ಅಂಕಣ

ಜವಾಬ್ದಾರಿ ನಿಭಾಯಿಸೋಣ: ಮನೋಲ್ಲಾಸ

Webdesk - Ravikanth
| ಭಾರತಿ ಎ., ಕೊಪ್ಪ 
ಅದೊಂದು ಸಮಾರಂಭ. ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕಾರ, ತಂದೆ-ತಾಯಿಗಳ ಋಣ, ಮಾನವ ಜನ್ಮದ ಸಾರ್ಥಕತೆ ಈ ಎಲ್ಲಾ ವಿಚಾರಗಳ ಬಗ್ಗೆ ವೇದಿಕೆಯಲ್ಲಿ ಅದ್ಭುತವಾಗಿ ವ್ಯಕ್ತಿಯೊಬ್ಬರು ಭಾಷಣ ಮಾಡುತ್ತಿದ್ದರು. ನೆರೆದವರೆಲ್ಲ ಭಾಷಣಕಾರನ ವಾಕ್ಪಟುತ್ವ ಮತ್ತು ಜ್ಞಾನಕ್ಕೆ ಮೆಚ್ಚುಗೆ ಸೂಚಿಸುತ್ತಾ ಚಪ್ಪಾಳೆಯ ಸುರಿಮಳೆ ಗೈದರು. ಯುವಕನೊಬ್ಬ ಭಾಷಣದ ಅಂಶಗಳನ್ನು ಮೆಲುಕು ಹಾಕುತ್ತ ಬೈಕ್​ನಲ್ಲಿ ಮನೆಯತ್ತ ಹೊರಟನು. ವೃದ್ಧೆಯೊಬ್ಬರು ತನ್ನ ವೃದ್ಧ ಪತಿಗೆ ಕುಡಿಯುವ ನೀರು ನೀಡಿ ಉಪಚರಿಸುತ್ತಾ ರಸ್ತೆಯ ಬದಿಯಲ್ಲಿ ಕುಳಿತಿರುವುದು ಕಾಣಿಸಿತು.

ಯುವಕ ವಿಚಾರಿಸಿದಾಗ, ಆಕೆ ಪತಿಯನ್ನು ಸಮೀಪದ ಪಟ್ಟಣಕ್ಕೆ ವೈದ್ಯರ ಬಳಿ ಕರೆದುಕೊಂಡು ಹೋಗಿ ಬಸ್ಸಿನಲ್ಲಿ ಬಂದು ಇಳಿದುದಾಗಿ ತಿಳಿಯಿತು. ಅವರ ಮನೆ ಇನ್ನೂ ಎರಡು ಕಿಲೋಮೀಟರ್ ದೂರದ ಹಳ್ಳಿಯಲ್ಲಿರುವುದಾಗಿಯೂ, ಆಟೋಗಳು ಬಹಳ ಹೊತ್ತಿನಿಂದ ಬಂದಿಲ್ಲವೆಂದೂ ಹೇಳಿದ ಅಜ್ಜಿ, ಇನ್ನು ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆಯನ್ನು ಹೇಳಿದರು. ಆಗಷ್ಟೇ ಹಿರಿಯರ ಕಾಳಜಿ ಬಗ್ಗೆ ಉಪನ್ಯಾಸ ಕೇಳಿದ್ದ ಯುವಕನಿಗೆ ಹಿರಿಯರ ಕಷ್ಟದ ಬಗ್ಗೆ ದುಃಖವಾಯಿತು. ಮಕ್ಕಳಾದರೂ ಇವರನ್ನು ಸರಿಯಾಗಿ ನೋಡಿಕೊಳ್ಳಬಾರದೇ ಎಂದು ಅವರಲ್ಲಿ ಪ್ರಶ್ನಿಸಿದ. ಆಗ ಆ ವೃದ್ಧೆ, ‘ಮಗನಿಗೆ ನಮ್ಮ ಬಳಿ ಇರುವ ಚಿಕ್ಕ ಜಮೀನಿನ ಹಸ್ತಾಂತರ ವಿಚಾರದಲ್ಲಿ ಅಸಮಾಧಾನ ಉಂಟಾಗಿ ಪಕ್ಕದ ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದಾನೆ. ಶ್ರೀಮಂತ ಕೂಡ ಆಗಿದ್ದಾನೆ. ಆತ ಉತ್ತಮ ವಾಗ್ಮಿ ಕೂಡ. ನಾವು ದೂರದಿಂದಲೇ ಆತನ ಬಗ್ಗೆ ಸಮಾಧಾನಪಡಬೇಕಷ್ಟೇ, ಆತ ಮಾತ್ರ ನಮ್ಮ ಬಳಿ ಬರುವುದಿಲ್ಲ. ಆತ ಎಲ್ಲಿದ್ದರೂ ಚೆನ್ನಾಗಿರಲಿ’ ಎಂದು ಹೇಳಿದರು. ಇಷ್ಟು ಹೊತ್ತು ಸಮಾರಂಭದಲ್ಲಿ ಭಾಷಣ ಮಾಡಿದ ವ್ಯಕ್ತಿಯೇ ಆ ವೃದ್ಧ ದಂಪತಿಯ ಮಗ ಎಂಬುದು ಆ ಯುವಕನಿಗೆ ಅರಿವಾಯಿತು. ಆ ಹಿರಿಯರನ್ನು ಆಟೋದಲ್ಲಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಮುಂದೆ ಸಾಗಿದ.

ಸಣ್ಣಪುಟ್ಟ ಮನಸ್ತಾಪ, ಹಣ-ಆಸ್ತಿಯಂತಹ ವಿಚಾರಗಳಿಂದಾಗಿ ದುಡಿಯುವ ಮಕ್ಕಳಿಂದ ತಂದೆ-ತಾಯಿಗಳ ಬಗ್ಗೆ ಕಾಳಜಿ ಕಡಿಮೆ ಆಗುತ್ತಿದೆ. ‘ತಂದೆಮಕ್ಕಳಿಗೆ ಹದಗೆಟ್ಟುದನು ಕಾಣೆಯಾ?| ಹೊಂದಿರುವರವರ್ ಅಹಂತೆಯು ಮೊಳೆಯುವನಕ || ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ?| ಬಂಧ ಮುರಿವುದು ಬಳಿಕ ಮಂಕುತಿಮ್ಮ||’ ಎಂಬ ಮಂಕುತಿಮ್ಮನ ಕಗ್ಗದ ಸಾಲುಗಳಂತೆ, ತಂದೆ-ತಾಯಿಯೊಡನೆ ಯಾವುದೋ ವಿಷಯಕ್ಕೆ ಹೊಂದಾಣಿಕೆಯಾಗದೇ ಸಂಬಂಧಗಳನ್ನು ಕಡಿದುಕೊಂಡ ಮಕ್ಕಳೂ ಇರಬಹುದು. ಮಕ್ಕಳಲ್ಲಿ ಅಹಂಕಾರ ಮೊಳೆಯುವತನಕ ತಂದೆ-ತಾಯಿಯರ ಜೊತೆಗೆ ಅವರ ಸಂಬಂಧಗಳು ಸರಿ ಸುಮಾರಾಗಿರುತ್ತದೆ. ಹಾಗೆ ಪ್ರತಿಯೊಬ್ಬರ ಮನಸ್ಸಲ್ಲೂ ಅಹಂಕಾರ ಎದ್ದು ನಿಂತರೆ ತಂದೆಯಾರೋ ಮಕ್ಕಳಾರೋ? ಎಂಬಂತೆ ಸಂಬಂಧಗಳ ಬಂಧ ಮುರಿದುಬೀಳುತ್ತದೆ. ಕೈ ಹಿಡಿದು ಹೆಜ್ಜೆ ಇಡಲು ಕಲಿಸಿದ ತಂದೆ-ತಾಯಿಗಳ ವೃದ್ಧಾಪ್ಯದಲ್ಲಿ ಕೈ ಹಿಡಿದು ನಡೆಸಬೇಕಾದ ನಮ್ಮ ಕರ್ತವ್ಯವನ್ನು ಪಾಲಿಸುತ್ತಾ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳೋಣ.

(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)