ಸಾಹಿತ್ಯದಷ್ಟೇ ಸಾಹಿತ್ಯದ ಅಭಿಮಾನಿಗಳೂ ಮುಖ್ಯವಾಗಿರುತ್ತಾರೆ. ಅಂದರೆ ಎರಡೂ ಒಂದಕ್ಕೊಂದು ಪೂರಕವಾಗಿದ್ದಾಗ ಮಾತ್ರ ಬೆಳೆಯಲು ಸಾಧ್ಯ. ಖ್ಯಾತ ಸಾಹಿತಿಯಾಗಿದ್ದ ಏರ್ಯ ಲಕ್ಷ್ಮೀನಾರಾಯಣ ಅವರು ನಮ್ಮ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡುತ್ತಿದ್ದರು. ಒಮ್ಮೆ ನನ್ನ ಸಹೋದರ ಸುರೇಂದ್ರ ಕುಮಾರ್ ಏರ್ಯರನ್ನು ಉದ್ದೇಶಿಸಿ ‘ನೀವು ಕವಿ-ನಾನು ಕಿವಿ. ನನ್ನ ಕಿವಿ ಇಲ್ಲದಿದ್ದರೆ ನಿಮ್ಮ ಕವಿತ್ವಕ್ಕೆ ಬೆಲೆ ಹೇಗೆ ತಾನೆ ಸಿಗುವುದು? ಎಂದಾಗ ಅವರೂ ಹೌದೆಂದರು. ಎಷ್ಟೇ ಶ್ರೇಷ್ಠ ಸಾಹಿತಿ, ಕವನ, ಬರಹಗಳಿದ್ದರೂ ಅವುಗಳನ್ನು ಓದುವವರು, ವಿಮಶಿಸುವವರು, ಆಸ್ವಾದಿಸುವವರು ಇಲ್ಲದಿದ್ದರೆ ಬೆಲೆ ದೊರೆಯಲಾರದು.
ಸಾಹಿತ್ಯವನ್ನು ಬೆಳೆಸಿದವರು ಯಾರು? ಸಾಹಿತಿಗಳೇ ಅಥವಾ ಸಾಹಿತ್ಯಾಸಕ್ತರೇ? ಸಾಹಿತ್ಯ ಬೆಳೆಯುವುದು ಸಾಹಿತಿಗಳಿಂದ, ಸಾಹಿತಿಗಳು ಬೆಳೆಯುವುದು ಸಾಹಿತ್ಯಾಸಕ್ತರಿಂದ. ಸಾಹಿತ್ಯದಿಂದಲೇ ಬದುಕನ್ನು ಕಟ್ಟಿಕೊಂಡವರು ನಮ್ಮ ದೇಶವೂ ಸೇರಿದಂತೆ ವಿವಿಧ ದೇಶಗಳಲ್ಲಿ ಇದ್ದಾರೆ. ಜೆ. ಕೆ. ರೌಲಿಂಗ್ ಎಂಬ ಬ್ರಿಟಿಷ್ ಲೇಖಕಿ ಹ್ಯಾರಿ ಪಾಟರ್ ಎಂಬ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿ ಬರೆದು ವಿಶ್ವಪ್ರಸಿದ್ಧಿಯಾಗಿದ್ದಾರೆ. ಅವರ ಪುಸ್ತಕಗಳು ಐನೂರು ಮಿಲಿಯದಷ್ಟು ಅಚ್ಚಾಗಿವೆ. ಹ್ಯಾರಿಪಾಟರ್ ಪುಸ್ತಕ ಬರುತ್ತದೆ ಎಂದು ಗೊತ್ತಾದರೆ ಸಾಕು ನನ್ನ ಮಗಳು ಶ್ರದ್ಧಾ, ಮೊಮ್ಮಗಳು ಒಂದು ತಿಂಗಳಿನಿಂದ ಕಾಯುತ್ತಿದ್ದರು. ಬೇರೆ ದೇಶದಲ್ಲಿ ರಾತ್ರಿ ಇಡೀ ಸರತಿಯಲ್ಲಿ ನಿಂತು, ಬೀದಿಯಲ್ಲಿ ಮಲಗಿಕೊಂಡು ಆ ಪುಸ್ತಕವನ್ನು ಕೊಂಡು ಓದಿದವರಿದ್ದಾರೆ. ಹ್ಯಾರಿ ಪಾಟರ್- ಒಟ್ಟು ಏಳು ಸರಣಿಗಳಲ್ಲಿ ಪ್ರಕಟವಾಗಿದ್ದು, ಈ ಪುಸ್ತಕದಿಂದ ಲೇಖಕಿಯು ಬ್ರಿಟನ್ ರಾಣಿಗಿಂತ ಹೆಚ್ಚು ಶ್ರೀಮಂತಿಕೆ ಹೊಂದಿದಳಂತೆ.
