ಅಂಕಣ

ಮನೋಲ್ಲಾಸ: ತಪ್ಪು ಹುಡುಕುವುದೇ ಜೀವನವಲ್ಲ

ರಮೇಶ್​ ಕುಮಾರ್​​ ಬಿ ಎಡಮೋಳೆ

| ರಾಜು ಭೂಶೆಟ್ಟಿ

ಒಂದು ದೇಶದಲ್ಲಿ ಜಗತ್ಪ್ರಸಿದ್ಧ ಸಿವಿಲ್ ಇಂಜಿನಿಯರ್ ಒಬ್ಬರು ಅನುಭವ ಹಾಗೂ ಜ್ಞಾನದ ಆಧಾರದ ಮೇಲೆ ಒಂದಕ್ಕಿಂತ ಒಂದು ಅದ್ಭುತವಾದ ಕಟ್ಟಡಗಳನ್ನು ನಿರ್ವಿುಸಿದರು. ಅವರ ವಿನ್ಯಾಸಗಳು ಹೇಗಿದ್ದವೆಂದರೆ ತಾವೇ ಕಟ್ಟಿಸಿದ ಒಂದು ಕಟ್ಟಡದಂತೆ ಇನ್ನೊಂದು ಇರುತ್ತಿರಲಿಲ್ಲ. ವಿಶ್ವದ ಇತರೆ ಯಾವ ಇಂಜಿನಿಯರ್​ಗಳು ಕೂಡ ಕಟ್ಟಲು ಸಾಧ್ಯವಾಗದಂತಹ ಸುಂದರವಾದ ಕಟ್ಟಡಗಳನ್ನು ಅವರು ನಿರ್ವಿುಸುತ್ತಿದ್ದರು. ಒಂದು ದಿನ ಅವರ ತಲೆಯಲ್ಲಿ ಒಂದು ವಿಚಾರ ಮೂಡಿತು. ಅದೇನೆಂದರೆ, ಇಷ್ಟೆಲ್ಲ ಕಟ್ಟಡಗಳನ್ನು ಕಟ್ಟಿ ನನ್ನಷ್ಟಕ್ಕೇ ನಾನೇ ಖುಷಿಪಟ್ಟರೆ ಹೇಗೆ? ನಾನು ಕಟ್ಟಿದ ಕಟ್ಟಡಗಳ ಬಗ್ಗೆ ಜನರ ಅಭಿಪ್ರಾಯ ಕೇಳಬೇಕು, ಅವರು ನನ್ನ ರಚನೆಯನ್ನು ಹೇಗೆ ಗ್ರಹಿಸುತ್ತಾರೆಂದು ಎಂದು ನಿರ್ಧರಿಸಿದರು.

ತಾವು ಕಟ್ಟಿದ ಒಂದು ಸುಂದರವಾದ ಅದ್ಭುತ ಕಟ್ಟಡವನ್ನು ನೋಡಿ ಜನರು ಅಭಿಪ್ರಾಯ ಸೂಚಿಸಬೇಕೆಂದು ಪತ್ರಿಕೆಯಲ್ಲಿ ಜಾಹೀರಾತನ್ನು ಪ್ರಕಟಿಸಿದರು. ಜಗತ್ಪ್ರಸಿದ್ಧ ಇಂಜಿನಿಯರ್ ಕಟ್ಟಿದ ಕಟ್ಟಡವನ್ನು ನೋಡಲೇಬೇಕೆಂದು ಬಹಳಷ್ಟು ಸಂಖ್ಯೆಯಲ್ಲಿ ಜನರು ಸೇರಿದರು. ಆಗ ಅಭಿಪ್ರಾಯ ಸೂಚಿಸಲು ಬಂದ ಜನರನ್ನು ಕುರಿತು ಇಂಜಿನಿಯರ್ ಒಂದು ಸೂಚನೆಯನ್ನು ನೀಡಿದರು. ‘ಕಟ್ಟಡವನ್ನು ಚೆನ್ನಾಗಿ ವೀಕ್ಷಿಸಿ, ನಿಮಗೆ ಯಾವ ಭಾಗ ಸರಿ ಅನ್ನಿಸುವುದಿಲ್ಲವೋ ಆ ಭಾಗವನ್ನು ಕಬ್ಬಿಣ ಸಲಾಕೆಯಿಂದ ಒಡೆಯಬಹುದು’ ಎಂದು ಹೇಳಿದರು. ಮೊದಲಿಗೆ ಹೋದವರು ಕಟ್ಟಡದ ಹಾಲ್ ಸರಿಯಾಗಿಲ್ಲವೆಂದು ಕಬ್ಬಿಣದ ಸಲಾಕೆಯಿಂದ ಒಡೆದರು. ನಂತರದವರು ಅಡುಗೆ ಮನೆ ಸರಿಯಾಗಿಲ್ಲವೆಂದು ಅದನ್ನು ಒಡೆದು ಹಾಕಿದರು. ಹೀಗೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಕಟ್ಟಡದ ಒಂದೊಂದು ಭಾಗವನ್ನು ಒಡೆದು ಹಾಕುತ್ತಾ ಹೋದರು. ಕೊನೆಗೆ ಇಡೀ ಕಟ್ಟಡ ನೆಲಸಮವಾಯಿತು.

ಹಾಗೆ ನೋಡಿದರೆ, ಈ ಜಗತ್ತಿನಲ್ಲಿ ಪರಿಪೂರ್ಣತೆ ಎಂಬುದು ಎಲ್ಲಿಯೂ ಇಲ್ಲ. ಒಬ್ಬರ ತಪ್ಪನ್ನು ಇನ್ನೊಬ್ಬರು ಹುಡುಕುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇಲ್ಲ. ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ರೀತಿಯ ತಪು್ಪಗಳು ಸಿಗುತ್ತಲೇ ಹೋಗುತ್ತವೆ. ಈ ಕಾರಣಕ್ಕಾಗಿಯೇ ಬಸವಣ್ಣನವರು ವಚನದಲ್ಲಿ ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ’ ಎಂದು ಹೇಳಿರುವುದು ಅರ್ಥಗರ್ಭಿತವಾಗಿದೆ. ಇನ್ನೊಬ್ಬರ ತಪ್ಪನ್ನು ಎತ್ತಿ ತೋರಿಸುವುದರ ಬದಲು ನಾನು ಎಷ್ಟು ಸರಿಯಾಗಿದ್ದೇನೆಂದು ನಮ್ಮನ್ನು ನಾವು ಆತ್ಮವಿಮರ್ಶೆಗೆ ಒಳಪಡಿಸಿಕೊಂಡು, ನಮ್ಮಷ್ಟಕ್ಕೆ ನಾವೇ ಸುಧಾರಿಸಿಕೊಳ್ಳುವುದು ಅತ್ಯುತ್ತಮ ವಿಚಾರವಾಗಿದೆ. ಆಗ ತನ್ನಿಂದ ತಾನೇ ಈ ಜಗತ್ತು ಸುಂದರವಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: manollasavv@gmail.com)