ಬಿಟ್ಟ ಮಂಡೆಯ ಕೆಂಚುಗೂದಲ/ನಿಟ್ಟೊಡಲ, ನಿಡುದೋಳ, ತೊನಹಿನ/ಮುಟ್ಟದೆವೆಗಳ, ನೆಟ್ಟನೋಟದ, ಲಂಬಕರ್ಣಗಳ/ದಟ್ಟಡಿಯ, ಮಲೆವಂಗದೊಲಹಿನ/ಕಟ್ಟಳೆಯ ಕಡು ಮರುಳುವೇಷವ/ತೊಟ್ಟು ತೊಟ್ಟನೆ ಸುಳಿದನಾ ಪ್ರಭುಲಿಂಗಲೀಲೆಯಲಿ (ಪ್ರಭು.ಲಿ.22-33)
ಅಲ್ಲಮನು ವಿಚಿತ್ರ ಚರಿತನೂ ಹೌದು. ಅವನ ತಲೆಯಿಂದ ಕೆಂಚುಕೂದಲು ಇಳಿಬಿಟ್ಟಿದೆ. ದೇಹ ಉದ್ದವಾಗಿದೆ, ತೋಳುಗಳು ತೂಗಾಡುತ್ತಿವೆ, ಕಣ್ಣಿನ ರೆಪ್ಪೆಗಳು ಮುಚ್ಚಿವೆ. ಅವನ ನೋಟ ಯಾವುದರಲ್ಲೊ ನಟ್ಟಂತಿದೆ, ಕಿವಿಗಳು ಉದ್ದವಾಗಿದ್ದು ಕಾಲುಗಳು ದಪ್ಪವಾಗಿವೆ. ಮದವೇರಿದ ದೇಹದ ತೂಗಾಟ-ಇಂಥ ಬಗೆಯಲ್ಲಿ ಅಲ್ಲಮನು ಹುಚ್ಚುವೇಷದಲ್ಲಿ ಕಲ್ಯಾಣದ ಬೀದಿಯಲ್ಲಿ ಸುಳಿದ.
ಅವನು ದಾರಿಯಲ್ಲಿ ಹೋಗುತ್ತ ಚಿತ್ರ-ವಿಚಿತ್ರ ರೀತಿಯಲ್ಲಿ ಆಡುತ್ತಿದ್ದ. ಅವನು ಕೆಲವರನ್ನು ಮುಟ್ಟುತ್ತಿದ್ದ. ಕೆಲವು ಕಡೆ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದ. ಏಳುವುದೇನು? ಬೀಳುವುದೇನು? ತನಗೆ ತೋಚಿದಂತೆ ಆಟವಾಡುತ್ತ ನಾನಾ ಬಗೆಯ ವಿನೋದಗಳನ್ನು ಲೀಲೆಯಿಂದ ಮಾಡುತ್ತಿದ್ದ. ಅವನು ಕೆಲವೊಮ್ಮೆ ಶಿಶುವಾಗುತ್ತಿದ್ದ, ಮತ್ತೊಮ್ಮೆ ಗುರುವಾಗುತ್ತಿದ್ದನು. ಒಮ್ಮೆ ರೂಪು ಧರಿಸುತ್ತಿದ್ದ ಮಗುದೊಮ್ಮೆ ಬಯಲಾಗುತ್ತಿದ್ದ. ಕೆಲವೊಮ್ಮೆ ಇಲ್ಲಿ ಕಾಣಿಸಿಕೊಂಡರೆ, ಇನ್ನೊಮ್ಮೆ ಮತ್ತೆಲ್ಲೊ ಕಾಣಿಸಿಕೊಳ್ಳುತ್ತಿದ್ದ-ಈ ರೀತಿ ಪರಬ್ರಹ್ಮನಾದ ಅಲ್ಲಮಲಿಂಗನು ನಟಿಸುತ್ತಿದ್ದ. ಇದನ್ನೆಲ್ಲಾ ಕಲ್ಯಾಣಪಟ್ಟಣದ ಜನರು ಅಚ್ಚರಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದರು. ಅಲ್ಲಮನೆಂದು ಆ ಜನ ತಿಳಿಯದೆ ಅವನ ಮರುಳಾಟಕ್ಕೆ ಬೆರಗುಗೊಳ್ಳುತ್ತಿದ್ದರು. ಈ ಸುದ್ದಿಯು ಬಸವಣ್ಣನಿಗೆ ತಿಳಿಯಿತು. ಬಸವಣ್ಣನು ಮಹಾಮನೆಯಿಂದ ಬಂದವನೇ ಮರುಳು ವೇಷದ ಅಲ್ಲಮನನ್ನು ನಿರುಕಿಸಿದ. ಹಲವು ಬಗೆಗಳಲ್ಲಿ ಪರೀಕ್ಷೆ ಮಾಡಿದಾಗ, ಇವನು ಅಲ್ಲಮನೆಂದೇ ತನ್ನ ಗುರುವೆಂದೇ ನಿಶ್ಚಯಿಸಿಕೊಂಡ. ಬಸವಣ್ಣನ ಕರಣಗಳು ಇವನು ಅಲ್ಲಮನೆಂದೇ ಗುರುತಿಸಿಬಿಟ್ಟವು.
ಬಸವಣ್ಣ ಅಲ್ಲಮನಿಗಾಗಿ ಕಾತರಿಸುತ್ತಿದ್ದನಷ್ಟೆ. ಅಲ್ಲಮನನ್ನು ಕಾಣುತ್ತಲೇ ಅವನ ಮನಸ್ಸು ತನಗೆ ತಾನೆ ಅರಳಿತು. ಕಣ್ಣುಗಳು ಆ ಮಹಾಮೂರ್ತಿಯನ್ನು ಕಂಡೊಡನೆ ಮುಕ್ಕಳಿಸಿದುವು. ಅವನ ಕಣ್ಣುಗಳಿಂದ ಆನಂದದ ಕಣ್ಣೀರು ಧಾರೆಧಾರೆಯಾಗಿ ಸುರಿಯಿತು. ಅವನ ಮೈರೋಮಾಂಚನಗೊಂಡಿತು. ಹರ್ಷವು ಅವನಲ್ಲಿ ಮೇರೆಮೀರಿತು. ಬಸವಣ್ಣನು ಅಲ್ಲಮನ ಪಾದದ ಮೇಲೆ ಮೈಚೆಲ್ಲಿದನು. ಬಸವಣ್ಣನ ಜೊತೆ ಬಂದಿದ್ದ ಶಿವಭಕ್ತರು ಒಬ್ಬೊಬ್ಬರಾಗಿ ಅಲ್ಲಮನ ಪಾದಗಳಿಗೆ ನಮಸ್ಕರಿಸಿದರು. ಅಲ್ಲಿದ್ದ ಪ್ರತಿಯೊಬ್ಬ ಶಿವಭಕ್ತರು ಅಲ್ಲಮನ ನಿಜರೂಪವನ್ನು ಕಂಡು ಭಾವುಕರಾದರು; ಆನಂದತುಂದಿಲರಾದರು. ಕೆಲವು ಶಿವಭಕ್ತರಂತು ಅಲ್ಲಮನನ್ನು ಬೆರಗಾಗಿ ನೋಡುತ್ತಿದ್ದರು! ಅಣ್ಣನ ಜೊತೆ ಬಂದಿದ್ದ ಸ್ತೀಯರು ಲಘುಬಗೆಗಳಿಂದ ಮಂಗಳಾರತಿಯನ್ನು ಎತ್ತುತ್ತಿದ್ದರು. ಕೆಲವು ಹೆಂಗಸರು ದೃಷ್ಟಿಯನ್ನು ತೆಗೆದು ನಿವಾಳಿಸುತ್ತಿದ್ದರು. ಅಲ್ಲಮನ ಸುತ್ತಮುತ್ತ ಸಹಸ್ರಾರು ಜನ ನೆರೆದು ಜಯಘೊಷ ಮಾಡುತ್ತಿದ್ದರು. ಅವರೆಲ್ಲರು ಶರಣು ಶರಣೆಂದು ಗುಂಪುಗುಂಪಾಗಿ ಬಂದು ಅಲ್ಲಮನನ್ನು ಇದಿರುಗೊಂಡರು! ಆಗ ವಾದ್ಯಗಳು ವಿಶೇಷವಾಗಿ ಧ್ವನಿಸಿದುವು.
ಕಲ್ಯಾಣಪಟ್ಟಣವು ಹನ್ನೆರಡು ಯೋಜನೆಗಳಷ್ಟು ವಿಸ್ತಾರವಾಗಿತ್ತು. ಆ ನಗರದ ಒಳಗೆ ಎಲ್ಲಿ ನೋಡಿದರಲ್ಲಿ ಅಲ್ಲಮನು ಕಾಣಿಸುತ್ತಿದ್ದನು. ಅವನು ಪ್ರತಿಮೂರ್ತಿಯಾಗಿ ಪ್ರತಿಯೊಬ್ಬ ಶಿವಭಕ್ತರಿಗೂ ಕಾಣಿಸುತ್ತಿದ್ದನು. ಅಲ್ಲಮನ ಮಹಿಮೆಯನ್ನು ಹೊಗಳಲು ಸಾಧ್ಯವೇ? ಅವನು ಏಕಕಾಲಕ್ಕೆ ಸುಕುಮಾರರ ಜೊತೆ ಆಟ ಆಡುತ್ತಿದ್ದನು. ಯಾರನ್ನು ಕಂಡರೂ ಅವರವರ ರೀತಿಯಲ್ಲೇ ವರ್ತಿಸುತ್ತಿದ್ದನು. ಇದೇನು ಚೋದ್ಯವೊ? ಶಿವಭಕ್ತರು ‘ಜಯ ಜಯ ಎನ್ನುತ್ತ, ಪರಮಾನಂದ ಭರಿತರಾಗಿ ಸಂಭ್ರಮಿಸುತ್ತಿದ್ದರು. ಶಿವಗಣಪ್ರಸಾದಿ ಮಹಾದೇವಯ್ಯನು ಅಲ್ಲಮನ ನಿಲುವನ್ನು ಮಡಿವಾಳ ಮಾಚಯ್ಯನ ಮೂಲಕ ಹೇಳುವ ಈ ಮಾತು ಮನನೀಯ! ‘‘ಅಲ್ಲಮನು ಒಮ್ಮೆ ಬಾಲಕನಂತೆ, ಕೆಲವೊಮ್ಮೆ ಬಲ್ಲಿದನಂತೆ ಇರುತ್ತಿದ್ದ. ಅವನು ವೃದ್ಧ, ತರುಣನಂತೆ ಎಲ್ಲರಿಗೂ ಕಂಡ. ಅಲ್ಲಮನ ಈ ಲೀಲೆಯನ್ನು ವಿಶ್ವವೇ ಬೆರಗಾಗಿ ನೋಡುತ್ತಿತ್ತು. ಅಲ್ಲಮನು ಬಸವನ ಮಹಾಮನೆಯನ್ನು ತಲೆಯೆತ್ತಿ ನೋಡಿದ. ಮುಗಿಲ ಮೂಲೆಯ ಕುಸುರಿಗೆಲಸದ ನಂದಿಯ ಮಂಟಪಗಳ ಮೇಲುಪ್ಪರಿಗೆ ಭದ್ರಂಗಳ ನೋಡಿ ತಲೆದೂಗಿದ. ಬಸವನ ಮಹಾಮನೆಯ ಪ್ರದಕ್ಷಿಣೆ ಬಂದು ದ್ವಾರದ ಮುಂದೆ ನಿಂತುಕೊಂಡ. ಅವನ ಎದುರು ಶೂನ್ಯಪೀಠವು ವಿರಾಜಮಾನವಾಗಿತ್ತು. ಅಲ್ಲಮನು ಶೂನ್ಯಪೀಠವನ್ನು ನಿರುಕಿಸಿದ. ಅದು ಹಲವು ಮುತ್ತು ಪಚ್ಚೆ ಮಾಣಿಕ್ಯಗಳಿಂದ ಜಾಜ್ವಲ್ಯಮಾನವಾಗಿತ್ತು. ಅಲ್ಲಮನಿಗೆ ಭೌತಸ್ವರೂಪದ ಪೀಠವೇನೊ ಕಾಣಿಸುತ್ತಿತ್ತು. ಬಸವಣ್ಣನು ಭೌತ-ಅಭೌತಗಳ ಸಂಪತ್ತಿನಿಂದ ಕೂಡಿದ ಪೀಠವನ್ನು ನಿರ್ವಿುಸಿದ್ದೇನೊ ನಿಜ. ಆದರೆ, ಅಲ್ಲಮನು ಅದನ್ನು ಆರೋಹಣ ಮಾಡುವ ಮೂಲಕ ‘ಶೂನ್ಯಸಿಂಹಾಸನ’ವೇ ಆಯಿತು.’ ಶೂನ್ಯವೆಂದರೆ ಬಯಲು ತಾನೆ?