ಹ್ಯಾರಿಪಾಟರ್ ಪುಸ್ತಕ ಪ್ರಕಟಿಸಲು ಪ್ರಕಾಶಕರು 12 ಬಾರಿ ತಿರಸ್ಕಾರ ಮಾಡಿದ್ದರಂತೆ. ಆದರೆ ಲೇಖಕಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಪ್ರಯತ್ನ ಮುಂದುವರಿಸಿದರು. ಆ ಕಾದಂಬರಿಯನ್ನು ಆಧರಿಸಿ ಮಾಡಿದ ಚಲನಚಿತ್ರಗಳೂ ಜನಪ್ರಿಯತೆ ಪಡೆದಿದೆ. ವಿಶ್ವದ ಯಾವ ರಾಷ್ಟ್ರಗಳಿಗೆ ಹೋದರೂ ಹ್ಯಾರಿಪಾಟರ್ ಕುರಿತಾದ ಚಿತ್ರಗಳು, ಪ್ರತಿಕೃತಿಗಳು, ಅಂಗಡಿಗಳನ್ನು ಕಾಣಬಹುದಾಗಿದೆ. ಈ ಹ್ಯಾರಿಪಾಟರ್ ಕತೆಯಿಂದಾಗಿ ಮಕ್ಕಳ ಮನೋವಿಕಾಸ, ಆಲೋಚನಾ ಶಕ್ತಿಗಳೆಲ್ಲ ವಿಕಾಸವಾಗಲು ಸಹಕಾರಿಯಾಗಿದೆ. ಯುವಕರೂ, ಹಿರಿಯರೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದಾರೆ. ಸಾಹಿತ್ಯದಂತೇ ಚಲನಚಿತ್ರಗಳೂ ಪ್ರೇಕ್ಷಕರಿಂದಾಗಿ ಜನಪ್ರಿಯತೆ ಹೊಂದುತ್ತದೆ. ಕತೆ, ಚಿತ್ರಕತೆ, ನಟನೆ, ನಿರ್ದೇಶನ ಇವೆಲ್ಲ ಎಷ್ಟು ಮುಖ್ಯವೋ ಪ್ರೇಕ್ಷಕನೂ ಅಷ್ಟೇ ಮುಖ್ಯ.
ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಗಜಾನನ ಶರ್ಮ ಅವರು ಬರೆದ ‘ಚೆನ್ನಭೈರಾದೇವಿ’ ಕಾದಂಬರಿ ಓದಿದೆ. ಅದೊಂದು ಸಂಗ್ರಹ ಮಾಹಿತಿಯನ್ನಾಧರಿಸಿದ ಮತ್ತು ಸ್ವಲ್ಪ ಕಾಲ್ಪನಿಕ ಸಂಗತಿಗಳುಳ್ಳ ರಾಣಿಯೊಬ್ಬಳ ಕತೆ. ಆ ಕತೆಯಿಂದ ಪ್ರೇರಣೆಗೊಂಡು ಶ್ರೀ ಕ್ಷೇತ್ರದ ವತಿಯಿಂದ ಸರ್ಕಾರದ ಸಹಕಾರದಿಂದ ಇದೀಗ ಹೊನ್ನಾವರದ ಬಳಿ ಚೆನ್ನಾಭೈರಾದೇವಿಯ ಥೀಂ ಪಾರ್ಕ್ನ ಯೋಜನೆಯ ನಿರ್ಮಾಣ ಕಾರ್ಯದಲ್ಲಿದ್ದೇವೆ. ಆ ಕಾದಂಬರಿ ಓದುವಾಗ ಸಾಕ್ಷಾತ್ ಚೆನ್ನಾಭೈರಾದೇವಿ ನಮ್ಮ ಮುಂದಿದ್ದಾಳೆ ಎಂಬ ಭಾವನೆ ಉಂಟಾಗುತ್ತದೆ. ಆಕೆ ಮಾಡಿದ ಹೋರಾಟ, ಕೃಷಿಗೆ ನೀಡಿದ ಪೋ›ತ್ಸಾಹ, ಆಡಳಿತ ವೈಖರಿ, ಸಾಹಸಗಳನ್ನೆಲ್ಲ ಓದುವಾಗ ಬಹಳ ಆಕರ್ಷಣೀಯ ವ್ಯಕ್ತಿತ್ವದ ಪರಿಚಯವಾಗುತ್ತದೆ. ಹೀಗೆ ಸಾಹಿತ್ಯದ ಮೂಲಕ ವ್ಯಕ್ತಿ ಚಿತ್ರಣವನ್ನು ಸಾಹಿತಿ ಬರೆದಾಗ ಅದನ್ನು ಓದಿದವರು ತಮ್ಮ ಹಿನ್ನೆಲೆಯಿಂದ ಅರ್ಥೈಸಿಕೊಂಡು ಪ್ರೇರಣೆ ಪಡೆಯಬಹುದು.
ಸಾಹಿತ್ಯ ಮಕ್ಕಳಿಗೆ ಸಂಸ್ಕಾರವನ್ನು ಕೊಡುತ್ತದೆ ಮತ್ತು ಬಹಳಷ್ಟು ಪ್ರಭಾವ ಬೀರುತ್ತದೆ. ಮನೆಯಲ್ಲಿ ಕತೆ ಹೇಳುವ ಅಜ್ಜಿ ಇರಬೇಕು ಎಂದೆನ್ನುತ್ತಾರೆ. ಯಾಕೆಂದರೆ ಅಜ್ಜಿ ಮಕ್ಕಳಿಗೆ ಕತೆಗಳ ಮೂಲಕ ನೀತಿ, ಮೌಲ್ಯವನ್ನು ತಿಳಿಸಿಕೊಡುತ್ತಾಳೆ. ಪಂಚತಂತ್ರದ ಕತೆಗಳು, ಈಸೋಪನ ಕತೆಗಳು, ತೆನಾಲಿರಾಮ ಮತ್ತು ಅಕ್ಬರ್-ಬೀರಬಲ್ ಕತೆ ಹೀಗೆ ಅನೇಕ ರೀತಿಯ ಕತೆಗಳು ಮನೋರಂಜನೆಯ ಜೊತೆ ಸಂಸ್ಕಾರ ತಿಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಅಜ್ಜಿ ಕತೆ ಹೇಳುವ ಕಾರ್ಯಕ್ರಮ ಆರಂಭಿಸಿದರು. ಮಕ್ಕಳಿಗೆ ಅಜ್ಜಿ ಕತೆ ಹೇಳುವುದು, ಒಂದೊಂದು ಕತೆಯಾದ ಬಳಿಕ ಮಕ್ಕಳಿಗೆಲ್ಲ ಹಪ್ಪಳ, ತಿಂಡಿ ಹಂಚುವುದು ಹೀಗೆ ಆರಂಭಿಸಿದ ಕಾರ್ಯಕ್ರಮ ಯಶಸ್ವಿಯಾಗಿದೆ. ಮನೆಯಲ್ಲಿ ಹೇಮಾವತಿಯವರು, ಮಗಳು ಶ್ರದ್ಧಾ ಮತ್ತು ಮೊಮ್ಮಗಳು ಮಾನ್ಯ ಚಿಕ್ಕವರಾಗಿದ್ದಾಗ ಪುಣ್ಯಕೋಟಿ ಕತೆಯನ್ನು ಹೇಳುತ್ತಿದ್ದರು. ಕತೆಯಲ್ಲಿ ತಾಯಿ ದನ ಮಗುವಿಗೆ ಹಾಲು ಕೊಟ್ಟು ಬರುತ್ತೇನೆ ಎನ್ನುವಾಗ, ಹುಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುಂತಾದ ಸಂದರ್ಭದಲ್ಲಿ ಮಕ್ಕಳು ಅಳುತ್ತಿದ್ದರು. ಕತೆಯ ಮೂಲಕ ಮಕ್ಕಳ ಮನಸ್ಸಿನಲ್ಲಿ ಸ್ನೇಹ, ಪ್ರೀತಿ, ಅನುಕಂಪ, ಸತ್ಯ, ನ್ಯಾಯ, ನೀತಿ ಮುಂತಾದ ಗುಣಗಳ ಪರಿಣಾಮವಾಗುತ್ತದೆ.
