ಅಂಕಣ

ಮನೋಲ್ಲಾಸ | ಜೀವನವೆಂಬ ಓಟ..

| ಶಿಲ್ಪಾ ಗಾಂವ್ಕರ ಬಿದ್ರೆಮನೆ

ಕಠಿಣ ಪರಿಶ್ರಮಕ್ಕೆ ಫಲ ಇದ್ದೇ ಇದೆ. ಸರಿಯಾದ ಯೋಚನೆಗಳ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಿದಾಗ ಮಾತ್ರ ಯಶಸ್ಸು ಹೊಂದಲು ಸಾಧ್ಯ. ಅದೇ ರೀತಿ ಅಹಂಕಾರ ಎಂಬುದು ಮನುಷ್ಯನನ್ನು ಯಾವ ಹಂತಕ್ಕೆ ಬೇಕಾದರೂ ಕೊಂಡೊಯ್ಯುತ್ತದೆ. ದುರಹಂಕಾರ ಏಳ್ಗೆಯನ್ನು ಕುಗ್ಗಿಸುತ್ತದೆ. ಬುದ್ಧಿವಂತಿಕೆ, ಮಹತ್ವಾಕಾಂಕ್ಷೆ, ಆತ್ಮವಿಶ್ವಾಸ ಇದ್ದಾಗ ಜೀವನದಲ್ಲಿ ಗೆಲ್ಲಬಹುದು.

ಒಮ್ಮೆ ಒಂದು ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಇಬ್ಬರೇ ಸ್ಪರ್ಧಿಗಳಿದ್ದರು. ಒಬ್ಬ- ದೃಢಕಾಯದ ಶಕ್ತಿವಂತ ಹುಡುಗ ರಾಘವ. ಇನ್ನೊಬ್ಬ- ಸಣಕಲು ದೇಹದ ಹುಡುಗ ರಾಮು. ಇಬ್ಬರಿಗೂ ಮೊದಲಿನಿಂದಲೂ ಸ್ಪರ್ಧೆ ಇದ್ದುದೇ. ಪ್ರತಿ ಸಲವೂ ಜಯ ರಾಘವನದೇ ಆಗಿತ್ತು. ಹಾಗಾಗಿ ಈ ಸಲವೂ ಗೆಲ್ಲುವುದು ತಾನೇ ಎಂದು ಆತ ಭಾವಿಸಿದ್ದ. ರಾಮು ಬುದ್ಧಿವಂತನಾದರೂ ಸಣಕಲು ದೇಹದ ಆತ ಓಟದಲ್ಲಿ ತನ್ನನ್ನು ಮೀರಿಸಲು ಸಾಧ್ಯವಿಲ್ಲ; ಹೇಗಿದ್ದರೂ ತಾನೇ ಜಯಶಾಲಿ ಆಗುವೆನೆಂಬ ಜಂಭದಿಂದ ರಾಘವ ಬೀಗುತ್ತಿದ್ದ. ಓಟ ತನಗೆ ಸಲೀಸು ಎಂದು ಪ್ರಾಕ್ಟೀಸ್ ಕಡೆ ಗಮನ ನೀಡುತ್ತಿರಲಿಲ್ಲ. ಆದರೂ ರಾಮುವಿನ ಕಠಿಣ ಪರಿಶ್ರಮ ನೋಡಿದಾಗ ರಾಘವನಿಗೆ ಸ್ವಲ್ಪ ಅನುಮಾನ ಮೂಡಿತು, ಈ ಬಾರಿ ಆತ ಗೆದ್ದುಬಿಡಬಹುದಾ ಅಂತ.

