| ತುರುವೇಕೆರೆ ಪ್ರಸಾದ್
ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲನೆಗಾಗಿ ಪತ್ನಿ ಸೀತಾಮಾತೆ ಹಾಗೂ ಸೋದರ ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೋದಾಗ ಭರತ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಭಾರ ಮಾಡಲು ಒಪ್ಪಿದ. ಶ್ರೀರಾಮನ ಪಾದುಕೆಗಳನ್ನು ಪಡೆದ ಭರತ ಅಣ್ಣನಿಗೆ, ‘ಇದು ನೀನು ನನ್ನಲ್ಲಿ ನ್ಯಾಸಕ್ಕಿಟ್ಟ ವಸ್ತು. ಇದನ್ನು ನನ್ನ ಕಣ್ಣುರೆಪ್ಪೆಯಲ್ಲಿ ಕಾಯುವುದಷ್ಟೇ ನನ್ನ ಕೆಲಸ, ಈ ರಾಜ್ಯದ ಮೇಲೆ ನನಗಾವ ಹಕ್ಕೂ ಇಲ್ಲ’ ಎಂದು ಸ್ಪಷ್ಟಪಡಿಸಿ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಅವನ ಪರವಾಗಿ ರಾಜ್ಯವಾಳಿದ. ಶ್ರೀರಾಮನು ರಾವಣ ಸಂಹಾರ ಮಾಡಿ ಹಿಂದಿರುಗಿದ ಕೂಡಲೇ ಕಾತರದಿಂದ ಕಾದಿದ್ದ ಭರತ ಅವನಿಗೆ ಮನಃಪೂರ್ವಕವಾಗಿ ರಾಜ್ಯವನ್ನು ಹಿಂದಿರುಗಿಸಿ ತನ್ನ ಹೊಣೆಯಿಂದ ಮುಕ್ತನಾದ.
ಪ್ರಸಿದ್ಧ ಕೈಗಾರಿಕೋದ್ಯಮಿ ಘನಶ್ಯಾಮದಾಸ್ ಬಿರ್ಲಾ ಪುತ್ರ ವಸಂತಕುಮಾರ್ ಬಿರ್ಲಾರಿಗೆ ಪತ್ರ ಬರೆಯುತ್ತಾರೆ. ‘ನೀನು ಹೆಚ್ಚು ಸಂಪತ್ತು, ಅಧಿಕಾರ ಪಡೆದಿದ್ದೀಯೆಂದರೆ ಅದು ಕೇವಲ ಆಕಸ್ಮಿಕ. ಈ ಸಂಪತ್ತನ್ನು ಸಾಮಾನ್ಯ ಜನರ ಪರವಾಗಿ ಹೊಂದಿರುವೆ. ನೀನು ಈ ಸಂಪತ್ತನ್ನು ಕಾಯಬೇಕಾದ ಟ್ರಸ್ಟಿ ಅಷ್ಟೇ. ಅದನ್ನು ಸೇವೆಗಾಗಿ ಬಳಸದಿದ್ದರೆ ಅದು ಪೈಶಾಚಿಕ ಆಯುಧವಾಗುತ್ತದೆ. ಸಂಪತ್ತನ್ನು ಕ್ಷಣಿಕ ಸುಖ, ಸಂತೋಷಕ್ಕೆ ಬಳಸಬೇಡ. ನಿನಗಾಗಿ ಅತಿ ಕಡಿಮೆ ಬಳಸಿ ಉಳಿದೆಲ್ಲ ಸಂಪತ್ತನ್ನು ಬಡವರ ದುಃಖ ನಿವಾರಣೆಗಾಗಿ ಬಳಸು’ ಎಂದು ಎಚ್ಚರಿಸುತ್ತಾರೆ.
