ಮಹಾಭಾರತದ ದುರ್ಯೋಧನನ ಕುಖ್ಯಾತಿ ಗೊತ್ತಿರು ವಂಥದ್ದೇ. ನಿಜಜೀವನದಲ್ಲಿ ದೊಡ್ಡ ಖಳನಾಯಕ. ಬಾಲ್ಯದಿಂದಲೂ ಪಾಂಡವರ ಜನಪ್ರಿಯತೆ-ಸದ್ಗುಣಗಳನ್ನು ಕಂಡು ಅಸೂಯೆಪಡುತ್ತ, ದ್ವೇಷ ಸಾಧಿಸುತ್ತಲೇ ಬಂದವ. ಪಾಂಡವರಿಗೆ ನೀಡಬೇಕಾದ ರಾಜ್ಯವನ್ನು ಮೋಸದಿಂದ ಕಿತ್ತುಕೊಂಡದ್ದಲ್ಲದೆ, ಸಂಧಾನಕ್ಕಾಗಿ ಶ್ರೀಕೃಷ್ಣನೇ ಬಂದಾಗ ‘ಒಂದು ಸೂಜಿಯಷ್ಟು ಜಾಗವನ್ನೂ ಕೊಡುವುದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮದೋನ್ಮತ್ತ. ತನ್ನ ಪಾಲಿನ ರಾಜ್ಯವನ್ನು ತಾನೆಂದೂ ಸಮಾಧಾನ ದಿಂದ ಭೋಗಿಸಲಿಲ್ಲ. ಪಾಂಡವರ ಮೇಲಿನ ದ್ವೇಷ-ಅಸೂಯೆಗಳಿಂದಲೇ ಕೊರಗುತ್ತ ಜೀವನ ನಡೆಸಿ, ಕೊನೆಗೆ ಯುದ್ಧದಲ್ಲಿಯೂ ಧರ್ಮದ ಎದುರು ಸೋತು ಹತನಾದ.
ಕುವಲಯಾನಂದದಲ್ಲಿ ಕವಿ ಹೇಳುತ್ತಾನೆ-
ಕಪಿರಪಿ ಚ ಕಾಪಿಶಾಯನಮದಮತ್ತೋ ವೃಶ್ಚಿಕೇನ ಸಂದಷ್ಟಃ |
ಅಪಿ ಚ ಪಿಶಾಚಗ್ರಸ್ತಃ ಕಿಂ ಬ್ರೂಮೋ ವೈಕೃತಂ ತಸ್ಯ ||
ಮೊದಲೇ ಕಪಿ. ಮದ್ಯವನ್ನು ಬೇರೆ ಕುಡಿದು ಮತ್ತವಾಗಿದೆ. ಅದರಮೇಲೆ ಚೇಳು ಕುಟುಕಿದೆ. ಇಷ್ಟು ಸಾಲದೆಂದು ಅದಕ್ಕೆ ಭೂತಾವೇಶವಾಗಿದೆ. ಆ ಕಪಿಯ ಕುಚೇಷ್ಟೆಯನ್ನು ಏನೆಂದು ಹೇಳೋಣ!
ಇದಕ್ಕೆ ದುರ್ಯೋಧನನ ಜೀವನ ಜ್ವಲಂತ ದೃಷ್ಟಾಂತ ವಾಯಿತು. ಅವನ ಅವನತಿಗೆ ಕಾರಣಗಳು ಅನೇಕ. ಮೊದಲಿಗೆ ಸ್ವಯಂ ತಾನೇ ಮಹಾದುಷ್ಟ. ಪುತ್ರವ್ಯಾಮೋಹಕ್ಕೆ ಬಲಿಯಾಗಿ ಧರ್ವಧರ್ಮವಿವೇಕವನ್ನೇ ಕಳೆದುಕೊಂಡು, ಮಗನ ಎಲ್ಲ ಕೆಲಸಕ್ಕೂ ಜೈ ಎನ್ನುತ್ತಿದ್ದ ತಂದೆ ಧೃತರಾಷ್ಟ್ರ. ಯೌವನದ ಬಿಸಿರಕ್ತದಲ್ಲಿ ಸಿಕ್ಕ ಸರ್ವಾಧಿಕಾರ. ದುಃಶಾಸನ, ಶಕುನಿ ಮುಂತಾದ ದುಷ್ಟರ ಸಹವಾಸ-ಪ್ರಚೋದನೆ. ಕಣ್ಣೆದುರು ಅಧರ್ಮ ನಡೆಯುತ್ತಿದ್ದರೂ ಅನ್ಯರ ಪ್ರಭಾವಕ್ಕೆ-ದಾಕ್ಷಿಣ್ಯಕ್ಕೆ ಒಳಗಾಗಿ, ಅಧರ್ಮವನ್ನು ಪ್ರತಿಭಟಿಸದೆ ಭೀಷ್ಮಾದಿಗಳು