ಸ್ಪರ್ಧೆಗೆ ಎರಡು ದಿನ ಇರುವಾಗ, ತನ್ನ ಗೆಳೆಯರೊಂದಿಗೆ ಸೇರಿ ರಾಮುವನ್ನು ಅವಮಾನಗೊಳಿಸಿ ಅವನ ಆತ್ಮವಿಶ್ವಾಸ ಕುಗ್ಗಿಸಿ, ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ. ಈ ಬೆಳವಣಿಗೆಯಿಂದ ರಾಮು ಮಾನಸಿಕವಾಗಿ ಕುಗ್ಗಿಹೋದ. ಓಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಬೇಡ ಎಂದು ನಿಶ್ಚಯಿಸಿದ. ಪ್ರಾಕ್ಟೀಸ್ ನಿಲ್ಲಿಸಿದ. ಇದು ಅವನ ಟ್ರೇನರ್​ಗೆ ಗೊತ್ತಾಯಿತು. ಅವರು ರಾಮುವನ್ನು ಹತ್ತಿರದ ಜಲಪಾತಕ್ಕೆ ಕರೆದುಕೊಂಡು ಹೋದರು. ಆ ಜಲಧಾರೆ ಅಲ್ಲಿಂದ ಸುಮಾರು ದೂರದವರೆಗೂ ಕಾಣಿಸುತ್ತಿತ್ತು. ‘ರಾಮು, ಈ ನೀರಧಾರೆ ನೋಡು. ಎಲ್ಲಿಯೋ ಜನಿಸುತ್ತದೆ. ಎತ್ತರದಿಂದ ಧಡಕ್ಕನೆ ಕೆಳಕ್ಕೆ ಬೀಳುತ್ತದೆ. ಏರುತಗ್ಗುಗಳನ್ನು ದಾಟಿಕೊಂಡು, ಕಲ್ಲುಬಂಡೆಗಳ ನಡುವೆ ದಾರಿಮಾಡಿಕೊಂಡು ನದಿಯನ್ನು ಸೇರುವ ತವಕದಿಂದ ಹರಿಯುತ್ತಲೇ ಇರುತ್ತದೆ. ಬಿರುಬೇಸಿಗೆಯಲ್ಲಿ ಇನ್ನೇನು ಒಣಗಿಯೇಹೋಯಿತು ಎಂಬಂತೆ ಭಾಸವಾದರೂ, ಮತ್ತೆ ಜಿನುಗುತ್ತದೆ. ಎಂಥದೇ ಸನ್ನಿವೇಶದಲ್ಲೂ ಅದು ತನ್ನ ಪ್ರಯತ್ನ ನಿಲ್ಲಿಸುವುದಿಲ್ಲ ಮತ್ತು ಗಮ್ಯವನ್ನು ಮರೆಯುವುದಿಲ್ಲ. ನದಿಯಲ್ಲಿ ಸಂಗಮವಾದಾಗಲೇ ಅದಕ್ಕೆ ಸಾರ್ಥಕತೆ’ಎಂದು ವಿವರಿಸಿದರು. ರಾಮುವಿಗೆ ಆ ಜಲಪಾತ ಹೊಸದೊಂದು ಜೀವನದರ್ಶನವನ್ನೇ ಮಾಡಿಸಿತು. ಹೊಸ ಉತ್ಸಾಹ ತುಂಬಿಕೊಂಡಿತು. ಸ್ಪರ್ಧೆಯಲ್ಲಿ ಭಾಗವಹಿಸಿದ. ಜಯಶಾಲಿಯೂ ಆದ. ಸತತ ಪ್ರಯತ್ನ ಕೊನೆಗೂ ಫಲ ಕೊಟ್ಟಿತು. ಮತ್ತೊಂದೆಡೆ, ರಾಮುವನ್ನು ಸ್ಪರ್ಧೆಯಿಂದ ಹಿಂದೆಸರಿಸಲು ಕುಯುಕ್ತಿ ಮಾಡಿದ್ದಕ್ಕಾಗಿ ರಾಘವ ಪಶ್ಚಾತ್ತಾಪಪಟ್ಟುಕೊಂಡ. ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯ ಹೊಂದಿರುತ್ತಾರೆ. ಯಾರನ್ನೂ ಹಗುರವಾಗಿ ಭಾವಿಸಬಾರದು. ಗುರಿಯೆಡೆಗೆ ಗಮನ, ಅದಕ್ಕೆ ಸೂಕ್ತ ಪ್ರೋತ್ಸಾಹ, ತಕ್ಕ ಪ್ರಯತ್ನ ಮೇಳೈಸಿದಾಗ ಸಾಧನೆ ಸಾಧ್ಯ.

(ಲೇಖಕಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ)