ಅಂಕಣ

ಸಖತ್ ಕ್ರಿಯೇಟಿವ್: ಕ್ಯೂಬಿಕ್‌ಗಳಿಂದಲೇ ವಿಶ್ವದಾಖಲೆ ಬರೆದ ಪೃಥ್ವೀಶ್

Mandara

ಮಾಡೋದಕ್ಕೆ ನೂರಾರು ಕೆಲಸವಿರುತ್ತವೆ. ಆದರೆ ಅದನ್ನು ಆಸಕ್ತಿ ಇಟ್ಟು ಮಾಡುವ ಶಕ್ತಿ ಇರುವುದು ಕೆಲವರಲ್ಲಿ ಮಾತ್ರ. ಯಾಂತ್ರಿಕ ಬದುಕಿನ ಹೊರಗೆ ನಿಂತು ವಿಭಿನ್ನ ರೀತಿಯಲ್ಲಿ ಆಲೋಚಿಸಿ, ಕಾರ್ಯರೂಪಕ್ಕೆ ತರುವವರು ಅನೇಕರಿದ್ದಾರೆ. ನನ್ನ ಭಾಷೆ, ನನ್ನ ರಾಜ್ಯ, ನಮ್ಮ ಜನ, ನಮ್ಮ ಕಲೆ ಎಂಬ ಅಭಿಮಾನ ಇಟ್ಟುಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಕೆಲ ಯುವ ಸಾಧಕರ ಕಿರು ಪರಿಚಯ ಇಲ್ಲಿದೆ. ಇದರಲ್ಲಿ ಕೆಲವರು ಅದನ್ನೇ ತಮ್ಮ ವೃತ್ತಿಯನ್ನಾಗಿಯೂ ಮಾಡಿಕೊಂಡು ಕೈತುಂಬ ಕಾಸನ್ನೂ ಗಳಿಸುತ್ತಿದ್ದಾರೆ.

ನಾವೆಲ್ಲರೂ ಸಾಮಾನ್ಯವಾಗಿ ರ್ಯೂಬಿಕ್ಸ್ ಕ್ಯೂಬ್​‌ಗಳನ್ನು ಒಂದು ಆಟದ ವಸ್ತುವಾಗಿಯಷ್ಟೇ ನೋಡುತ್ತೇವೆ. ಆದರೆ ಬೆಂಗಳೂರಿನ 25 ವರ್ಷದ ಪೃಥ್ವೀಶ್‌ಗೆ ಕ್ಯೂಬಿಕ್ ಬರೀ ಆಟದ ವಸ್ತುವಲ್ಲ. ಅದೇ ಕ್ಯೂಬಿಕ್‌ಗಳಿಂದ ಅವರು ಎರಡು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹಾಗೂ ಒಂದು ಲಿಮ್ಕಾ ರೆಕಾರ್ಡ್ ಮಾಡಿದ್ದಾರೆ. ಸಾವಿರಾರು ಕ್ಯೂಬಿಕ್‌ಗಳನ್ನು ಬಳಸಿಕೊಂಡು ಚಂದದ ಕಲಾಕೃತಿಗಳನ್ನು ರಚಿಸುವಲ್ಲಿ ಪೃಥ್ವೀಶ್ ನಿಸ್ಸೀಮರು.

ದೇಶದ 20ಕ್ಕೂ ಹೆಚ್ಚು ನಗರಗಳಲ್ಲಿ 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕ್ಯೂಬಿಕ್ ಕಲಾಕೃತಿ ರಚನೆಯ ತರಬೇತಿ ನೀಡಿದ್ದಾರೆ. ಕರೊನಾದ ಈ ಸಮಯದಲ್ಲೂ ಎಂಟು ದೇಶಗಳ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡುತ್ತಿದ್ದಾರೆ. ಇಂಡಿಯಾ ಗಾಟ್ ಟ್ಯಾಲೆಂಟ್, ಇಂಡಿಯಾ ಕೆ ಮಸ್ತ್ ಕಲಂದರ್ ಟ್ಯಾಲೆಂಟ್ ಹೀಗೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕರ್ನಾಟಕದ ಹೆಮ್ಮೆಯ ಬಾವುಟವನ್ನು ಹಾರಿಸಿ ಬಂದಿದ್ದಾರೆ. ಕೋಕಾಕೋಲಾ ಕಂಪನಿಯವರು ಪೃಥ್ವೀಶ್ ಕೈಯಿಂದ 7400 ಕ್ಯೂಬಿಕ್‌ಗಳ ಕಲಾಕೃತಿಯನ್ನು ಮಾಡಿಸಿದ್ದಾರೆ. ಕಿರಿಯ ವಯಸ್ಸಿನಲ್ಲೇ ವಿಶೇಷ ಪ್ರತಿಭೆಯೊಂದಿಗೆ ಉನ್ನತ ಸಾಧನೆ ಮಾಡುವುದರ ಜತೆ ಅದನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಪೃಥ್ವೀಶ್‌ರನ್ನು ದೇಶ ವಿದೇಶಗಳಲ್ಲಿ ಗುರುತಿಸಿ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

- ಮಂದಾರ ಸಾಗರ