ಅಂಕಣ

ಕರೊನಾ ಪಾಠ ಕಲಿಸಿದೆ; ಬದುಕು ತೆರೆದ ಪುಸ್ತಕದಂತಿರಲಿ..

vijayavani

| ಸುಷ್ಮಾ ಜೆ.ಪಿ.

ಶಿಸ್ತುಬದ್ಧ ಜೀವನಕ್ಕೆ ಹೆಸರಾಗಿದ್ದ ಅವರು ಸರ್ಕಾರಿ ಅಧಿಕಾರಿ, ಮೂಲತಃ ದೊಡ್ಡ ಕೃಷಿ ಕುಟುಂಬದಿಂದ ಬಂದಿದ್ದರಿಂದ ಹಳ್ಳಿಯಲ್ಲಿ ಸಾಕಷ್ಟು ಆಸ್ತಿ, ಕೃಷಿಆದಾಯವೂ ಹೇರಳವಾಗಿತ್ತು. ಒಬ್ಬನೇ ಮಗ, ಜೀವಮಾನವಿಡೀ ದುಡಿದು ಉತ್ತಮ ಹುದ್ದೆಗೇರಿದ್ದ ಅವರು ಕಳೆದ ತಿಂಗಳು ನಿವೃತ್ತಿಯಾದರು. ಸರ್ಕಾರದ ಒಂದಿಷ್ಟು ಸವಲತ್ತು ಬಂದು ಒಂದಷ್ಟು ಕಡೆ ಹೂಡಿಕೆ ಮಾಡಿದ್ದರು. ಇಷ್ಟು ದಿನದ ಗಳಿಕೆಯನ್ನು ಅಲ್ಲಲ್ಲಿ ಹೂಡಿಕೆ ಮಾಡಿದ್ದರೂ ಮನೆಯಲ್ಲಿ ಒಬ್ಬರಿಗೂ ಈ ಬಗ್ಗೆ ಮಾಹಿತಿ ನೀಡಲಿಲ್ಲ. ನಿವೃತ್ತಿ ಹಣ ಬಂದ ನಂತರವೂ ಹೆಂಡತಿ-ಮಗನಿಗೆ ಮಾಹಿತಿ ನೀಡದೆ ಒಂದಷ್ಟು ಕಡೆ ಬಂಡವಾಳವಾಗಿ ವಿನಿಯೋಗ ಮಾಡಿದ್ದರು. ಯಾವುದೇ ಚಟವಿಲ್ಲದ ಇವರಿಗೆ ಡೈರಿ ಬರೆಯುವ ಅಭ್ಯಾಸವೂ ಇರಲಿಲ್ಲ. ತನ್ನ ಆಸ್ತಿ ಮಾಹಿತಿಯನ್ನು ಹೆಂಡತಿ, ಮಕ್ಕಳಿಗೆ ಏಕೆ ನೀಡಬೇಕು ಎಂದು ಯೋಚಿಸುತ್ತಿದ್ದ ಅವರಿಗೆ ಈ ವರ್ಷ ಕರೊನಾವೇ ಮುಳುವಾಯಿತು. ಬದುಕಿನ ಸಣ್ಣ ವಿಷಯವನ್ನೂ ತಮ್ಮನ್ನು ನಂಬಿದವರಿಗೆ ತಿಳಿಸದ ಅವರ ಜೀವನ ರಹಸ್ಯ ಅವರೊಂದಿಗೇ ಮಣ್ಣುಪಾಲಾಗಿದೆ. ಅವರನ್ನೇ ನಂಬಿದ್ದ ಅವರ ಕುಟುಂಬವೀಗ ಸಂಕಷ್ಟಕ್ಕೆ ಸಿಲುಕಿದೆ.

ನನ್ನ ಆಪ್ತರೊಬ್ಬರ ಸತ್ಯಘಟನೆಯಿದು. ಇಷ್ಟು ವರ್ಷ ಸರಿಯಾದ ಹಳಿಯ ಮೇಲೆ ಸರಾಗವಾಗಿ ಚಲಿಸುತ್ತಿದ್ದ ಜೀವನ ಇಂದು ಹಳಿ ತಪ್ಪಿದೆ. ಕಣ್ಣಿಗೆ ಕಾಣದ, ಕೈಗೆ ಸಿಗದ ಕರೊನಾ ಎಂಬ ವೈರಾಣು ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಬರೀ ಹಣದ ಲೆಕ್ಕಾಚಾರದಲ್ಲಿದ್ದ ಹಲವರು ಇಂದು ಜೀವನದ ಉಳಿದ ಸಮಯವನ್ನು ಲೆಕ್ಕ ಹಾಕುವಂತಾಗಿದೆ. ಎಂಥ ಶ್ರೀಮಂತ, ಪ್ರಭಾವಿ ವ್ಯಕ್ತಿಯಾಗಿದ್ದರೂ, ಉನ್ನತ ಸ್ಥಾನದಲ್ಲಿದ್ದರೂ ಚಿಕಿತ್ಸೆಗಾಗಿ, ಆಸ್ಪತ್ರೆಯ ಹಾಸಿಗೆಗಾಗಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಬಂಧು-ಬಳಗ, ಆಸ್ತಿ-ಪಾಸ್ತಿ, ಬೆಳ್ಳಿ-ಬಂಗಾರ, ಜಾತಿ-ಧರ್ಮ, ಮೇಲು-ಕೀಳು, ಅಹಂಕಾರ-ದುರಂಹಕಾರ ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ. ಕರೊನಾ ಮಹಾಮಾರಿಗೆ ಸಿಲುಕಿ ಒದ್ದಾಡಿ, ಸರಿಯಾದ ಅಂತ್ಯಸಂಸ್ಕಾರ ಸಾಧ್ಯವಾಗದೆ, ಬಂಧುಬಳಗವೂ ಅಂತ್ಯಕ್ರಿಯೆಗೆ ಬರದಂಥ ಸ್ಥಿತಿಯಲ್ಲಿ ಸಿಲುಕಿದ್ದೇವೆ.

ಇನ್ನು ಹೊಟ್ಟೆಪಾಡಿಗಾಗಿ ಪೇಟೆಗೆ ಬಂದವರು, ವ್ಯವಸಾಯವನ್ನು ತ್ಯಜಿಸಿ ಬದುಕು ಕಟ್ಟಿಕೊಳ್ಳಲು ದೊಡ್ಡ ನಗರಗಳಿಗೆ ಹೋಗಿದ್ದವರು ಹಳ್ಳಿಗಳಿಗೆ ವಾಪಸಾಗಿದ್ದಾರೆ. ಪಟ್ಟಣ ಹಣವಿದ್ದರೆ ಮಾತ್ರ ಎಂಬುದು ಹಲವರಿಗೆ ಮನವರಿಕೆಯಾದಂತಿದೆ. ಒಟ್ಟಾರೆ ಬದುಕನ್ನು ಹೊಸದೃಷ್ಟಿಯಿಂದ ನೋಡುವಂತಾಗಿದ್ದು, ಹಲವು ಪಾಠಗಳನ್ನು ಕರೊನಾ ಕಲಿಸಿದೆ ಎಂಬುದಂತೂ ನಿಜ. ಅದೇನೇ ಇರಲಿ, ಪ್ರಸಕ್ತ ಕರೊನಾ ಮುಕ್ತ ಸಮಾಜ ನಿರ್ವಣಕ್ಕೆ ಎಲ್ಲರ ಸಹಕಾರ ಬೇಕಿದೆ. ಆರಂಭದಲ್ಲಿಯೇ ಉದಾಹರಿಸಿದಂತೆ ನಮ್ಮ ಬದುಕಿನ ಪ್ರಮುಖ ಮಾಹಿತಿ ರಹಸ್ಯವಾಗಬಾರದು. ನಮ್ಮನ್ನು ನಂಬಿದವರನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯೂ ನಮ್ಮದೇ ಎಂಬುದು ನೆನಪಿರಬೇಕಷ್ಟೇ.

(ಲೇಖಕರು ಕೆಎಎಸ್ ಅಧಿಕಾರಿ, ಹವ್ಯಾಸಿ ಬರಹಗಾರರು)