ಸುಭಾಷಿತದಲ್ಲಿ ಮಾತೊಂದಿದೆ. ‘ಸಾಹಿತಿಗಳು ತಮ್ಮ ಚತುರವಾದ ಕವಿತೆಯಿಂದ ಸಂತೋಷಪಟ್ಟರೂ ಬೇರೆಯವರ ಕವಿತೆಗಳನ್ನು ಓದಿ ಸಂತೋಷಪಡುವ ಮನಸ್ಸಿನ ಪ್ರಾಜ್ಞರು ಇದ್ದೇ ಇರುತ್ತಾರೆ. ತನ್ನ ಹೂವುಗಳ ಮಕರಂದದಿಂದ ಪಾಚಿ ತುಂಬಿದರೂ ಬಿಂದಿಗೆಯಿಂದ ಸುರಿಯುವ ನೀರನ್ನು ಮಾವು ಬಯಸುವುದಿಲ್ಲವೇ?’ ಎಂದು.
ಕವಿಗಳು ಆಶ್ರಯಿಸಿದ್ದರಿಂದ ರಾಜರುಗಳೂ ಪ್ರಖ್ಯಾತರಾದರು. ಪಂಪ, ರನ್ನ, ಹೊನ್ನ ಮುಂತಾದವರು ಸಹ ಹೀಗೆ ರಾಜನ ಆಸ್ಥಾನಗಳಲ್ಲಿದ್ದವರು. ಕೃಷ್ಣದೇವರಾಯನ ಆಸ್ಥಾನದಲ್ಲಿ ಅನೇಕ ಕವಿಗಳಿದ್ದರು. ವಿಕಟಕವಿಗಳು ಸಂದರ್ಭ, ಸನ್ನಿವೇಶಕ್ಕೆ ಅನುಗುಣವಾಗಿ ಸ್ಥಳದಲ್ಲೇ ರಚಿಸಿ ವಾಚಿಸುತ್ತಿದ್ದರು.
ರಾಜ ಮತ್ತು ಕವಿ ಇಬ್ಬರೂ ಪರಸ್ಪರ ಸಹಕಾರಿಯಾಗಿದ್ದರು. ಅಂದರೆ ರಾಜನಿಂದ ಕವಿಯೂ, ಕವಿಯಿಂದಾಗಿ ರಾಜನೂ ಪ್ರಖ್ಯಾತರಾಗಿದ್ದರು. ಕವಿರತ್ನ ಕಾಳಿದಾಸ ಹಾಗೂ ಭೋಜರಾಜನನ್ನು ಇಲ್ಲಿ ಉಲ್ಲೇಖಿಸಬಹುದು. ಕುವೆಂಪು ಅವರು ‘ರಾಮಾಯಣ ದರ್ಶನಂ’ ಕೃತಿಯನ್ನು ಬರೆದಾಗ ಕೆಲವರು ಮತ್ತೆ ಯಾಕೆ ನೀವು ರಾಮಾಯಣವನ್ನು ಆರಿಸಿಕೊಂಡಿರಿ ಎಂದು ಕೇಳಿದರಂತೆ. ಆಗ ಅವರು ‘ಒಳ್ಳೆಯ ಶಿಲೆ ಸಿಕ್ಕಾಗ ಮಾತ್ರ ಒಳ್ಳೆಯ ಮೂರ್ತಿಯನ್ನು ಕೆತ್ತಲು ಸಾಧ್ಯ’ ಎಂದರಂತೆ. ಹೀಗೆ ಒಳ್ಳೆಯ ಸಾಹಿತ್ಯ ಸೃಷ್ಟಿಗೆ ಉತ್ತಮ ವಿಚಾರಗಳೂ ಮುಖ್ಯ.