ಅವನ ಅಧರ್ಮಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದುದು. ಇವುಗಳಲ್ಲಿ ಒಂದೊಂದೂ ಸರ್ವನಾಶಕ್ಕೆ ಕಾರಣವಾಗುವಂತಹದ್ದೇ. ಹಾಗಿರುವಾಗ ಇವುಗಳೆಲ್ಲವೂ ಒಟ್ಟಿಗೆ ಸೇರಿದ ಪರಿಣಾಮ ‘ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲ ಕೆಡಿಸಿತು’ ಎಂಬ ನುಡಿಯಂತೆ, ಘೊರಯುದ್ಧದಲ್ಲಿ ತಾನೂ ಹತನಾಗುವುದಲ್ಲದೆ ತನ್ನ ಪರಿವಾರದವರೆಲ್ಲರೂ ಅಸುನೀಗುವಂತೆ ಮಾಡಿ, ಭಾಗಶಃ ಕುರುಕುಲನಾಶಕ್ಕೆ ಕಾರಣನಾದ ದುರ್ಯೋಧನ.
ಅನ್ಯಾಯ-ಅಧರ್ಮಗಳನ್ನು ಮಾಡುತ್ತ ಧರ್ಮದ ವಿರುದ್ಧ ಹೋರಾಡಿದರೆ ತಾನು, ತನ್ನ ಪರಿವಾರ ಎಲ್ಲರಿಗೂ ಅವನತಿ ಅಪರಿಹಾರ್ಯ. ಜೀವನದಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯ ಹಿನ್ನೆಲೆಯಲ್ಲಿ ಸರಿಯಾದ ವಿವೇಕವಿರಲಿ. ಅಂತಹ ವಿವೇಕ ಇಲ್ಲದಿದ್ದರೆ, ವಿವೇಕಿಗಳ ವಿವೇಕದ ಮಾತುಗಳನ್ನು ಆಲಿಸಿ ಪಾಲಿಸುವ ಪ್ರವೃತ್ತಿಯಾದರೂ ಇರಲಿ. ಅದಕ್ಕೆಂದೆ, ನಮಗೆ ಹಿರಿಯರು ಸರಿ ಯಾವುದು, ತಪು್ಪ ಯಾವುದು, ಧರ್ಮ ಎಂದರೇನು, ಅಧರ್ಮದ ಮಾರ್ಗ ಯಾವುದು ಎಂಬುದೆಲ್ಲ ತಮ್ಮ ಅನುಭವ ಮತ್ತು ವಿವೇಕದ ಮಾತುಗಳಿಂದ ಹೇಳುತ್ತಾರೆ. ಅದನ್ನು ಮನನ ಮಾಡಿಕೊಂಡು, ತಪು್ಪಗಳನ್ನು ಸರಿಪಡಿಸಿಕೊಂಡು, ದುರ್ಗಣಗಳನ್ನು ತ್ಯಜಿಸಿ ಎಲ್ಲರ ಹಿತ ಬಯಸುತ್ತ ಜೀವನ ಸಾಗಿಸುವುದರಲ್ಲೇ ನಿಜವಾದ ಅರ್ಥವಿದೆ. ಅಧರ್ಮದ ಮಾರ್ಗದಲ್ಲಿ ಸಾಗಿದರೆ ನಾಶ ನಿಶ್ಚಿತ ಎಂಬುದಕ್ಕೆ ದುರ್ಯೋಧನ, ಕಂಸ, ರಾವಣ ಉದಾಹರಣೆಯಾಗಿ ನಿಲ್ಲುತ್ತಾರೆ. ಹಾಗಾಗಿ, ಹಿರಿಯರ, ಪ್ರಾಜ್ಞರ ವಿವೇಕದ ನುಡಿಗಳು ನಮ್ಮ ಅಂತರಂಗವನ್ನು ಬೆಳಗುವಂತಾಗಲಿ.
| ಕಾಂತೇಶಾಚಾರ್ಯ ಕದರಮಂಡಲಗಿ
(ಲೇಖಕರು ಸಂಸ್ಕೃತ ಸಂಶೋಧಕರು)
(ಪ್ರತಿಕ್ರಿಯಿಸಿ: manollasavv@gmail.com)