| ಹೇಮಲತಾ
ಶ್ಯಾಮಸುಂದರ ಸಜ್ಜನ ಮತ್ತು ಸರಳ ವ್ಯಕ್ತಿ. ಆದರೂ ಜೀವನದಲ್ಲಿ ನಾನಾ ಕಷ್ಟಗಳನ್ನು ಅನುಭವಿಸಿದ. ಮನಸ್ಸಿಗೆ ತುಂಬಾ ಬೇಸರವಾದಾಗ ಸಮುದ್ರ ಕಿನಾರೆಯ ಬಳಿ ಹೋಗಿ ಕುಳಿತುಕೊಳ್ಳುತ್ತಿದ್ದ. ಹೀಗಿರುವಾಗ ಒಂದು ದಿನ ಅವನ ಕಣ್ಣಿಗೆ ಒಬ್ಬ ಸಾಧು ಕಾಣಿಸಿಕೊಂಡರು. ಅವರ ಬಳಿಗೆ ಹೋಗಿ ತನ್ನ ಅಳಲನ್ನು ತೋಡಿಕೊಂಡ. ‘ಸಾಧುಗಳೇ, ನಾನು ಜೀವನದಲ್ಲಿ ಯಾರಿಗೂ ಎಂದಿಗೂ ನೋವನ್ನು ಕೊಡಲಿಲ್ಲ. ಆದರೂ ನಾನಾ ಕಷ್ಟಕೋಟಲೆಗಳನ್ನು ಅನುಭವಿಸಿದೆ. ಮನುಷ್ಯನ ಜೀವನದಲ್ಲಿ ಬರುವ ಸುಖ ದುಃಖಗಳಿಗೆ ಕಾರಣ ಏನು ಎಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತಿರುತ್ತದೆ’ ಎಂದ.
‘ಸುಖ-ದುಃಖಗಳಿಗೆ ಕಾರಣ ಅವನ ಕರ್ಮಫಲ. ಕರ್ಮಗಳಲ್ಲಿ ಮೂರು ವಿಧ. ಸಂಚಿತ ಕರ್ಮ, ಪ್ರಾರಬ್ಧ ಕರ್ಮ ಮತ್ತು ಆಗಾಮಿ ಕರ್ಮ. ಸಂಚಿತ ಕರ್ಮ ಎಂದರೆ ಹಿಂದಿನ ಜನ್ಮಗಳಲ್ಲಿ ಶೇಖರಣೆಯಾದ ಕರ್ಮಋಣ. ಈ ಜನ್ಮದಲ್ಲಿ ಅನುಭವಿಸುವ ಸಂಚಿತ ಕರ್ಮದ ಒಂದು ಅಂಶಕ್ಕೆ ಪ್ರಾರಬ್ಧ ಕರ್ಮ ಅಂತ ಹೆಸರು. ಈ ಜನ್ಮದಲ್ಲಿ ಸಂಗ್ರಹವಾಗುವ ಹೊಸ ಕರ್ಮಗಳೆ ಆಗಾಮಿ ಕರ್ಮ. ವ್ಯಕ್ತಿಗೆ ಒಳ್ಳೆಯ ಕರ್ಮ ಮತ್ತು ಕೆಟ್ಟ ಕರ್ಮ ಮಾಡುವ ಅಧಿಕಾರ ಇರುವಾಗ ಅದರ ಕರ್ಮಫಲದ ಮೇಲೂ ಅಧಿಕಾರವಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಅದಕ್ಕೆ ಶ್ರೀಕೃಷ್ಣ, ಗೀತೆಯಲ್ಲಿ ಹೇಳಿದ್ದು ‘ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಶು ಕದಾಚನ’ ಎಂದು. ಅದರ ಅರ್ಥ- ಕರ್ಮ ಮಾಡುವುದರಲ್ಲಿ ಮಾತ್ರ ನಿನಗೆ ಅಧಿಕಾರ ಇರಲಿ. ಆದರೆ, ಅದರ ಫಲಾಪೇಕ್ಷೆಯನ್ನು ಎಂದಿಗೂ ನಿರೀಕ್ಷಿಸಬೇಡ. ಯಾಕೆಂದರೆ ಅದು ಬಂದೇ ಬರುವುದು. ಅದರ ಬಗ್ಗೆ ಸಂದೇಹ ಬೇಡ. ನೀನು ಒಂದೊಂದು ಕಷ್ಟವನ್ನು ಅನುಭವಿಸುವಾಗ ಕಷ್ಟಗಳು ಕರಗುತ್ತಿದೆ ಎಂದು ತಿಳಿದು ಸಮಾಧಾನಪಡಬೇಕು. ಅಷ್ಟೇ ಅಲ್ಲ, ಏನೇ ಬಂದರೂ ಎದುರಿಸುತ್ತೇನೆ ಎಂಬ ಮನೋಭಾವ ನಿನ್ನದಾಗಬೇಕು. ಪ್ರತಿಯೊಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಬೇಕು. ಆಗಲೇ ನಿನಗೆ ಎಲ್ಲವನ್ನು ಎದುರಿಸುವ ಸ್ಥೈರ್ಯ ಹೆಚ್ಚಾಗುವುದು. ಗಿಡ ನೆಟ್ಟ ಕೂಡಲೇ ಫಲ ಸಿಗಲ್ಲ. ಫಲ ಸಿಗಬೇಕಾದರೆ ತುಸುಕಾಲ ಕಾಯಲೇಬೇಕು’ ಎಂದು ಸಾಧುಗಳು ಶಾಂತಚಿತ್ತದಿಂದ ಉತ್ತರಿಸಿದರು. ಅವರ ಮಾತಿನಿಂದ ಶ್ಯಾಮಸುಂದರನು ತನ್ನ ಮನೋಭಾವ ಬದಲಾಯಿಸಿಕೊಂಡ. ತನಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಪಣತೊಟ್ಟ.
ನಮ್ಮ ಇಂದಿನ ಸ್ಥಿತಿಗತಿಗೆ ನಮ್ಮ ಹಿಂದಿನ ಕರ್ಮಗಳೇ ಕಾರಣ. ಹಿಂದೆ ಮಾಡಿದ ಕರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಅನುಭವಿಸಲೇಬೇಕು. ಕರ್ಮ ನಿಯಮದ ಪ್ರಕಾರ ಉತ್ತಮ ಪ್ರಯತ್ನಕ್ಕೆ ಉತ್ತಮ ಫಲ. ಒಳ್ಳೆಯ ಫಲಗಳಿಗೆ ಮತ್ತು ಕೆಟ್ಟ ಫಲಗಳಿಗೆ ನಾವೇ ಕಾರಣ. ಆಯ್ಕೆ ನಮ್ಮ ಕೈಯಲ್ಲಿದೆ. ಸಜ್ಜನರೊಂದಿಗೆ ಇದ್ದು, ಉತ್ತಮ ಕೆಲಸಗಳನ್ನೇ ಮಾಡುತ್ತಾ, ಉದಾತ್ತ ಮನೋಭಾವವನ್ನು ಹೊಂದೋಣ.
(ಲೇಖಕರು ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)