನಮ್ಮೆಲ್ಲರ ಬಗೆಗಿನ ಕರುಣೆಯಿಂದ ನಮ್ಮ ದೇವಾಲಯಗಳಲ್ಲಿ ದೇವತಾಮೂರ್ತಿಗಳಾಗಿ ಸ್ಥಾಪಿಸಿದರು. ತಮ್ಮ ಅಂತರಂಗದ ಶಕ್ತಿಯನ್ನು ಅದರಲ್ಲಿ ಪ್ರತಿಷ್ಠಾಪಿಸಿದರು. ನೋಡಿದವರಿಗೆಲ್ಲ ತಮ್ಮ ಸ್ವಸ್ವರೂಪದ ಸ್ಮರಣೆಯಾಗಿ ಎಲ್ಲರೂ ಸಂತೋಷ ಪಡುವಂತಾಗಲಿ ಎಂಬ ಕರುಣೆ ಅವರದು. ದೇವಾಲಯಗಳು ಮೂಲವನ್ನು ಜ್ಞಾಪಿಸುವ ಅಭಿಜ್ಞಾನ, ಈ ಕಾರಣದಿಂದಲೇ ಶ್ರೀರಂಗ ಮಹಾಗುರುಗಳು ದೇವಾಲಯವನ್ನು ‘ಸ್ಮಾರಕ ಮಂದಿರ (Mಛಿಞಟ್ಟಢ ಏಚ್ಝ್ಝ’ ಎಂಬುದಾಗಿ ಕರೆಯುತಿದ್ದರು. ಅಲ್ಲಿ ಹೃದಯಗರ್ಭದಲ್ಲಿ ಬೆಳಗುವ ದೇವನನ್ನು ನೆನಪಿಸುವ ಗರ್ಭಗುಡಿಯುಂಟು. ಹೊರಗೆ ತ್ರಿಗುಣಗಳನ್ನು ಸ್ಮರಣೆಗೆ ತರಿಸುವ ಮೂರು ಬಣ್ಣದ ತೆರೆಗಳುಂಟು. ಒಳಗೆ ಸಾಕ್ಷಾತ್ ಪ್ರತಿನಿಧಿಯಾದ ಮೂರ್ತಿಯ ದರ್ಶನವೂ ಉಂಟು. ಹೊಂಬಣ್ಣದ ಬೆಳಕಿನಲ್ಲಿ ಕಂಗೊಳಿಸುವಂತೆ ಮಾಡಿಸುವ ಮಂಗಳ ಆರತಿಯುಂಟು. ಪ್ರಣವವನ್ನು ಹೋಲುವ ಘಂಟಾನಾದವುಂಟು. ಮಹರ್ಷಿಗಳ ಈ ವಿಜ್ಞಾನದೊಂದಿಗೆ ನಾವೆಲ್ಲರೂ ದೇವಾಲಯಗಳನ್ನು ನೋಡುವಂತಾಗಲಿ.
(ಲೇಖಕರು ಸಂಸ್ಕೃತಿ ಚಿಂತಕರು)