ಅಂಕಣ

ಮಡಿವಾಳೇಶ್ವರ ಶಿವಯೋಗಿಗಳ ಜಾತ್ರೋತ್ಸವ

ಶಿಶುನಾಳ ಶರೀಫರು, ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದ ನಾಗಲಿಂಗ ಸ್ವಾಮಿಗಳು, ಗುರು ಗೋವಿಂದಭಟ್ಟರು ಉತ್ತರ ಕರ್ನಾಟಕ ಭಾಗದಲ್ಲಿ ಧಾರ್ವಿುಕ ಕ್ರಾಂತಿಯನ್ನೇ ಮಾಡಿದರು. ಅವರ ಸಮಕಾಲೀನರೇ ಆದ ಪವಾಡ ಪುರುಷರು ಧಾರವಾಡ ತಾಲೂಕು ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಶಿವಯೋಗಿಗಳು. ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನ ಕಲ್ಮಠದ ಆಧಿಪತ್ಯವನ್ನು ತ್ಯಾಗ ಮಾಡಿದ ಅವರು ಅಲ್ಲಲ್ಲಿ ಸಂಚರಿಸುತ್ತ ಧಾರವಾಡ ಜಿಲ್ಲೆಯ ಗರಗ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ಭಕ್ತಿಯ ಬಗ್ಗೆ ತಿಳಿಸಿದರು. ಅವರಿಂದ ಗರಗ ಗ್ರಾಮವು ಪುಣ್ಯಕ್ಷೇತ್ರವೆನಿಸಿತು.

ಶ್ರೀ ಮಡಿವಾಳೇಶ್ವರ ಶಿವಯೋಗಿಗಳು

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಜನಿಸಿದ ಮಡಿವಾಳೇಶ್ವರರು ಕಲ್ಮಠದ ಪೂಜ್ಯ ಪ್ರಭುಸ್ವಾಮೀಜಿಗಳ ಸಮ್ಮುಖದಲ್ಲೇ ಬೆಳೆದು ದೊಡ್ಡವರಾದರು. ಕಾಶಿಕ್ಷೇತ್ರದಲ್ಲಿ ಸಂಸ್ಕೃತಾಭ್ಯಾಸ ಮಾಡಿ ಪಾಂಡಿತ್ಯ ಪಡೆದರು. ಕಿತ್ತೂರು ಸಂಸ್ಥಾನದ ರಾಜಗುರುಪೀಠಕ್ಕೆ ಅಧಿಪತಿಯಾಗಬೇಕಿದ್ದ ಅವರು ಕೆಲವು ಕುಹಕಿಗಳ ಕಾಪಟ್ಯದಿಂದಾಗಿ ಆ ಸ್ಥಾನದಿಂದ ದೂರವೇ ಉಳಿದರು. ಆದರೆ ಜನಮನಕ್ಕೆ ಅತಿ ಹತ್ತಿರವಾಗಿ ಜೀವನದುದ್ದಕ್ಕೂ ಜನರ ಕಲ್ಯಾಣಕ್ಕೆ ದುಡಿದರು. ತಮ್ಮ ಜೀವಿತಾವಧಿಯಲ್ಲಿ ಹಲವಾರು ಕಲ್ಯಾಣಕಾರ್ಯಗಳನ್ನು ಮಾಡಿದ ನಂತರವೇ ದೇಹತ್ಯಾಗ ಮಾಡಬೇಕೆಂಬ ಇಚ್ಛೆ ಅವರದಾಗಿತ್ತು. ಅದರಂತೆ ದೇಹತ್ಯಾಗಕ್ಕೆ ಸಜ್ಜಾಗಿ ನಿಂತ ಅವರನ್ನು ಭಕ್ತರು ತಡೆದು ಬೇಡಿಕೊಂಡಾಗ ತಮ್ಮ ಮರಣವನ್ನು ಹತ್ತು ವರ್ಷ ಮುಂದೂಡಿದರು. ನಂತರ ಭಕ್ತರ ಆಶಯದಂತೆ ಅವರ ಉದ್ಧಾರ ಮಾಡುತ್ತ ಹತ್ತು ವರ್ಷ ಕಳೆದರು. ನಂತರ ಗರಗದ ಬಳಿಯ ಹಂಗರಕಿ ಗ್ರಾಮದ ಅಯ್ಯಪ್ಪ ದೇಸಾಯಿಯವರನ್ನು ಕರೆಸಿ ದೇಹತ್ಯಾಗಕ್ಕೆ ಗದ್ದುಗೆ ನಿರ್ವಿುಸುವಂತೆ ಸೂಚಿಸಿದರು. ಅದೇ ಪ್ರಕಾರ ಅವರು ಗದ್ದುಗೆಯನ್ನು ಸಜ್ಜುಗೊಳಿಸಿದರು. ಬಳಿಕ ವಿಕ್ರಮ ಸಂವತ್ಸರದ ಮಾಘ ಬಹುಳ ತದಿಗೆಯ (17.02.1881) ಬೆಳಗಿನ ಶುಭ ಮುಹೂರ್ತದಲ್ಲಿ ಗರಗ-ಹಂಗರಕಿ ಗ್ರಾಮದ ಮಧ್ಯೆ ಹರಿಯುವ ತುಪ್ಪರಿಹಳ್ಳದ ಶ್ರೀ ಯೋಗಬಯಲು ಬಸವೇಶ್ವರ ದೇವಾಲಯದ ಹತ್ತಿರ ಸಮಾಧಿಯಲ್ಲಿ ಐಕ್ಯರಾದರು.

ಶ್ರೀ ಚನ್ನಬಸವ ಮಹಾಸ್ವಾಮಿಗಳು

ಮಡಿವಾಳೇಶ್ವರರ 139ನೇ ಪುಣ್ಯಾರಾಧನೆಯ ನಿಮಿತ್ತ ಫೆ. 4ರಿಂದ ಜಾತ್ರೋತ್ಸವ ಆರಂಭವಾಗಿದ್ದು 11ರವರೆಗೆ ನಡೆಯಲಿದೆ. ಫೆ. 11ರಂದು ಸಂಜೆ ಶ್ರೀಮಠದ ಚನ್ನಬಸವ ಮಹಾಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳ ದಿವ್ಯ ಸಾನ್ನಿಧ್ಯದಲ್ಲಿ ಮಹಾ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಲಿದೆ. ಈ ರಥೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜ್ಯದ ನಾನಾ ಭಾಗಗಳ ಭಕ್ತರು ಆಗಮಿಸಿ ಶ್ರೀ ಮಡಿವಾಳೇಶ್ವರರ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಜಾತ್ರೆಯಲ್ಲಿ ಬಯಲು ಕುಸ್ತಿಗಳು, ಎತ್ತಿನ ಚಕ್ಕಡಿ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ವಿಶೇಷ ಸಾರಿಗೆ ವ್ಯವಸ್ಥೆ: ಧಾರವಾಡ ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಮುಮ್ಮಿಗಟ್ಟಿ ಗ್ರಾಮದ ಪಕ್ಕ ಇರುವ ರಸ್ತೆಯಿಂದ 12 ಕಿ.ಮೀ. ಕ್ರಮಸಿದರೆ ನೇರವಾಗಿ ಗರಗ ಗ್ರಾಮಕ್ಕೆ ಬಂದು ತಲುಪಬಹುದು. ಧಾರವಾಡದಿಂದ 20 ಕಿ.ಮಿ. ದೂರದಲ್ಲಿರುವ ಗರಗ ಗ್ರಾಮಕ್ಕೆ ಜಾತ್ರೆ ನಿಮಿತ್ತ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಶಿವಪ್ರಭು ಈಸರಗೊಂಡ