ಹೊಸ ಹೊಸದಾಗಿ ಉಲ್ಲೇಖಿಸುವ ಸಾಮರ್ಥ್ಯವುಳ್ಳ ಪ್ರಜ್ಞಾಶಕ್ತಿಗೆ ಪ್ರತಿಭೆ ಎಂದು ಹೆಸರು. ಆ ಪ್ರತಿಭೆಯನ್ನು ಅವಲಂಬಿಸಿ ಜೀವಂತವಾದ ವರ್ಣನೆ ಮಾಡುವುದರಲ್ಲಿ ನೈಪುಣ್ಯ ಹೊಂದಿದವನೇ ಕವಿ ಎಂದಿದ್ದಾರೆ. ಶಾಸ್ತ್ರಗಳಲ್ಲಿ ತಿಳಿಯಲು ಕಠಿಣವಾದ ವಿಷಯವೂ, ಕವಿಸೂತ್ರದಲ್ಲಿ ಬಂದಾಗ ಹಿತಕರವಾಗಿ ರುಚಿಸುತ್ತದೆ. ಪುರಂದರದಾಸರು, ಕನಕದಾಸರ ಹಾಡುಗಳನ್ನು ಕೇಳುವಾಗ ಅದು ಎಲ್ಲ ತತ್ವಗಳ ಭಟ್ಟಿ ಇಳಿಸಿದ ಸಾರದಂತೆ ಅನುಭವವಾಗುತ್ತದೆ. ನಮ್ಮ ಜೀವನದಲ್ಲಿ ಬರುವಂಥ ಕಷ್ಟ, ನಷ್ಟ, ದುಃಖ, ಬೇನೆಗಳಿಗೆಲ್ಲ ದಾಸರ ಪದಗಳಲ್ಲಿ ಉತ್ತರಗಳು ದೊರೆಯುತ್ತವೆ.
ಅನೇಕ ಲೇಖಕರ ಸಾಹಿತ್ಯ ವಿಚಾರಗಳು, ಪ್ರಸ್ತುತಪಡಿಸುವ ರೀತಿ, ಬರಣಿಗೆಯ ಶೈಲಿ, ಅದರಲ್ಲಿರುವ ಮಾಹಿತಿ, ರ್ತಾಕ ವಿಷಯಗಳು, ಇತ್ಯಾದಿಗಳನ್ನೆಲ್ಲ ನೋಡಿದಾಗ ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಅಂತಹ ಶಕ್ತಿ ಸಾಹಿತಿಗೂ ಸಾಹಿತ್ಯಕ್ಕೂ ಇದೆ. ಅವನ್ನೆಲ್ಲ ಬೆಳೆಸಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯ.
