ಅದು 1955ರ ಕಾಲಘಟ್ಟ. ಆಗಿನ್ನೂ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಕಲಬುರಗಿಯ (ಗುಲ್ಬರ್ಗಾ) ಮಾತಂಗ ಮಾದಿಗರ ಕುಲದಲ್ಲಿ ಎಂಟು ಮಕ್ಕಳಲ್ಲಿ ಹಿರಿಯವಳಾಗಿ ಹುಟ್ಟಿದ್ದೆ. ಚಪ್ಪಲಿ ಹೊಲೆಯುವುದು ಕುಲಕಸುಬಾಗಿತ್ತು. ಮನೆಯಲ್ಲಿ ಬಡತನ ಗಾಢವಾಗಿತ್ತು. ಎಷ್ಟೋ ದಿನಗಳ ಕಾಲ ಊಟಕ್ಕೂ ತತ್ವಾರ. ತಂದೆ ಬಾಬೂರಾವ್ ಅವರಿಗೆ ಎಂಎಸ್ಕೆ ಮಿಲ್ನಲ್ಲಿ ಸಣ್ಣ ಉದ್ಯೋಗ. ತಾಯಿ ರತ್ನಮ್ಮ ತರಕಾರಿ ಮಾರುತ್ತಿದ್ದರು. ಬಾಲ್ಯದಲ್ಲಿ ನಾನೂ ಅವ್ವನ ಜತೆ ತರಕಾರಿ ಮಾರಾಟ ಮಾಡಲು ಹೋಗುತ್ತಿದ್ದೆ. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಅರಿವು ಅಷ್ಟೊಂದು ಇರದಿದ್ದ ಕಾಲಘಟ್ಟವದು. ಅಷ್ಟೇ ಅಲ್ಲ, ಹೆಣ್ಣುಮಕ್ಕಳು ಶಾಲೆಯ ಮೆಟ್ಟಲು ಹತ್ತುವುದೇ ವಿರಳವಾಗಿದ್ದ ಕಾಲವದು. ಹಾಗಂತ, ಜೀವನದಲ್ಲಿ ಕನಸು ಕಾಣುವುದನ್ನು, ಪ್ರಯತ್ನ ಪಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಜೀವನದ ಪಯಣದಲ್ಲಿ ಕಷ್ಟಕಾರ್ಪಣ್ಯಗಳು ಸಹಜ. ಅವುಗಳಿಗೆ ಹೆದರಿ ಹಿಂದಡಿ ಇಟ್ಟರೆ, ಬದುಕಿನಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಬಡತನದ ಮಧ್ಯದಲ್ಲೇ ಶಿಕ್ಷಣ ಪಡೆದೆ. ‘ಮುಂದೇನಾಗುತ್ತಿ?’ ಎಂದು ಕೇಳಿದರೆ ‘ಡಾಕ್ಟರ್’ ಎಂದು ಉತ್ತರಿಸುತ್ತಿದ್ದೆ. ಜನರು ನಕ್ಕು ಸುಮ್ಮನಾಗುತ್ತಿದ್ದರು. ವೈದ್ಯೆಯಾಗುವ ಸಂಕಲ್ಪ ದೃಢವಾಗಿತ್ತು, ಭಗವಾನ್ ಶ್ರೀಕೃಷ್ಣ ಅಂಥ ಮನೋಬಲವನ್ನೂ ನೀಡಿದ. ಹುಬ್ಬಳ್ಳಿಯ ಮೆಡಿಕಲ್ ಕಾಲೇಜ್ನಲ್ಲಿ ಸೀಟು ಸಿಕ್ಕಿತಾದರೂ, ಫೀಸು ತುಂಬಲು ದುಡ್ಡಿರಲಿಲ್ಲ. ಎಲ್ಲೂ ಹಣ ಹೊಂದಿಸಲು ಸಾಧ್ಯವಾಗದಿದ್ದಾಗ ಕೊನೆಗೆ ಗತ್ಯಂತರವಿಲ್ಲದೆ ತಾಯಿ ರತ್ನಮ್ಮ ಅಮಾವಾಸ್ಯೆಯ ರಾತ್ರಿಯಲ್ಲಿ ಮಾಂಗಲ್ಯಸರವನ್ನು ತೆಗೆದು, ಅಡವಿಡಲು ಕೊಟ್ಟರು. ಅದರಿಂದ ಬಂದ ಹಣದಲ್ಲಿ ಎಂಬಿಬಿಎಸ್ ಪ್ರವೇಶವಾಯಿತು. ಇಂಥ ತಾಯಂದಿರ ತ್ಯಾಗದಿಂದಲೇ ಸಮಾಜ ಸದೃಢವಾಗಿ ಸುಪಥದಲ್ಲಿ ನಡೆಯುತ್ತಿದೆ. ಸಂಕಷ್ಟಗಳು ಬಂದಾಗಲೆಲ್ಲ ನಮ್ಮ ತಾಯಂದಿರು ಪರಿಹಾರದ ಯಾವುದಾದರೂ ಒಂದು ಮಾರ್ಗವನ್ನು ಹುಡುಕಿಯೇ ಹುಡುಕುತ್ತಾರೆ. ಈ ಕಷ್ಟವನ್ನು ಕಣ್ಣಾರೆ ನೋಡಿದ್ದರಿಂದ ಹುಬ್ಬಳ್ಳಿಯಲ್ಲಿ ಎಂಬಿಬಿಎಸ್ ಪ್ರವೇಶ ಪಡೆದ ಮೇಲೂ ಒಂದೊಂದು ರೂಪಾಯಿಯನ್ನೂ ನೂರಲ್ಲ, ಸಾವಿರ ಬಾರಿ ಯೋಚಿಸಿ ಖರ್ಚು ಮಾಡಬೇಕಾದ ಸ್ಥಿತಿ ಇತ್ತು. ಮೊದಲನೇ ವರ್ಷದ ಎಂಬಿಬಿಎಸ್ನಲ್ಲಿ ಫೇಲ್ ಆದಾಗ ಧೃತಿಗೆಟ್ಟಿದ್ದೆ. ಆದರೆ, ಮಗಳು ವೈದ್ಯೆಯಾಗಬೇಕು ಎಂಬ ತಂದೆಯ ಕನಸು ಮತ್ತೆ ಕಣ್ಣೆದುರಿಗೆ ಬಂತು. ದುಃಖವನ್ನು ಮರೆತು, ಓದಿನತ್ತ ಗಮನ ಹರಿಸಿದೆ. ಮುಂದೆ ಒಳ್ಳೆಯ, ಬುದ್ಧಿವಂತ ಗೆಳತಿಯರ ಒಡನಾಟವು ಓದಿನ ಉತ್ಸಾಹವನ್ನು ಹೆಚ್ಚಿಸಿತು. ಹಾಗಾಗಿ, ಎಂಬಿಬಿಎಸ್ ಎರಡನೇ ವರ್ಷದಿಂದ ಕೊನೆಯ ವರ್ಷದವರೆಗೆ ಆತ್ಮವಿಶ್ವಾಸವೇ ಗೆಲುವು ದೊರಕಿಸಿತು. ಮುಂದೆ ಬಳ್ಳಾರಿಯಲ್ಲಿ ಎಂ.ಎಸ್. (ಜನರಲ್ ಸರ್ಜರಿ) ಮಾಡಲು ಸಾಧ್ಯವಾಯಿತು.
ಆಸ್ಪತ್ರೆಯ ಮೆಟ್ಟಿಲೇರುವಾಗ, ‘ನಾನು ಕಾರ್ವಿುಕನ ಮಗಳು. ಇನ್ನು ಮುಂದೆ ನಾನೂ ಕಾರ್ವಿುಕರ ತರಹ ಕಾಲಮಿತಿಯ ಪರಿವೆಯಿಲ್ಲದೆ ದುಡಿಯಲು ಸಿದ್ಧವಾಗಿ ಇರಬೇಕು’ ಎಂದು ಸಂಕಲ್ಪಿಸಿದೆ. ಹಿರಿಯ ವೈದ್ಯರ ಮಾರ್ಗದರ್ಶನದಂತೆ ಶಸ್ತ್ರಚಿಕಿತ್ಸೆಗಳನ್ನು ಮಾಡಲು ತೊಡಗಿದೆ. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೊರಡುವಾಗ ರೋಗಿಯ ಮುಖದಲ್ಲಿ ಮೂಡುವ ಮಂದಹಾಸ ಜಗತ್ತಿನಲ್ಲಿ ಮತ್ತೆಲ್ಲೂ ಸಿಗುವುದಿಲ್ಲ.
ಹೀಗೆ ಕುಟುಂಬದವರ ಸಹಕಾರ, ತಾಯ್ತಂದೆಯ ಸಂಕಲ್ಪದಿಂದ ವೈದ್ಯೆಯಾಗಿ, ಕಿದ್ವಾಯಿಯಂಥ ಪ್ರತಿಷ್ಠಿತ ಸಂಸ್ಥೆಯಲ್ಲಿ ಸರ್ಜನ್ ಆಗಿ, ಪ್ರಭಾರ ನಿರ್ದೇಶಕಿಯಾಗಿ ಸೇವೆ ಸಲ್ಲಿಸುವ ಅವಕಾಶ ಪ್ರಾಪ್ತವಾಯಿತು. ಹಾಗಂತ, ಕಲಬುರಗಿಯ ಕೊಳೆಗೇರಿಯ ಬಾಲಕಿಯೊಬ್ಬಳು ಈ ಹಂತದವರೆಗೆ ಸಾಗಿ ಬರುವ ದಾರಿ ಸುಲಭವೇನೂ ಇರಲಿಲ್ಲ. ಆದರೆ, ಪ್ರಬಲ ಇಚ್ಛಾಶಕ್ತಿ ಆ ಸವಾಲುಗಳನ್ನು ಸೋಲಿಸಿ, ಮುಂದಿನ ದಾರಿಯನ್ನು ಸುಗಮಗೊಳಿಸಿತು. ಕೊರತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಂದುಕೊಂಡಿದ್ದನ್ನು ಸಾಧಿಸಿದಾಗ ಸಿಗುವ ಸಂತೃಪ್ತಿ ನಿಜಕ್ಕೂ ಅಸಾಧಾರಣ.
28ನೇ ವಯಸ್ಸಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇರ್ಪಡೆಯಾದೆ. ಆಸ್ಪತ್ರೆಯೇ ದೇವಸ್ಥಾನ, ರೋಗಿಗಳೇ ದೇವರು ಎಂಬ ಶ್ರದ್ಧೆಯ ಭಾವದಿಂದ ಕಾರ್ಯನಿರ್ವಹಿಸಿದೆ. ಹೊರಗಿನ ಯಾವುದೇ ಜಂಜಾಟಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಮುಂಬೈಯ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪಡೆದ ತರಬೇತಿ ಸಾಕಷ್ಟು ಅನುಭವ ನೀಡಿತು. ಕಿದ್ವಾಯಿಯ ವೃತ್ತಿಜೀವನವಂತೂ ತುