ಬದುಕಿನಲ್ಲಿ ಸವಾಲುಗಳು ಬರುವುದು ಸಹಜ. ಹಾಗಂತ ಧೃತಿಗೆಟ್ಟು ಕುಳಿತರೆ ನಮ್ಮೆದುರು ಇರುವ ಆಯ್ಕೆಗಳು ಗೋಚರಿಸುವುದಿಲ್ಲ. ಕಷ್ಟ, ಅವಮಾನದ ಸಂದರ್ಭಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಬೇಕು. ಈ ಸ್ಥಿತಿಯಿಂದ ಹೊರಬರುತ್ತೇವೆ, ಗೆಲುವು ಸಾಧಿಸುತ್ತೇವೆ ಎಂಬ ಅಚಲ ವಿಶ್ವಾಸವೇ ನಮ್ಮ ಕೈಹಿಡಿಯುತ್ತದೆ.
ಜೀವನ ಎಂದರೆ ಸಿಹಿ-ಕಹಿ ಸಮ್ಮಿಶ್ರಣ. ಇಲ್ಲಿ ಎಲ್ಲವೂ ಇದೆ. ಆದರೆ, ಕಷ್ಟದ ವಿಷಯಗಳ ಬಗ್ಗೆ ಹೆಚ್ಚು ಹೇಳಲ್ಲ. ಏಕೆಂದರೆ, ಎಲ್ಲರ ಜೀವನದಲ್ಲಿ ಕಷ್ಟಗಳು ಬಂದಿರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕೇ ವಿನಾ, ಕೊರಗುವ ಅಗತ್ಯವಿಲ್ಲ. ಈ ವಿಚಾರದಲ್ಲಿ ನಾನು ಯಾವತ್ತಿಗೂ ಪಾಸಿಟಿವ್ ಸೈಡ್. ಸೋಲು, ಅವಮಾನ, ಕಷ್ಟ, ಎಲ್ಲವನ್ನೂ ಪಾಸಿಟಿವ್ ಆಗಿಯೇ ಸ್ವೀಕರಿಸುತ್ತೇನೆ. ಅಂದು ಪಿಯುಸಿಯಲ್ಲಿ ಒಂದು ವಿಷಯದಲ್ಲಿ ಫೇಲಾಗದಿದ್ದರೆ, ಇಂದು ಬಣ್ಣದ ಲೋಕಕ್ಕೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಸೋಲು ಹಲವು ದಾರಿಗಳನ್ನು ಸೃಷ್ಟಿಸುತ್ತದೆ. ಅದರಲ್ಲಿ ಒಂದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಅಂತಹ ಒಂದು ದಾರಿ ನನ್ನನ್ನು ಕಲಬುರಗಿಯಿಂದ ಬೆಂಗಳೂರಿನವರೆಗೆ ತಂದು ನಿಲ್ಲಿಸಿದೆ.
ನಾನು ಹುಟ್ಟಿದ್ದು ಕಲಬುರಗಿಯಲ್ಲಿ. ಅದು ನಮ್ಮ ತಾಯಿಯ ಊರು. ತಂದೆ ಮಾರುತಿ ಗಾಂವ್ಕರ್ ಕಲಬುರಗಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ಶರಣಬಸವೇಶ್ವರ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ನಾನು ಓದಿದ್ದು. ಅದೊಂದು ಬೋರ್ಡಿಂಗ್ ಸ್ಕೂಲ್. ತಂದೆಯವರು ಪೊಲೀಸ್ ಅಧಿಕಾರಿಯಾಗಿದ್ದರಿಂದ ವರ್ಗಾವಣೆ ಸಾಮಾನ್ಯ. ಹಾಗಾಗಿ, ನಮ್ಮ ಶಿಕ್ಷಣಕ್ಕೆ ಅಡಚಣೆಯಾಗಬಾರದು ಎಂದು ನನ್ನನ್ನು ಬೋರ್ಡಿಂಗ್ ಶಾಲೆಗೆ ಸೇರಿಸಿದ್ದರು. ನನ್ನ ಶಾಲಾ ದಿನಗಳು ಮುಗಿಯುತ್ತ ಬಂದವು, ಅದೇ ಸಮಯದಲ್ಲಿ ಅಪ್ಪಾಜಿ ಕೂಡ ಬೆಂಗಳೂರಿಗೆ ವರ್ಗಾವಣೆಯಾದರು. ಇಡೀ ಕುಟುಂಬ ಬೆಂಗಳೂರಿಗೆ ಬಂತು. ಬಳಿಕ ಈ ಮಹಾನಗರದಲ್ಲಿಯೇ ಮುಂದಿನ ಶಿಕ್ಷಣ ಮುಂದುವರಿಯಿತು. ಬೆಂಗಳೂರಿಗೆ ಬಂದಾಗಲೇ ನನ್ನೊಳಗಿನ ಪ್ರತಿಭೆ ಹೊರಬರಲು ಸಾಧ್ಯವಾಯಿತು. ಪಿಯು ಹಾಗೂ ಪದವಿಯನ್ನು ಜೈನ್ ಕಾಲೇಜಿನಲ್ಲಿ ಮುಗಿಸಿದರೆ, ಬೆಂಗಳೂರು ವಿವಿಯಿಂದ ಎಂ.ಎ.ಸ್ನಾತಕೋತ್ತರ ಪದವಿ ಪಡೆದೆ. ಜತೆಗೆ ಡಾನ್ಸ್, ರಂಗಭೂಮಿಯಲ್ಲಿ ತೊಡಗಿಸಿಕೊಂಡೆ ಹಾಗೂ ವೀಣೆ, ಪಿಯಾನೋ ನುಡಿಸುತ್ತಿದ್ದೆ. ಹೀಗಿರುವಾಗ, ಪಿಯು ಓದುತ್ತಿರುವಾಗಲೇ ಟಿವಿ, ಸೀರಿಯಲ್ಗಳಲ್ಲಿ ಅವಕಾಶಗಳು ಬಂದವು.
ಯಾವುದೇ ಕೆಲಸವಾಗಲಿ ಅದಕ್ಕೆ ಪೂರ್ಣವಾಗಿ ನ್ಯಾಯ ದೊರಕಿಸಿಕೊಡಬೇಕು ಎಂಬುದು ಅಪ್ಪನ ವಾದ. ‘ಮೊದಲು ವ್ಯಾಸಂಗ ಮಾಡು, ಈಗಲೇ ಸಿನಿಮಾ ಬೇಡ’ ಎಂದರು. ಪದವಿ ಮುಗಿದ ಬಳಿಕ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳೋಣ ಎಂದು ಬಂದ ಅವಕಾಶಗಳನ್ನು ಮುಂದೂಡಿದೆ. ಆದರೆ, ಡಿಗ್ರಿ ಓದುವಾಗ ಟೆಲಿವಿಷನ್ನಲ್ಲಿ ಕೆಲಸ ಮಾಡುವ ಅವಕಾಶ ಬಂತು. ದಿನಕ್ಕೆ ಎರಡು ತಾಸು ಮಾತ್ರ ಕೆಲಸ ಇದ್ದ ಕಾರಣ, ವ್ಯಾಸಂಗಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಪ್ಪನನ್ನು ಒಪ್ಪಿಸಿ, ಸೇರಿಕೊಂಡೆ. ಮೊದಲಿಗೆ ಡಾನ್ಸ್, ಫುಡ್ ಹಾಗೂ ಪ್ರವಾಸ ಹಿನ್ನೆಲೆಯ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುತ್ತಿದ್ದೆ. ಮುಂದೆ ಆ ಕಾರ್ಯಕ್ರಮಗಳು ಜನಪ್ರಿಯವಾದವು. ಆಗ ಬದುಕಿನ ಮತ್ತೊಂದು ಮಜಲು ತೆರೆದುಕೊಂಡಿತು.
ಸಿನಿಮಾ ಹಾಗೂ ಕಿರುತೆರೆಯಿಂದಲೂ ಅವಕಾಶಗಳು ಬರತೊಡಗಿದವು. ‘ನಿಮ್ಮ ಲುಕ್ ಚೆನ್ನಾಗಿದೆ, ಚಿತ್ರರಂಗಕ್ಕೆ ನೀವು ಹೊಂದಾಣಿಕೆಯಾಗುತ್ತೀರಾ’ ಎಂಬ ಮಾತುಗಳು ಕೇಳಬರತೊಡಗಿದವು. ಆದರೆ, ಡಿಗ್ರಿ ಪೂರ್ಣಗೊಳ್ಳಲಿ ಎಂದು ಸುಮ್ಮನಾಗಿದ್ದೆ. ಸಿನಿಮಾ ಕನಸು ಮಾತ್ರ ಹಾಗೆಯೇ ಹಸಿಯಾಗಿತ್ತು ಜತೆಗೆ ಉಸಿರಾಗಿತ್ತು. ಅದಕ್ಕಾಗಿ ಪೂರ್ಣ ಪ್ರಮಾಣದ ತಯಾರಿ ನಡೆಸುತ್ತಿದ್ದೆ. ಡಿಗ್ರಿ ಮುಗಿದ ಮರುದಿನವೇ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳಬೇಕು ಎಂದು ಎರಡು-ಮೂರು ತಿಂಗಳ ಮುಂಚೆಯೇ ಸಿನಿಮಾ ಒಪ್ಪಿಕೊಂಡು ಸಹಿ ಮಾಡಿದ್ದೆ. ಮೊದಲ ದಿನದ ಶೂಟಿಂಗ್ಗೆ ಉತ್ಸುಕಳಾಗಿದ್ದೆ. ಡಿಗ್ರಿ ಪರೀಕ್ಷೆ ಮುಗಿದ ಮರುದಿನವೇ ನನ್ನ ಮೊದಲ ಸಿನಿಮಾ ‘ನಮ್ ಏರಿಯಾಲ್ ಒಂದಿನಾ’ ಶೂಟಿಂಗ್ ಆರಂಭಿಸಿದೆ. ಆ ದಿನ ಮರೆಯಲಾಗದು. ಬಹುದಿನಗಳ ಕನಸು ನನಸಾದ ದಿನ. ಜೀವನದಲ್ಲಿ ಯಾವುದಕ್ಕಾಗಿ ಕಾಯುತ್ತಿರುತ್ತೇವೆಯೋ ಅದು ಸಿಕ್ಕ ಘಳಿಗೆ ವಿಶೇಷ ಎನಿಸುತ್ತದೆ. ಅಂತೆಯೇ ನಾನು ಕೂಡ ಹೀರೋಯಿನ್ ಆದೆ ಎಂಬ ಹೆಮ್ಮೆಯ ಜತೆಗೆ ಹೊಸ ಜವಾಬ್ದಾರಿಗೆ ಮುಂದಾಗುತ್ತಿದ್ದೇನೆ ಎನಿಸುತ್ತಿತ್ತು.
ಮನುಷ್ಯ ಸಾಕಷ್ಟು ಕನಸುಗಳನ್ನು ಹೊತ್ತು, ಆಕಾಶಕ್ಕೆ ಏಣಿ ಹಾಕುತ್ತಾನೆ. ಆದರೆ, ಆ ಕನಸು ನನಸು ಮಾಡಿಕೊಳ್ಳಲು ಆತ/ ಆಕೆ ಎಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ನನಗೆ ಮೊದಲಿನಿಂದಲೂ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಚಾರಗಳ ಮೇಲೆ ಒಲವಿತ್ತು. ಹಾಗಂತ ನಾನು ಪ್ರಯತ್ನವಿಲ್ಲದೆ ಬಂದಿಲ್ಲ. ಡಾನ್ಸ್ ಕಲಿತಿದ್ದೆ. ರಂಗಭೂಮಿಯಲ್ಲಿ ಪಾಲ್ಗೊಂಡು ಕನ್ನಡ, ಫ್ರೆಂಚ್ ಹಾಗೂ ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದ್ದೆ. ಇದರಿಂದ ಅಭಿನಯದ ಬಗ್ಗೆ ಪ್ರಾಥಮಿಕ ಜ್ಞಾನ, ಕೌಶಲ ದೊರಕಿತು. ಹಾಗೆಯೇ ಪ್ರತಿಭೆ ಮತ್ತಷ್ಟು ಗಟ್ಟಿಗೊಂಡಿತು. ಇದೇ ವೇಳೆ ಬಾಲಿವುಡ್ ಖ್ಯಾತ ನಟರಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶ್ಯಾಮಕ್ ಡಾವರ್ ಬೆಂಗಳೂರಿನಲ್ಲಿ ಡಾನ್ಸ್ ಕ್ಲಾಸ್ ಆರಂಭಿಸಿದ್ದರು. ಅಲ್ಲಿಗೆ ಸೇರಿಕೊಂಡೆ. ಅವರು ನನ್ನ ಡಾನ್ಸ್ ನೋಡಿ ಖುಷಿಯಾಗಿ, ‘ಸ್ಟೂಡೆಂಟ್ ಆಗಿ ಬೇಡ, ನೀವು ನಮ್ಮ ಅಕಾಡೆಮಿಯಲ್ಲಿ ಡಾನ್ಸರ್ ಆಗಿ ಕೆಲಸ ಮಾಡಿ’ ಎಂದು ಡಾನ್ಸ್ ಕ್ಲಾಸ್ ಸೇರಿದ ಮೂರು ತಿಂಗಳೊಳಗೆ ಅವರ ಕಂಪನಿಯಲ್ಲಿ ಕೆಲಸ ನೀಡಿದರು. ಮುಂದೆ ಅವರೊಂದಿಗೆ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿದೆ. ದೇಶ-ವಿದೇಶ ಹಾಗೂ ಬಾಲಿವುಡ್ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಡಾನ್ಸ್ ಶೋಗಳಲ್ಲಿ ಮಿಂಚಿದೆ.
ಆಸ್ಟ್ರೇಲಿಯಾದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟಗಳು ನಡೆದಿದ್ದವು. ಅದರ ಸಮಾರೋಪ ಸಮಾರಂಭದಲ್ಲಿ ನಾನು, ಶ್ಯಾಮಕ್ ಡಾವರ್ ಟೀಂ ಕಡೆಯಿಂದ ಡಾನ್ಸ್ ಪರ್ಫಾಮೆನ್ಸ್ ನೀಡಿದ್ದೆವು. ಇಂತಹ ಅನೇಕ ಸುಂದರ ಕ್ಷಣಗಳು ಬದುಕಿನಲ್ಲಿವೆ. ಇದೆಲ್ಲ ಸಾಧ್ಯವಾಗಿದ್ದು, ನನ್ನ ಸಿದ್ಧತೆ ಮತ್ತು ಬದ್ಧತೆಯಿಂದ. ಅವಕಾಶಗಳಿಗೆ ನಾವು ಕಾಯುತ್ತಿರುತ್ತೇವೆ, ಆದರೆ, ನಾವೆಷ್ಟು ಸಿದ್ಧತೆ ನಡೆಸುತ್ತಿದ್ದೇವೆ ಎಂಬುದು ಮುಖ್ಯ. ನನಗೆ ಇಷ್ಟು ಅವಕಾಶಗಳು ಸಿಕ್ಕಿದೆ ಎಂದರೆ, ಅದಕ್ಕೆ ನನ್ನ ಸಿದ್ಧತೆಯೊಂದೇ ಕಾರಣ.
ಕಲಾಸೇವೆಗೆ ಬಂದು 15 ವರ್ಷಗಳು ಸಂದಿವೆ. ಈ ಸಮಯದಲ್ಲಿ ಸ್ವಯಂ ಆಗಿ ಬೆಳೆದೆ ಎನ್ನುವುದಕ್ಕಿಂತ ನನ್ನನ್ನು ಬೆಳೆಸಿದರು ಎಂಬ ಭಾವ ನನ್ನದು. ಪ್ರತಿ ಹಂತದಲ್ಲಿ ನಮ್ಮ ಮನೆಯವರು, ಗುರುಗಳು, ಚಿತ್ರರಂಗದವರು ಅನೇಕರು ಪ್ರೋತ್ಸಾಹಿಸಿದ್ದಾರೆ. ಈ ಕ್ಷಣದಲ್ಲಿ ಕೆಲವರು ನೆನಪಾಗುತ್ತಾರೆ. ಅದರಲ್ಲಿ ಮೊದಲು ನಮ್ಮ ತಂದೆ. ಅವರ ಪ್ರೋತ್ಸಾಹ ಇಲ್ಲದಿದ್ದರೆ, ನಟನಾ ಕ್ಷೇತ್ರಕ್ಕೆ ಬರುತ್ತಿರಲಿಲ್ಲ. ಪಿಯು ಪರೀಕ್ಷೆಯ ಗಣಿತ ವಿಷಯದಲ್ಲಿ ಫೇಲಾಗಿದ್ದೆ. ಆ ಸಮಯದಲ್ಲಿ ಪಾಲಕರು ಮಕ್ಕಳ ವಿರುದ್ಧ ಸಿಟ್ಟಾಗುವುದು ಸಹಜ. ತಂದೆಯವರು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ ಆದರೂ, ವ್ಯಕ್ತಿತ್ವದಲ್ಲಿ ತುಂಬ ಮೃದು. ಫೇಲಾಗಿದ್ದಕ್ಕೆ ಸಿಟ್ಟಾಗದೆ, ಬೇಜಾರಾಗಿದ್ದ ನನ್ನನ್ನೇ ಅವರು ಸಮಾಧಾನಪಡಿಸಿದರು. ‘ನಿನಗೆ ಇಷ್ಟವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೋ’ ಎಂದರು. ನನಗೆ ಡಾನ್ಸ್, ನಟನೆ ಇಷ್ಟ ಅಂತ ಅವರಿಗೂ ಗೊತ್ತಿತ್ತು, ಹಾಗಾಗಿ, ‘ಆಕ್ಟಿಂಗ್ ಕ್ಷೇತ್ರ ಆಯ್ಕೆ ಮಾಡಿಕೋ’ ಎಂದು ಅವರೇ ಸಲಹೆ ನೀಡಿ ಹುರಿದುಂಬಿಸಿದರು. ತರುವಾಯ, ಫಿಲಂಗೆ ಸಂಬಂಧಿಸಿದ ಡಿಪ್ಲೋಮಾ ಕೋರ್ಸ್ ಆಯ್ಕೆ ಮಾಡಿಕೊಂಡೆ. ಇನ್ನು, ಶಾಲಾ ದಿನಗಳಲ್ಲಿ ವೇದಿಕೆ ಹತ್ತಲು ಅಂಜುತ್ತಿದ್ದೆ. ಆಗ ನನಗೆ ಪ್ರೇರೇಪಿಸಿದ್ದು ವೆಂಕಟೇಶ್ ಸರ್ ಅಂತ. ಶಾಲೆಯ ಚರ್ಚಾ ಸ್ಪರ್ಧೆಗೆ ನನ್ನ ಹೆಸರು ಕೊಟ್ಟು, ಮೊದಲ ಬಾರಿಗೆ ವೇದಿಕೆ ಹತ್ತಲು ಕಾರಣರಾದರು. ಅಲ್ಲಿ ಧೈರ್ಯದಿಂದ ಮಾತನಾಡಿದೆ. ಪ್ರಶಸ್ತಿಯೂ ಬಂತು. ಇನ್ನು, ಚಿತ್ರರಂಗದಲ್ಲಿ ನನ್ನನ್ನು ಬೆಳೆಸಿದವರು ಹಲವರು. ಕಿರುತೆರೆಗೆ ಪರಿಚಯವಾಗಲು ವಿಶಾಲ್ ರಾಜ್ ಎಂಬುವರು ಕಾರಣ. ಮುಂದೆ ಅವರಿಂದ ಸಿನಿಮಾರಂಗಕ್ಕೂ ಪರಿಚಯವಾದೆ. ಇವರೆಲ್ಲರೂ ನನ್ನ ಜೀವನದ ಟರ್ನಿಂಗ್ ಪಾಯಿಂಟ್ಗೆ ಕಾರಣವಾದವರು.
ಮುಂದೆ ಸಿನಿಮಾದಲ್ಲಿ ಇರುವಾಗಲೇ ಪಿ.ಎಚ್ಡಿ ಪದವಿ ಪಡೆದುಕೊಂಡೆ. ಪಿ.ಎಚ್ಡಿಗೆ ನೋಂದಾಯಿಸಿದಾಗ ‘ಹೀರೋಯಿನ್ ಆಗಿದ್ದು, ಪಿ.ಎಚ್ಡಿ. ಮಾಡ್ತೀರಾ?’ ಎಂಬ ಮಾತುಗಳನ್ನು ಕೇಳಿದ್ದೆ. ಇಂತಹ ಮಾತುಗಳಿಂದ ಸಣ್ಣ ಕೋಪ ಬಂದಿತ್ತು. ಮೊದಲು ಹೀರೋಯಿನ್ ಪಟ್ಟದಿಂದ ಹೊರಬಂದು, ಪಿ.ಎಚ್ಡಿ ಮಾಡಬೇಕು ಎಂದು ನಿರ್ಧರಿಸಿದೆ. ಅದರಂತೆ, ಸತತ 9 ವರ್ಷಗಳ ಕಾಲ ಪರಿಶ್ರಮ ಪಟ್ಟು, ‘ಸಿನಿಮಾ ಹಾಗೂ ಸಾಹಿತ್ಯ’ ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ, ಮುಂಬೈ ವಿಶ್ವವಿದ್ಯಾಲಯದಿಂದ ಪಿ.ಎಚ್ಡಿ ಪದವಿ ಪಡೆದೆ. ಈ ಪದವಿ ಪಡೆಯುವುದು ಅಪ್ಪನ ಕನಸು ಕೂಡ ಆಗಿತ್ತು. ಈ ಎಲ್ಲ ವಿಚಾರದಲ್ಲಿ ನಾನು ತುಂಬ ಬ್ಲೆಸ್ಡ್ ಅನಿಸುತ್ತದೆ. ದೇವರು ‘ಎಲ್ಲವೂ ನಿನಗೆ ಒಳ್ಳೆಯದಾಗುತ್ತದೆ’ ಎಂದು ಹೇಳಿಕಳಿಸಿದ್ದಂತಿದೆ. ಇಷ್ಟು ದಿನಗಳಲ್ಲಿ ಸಿನಿಮಾ ಬರಲಿಲ್ಲ ಅಥವಾ ಏನೋ ಒಂದು ಆಸೆ ಈಡೇರಲಿಲ್ಲ ಎಂದು ಇಂದಿಗೂ ನಾನು ಕೊರಗಿಲ್ಲ. ಬದಲಾಗಿ ಅದನ್ನೇ ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯದೆ, ನನಗಾಗಿ, ದೊಡ್ಡ ಅವಕಾಶ ಇದೆ ಎಂದು ಪಾಸಿಟಿವ್ ವೈಬ್ನಲ್ಲಿಯೇ ಮುಂದುವರಿಯುತ್ತಿದ್ದೇನೆ. ಇದೇ ಹಾದಿಯಲ್ಲಿ ನಾವೆಲ್ಲರೂ ಸಾಗೋಣ, ಬದುಕನ್ನು ಸಂಭ್ರಮಿಸೋಣ.
ನಿರೂಪಣೆ: ಶಿವ ಸ್ಥಾವರಮಠ