ಮಡಕೆಯೊಳಗೆ ಬೀಳುವ ಒಂದೊಂದು ನೀರಿನ ಹನಿಯೂ ಮಡಕೆಯನ್ನು ತುಂಬಿಸುತ್ತದೆ. ಎಲ್ಲ ತರಹದ ವಿದ್ಯೆ, ಧರ್ಮ, ಧನಕ್ಕೂ ಇದೇ ಅನ್ವಯಿಸುತ್ತದೆ. ಇಂದಿನ ದಿನಗಳಲ್ಲಿ ಬಹಳ ಸುಲಭವಾಗಿ ಮಾಹಿತಿಗಳು ದೊರೆಯುತ್ತವೆ. ಅವುಗಳನ್ನು ಸಾಧ್ಯವಾದಷ್ಟು ಸಂಗ್ರಹಿಸಿಕೊಳ್ಳಿ. ಸಣ್ಣ ಹನಿಯೆಂದು ಬಿಟ್ಟು ಬಿಡಬೇಡಿ. ಸಣ್ಣ ನೀರಿನ ಹನಿ ಸಸ್ಯಕ್ಕೆ ಹೇಗೆ ಜೀವ ನೀಡುತ್ತದೆಯೋ ಹಾಗೆ ಇದು ನಿಮ್ಮಲ್ಲಿ ಭಾವನೆ, ವಿಶ್ವಾಸ, ಆತ್ಮಶಕ್ತಿಯನ್ನೆಲ್ಲ ತುಂಬಿ ಪರಿಪೂರ್ಣ ವ್ಯಕ್ತಿತ್ವವು ರೂಪುಗೊಳ್ಳಲು ಸಹಕರಿಸುತ್ತದೆ.
ಡಾ. ಯಶೋವರ್ಮ ಅವರು ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದಾಗ ನೂತನ ಯೋಜನೆಯನ್ನು ಪ್ರಕಟಿಸಿದರು. ಅದರಂತೆ ಒಬ್ಬ ವಿದ್ಯಾರ್ಥಿ ಕಡ್ಡಾಯವಾಗಿ ಇಂತಿಷ್ಟು ಅವಧಿಯನ್ನು ಗ್ರಂಥಾಲಯದಲ್ಲಿ ಕಳೆಯಬೇಕು. ಅದಕ್ಕಾಗಿ ಹಾಜರಾತಿ ನೀಡುವ ಪದ್ಧತಿಯೂ ಇತ್ತು. ಹಾಗಾಗಿ ಅನೇಕ ವಿದ್ಯಾರ್ಥಿಗಳು ಮೊದ ಮೊದಲು ಕಡ್ಡಾಯವೆಂಬ ಕಾರಣಕ್ಕಾಗಿ ಗ್ರಂಥಾಲಯವನ್ನು ಬಳಸುತ್ತಿದ್ದವರು ಬಳಿಕ ಓದುವ ಅಭ್ಯಾಸ, ಆಸಕ್ತಿ ಉಂಟಾದ ಮೇಲೆ ನಿರಂತರವಾಗಿ ಗ್ರಂಥಾಲಯಕ್ಕೆ ಬರತೊಡಗಿದರು. ಅತಿ ಹೆಚ್ಚು ಗ್ರಂಥಾಲಯವನ್ನು ಬಳಸುವವರನ್ನು ಗುರುತಿಸಿ ಪ್ರಶಂಸೆ ಮಾಡಲಾಗುತ್ತಿತ್ತು. ಕಾಲೇಜಿನ ಗ್ರಂಥಾಲಯದಲ್ಲಿ ಸುಮಾರು 1.40 ಲಕ್ಷ ಪುಸ್ತಕಗಳಿವೆ. ಅವುಗಳಲ್ಲಿ ಆಸಕ್ತಿ ಇರುವ 20 ಪುಸ್ತಕಗಳನ್ನು ಪಡೆದು ಓದಿದರೂ ಸಾಕಷ್ಟು ಜ್ಞಾನ ವೃದ್ಧಿಯಾಗುತ್ತದೆ. ಹೀಗೆ ಒಮ್ಮೆ ಓದುವ ಆಸಕ್ತಿ ಮೂಡಿದಲ್ಲಿ ಅದು ನಿರಂತರವಾಗಿ ಇರುತ್ತದೆ.
‘ಅರಸಿಕೇಷು ಕವಿತ್ವ ನಿವೇದನಂ- ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ’- ‘ಯಾವ ಕರ್ಮಫಲವನ್ನಾದರೂ ನನ್ನ ಹಣೆಯ ಮೇಲೆ ಬರೆ, ಆದರೆ ಅರಸಿಕರ ಮುಂದೆ ಕಾವ್ಯವನ್ನು ಓದುವುದನ್ನು ಮಾತ್ರ ಬರೆಯಬೇಡ, ಬರೆಯಬೇಡ, ಬರೆಯಬೇಡ’ ಎಂದು ಮೂರು ಮೂರು ಬಾರಿ ನಿವೇದಿಸಿರುವುದು, ಕವಿಯ ಸಂಕಟವನ್ನು ಸಮರ್ಪಕವಾಗಿ ಬಿಂಬಿಸಿದೆ. ಅರಸಿಕರ ಮುಂದೆ ಕವಿತೆ ಓದಿದರೆ ಏನೂ ಪ್ರಯೋಜನವಾಗಲಾರದು. ಸಾಹಿತ್ಯ, ಕವನಗಳ ಬಗ್ಗೆ ಕೊಂಚವಾದರೂ ಆಸಕ್ತಿ, ಕುತೂಹಲ ಇದ್ದಾಗ ಮಾತ್ರ ಕವಿಗೂ ಕವನಕ್ಕೂ ಬೆಲೆ.
ಒಮ್ಮೆ ಶಿವರಾಮ ಕಾರಂತರ ಮನೆಗೆ ಹೋದಾಗ ಅವರಲ್ಲಿ ಇಷ್ಟೆಲ್ಲ ವಿಷಯಗಳಲ್ಲಿ ಹೇಗೆ ಆಸಕ್ತಿಯನ್ನು ಹೊಂದಿದ್ದೀರಿ ಎಂದು ಕೇಳಿದೆ. ‘ನನಗೆ ಇಂತಹುದ್ದೇ ವಿಷಯದ ಮೇಲೆ ಎಂದು ಆಸಕ್ತಿಯಿಲ್ಲ. ಆದರೆ ಯಾವುದನ್ನೇ ನೋಡಿದರೂ ಕುತೂಹಲ ಮತ್ತು ಆಸಕ್ತಿಯಿಂದ ನೋಡುತ್ತೇನೆ. ಗಮನಿಸುತ್ತೇನೆ’ ಎಂದರು. ನಾನು ಕೂಡ ಯಾವ ಪುಸ್ತಕ ಸಿಕ್ಕಿದರೂ ಏನಾದರೂ ಹೊಸತು ಮಾಹಿತಿ, ವಿಚಾರಗಳು ಸಿಗುತ್ತವೆಯೋ ಎಂದು ಕುತೂಹಲದಿಂದ ನೋಡುತ್ತೇನೆ, ಓದುತ್ತೇನೆ.
ಸಾಹಿತ್ಯ ಸಮ್ಮೇಳನಗಳು ಎಲ್ಲೆಡೆಯೂ ಆಯೋಜನೆಯಾಗಬೇಕು. ಈಗ ಸಾಕಷ್ಟು ಬರಹಗಾರರು ಇದ್ದಾರೆ. ಓದುಗರೂ ಇದ್ದಾರೆ. ಇದರ ಜೊತೆಗೆ ಇನ್ನಷ್ಟು ಸಾಹಿತಿಗಳನ್ನು ಪೋ›ತ್ಸಾಹಿಸುವ ನಿಟ್ಟಿನಲ್ಲಿ ಸಾಹಿತ್ಯಾಸಕ್ತರೂ ವೃದ್ಧಿಸಬೇಕಿದೆ. ಇವುಗಳಿಗೆಲ್ಲ ಸಾಹಿತ್ಯ ಸಮ್ಮೇಳನಗಳು, ಗೋಷ್ಠಿಗಳು ಮತ್ತಷ್ಟು ಬಲ ತುಂಬಬೇಕಿದೆ. ಆ ನಿಟ್ಟಿನಲ್ಲಿ ನಾವೆಲ್ಲ ಮುಂದುವರಿಯೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)