ಅಂಕಣ

ಹಿರಿಯರ ಸಾಧನೆಗಳನ್ನು ಕಿರಿಯರಿಗೆ ಪರಿಚಯಿಸೋಣ...

ಆಸಕ್ತ ಜನರು ಮಾಡುವ ವಾರ್ಷಿಕ ಪ್ರವಾಸದಿಂದ ಅನೇಕ ರೀತಿಯ ಪ್ರಯೋಜನಗಳಿವೆ. ನಿತ್ಯವೂ ಗಾಣಕ್ಕೆ ಕಟ್ಟಿದ ಎತ್ತುಗಳಂತೆ ತಲೆ ತಗ್ಗಿಸಿ, ನಡೆದ ದಾರಿಯಲ್ಲಿಯೇ ನಡೆಯುತ್ತಿರುವುದು ದುಡಿಮೆಯ ಅನಿವಾರ್ಯತೆ. ತಾನು ಏಕೆ ಪ್ರದಕ್ಷಿಣೆ ಬರುತ್ತಿದ್ದೇನೆ ಎಂದು ಅರಿಯದೆ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಾ ಇರುವುದೂ ಇದೆ. ಮಧ್ಯದಲ್ಲಿರುವ ಗಾಣದ ಪಾತ್ರೆಯಲ್ಲಿ ಕೊಬ್ಬರಿ ಅಥವಾ ಇತರ ಧಾನ್ಯಗಳನ್ನು ಹಾಕಿದ ಮಾಲೀಕ ಅದರ ಫಲಿತಾಂಶ ಅಂದರೆ ಎಣ್ಣೆಯನ್ನು ಪಡೆಯುತ್ತಾನೆ.

ಬದುಕಿನ ಅವಶ್ಯಕತೆಯಾದ ಸಂಪಾದನೆಗಾಗಿ ದುಡಿಮೆ. ಎಷ್ಟೋ ಸಲ ದುಡಿಮೆಗೆ ಪ್ರತಿಫಲ ದೊರಕಿದರೂ ದುಡಿತದ ಮೂಲ ಉದ್ದೇಶವೇನೆಂದು ತಿಳಿಯದು. ಅಂತೆಯೇ ಬದುಕಿನ ಅನಿವಾರ್ಯತೆ ದುಡಿಮೆ. ‘ಉದ್ಯೋಗಃ ಮನುಜಲಕ್ಷಣಮ್. ಶ್ರದ್ಧೆ, ಏಕಾಗ್ರತೆ ಹಾಗೂ ನಿಷ್ಠೆಯಿಂದ ಸೇವೆ ಮಾಡುವವರಿಗೆ ದುಡಿಮೆಯಿಂದ ಶ್ರಮ ಅನಿಸದೇ ಇದ್ದರೂ ಜೀವನೋತ್ಸಾಹಕ್ಕಾಗಿ ಆಗೀಗ ವಿಶ್ರಾಂತಿ ಬೇಕಾಗುತ್ತದೆ. ವಿದೇಶಿಯರು ಹೀಗೆ ವಿಶ್ರಾಂತಿಗಾಗಿ ಕಂಡುಕೊಂಡ ಪರಿಹಾರವೇ ಪ್ರವಾಸ.

ಪ್ರವಾಸವೆಂದರೆ ವಿಶ್ರಾಂತಿಯ ಜೊತೆಗೆ ಆಸಕ್ತಿಯ ವಿಷಯದಲ್ಲಿ ತೊಡಗಿಸಿಕೊಳ್ಳುವಿಕೆ;ಆಗ ಇತರ ಸಂಸ್ಕೃತಿಯ ಪರಿಚಯವಾಗುತ್ತದೆ. ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಭಾಷೆ, ಆಚಾರ-ವಿಚಾರ, ಆಹಾರ, ಸಂಗೀತ-ನೃತ್ಯ ಮತ್ತು ಕಲೆಗಳ ವೈವಿಧ್ಯತೆ ಇದೆ.

ಇಂದು ಸಾಂಸ್ಕೃತಿಕ ವಾತಾವರಣದಲ್ಲಿ ಕಲಬೆರಕೆಯಾಗಿ ಅಮೆರಿಕನ್ ಸಂಸ್ಕೃತಿ ಇತರ ರಾಷ್ಟ್ರಗಳ ಸಾಂಸ್ಕೃತಿಕ ಪರಂಪರೆಗಳನ್ನು ಕಬಳಿಸಿದೆ. ಅದೃಷ್ಟವಶಾತ್ ಕೆಲವು ರಾಷ್ಟ್ರಗಳು ಎಚ್ಚೆತ್ತುಕೊಂಡು ತಮ್ಮತನವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ.

ಭಾರತದಲ್ಲಿ ಹಾಗೂ ಏಷ್ಯಾದಲ್ಲಿ ಹಿಂದೂ ಧರ್ಮದ ಪುರಾಣಗಳು, ರಾಮಾಯಣ ಮತ್ತು ಮಹಾಭಾರತದ ಕಥೆಗಳು ಜನಜೀವನದೊಂದಿಗೆ ಬೆರೆತು ಏಕಸೂತ್ರದಲ್ಲಿ ಪೋಣಿಸಿವೆೆ. ರಾಮಾಯಣ ಮತ್ತು ಮಹಾಭಾರತದ ಕಥೆಗಳಲ್ಲಿ ಮೂಲನಾಯಕರು ಎಲ್ಲಾ ರಾಜ್ಯಗಳಿಗೂ ವನವಾಸದಲ್ಲಿ ಪ್ರಯಾಣ ಮಾಡಿದ್ದರಿಂದ ಹಾಗೂ ಭಾರತದ ಎಲ್ಲಾ ರಾಜ್ಯಗಳಲ್ಲೂ ನಾವು ಭಾರತೀಯರು ಎನ್ನುವ ಭಾವನೆಗೆ ಪೋಷಕವಾಗಿದೆ.

ಉತ್ತರಭಾರತದ ಕಾಶ್ಮೀರ, ಹಿಮಾಲಯ ಶ್ರೇಣಿ ಹಾಗೂ ದಕ್ಷಿಣ ಭಾರತದ ಗೋಕರ್ಣದಂತಹ ಸಮುದ್ರ ತೀರದಲ್ಲಿ ಅತೀ ಬಡವರಂತೆ ಇರುವ ವಿದೇಶೀಯರು ಕಾಣಸಿಗುತ್ತಾರೆ. ಅವರು ವೈಯಕ್ತಿಕ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚು ಲೋಕಾನುಭವ ಪಡೆಯುವವರು. ಅದರಲ್ಲಿ ಒಂದು ವರ್ಗ ಮೋಜು ಮಸ್ತಿ ಮಾಡುವವರು.

ಭಾರತೀಯರಾದ ನಾವು ಪ್ರವಾಸವೆಂದರೆ ಧಾರ್ವಿುಕ ಪ್ರವಾಸವೆಂದು ತಿಳಿದಿದ್ದೇವೆ. ಈ ಕ್ಷೇತ್ರಗಳಲ್ಲಿ ಭಗವತ್ ದರ್ಶನವಾದ ಮೇಲೆ ಲೌಕಿಕವಾಗಿ ಸಂತೋಷ ಕೊಡುವಂತಹ ವಿಷಯಗಳಿದ್ದರೆ ಅದನ್ನು ಸವಿಯಲು ಇಚ್ಛೆಪಡುತ್ತೇವೆ. ಧಾರ್ವಿುಕ ಕೇಂದ್ರಗಳಲ್ಲಿ ಪ್ರಸಾದ ಇನ್ನೊಂದು ಪ್ರಮುಖ ಆಕರ್ಷಣೆ. ಕಾಶಿಗೆ ಹಿಂದೆ ಹೋದಾಗ ಭಯಾನಕ ವಾತಾವರಣವಿತ್ತು. ಅದು ಅತೀ ಕಠಿಣ ಪ್ರವಾಸವಾಗಿದ್ದುದರಿಂದ ಹಾಗೂ ತೀರಾ ವಯಸ್ಸಾದವರು ಕಾಶಿಗೆ ಹೋಗಿ ಪ್ರಾಣತ್ಯಾಗ ಮಾಡುವ ಉದ್ದೇಶವಿದ್ದುದರಿಂದ ಲೌಕಿಕ ಅಥವಾ ಭೌತಿಕ ಅನುಕೂಲಗಳ ಕಡೆ ಗಮನ ಹರಿಸುತ್ತಿರಲಿಲ್ಲ. 45 ವರ್ಷಕ್ಕೆ ಹಿಂದೆ ನಾನು ಮತ್ತೋರ್ವ ಬಂಧುವಿನೊಡನೆ ಕಾಶಿಗೆ ಹೋಗಿದ್ದೆ. ಗಂಗಾನದಿಯ ಪರಿಸರವನ್ನು ಗಮನಿಸಿ, ಗಂಗೆಯಲ್ಲಿ ಸ್ನಾನ ಮಾಡುವುದು ಸಾಧ್ಯವಿಲ್ಲವಾದುದರಿಂದ ದೋಣಿಯಲ್ಲಿ ಹೋದೆವು. ಆಗ ಮಧ್ಯದಲ್ಲಿ ಇನ್ನೊಂದು ದೋಣಿಯಲ್ಲಿರುವವರು ಕಿರುಚಿಕೊಂಡಿದ್ದು ಕೇಳಿಸಿತು. ಆ ದೋಣಿಯ ಬಳಿ ಬೋರಲಾಗಿ ಹೆಣವೊಂದು ತೇಲುತ್ತಿತ್ತು. ಸತ್ತವರ ದೇಹವನ್ನು ಚಿತೆಯಲ್ಲಿ ಸುಡುವಾಗ ಅರ್ಧದಷ್ಟೆ ಸುಟ್ಟು ಕಟ್ಟಿಗೆ ಉಳಿಸಲು ಶವವನ್ನು ನೀರಿಗೆ ಬಿಸಾಡುತ್ತಿದ್ದರೆಂದು ತಿಳಿಯಿತು. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುತುವರ್ಜಿಯಿಂದಾಗಿ ಕಾಶೀಕ್ಷೇತ್ರ ಅಭಿವೃದ್ಧಿಯಾಗಿದೆ. ‘ನಮಾಮಿ ಗಂಗೆ’ ಯೋಜನೆಯಿಂದ ಗಂಗಾ ನದಿಯು ಹರಿಯುವಲ್ಲಿ ಪೂರ್ತಿಪಾವಿತ್ರ್ಯತೆ ಕಾಣುತ್ತಿದೆ. ಧಾರ್ವಿುಕ ಕ್ಷೇತ್ರಗಳಲ್ಲಿ ಶುಚಿಯಾದ ವಾತಾವರಣವಿದ್ದಲ್ಲಿ, ಲಲಿತ ಕಲೆಗಳಿಗೆ ಅವಕಾಶವಿದ್ದಲ್ಲಿ ಧನ್ಯತೆಯಲ್ಲವೇ?

ಭಾರತದಲ್ಲಿ ಜಾತ್ರೆಗಳಲ್ಲಿ ಭಿನ್ನರುಚಿಯ ಜನರ ಆನಂದಗಳಿಗೆ ಅವಕಾಶವಿದೆ. ಕಾಲಧರ್ಮಕ್ಕನುಗುಣವಾಗಿ ಜಾತ್ರೆಗಳು ಆಧುನಿಕತೆಯ ವೇಗದಲ್ಲಿ ಮಂಕಾದರೂ ಇನ್ನೂ ದೇಸೀ ಆಕರ್ಷಣೆಗಳಿವೆ. ವಿದೇಶ ಪ್ರವಾಸ ಮಾಡುವಾಗ ಗಮನಿಸಿದಂತೆ, ಜಪಾನೀಯರು ಹೆಚ್ಚು ಪ್ರವಾಸಪ್ರಿಯರು ಅನ್ನಿಸುತ್ತದೆ. ಅವರು ಸರಳ ವೇಷಭೂಷಣದೊಂದಿಗೆ ಶಿಸ್ತು, ಸಮಯ ಪಾಲನೆಯೊಂದಿಗೆ ಸದ್ದುಗದ್ದಲವಿಲ್ಲದೆ ವಿಹಾರ ಮಾಡುತ್ತಾರೆ, ಫೋಟೋ ತೆಗೆಯುವುದರಲ್ಲಂತೂ ಅದಮ್ಯ ಉತ್ಸಾಹ. ಬಹುಶಃ ಈ ಉತ್ಸಾಹಕ್ಕೇ ಇರಬೇಕು ಕ್ಯಾಮರಾ ವ್ಯವಹಾರಕ್ಕೆ ಜಪಾನ್ ಪ್ರಸಿದ್ಧವಾಗಿದೆ.

ಕ್ಯಾನನ್, ಸೋನಿ, ಪೆಂಟಕ್ಸ್ ಜಪಾನೀಯ ಕ್ಯಾಮರಾಗಳು ವಿಶ್ವದಲ್ಲಿ 85% ಪಾಲು ಹೊಂದಿವೆ. ಪ್ರವಾಸದಲ್ಲಿ ದೃಶ್ಯಗಳನ್ನು ಸೆರೆಹಿಡಿಯುವುದು ಪ್ರಮುಖವಾಗಿರುತ್ತದೆ. ಹಿಂದೆ ಫಿಲ್ಮ್​ಗಳಿರುವಾಗ ಫೋಟೊ ತೆಗೆಯಲು ಹಿಡಿತವಿತ್ತು. ನಾನು 15/20 ಫಿಲ್ಮ್​ಗಳಷ್ಟು ಫೋಟೊ ತೆಗೆದು ಭಾರತಕ್ಕೆ ಬಂದು ಅಚ್ಚು ಹಾಕಿಸುತ್ತಿದ್ದೆ. ಇಂದು ಡಿಜಿಟಲ್ ಆದ ಮೇಲೆ ಫೋಟೋಗಳ ಸಂಖ್ಯೆಗೆ ಮಿತಿಯೇ ಇಲ್ಲ.

ವಿದೇಶಗಳಲ್ಲಿ ಅಲ್ಲಿನ ಜಾನಪದೀಯ ಸಂಸ್ಕೃತಿಯ ಉಳಿವಿನ ಪ್ರಯತ್ನ ಮಾಡಿ, ಪ್ರದರ್ಶನಗಳನ್ನು ಏರ್ಪಡಿಸುತ್ತಾರೆ. ಯೂರೋಪ್, ಫ್ರಾನ್ಸ್, ಇಟಲಿ, ಇಂಗ್ಲೆಂಡ್ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ಚೀನಾ, ರಷ್ಯಾ, ಜರ್ಮನಿ ದೇಶಗಳಲ್ಲಿ ಮಹಾಯುದ್ಧದಲ್ಲಿ ನಾಶವಾದ ಕೋಟೆಗಳು, ಕಟ್ಟಡಗಳು ಹಾಗೂ ಅರಮನೆಗಳನ್ನು ಪುನಃ ನಿರ್ಮಾಣ ಮಾಡಿದ್ದಾರೆ. ಆದರೂ ಅದರ ಮೂಲ ಸ್ವರೂಪದ ಶೇಕಡಾ 75 ರಷ್ಟು ಸಹಜತೆಗೆ ಮರಳಿಸಲಾಗಿಲ್ಲ. ಯುದ್ಧದ ಘೊರ ಪರಿಣಾಮಗಳು ಮನುಷ್ಯಕುಲದ ನಾಶ ಮಾತ್ರವಲ್ಲದೆ ಸಾಂಸ್ಕೃತಿಕ ಹಿನ್ನೆಲೆಯ ನಾಶಕ್ಕೂ ಕಾರಣವಾಗಿದೆ ಎಂದು ಅನಿಸದೇ ಇರದು.

ಕಾಂಬೋಡಿಯಾ, ಮಲೇಶಿಯಾ, ಸಿಲೋನ್​ನಂತಹ ಏಷ್ಯನ್ ರಾಷ್ಟ್ರಗಳು ಭಾರತೀಯರಂತೆಯೆ ಇತಿಹಾಸ ಹೊಂದಿವೆ. ಅಲ್ಲಿನ ಜಾನಪದ ಕಲೆಗಳಲ್ಲಿ ರಾಮಾಯಣ, ಮಹಾಭಾರತದ ಕಥೆಗಳು ಯಥೇಚ್ಛವಾಗಿವೆ. ಶ್ರೀಲಂಕಾ (ಸಿಲೋನ್)ದಲ್ಲಿ ರಾಮಾಯಣದ ಕಥೆಯ ತುಣುಕುಗಳು ಕಾಣುತ್ತವೆ. ನಾವು ಅಲ್ಲಿಗೆ ಹೋದಾಗ ಎಷ್ಟೇ ಪ್ರಶ್ನಿಸಿದರೂ ರಾವಣನ ಬಗ್ಗೆ ಅವರು ಉತ್ತರಿಸಲಿಲ್ಲ. ಜರ್ಮನಿಯಲ್ಲಿ ಹಿಟ್ಲರನ ಬಗ್ಗೆಯೂ ಅದೇ ತಾತ್ಸಾರ. ಈಜಿಪ್ಟ್ ಹಾಗೂ ಆಫ್ರಿಕಾಗಳಂತಹ ಹಿಂದುಳಿದ ರಾಷ್ಟ್ರಗಳಲ್ಲಿ ಪ್ರಗತಿ ಹೊಂದಿದ ರಾಷ್ಟ್ರಗಳು ಸಂಶೋಧನೆಯ ಹೆಸರಿನಲ್ಲಿ ಪಿರಮಿಡ್ ಮತ್ತು ಇತರ ಖಜಾನೆಗಳನ್ನು ದೋಚಿದ್ದಾರೆ. ಪಿರಮಿಡ್​ಗಳಲ್ಲಿದ್ದ ಮಮ್ಮಿಗಳನ್ನು ಸಹಿತ (ಸತ್ತ ರಾಜವಂಶದವರ ದೇಹಗಳನ್ನು) ಸಾಗಿಸಿ ವಿದೇಶಗಳ ವಸ್ತುಪ್ರದರ್ಶನದಲ್ಲಿಟ್ಟಿರುತ್ತಾರೆ.

ವಿದೇಶೀಯರು ದುಡಿಮೆಯ ಒಂದು ಭಾಗವನ್ನು ವಾರ್ಷಿಕ ಪ್ರವಾಸಕ್ಕಾಗಿ ಮೀಸಲಾಗಿಡುತ್ತಾರೆ. ನಾವು ದಕ್ಷಿಣ ಕೊರಿಯಾಕ್ಕೆ ಹೋದಾಗ ತೋಟವೊಂದರ ಹೊರಗೆ ಒಬ್ಬ ವಿದೇಶೀಯ ನಮ್ಮೊಂದಿಗೆ ಪರಿಚಯ ಮಾಡಿಕೊಂಡು ಮಾತನಾಡುತ್ತಿದ್ದ. ತಾನು ಮೂರು ವರ್ಷ ದುಡಿದು ಹಣ ಸಂಗ್ರಹಿಸಿ ಉಳಿತಾಯ ಮಾಡಿ ಬಂದಿದ್ದೇನೆ ಎಂದ. ನೀವೆಲ್ಲಿ ಉಳಿದುಕೊಂಡಿದ್ದೀರೆಂದು ಕೇಳಿದಾಗ ನಾವು ಹೋಟೆಲೊಂದರ ಹೆಸರು ಹೇಳಿದೆವು. ಆತ ನಕ್ಕು ‘ನೀವು ಪ್ರವಾಸದ ಬಹುಭಾಗ ವಿಮಾನದ ಟಿಕೇಟಿಗೆ, ವಸತಿಗೆ ಹಾಗೂ ಮೇಲುಖರ್ಚಿಗೆ ಉಪಯೋಗಿಸುತ್ತೀರಿ. ನಾನು ಅತ್ಯಂತ ಕನಿಷ್ಠ ವೆಚ್ಚದ ವಿಮಾನ ಟಿಕೇಟು ಪಡೆದು, ಸಾಮಾನ್ಯ ವಸತಿಗೃಹದಲ್ಲಿ ಉಳಿದುಕೊಂಡಿದ್ದೇನೆ. ಇಲ್ಲಿ ನಡೆದುಕೊಂಡು ಅಥವಾ ಸೈಕಲಿನಲ್ಲಿ ಪ್ರೇಕ್ಷಣೀಯ ಸ್ಥಳಗಳಿಗೆ ಬರುತ್ತೇನೆ’ ಎಂದ.

ಹೌದು, ವಿದೇಶದಲ್ಲಿ ಕೆಲವು ವ್ಯವಸ್ಥೆಗಳಿಗಾಗಿ ವೆಚ್ಚ ಮಾಡಬೇಕಾಗುತ್ತದೆ. ಆದರೆ ಆತನ ಸಾಹಸ ಹಾಗೂ ಸಹಜ ಆನಂದಕ್ಕಾಗಿ ಪಟ್ಟಶ್ರಮಕ್ಕಾಗಿ ಆತನನ್ನು ಮರೆಯಲಾಗುತ್ತಿಲ್ಲ. ನಿಜವಾದ ರಜೆಯ ಸುಖ ಸಿಗಬೇಕಾದರೆ ತುಂಬಾ ಕಷ್ಟಪಟ್ಟು ದುಡಿದ ನಂತರವೇ ಪ್ರವಾಸ ಕೈಗೊಳ್ಳಬೇಕು. ‘ಮೊದಲು ಕರ್ಮ ಅನಂತರ ಬರುವುದು ನೈಷ್ಕರ್ಮ್ಯ- ಸ್ವಾಮಿ ರಂಗನಾಥಾನಂದಜೀಯವರ ಸಂದೇಶವಿದು.

ಭಾರತದ ಪ್ರವಾಸಿ ಕೇಂದ್ರಗಳು ಸ್ವಚ್ಛತೆಯ ಕೊರತೆಯಿಂದಾಗಿ ಸೊರಗುತ್ತಿವೆ. ಹಾಗೆಂದು ಮಲಿನತೆ ಮಾಡುವವರು ಪ್ರವಾಸಿಗರೇ. ಅಲ್ಲದೆ, ನಮ್ಮಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ಹಾಗೂ ವ್ಯವಸ್ಥೆಯ ಕೊರತೆ ಇದೆ. ಅದೇ ವಿದೇಶದಲ್ಲಿ ಪ್ರವಾಸಿಗರು ಪರಿಸರ ರಕ್ಷಣೆ ಮಾಡುತ್ತಾರೆ ಮತ್ತು ಟೂರಿಸಂ ಅಥವಾ ಪ್ರವಾಸಿಗರಿಂದ ಬರುವ ಆದಾಯವನ್ನು ಗಮನಿಸಿ, ಎಚ್ಚರಿಕೆ ವಹಿಸುತ್ತಾರೆ. ಭಾರತದಲ್ಲಿ ಪ್ರವಾಸೋದ್ಯಮದ ಪ್ರಗತಿ ಅನಿವಾರ್ಯವಾಗಿದೆ. ಸರ್ಕಾರಗಳು ಪ್ರಚಾರ ಹಾಗೂ ವ್ಯವಸ್ಥೆಯನ್ನು ಮಾಡಿದ್ದರೂ ನಿರಂತರತೆಯ ಕೊರತೆ ಇದೆ. ವೆಬ್​ಸೈಟ್ ಅಥವಾ ಪ್ರಚಾರದ ಜಾಡು ಹಿಡಿದು ಹೋದರೆ ಅಲ್ಲಿ ವ್ಯವಸ್ಥೆಗಳಿರುವುದಿಲ್ಲ. ಆದ್ದರಿಂದ ಪ್ರವಾಸಿಗರು ಖಾಸಗಿ ವ್ಯವಸ್ಥೆಗಳಿಗೆ ಹೊಂದಿಕೊಂಡರೆ ಕೊಂಚ ನೆಮ್ಮದಿ ಸಿಗಬಹುದು. ಆದರೆ ಅದು ದುಬಾರಿಯಾಗಿರುತ್ತದೆ.

ಭಾರತ ಬಡರಾಷ್ಟ್ರವೇ? ಇದು ಹಿಂದಿ ಭಾಷೆಯ ‘ಬಡಾ’ ರಾಷ್ಟ್ರ. ಈ ದೇಶದ ಇತಿಹಾಸವನ್ನು ಗಮನಿಸಿದರೆ ಕಂಡುಬರುವುದು ಜ್ಞಾನಗಳಾದ ವೇದಸ್ಮೃ, ಪುರಾಣಗಳಷ್ಟೆ ಲೌಕಿಕ ಸಾಧನೆಗಳಲ್ಲೂ ಆಗಿವೆ. ಈ ಸಂಪತ್ತಿಗಾಗಿಯೇ ವಿದೇಶಿಯರು ದಾಳಿ ಮಾಡಿದರು. ಧಾರ್ವಿುಕ ಕೇಂದ್ರಗಳ ವಿನ್ಯಾಸ, ವಾಸ್ತುಶಿಲ್ಪ ಮತ್ತು ಕಟ್ಟಡ ನಿರ್ವಣದ ಚಾಕಚಕ್ಯತೆಯನ್ನು ಗಮನಿಸಿದರೆ ಇತರ ರಾಷ್ಟ್ರಗಳಿಗಿಂತ ಭಾರತವೆಷ್ಟು ಪ್ರಗತಿ ಪರವಾಗಿತ್ತು ಎಂದು ತಿಳಿಯುತ್ತದೆ. ಅಂತೆಯೇ ನಷ್ಟವಾದರೂ ಉಳಿದು ಕೊಂಡಿರುವ ಕೆಲವೇ ವಸ್ತು ಸಂಗ್ರಹಾಲಯಗಳು ಭಾರತದ ಸರ್ವಾಂಗೀಣ ಶ್ರೇಷ್ಠತೆಯ ಬಗ್ಗೆ ಪುರಾವೆನೀಡುತ್ತವೆ. ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿ ಇವಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳಿವೆ.

ಭಾರತದಲ್ಲಿ ತಡವಾಗಿ ವಸ್ತು ಸಂಗ್ರಹಾಲಯದ ಬಗ್ಗೆ ಎಚ್ಚರಿಕೆ ಮೂಡಿದ್ದರಿಂದ ಬಹಳಷ್ಟು ನಷ್ಟವಾಗಿದೆ. ಸಾವಿರಾರು ಸ್ಮಾರಕಗಳು ನಾಶವಾಗಿವೆ. ವೀರಗಲ್ಲುಗಳು, ಶಿಲಾಶಾಸನಗಳು ನಷ್ಟವಾಗಿವೆ. ದುರಂತವೆಂದರೆ ಸುಮಾರು 500 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿದ್ದ ಅನೇಕ ಶಿಲಾಮಯ ಮಂದಿರಗಳು ನಾಶವಾಗಿವೆ. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧಮೋತ್ಥಾನ ಟ್ರಸ್ಟ್ ರಚನೆ ಮಾಡಿ 250ಕ್ಕೂ ಹೆಚ್ಚು ಸ್ಮಾರಕಗಳನ್ನು (ಮಂದಿರಗಳು) ಮೂಲ ಸ್ವರೂಪದಂತೆಯೇ ಪುನಃ ನಿರ್ಮಾಣ ಮಾಡಿ ರಕ್ಷಿಸಲಾಗಿದೆ. ಕೆಲವು ರಥಗಳನ್ನು ಧರ್ಮಸ್ಥಳಕ್ಕೆ ತಂದು ರಕ್ಷಿಸಲಾಗಿದೆ. ಅನ್ಯಥಾ ಆ ರಥಗಳು ಕಟ್ಟಿಗೆಯಾಗಿ ಉಪಯೋಗಿಸಲ್ಪಡುತ್ತಿದ್ದವು. ಶ್ರೀರಂಗಪಟ್ಟಣದಲ್ಲಿ ಸಂಗ್ರಹಿಸಿದ ರಥವು ಪೊಲೀಸ್ ಸ್ಟೇಷನ್ ಪಕ್ಕದಲ್ಲಿ ಇದ್ದುದರಿಂದ ರಕ್ಷಿಸಲ್ಪಟ್ಟಿತ್ತು. ಮಣಿಪಾಲದ ಪಾರಂಪರಿಕ ವಸ್ತು ಸಂಗ್ರಹಕಾರರಾಗಿದ್ದ ದಿ. ವಿಜಯನಾಥ ಶೆಣೈ ಅವರು ಹೇಳುತ್ತಿದ್ದಂತೆ ಒಂದು ಹಳ್ಳಿಗೆ ಹೋದಾಗ ಸುಂದರವಾದ ಬೋದಿಗೆ ಕಂಬವನ್ನು ಚಳಿ ಕಾಯಿಸಲು ಬೆಂಕಿಗೆ ಇಟ್ಟಿದ್ದರಂತೆ. ಶೆಣೈ ಆ ಕಂಬವನ್ನು ಬೆಂಕಿಯಿಂದ ಎಳೆದು ರಕ್ಷಿಸಿದಾಗ ಎರಡು ಏಟೂ ಬಿದ್ದಿದಂತೆ. ಆ ಬಳಿಕ ವಿವರಣೆ ಕೊಟ್ಟಾಗ ಹಳ್ಳಿಯವರು ಸುಮ್ಮನಾದರಂತೆ. ಅರೆಸುಟ್ಟ ಕೆತ್ತನೆಯ ಕಂಬ ನಮ್ಮ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ತಿಳಿಸುವಂತಿತ್ತು. ಸ್ಮಾರಕಗಳು ಹಾಗೂ ಹಳೆಯ ವಸ್ತುಗಳ ರಕ್ಷಣೆಯಿಂದ ದೇಶ ಎಷ್ಟು ಪ್ರಗತಿ ಸಾಧಿಸಿತ್ತು, ಎಂತಹ ಶ್ರೇಷ್ಠ ಕಲಾವಿದರು ಇದ್ದರು ಎಂದು ತಿಳಿಯುತ್ತದೆ. ಹಾಗಾಗಿ ಸ್ಮಾರಕಗಳನ್ನು ರಕ್ಷ್ಷಿಸೋಣ, ಮುಂದಿನ ಪೀಳಿಗೆಗೆ ದೇಶ ಹಾಗೂ ಸಂಸ್ಕೃತಿ ಬೆಳೆದುಬಂದ ರೀತಿ ಹಾಗೂ ಸಾಧನೆಗಳನ್ನು ಪರಿಚಯಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)