ನಮ್ಮ ವ್ಯವಸ್ಥೆಯಲ್ಲೂ ಅಷ್ಟೇ. ಎಲ್ಲ ನ್ಯಾಸಕ್ಕಿಟ್ಟ ವಸ್ತುಗಳೇ! ಅಧಿಕಾರ, ಸಂಪತ್ತು, ಪದವಿ, ಪ್ರತಿಷ್ಠೆ ಎಲ್ಲವೂ ಬೇರೊಬ್ಬರು ನಮಗೆ ನೀಡಿದ ಜವಾಬ್ದಾರಿಗಳು. ಅವನ್ನು ನಾವು ನಿರ್ವಂಚನೆ, ದಕ್ಷತೆ, ಪ್ರಾಮಾಣಿಕತೆಯಿಂದ ಕಾಪಾಡಿ ವಾಪಸ್ ಹಿಂದಿರುಗಿಸಬೇಕಾದ್ದೇ! ಅವೆಲ್ಲ ನಮ್ಮದೆಂಬುದು ಕೇವಲ ನಮ್ಮ ಭ್ರಮೆ. ಅವ್ಯಾವವೂ ನಮ್ಮದಲ್ಲ. ಅವೆಲ್ಲ ನಮ್ಮ ದೇಹ, ಮನಸ್ಸಿನ ಅಲಂಕಾರಗಳು. ಎಂದಾದರೊಮ್ಮೆ ಅವನ್ನು ಕಳಚಿ ನಾವು ಪವಿತ್ರಾತ್ಮದೊಂದಿಗೆ ನಿಲ್ಲಲೇಬೇಕು. ಆಗ ನಮ್ಮ ಸ್ಥಾನದ ನಿಷ್ಕರ್ಷೆಯಾಗುವುದು ಅಧಿಕಾರ, ಸಂಪತ್ತಿನಿಂದಲ್ಲ, ನಮ್ಮ ಪಾಪ-ಪುಣ್ಯಗಳಿಂದ! ನಾವು ಇವನ್ನೆಲ್ಲ ವಾಪಸ್ ಮಾಡಬೇಕಾದ್ದು ನಮ್ಮ ಪೀಳಿಗೆಗೆ! ಆ ಪೀಳಿಗೆಗೂ ಈ ಸಂಪತ್ತು ಎನ್ನುವುದು ನ್ಯಾಸವಾಗಿಟ್ಟ ವಸ್ತು ಎಂಬ ಅರಿವಿರಬೇಕು.
ಮಹಾಭಾರತದ ಪ್ರಸಂಗ. ಏಕಚಕ್ರನಗರಿಯ ಬ್ರಾಹ್ಮಣನೊಬ್ಬ ತನ್ನ ಮಗಳನ್ನು ರಾಕ್ಷಸನಿಗೆ ಆಹಾರವಾಗಿ ಕಳಿಸಬೇಕಾದ ಸಂದರ್ಭದಲ್ಲಿ ಹೀಗೆ ಹೇಳುತ್ತಾನೆ: ‘ಇನ್ನೂ ವಯಸ್ಸಿಗೆ ಬಾರದ, ಪ್ರಪಂಚಜ್ಞಾನವಿಲ್ಲದ, ಯೌವ್ವನದ ಗುರುತುಗಳು ಮೂಡದ ನನ್ನ ಮಗಳನ್ನು ನಾನು ಹೇಗೆ ರಾಕ್ಷಸನಿಗೆ ಆಹಾರವಾಗಿ ನೀಡಲಿ? ಈ ಹೆಣ್ಣುಮಗಳು ಮಹಾತ್ಮನಾದ ಬ್ರಹ್ಮನು ನನ್ನಲ್ಲಿ ನ್ಯಾಸವಾಗಿಟ್ಟ ಜೀವ, ಇವಳನ್ನು ಕಾಪಾಡಬೇಕಾದ್ದು ನನ್ನ ಕರ್ತವ್ಯ’. ಅಧಿಕಾರ, ಸಂಪತ್ತು ಮಾತ್ರವಲ್ಲ, ಪ್ರತಿ ಜೀವಿಯೂ ಪರಸ್ಪರ ಒಂದನ್ನೊಂದು ಕಾಪಾಡಬೇಕಾದ ಈ ಸೃಷ್ಟಿಯ ಸಹಜ ಒಪ್ಪಂದವೊಂದಕ್ಕೆ ಬದ್ಧವಾಗಿವೆ. ಆ ಜೀವಗಳೂ ಭಗವಂತ ನಮ್ಮಲ್ಲಿ ನ್ಯಾಸಕ್ಕಿಟ್ಟವುಗಳೇ! ಈ ಋಣ ಸಂದಾಯದ ಅರಿವು ಇದ್ದಾಗಷ್ಟೇ ನಾವು ಕೃತಕೃತ್ಯರಾಗಲು ಸಾಧ್ಯ. ಅಲ್ಲವೇ?
(ಲೇಖಕರು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)