ಹಿಂದೆಲ್ಲ ಬಂಗಾಲಿ ಮತ್ತು ಕನ್ನಡ ಚಿತ್ರಗಳ ಬಗ್ಗೆ ಇದೇ ರೀತಿ ಚರ್ಚೆಯಾಗುತ್ತಿತ್ತು. ಈಗಲೂ ನಾವು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಬೇಕಾದರೆ 70ರ ದಶಕಗಳ ಚಿತ್ರಗಳನ್ನು ನೆನಪಿಸಿಕೊಳ್ಳುತ್ತೇವೆ. ಆಗ ಬರುತ್ತಿದ್ದ ಚಿತ್ರಗಳು ಈಗ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆ ಮೊದಲು ಕೇಳಿಬರುತ್ತದೆ. ಆದರೆ, ಮಲಯಾಳಂ ಚಿತ್ರಗಳು ಯಾವತ್ತೂ ನಮಗೆ ಮುಖ್ಯ ಎಂದನಿಸಲಿಲ್ಲ. ಏಕೆಂದರೆ, ಮಲಯಾಳಂ ಚಿತ್ರಗಳೆಂದರೆ ಸೆಕ್ಸ್ ಚಿತ್ರಗಳೆನ್ನುವ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ, ಮಲಯಾಳಂ ಮತ್ತು ಮರಾಠಿ ಚಿತ್ರರಂಗಗಳು ಈ ಒಂದು ದಶಕದಲ್ಲಿ ಬಹಳ ಪ್ರಾಮುಖ್ಯ ಪಡೆದಿವೆ. ಮರಾಠಿ ಚಿತ್ರರಂಗವಂತೂ ಹಿಂದಿ ಚಿತ್ರರಂಗದ ಪೈಪೋಟಿಯಿಂದ ಅಕ್ಷರಶಃ ಕುಸಿದುಹೋಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಒಳ್ಳೆಯ ಚಿತ್ರಗಳಿಂದ ಅದು ಪುಟಿದು ನಿಂತಿದೆ. ಈ ವರ್ಷದ ಪನೋರಾಮಾ ಪಟ್ಟಿಯನ್ನೇ ತೆಗೆದುಕೊಂಡರೆ, ಐದು ಮರಾಠಿ ಚಿತ್ರಗಳು ಆಯ್ಕೆಯಾಗಿವೆ. ಇದು ಹೇಗೆ ಸಾಧ್ಯವಾಯಿತು? ಈ ಚಿತ್ರರಂಗಗಳಿಂದ ನಾವು ಕಲಿಯಬೇಕಾಗಿದ್ದು ಏನು, ನಾವು ಸಹ ಏನೆಲ್ಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಏನೆಲ್ಲ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕು.
ಹಾಗಾದರೆ, ಬೇರೆ ಭಾಷೆಗಳಲ್ಲಿ ಬರುತ್ತಿರುವುದೆಲ್ಲ ಒಳ್ಳೆಯ ಚಿತ್ರಗಳಾ? ಹಾಗೇನಿಲ್ಲ. ನಮ್ಮಲ್ಲಿ ಅದು ಫಿಲ್ಟರ್ ಆಗಿ ಬರುತ್ತಿವೆ. ಇಲ್ಲಿಗೆ ಬರುವ ಚಿತ್ರಗಳು ಮೇಲ್ಪದರದ ಚಿತ್ರಗಳಾದ್ದರಿಂದ, ಅವು ಚೆನ್ನಾಗಿಯೇ ಇರುತ್ತವೆ. ಬೇರೆ ರಾಜ್ಯಗಳಲ್ಲಿ ನಮ್ಮ ಚಿತ್ರಗಳ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡುತ್ತಾರೆ. ‘ಕೆಜಿಎಫ್’, ‘ತಿಥಿ’, ‘ಲೂಸಿಯಾ’ ಹೀಗೆ ನಮ್ಮಲ್ಲೂ ಎಲ್ಲೆಡೆ ಮಾತನಾಡುವ ಚಿತ್ರಗಳು ಬಂದಿವೆ. ಆದರೆ, ಆ ಪ್ರಮಾಣ ಬಹಳ ಕಡಿಮೆ. ನಾನು ಸಹ ಮಲಯಾಳಂ ಚಿತ್ರರಂಗವನ್ನು ಒಂದು ವರ್ಷದಿಂದ ಗಮನಿಸುತ್ತಲೇ ಬಂದಿದ್ದೆ. ಅದಕ್ಕೆ ಸರಿಯಾಗಿ 2020ನೇ ಸಾಲಿನ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ನಾನು ಅಧ್ಯಕ್ಷನಾಗಿ ಹೋಗಿದ್ದೆ. 80 ಚಿತ್ರಗಳು ಕಣದಲ್ಲಿದ್ದವು ಮತ್ತು ಆ ಎಲ್ಲ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿತ್ತು. 2020ರ ಮಲಯಾಳಂ ಚಿತ್ರರಂಗ ಹೇಗಿದೆೆ? ಅವರು ಕ್ರಮಿಸುತ್ತಿರುವ ದಿಕ್ಕು ಯಾವುದು? ಅವರು ಆಯ್ಕೆ ಮಾಡಿಕೊಳ್ಳುತ್ತಿರುವ ವಸ್ತು ಯಾವುದು? ಇಂತಹ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರೆ ಹಲವು ಕಾರಣಗಳು ಸಿಗುತ್ತವೆ.
ಪ್ರಮುಖವಾಗಿ, ಮಲಯಾಳಂ ಚಿತ್ರಗಳಲ್ಲಿ ವಸ್ತುವೈವಿಧ್ಯವಿದೆ. ವಿಶೇಷವೆಂದರೆ, ಕನ್ನಡಿಗರು ಸಹ ಅಲ್ಲಿಗೆ ಹೋಗಿ ಸಿನಿಮಾ ಮಾಡುತ್ತಿದ್ದಾರೆ. ನಾನು ನೋಡಿದ ಚಿತ್ರಗಳ ಪೈಕಿ ಎರಡು ಸಿನಿಮಾಗಳನ್ನು ಕರ್ನಾಟಕದವರು ಅಲ್ಲಿ ಪ್ರಯೋಗ ಮಾಡಿದ್ದು ವಿಶೇಷ. ವಿಭಿನ್ನ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅಲ್ಲಿಯ ಸಾಮಾಜಿಕ ಕಾರಣಗಳೂ ಇರುತ್ತವೆ. ಬರೀ ಮಲಯಾಳಂ ಅಷ್ಟೇ ಅಲ್ಲ, ಇತ್ತೀಚೆಗೆ ಬಿಡುಗಡೆಯಾದ ‘ಜೈ ಭೀಮ್ ಬಗ್ಗೆ ಎಲ್ಲ ಕಡೆ ಚರ್ಚೆಯಾಗುತ್ತಿದೆ. ಆ ತರಹದ ವಸ್ತುಗಳು ನಮ್ಮಲ್ಲಿ ಸಾಧ್ಯವಾಗುವುದಿಲ್ಲವಾ? ಖಂಡಿತ ಸಾಧ್ಯವಿದೆ. ನಮ್ಮಲ್ಲೂ ಬುಡಕಟ್ಟು ಜನಾಂಗಗಳಿವೆ. ಆದರೆ, ಈ ತರಹದ ಸಿನಿಮಾ ನಮ್ಮಲ್ಲಿ ಯಾಕಾಗುತ್ತಿಲ್ಲ? ಅಲ್ಲಿ ನಾನು ನೋಡಿದ ಚಿತ್ರಗಳ ಪೈಕಿ ಒಳ್ಳೆಯ ಸಿನಿಮಾಗಳೂ ಇದ್ದವು, ಕೆಟ್ಟ ಚಿತ್ರಗಳೂ ಇದ್ದವು. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ವೈವಿಧ್ಯಮಯ ಚಿತ್ರಗಳಿದ್ದವು ಎನ್ನುವುದು ವಿಶೇಷ. ನಾನು ನೋಡಿದ ಚಿತ್ರಗಳಲ್ಲಿ ಎಲ್ಲೂ ಮಚ್ಚು-ಲಾಂಗು ಕಾಣಿಸಲಿಲ್ಲ, ರಕ್ತಪಾತ ಇರಲಿಲ್ಲ. ಅವನ್ನೆಲ್ಲ ಮೀರಿ ಅವರು ಬೇರೆ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಾದರೂ ಸದಭಿರುಚಿಯ ಚಿತ್ರಗಳಿಗೆ ಸರ್ಕಾರ 10 ಲಕ್ಷ ಸಬ್ಸಿಡಿ ಕೊಡುತ್ತಿದೆ. ಆ ತರಹದ ಅನುದಾನ ಅವರಿಗೆ ಸಿಗುತ್ತಿಲ್ಲ. ಅದರ ಹೊರತಾಗಿಯೂ ಅವರು ಇಂಥದ್ದೊಂದು ಚಿತ್ರ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಒಮ್ಮೆ ಚಿತ್ರೋತ್ಸವವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಉತ್ತರ ಭಾರತದ ಸಿನಿಮಾ ಆಸಕ್ತರೊಬ್ಬರು ದಕ್ಷಿಣ ಭಾರತದ ಚಿತ್ರರಂಗದ ಕುರಿತಾದ ತಮ್ಮ ಗ್ರಹಿಕೆಯನ್ನು ಹಂಚಿಕೊಂಡರು. ‘ದಕ್ಷಿಣದ ನಾಲ್ಕೂ ಭಾಷೆಗಳ ಚಿತ್ರಗಳ ಸೌಂಡ್ ಮ್ಯೂಟ್ ಮಾಡಿ, ಸಿನಿಮಾ ಪ್ರದರ್ಶನ ಮಾಡಿದರೆ, ಮಲಯಾಳಂ ಚಿತ್ರ ಯಾವುದು ಎಂದು ಹೇಳಬಲ್ಲೆ. ತೆಲುಗು, ತಮಿಳು ಸಿನಿಮಾಗಳನ್ನು ಗುರುತಿಸಬಲ್ಲೆ. ಆದರೆ, ಇದು ಕನ್ನಡ ಚಿತ್ರ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ’ ಎಂದು ಹೇಳಿದ್ದರು. ಅದಕ್ಕೆ ಕಾರಣವನ್ನೂ ನೀಡಿದ್ದರು. ಮಿಕ್ಕ ಮೂರು ಭಾಷೆಯ ಚಿತ್ರಗಳಿಗೆ ಅದರದ್ದೇ ಆದ ಗುಣ-ವಿಶೇಷತೆಗಳಿವೆ. ಆದರೆ, ಕನ್ನಡದಲ್ಲಿ ಎಲ್ಲವೂ ಮಿಕ್ಸ್ ಆಗಿರುವುದರಿಂದ, ಅದನ್ನು ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ನಮ್ಮ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಸಾಂಸ್ಕೃತಿಕ ನೆಲೆಗಟ್ಟಿದೆ. ಆದರೆ, ಸಿನಿಮಾ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ನಮ್ಮದೇ ಆದ ಐಡೆಂಟಿಟಿಯನ್ನು ಚಿತ್ರರಂಗಕ್ಕೆ ಸರಿಯಾಗಿ ತರುವುದಕ್ಕೆ ಸಾಧ್ಯವಾಗಲಿಲ್ಲ. ನಮ್ಮಲ್ಲೂ ‘ಆಕ್ಟ್ 1978’, ‘ಪೆದ್ರೋ’, ‘ನೀಲಿ ಹಕ್ಕಿ’ ತರಹದ ವಸ್ತುವೈವಿಧ್ಯ ಇರುವ ಚಿತ್ರಗಳು ಬರುತ್ತಿವೆ. ಆದರೆ, ಮುಖ್ಯವಾಹಿನಿಯಲ್ಲಿ ಬರುತ್ತಿಲ್ಲ. ಕಾರಣ ನಮ್ಮಲ್ಲಿ ಇನ್ನೂ ಸಿನಿಮಾ ಸಾಕ್ಷರತೆ ಮತ್ತು ಸಿನಿಮಾ ಸಂಸ್ಕೃತಿ ಹೆಚ್ಚು ಬೆಳೆದಿಲ್ಲ ಎನ್ನಬಹುದೇನೋ?
ಈ ನಿಟ್ಟಿನಲ್ಲಿ ಸತ್ಯಜಿತ್ ರೇ ಹೇಳಿದ ಮಾತು ಪದೇಪದೆ ನೆನಪಾಗುತ್ತದೆ. ‘ಎಲ್ಲಿ ಒಳ್ಳೆಯ ಪ್ರೇಕ್ಷಕರು ಇರುತ್ತಾರೋ, ಅಲ್ಲಿ ಒಳ್ಳೆಯ ಸಿನಿಮಾಗಳಾಗುತ್ತವೆ’ ಎಂದು ಅವರು ಹೇಳುತ್ತಿದ್ದರು. ನಾವು ಒಳ್ಳೆಯ ಪ್ರೇಕ್ಷಕರನ್ನು ಬೆಳೆಸುವಲ್ಲಿ ಹಿಂದೆ ಬಿದ್ದಿದ್ದೀವೇನೋ ಎಂಬ ಪ್ರಶ್ನೆ ಆಗಾಗ ಕಾಡುತ್ತದೆ. ಬೇರೆ ಭಾಷೆಗಳಲ್ಲಿ ಈ ವಿಷಯದಲ್ಲಿ ಸ್ವಲ್ಪ ಮುಂದಿದ್ದಾರೆ. ಹಾಗಂತ ಅವರಿಗೆ ಸಮಸ್ಯೆಗಳು ಇಲ್ಲ ಅಂತಲ್ಲ. ನಮ್ಮಲ್ಲಿರುವ ಸಮಸ್ಯೆಗಳು ಅಲ್ಲೂ ಇವೆ. ಅಲ್ಲೂ ಲೋ ಬಜೆಟ್ ಸಿನಿಮಾಗಳಿವೆ. ಆದರೆ, ವಸ್ತುವನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಹೇಗೆ ಕಟ್ಟುತ್ತಾರೆ ಎನ್ನುವುದು ಬಹಳ ಮುಖ್ಯ. ಕೆಲವು ಕಥೆಗಳು ಯಾವ ಭಾಷೆಗೆ ಬೇಕಾದರೂ ಸಲ್ಲುತ್ತವೆ. ಅವು ಯೂನಿವರ್ಸಲ್ ಆಗಿರುತ್ತವೆ. ಅದನ್ನು ಹೇಗೆ ಹೇಳುತ್ತೇವೆ ಎನ್ನುವುದು ಮುಖ್ಯ. ಯಾವುದೇ ಕಥೆಯಾದರೂ, ಅದನ್ನು ನಮ್ಮ ಬೇರುಗಳ ಸಮೇತ ಹೇಳಿದಾಗ ಅದು ನಮ್ಮದೆನಿಸುತ್ತದೆ. ಆಗ ಜನರಿಗೂ ಕನೆಕ್ಟ್ ಆಗುತ್ತದೆ. ಉದಾಹರಣೆಗೆ ಮರಾಠಿ ಚಿತ್ರ ‘ಶ್ವಾಸ್’. ಆ ಕಥೆ ಎಲ್ಲ ಭಾಷೆಗಳಿಗೂ ಸಲ್ಲುವಂಥದ್ದು. ಆದರೆ, ಅದನ್ನು ಅಲ್ಲಿಯ ಬೇರುಗಳೊಂದಿಗೆ ಹೇಳಿದಾಗ, ವಿಶಿಷ್ಟವಾಗಿರುತ್ತದೆ. ಮಲಯಾಳಂನಲ್ಲಿ ಆಗುತ್ತಿರುವುದು ಇದೇ ಪ್ರಯೋಗ. ಅವರು ತಮ್ಮ ನೆಲದ ಕಥೆಯನ್ನು ಹೇಳುತ್ತಿದ್ದಾರೆ.
ಇದೆಲ್ಲದರ ಹೊರತಾಗಿಯೂ, ನಮ್ಮ ಯುವ ನಿರ್ದೇಶಕರ ಬಗ್ಗೆ ಖುಷಿ ಇದೆ. ಏಕೆಂದರೆ, ಸಿನಿಮಾ ಕಲಿತು ಬರುವ ಪರಿಪಾಠ ಹೆಚ್ಚುತ್ತಿದೆ. ಸಿನಿಮಾ ಕಲಿಯ ಬೇಕು ಎಂದರೆ ಇನ್ಸ್ಟಿಟ್ಯೂಟ್ಗಳಿಗೇ ಹೋಗಿ ಕಲಿಯಬೇಕಿಲ್ಲ. ಇವತ್ತು ಆಸಕ್ತಿ ಇದ್ದರೆ ಸಾಕಷ್ಟು ವೇದಿಕೆಗಳಿವೆ. ಆ ನಿಟ್ಟಿನಲ್ಲಿ ಯೋಚಿಸುವುದಾದರೆ, ಎರಡ್ಮೂರು ವರ್ಷಗಳಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಮಾಡಬೇಕಾಗಿದ್ದೇನೆಂದರೆ, ಹೊಸಬರು ತಮ್ಮ ಬೇರುಗಳನ್ನು ಅರ್ಥ ಮಾಡಿಕೊಂಡು, ಈ ನೆಲದ ಒಳ್ಳೆಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡರೆ, ನಾವು ಆ ಹಂತಕ್ಕೆ ಮುಟ್ಟಬಹುದು.
ಇಲ್ಲಿ ಇನ್ನೊಂದು ವಿಷಯವೂ ಇದೆ. ಸಿನಿಮಾ ನಿರ್ದೇಶಕರು ಮತ್ತು ಪ್ರೇಕ್ಷಕರ ಮಧ್ಯೆ ಯಾವತ್ತೂ ನೇರಾನೇರ ಪೈಪೋಟಿ ಇರುತ್ತದೆ. ಪ್ರೇಕ್ಷಕ ಮೂರ್ಖ, ನಾವೇನು ಕೊಟ್ಟರೂ ತೆಗೆದುಕೊಳ್ಳುತ್ತಾನೆ ಎಂದು ನಂಬಿರುತ್ತೇವೆ. ನಿಜ ಹೇಳಬೇಕೆಂದರೆ, ಪ್ರೇಕ್ಷಕ ನಮ್ಮೆಲ್ಲರಿಗಿಂತ ಬುದ್ಧಿವಂತ. ಇವತ್ತು ಎಲ್ಲವೂ ಬೆರಳತುದಿಯಲ್ಲಿದೆ. ಬೇರೆ ಭಾಷೆಗಳ ಚಿತ್ರಗಳು ಸುಲಭವಾಗಿ ಸಿಗುತ್ತಿವೆ. ಆಗ ಹೋಲಿಕೆಗಳು ಸಹಜ. ಬೇರೆ ಭಾಷೆಗಳಲ್ಲಿ ದೊಡ್ಡ ಬಜೆಟ್ ಚಿತ್ರಗಳು ನಿರ್ಮಾಣ ಮಾಡುತ್ತಾರೆ. ಆಗ ನಾವು ಹೋಲಿಕೆಯಲ್ಲಿ ಸೋಲುತ್ತೇವೆ. ನಾವು ನಮ್ಮ ಬೇರುಗಳಿಗೆ ಹತ್ತಿರವಾದಂಥ, ನಮ್ಮ ಒಳಗಿನ ಕಥೆಗಳನ್ನು, ನಮ್ಮ ಸಂಸ್ಕೃತಿಯ ಕಥೆಗಳನ್ನು ಹೇಳುವುದಕ್ಕೆ ಸಾಧ್ಯವಾದರೆ, ಇಡೀ ಪ್ರಪಂಚ ಕೇಳುವುದಕ್ಕೆ ಸಿದ್ಧವಾಗಿದೆ ಮತ್ತು ಆಗ ಖಂಡಿತ ಬೆಲೆ ಬರುತ್ತದೆ. ಆದರೆ, ಈ ವಿಷಯಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆಗ ನಾವು ಪೈಪೋಟಿ ಒಡ್ಡುವುದರಲ್ಲಿ ಆಶ್ಚರ್ಯವೇನಿಲ್ಲ.
(ಲೇಖಕರು ಹಿರಿಯ ನಿರ್ದೇಶಕರು)