ಅಂಕಣ

ಬದುಕೆಂಬ ಬಿಳಿಹಾಳೆ: ಮನೋಲ್ಲಾಸ ಅಂಕಣ

Webdesk - Ravikanth
| ಅನಿತಾ ನಾಗರಾಜ ಹೆಗಡೆ

ಅದೊಂದು ದಿನ ಪ್ರಾಧ್ಯಾಪಕರು ಎಂದಿನಂತೆ ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ ನಡೆಸುವುದಾಗಿ ಹೇಳಿದರು. ವಿದ್ಯಾರ್ಥಿಗಳಿಗೋ ಎಲ್ಲಿಲ್ಲದ ಕುತೂಹಲ. ಕೆಲ ಸಮಯದ ಬಳಿಕ ಪರೀಕ್ಷಾ ರೂಢಿಯಂತೆ ಪ್ರಾಧ್ಯಾಪಕರು ಪ್ರಶ್ನೆಪತ್ರಿಕೆಯ ಹಾಳೆಯನ್ನು ತಲೆಕೆಳಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಜಿನ ಮೇಲೆ ಇರಿಸಿ ನಿಗದಿತ ಸಮಯವಾಗುತ್ತಿದ್ದಂತೆ ಪ್ರಶ್ನೆಪತ್ರಿಕೆಯ ಹಾಳೆಯನ್ನು ತಿರುಗಿಸಿ, ಬರೆಯಲು ಸೂಚಿಸಿದರು. ಆದರೆ ವಿದ್ಯಾರ್ಥಿಗಳಿಗೆ ಅಚ್ಚರಿ ಕಾದಿತ್ತು. ಪ್ರಶ್ನೆಗಳ ಬದಲು ಪ್ರಶ್ನೆಪತ್ರಿಕೆಯ ಮಧ್ಯಭಾಗದಲ್ಲಿ ಒಂದು ಕಪ್ಪುಬಿಂದುವಿತ್ತು. ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮುಖಭಾವವನ್ನರಿತು, ‘ನಿಮಗೆ ಅದರಲ್ಲಿ ಏನು ಕಾಣಿಸುತ್ತದೆಯೋ ಅದನ್ನೇ ವಿವರಿಸಿ’ ಎಂದರು. ವಿದ್ಯಾರ್ಥಿಗಳು ಗೊಂದಲಕ್ಕೊಳಗಾದರೂ ತಮಗನಿಸಿದ್ದನ್ನು ಬರೆದರು. ಕೊನೆಯಲ್ಲಿ ಎಲ್ಲರ ಉತ್ತರಗಳನ್ನು ಎಲ್ಲರ ಸಮ್ಮುಖದಲ್ಲಿ ಪ್ರಾಧ್ಯಾಪಕರು ಓದಿದಾಗ ಎಲ್ಲರ ವಿವರಣೆ ಆ ಕಪ್ಪುಚುಕ್ಕೆಯ ಗಾತ್ರ, ಸ್ಥಾನದ ಬಗ್ಗೆಯೇ ಇತ್ತು. ಯಾವ ವಿದ್ಯಾರ್ಥಿಯೂ ಆ ಹಾಳೆಯಲ್ಲಿನ ಬಿಳಿಭಾಗವನ್ನು ಗಮನಿಸಿ ಅದರ ಬಗ್ಗೆ ವಿವರಿಸಿರಲಿಲ್ಲ.

ಕೆಲವೊಮ್ಮೆ ನಾವು ಸಹ ನಮ್ಮೆದುರು ಬಿಳಿ ಹಾಳೆಯಂತಹ ಜೀವನವಿದ್ದರೂ ಅದನ್ನು ಗಮನಿಸದೆ ಅದರಲ್ಲಿರುವ ಕಪ್ಪುಬಿಂದುವನ್ನು ಮಾತ್ರ ಗಮನಿಸಿ ನಮ್ಮ ಬದುಕೇ ಇಷ್ಟೆಂದು ಬೇಸರಿಸಿಕೊಳ್ಳುವುದುಂಟು. ಬದುಕೆಂಬುದು ದೇವರು ನಮಗೆ ನೀಡಿದ ಕೊಡುಗೆ. ಈ ಬದುಕೆಂಬ ಹಬ್ಬವನ್ನು ಆಚರಿಸಲು ನಮಗೆ ಹಲವಾರು ಕಾರಣಗಳಿರುತ್ತವೆ. ಇರುವ ಚಿಕ್ಕಪುಟ್ಟದರಲ್ಲೇ ಸಂತೋಷ ಕಾಣಬೇಕು. ಖುಷಿಯನ್ನು ಅನುಭವಿಸಬೇಕು. ಅದು ಪ್ರತಿದಿನ ಪ್ರಕೃತಿಯಲ್ಲಾಗುವ ಹೊಸತನದಿಂದ, ಸುತ್ತಲಿರುವ ಸ್ನೇಹಿತರಿಂದ ಅಥವಾ ಜೀವನೋಪಾಯಕ್ಕೆಂದು ಮಾಡುವ ಕೆಲಸದಿಂದಿರಬಹುದು. ಜೀವನ ಇವೆಲ್ಲವನ್ನು ಒದಗಿಸಿದರೂ ನಕಾರಾತ್ಮಕವಾಗಿ ಯೋಚಿಸುತ್ತೇವೆ. ಆರೋಗ್ಯ ಸಮಸ್ಯೆ, ಹಣದ ಕೊರತೆ, ಸ್ನೇಹಿತರೊಂದಿಗೆ ಆಗುವ ಕಲಹ ಅಥವಾ ಇನ್ಯಾವುದೋ ಜಂಜಾಟಗಳ ಬಗ್ಗೆ ಮಾತ್ರ ಯೋಚಿಸುತ್ತ ಇರುವ ಮೂರು ದಿನದ ಬದುಕನ್ನೂ ಸಮಸ್ಯೆಗಳ ಜೊತೆ ಕಳೆಯುತ್ತೇವೆ. ಜೀವನವೆಂಬ ಸಾಗರದಲ್ಲಿ ನಮ್ಮಲ್ಲಿರುವ ಧನಾತ್ಮಕ ಚಿಂತನೆಗಳು ಅಲೆಗಳ ಹೊಡೆತಕ್ಕೆ ಸಿಲುಕುವ ದೋಣಿಯಂತಾಗಬಾರದು. ಮನಸ್ಸನ್ನು ಕದಡುವ ನಕಾರಾತ್ಮಕ ಆಲೋಚನೆಗಳನ್ನು ತಡೆಯುತ್ತ ಕೇವಲ ಧನಾತ್ಮಕ ಚಿಂತನೆಗಳೊಂದಿಗೆ ಬದುಕನ್ನು ಸಾಕಾರಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಮ್ಮೆದುರಿರುವ ಸುಂದರ ಬದುಕಿನ ಮುಂದೆ ಕಪ್ಪುಚುಕ್ಕೆಗಳೆಂಬುದು ಚಿಕ್ಕದಾದರೂ ಅವುಗಳೇ ಮನಸ್ಸನ್ನು ಹಾಳುಮಾಡುತ್ತವೆ. ಆದ್ದರಿಂದ ಅವುಗಳ ಬಗ್ಗೆಯೇ ಚಿಂತಿಸುವುದು ವ್ಯರ್ಥ. ಪ್ರೀತಿ ಮತ್ತು ದ್ವೇಷ ಎರಡೂ ಎರಡಕ್ಷರದ ಪದಗಳು. ಅಂತೆಯೇ ಮಿತ್ರ-ಶತ್ರು, ಸತ್ಯ-ಸುಳ್ಳು, ಸರಿ-ತಪ್ಪು, ನಗು-ಅಳು ಇವುಗಳಲ್ಲಿರುವ ಅಕ್ಷರಗಳ ಸಂಖ್ಯೆ ಒಂದೇ ಆದರೂ ಅವುಗಳಿಂದಾಗುವ ಪರಿಣಾಮಗಳು ಬೇರೆ ಬೇರೆ. ಇವುಗಳಲ್ಲಿ ಉತ್ತಮವಾದುದನ್ನು ಆಯ್ದುಕೊಳ್ಳುವ ಅವಕಾಶ ನಮಗಿದೆ. ಜೀವನವೆಂಬುದು ಎರಡು ಕಡೆ ಹರಿತವಿರುವ ಕತ್ತಿಯಂತೆ. ನಕಾರಾತ್ಮಕತೆಯನ್ನು ನಿರಾಕರಿಸಿ ಸಕಾರಾತ್ಮಕತೆ ಆಯ್ಕೆ ಮಾಡುವುದು ಅಗತ್ಯ. ಇರುವುದರಲ್ಲೇ ಉತ್ತಮವಾದುದನ್ನು ಆರಿಸಿಕೊಂಡು ಪ್ರತಿಕ್ಷಣವನ್ನು ಸಂತೋಷದಿಂದ ಜೀವಿಸೋಣ.

(ಲೇಖಕಿ ಪದವಿ ವಿದ್ಯಾರ್ಥಿನಿ)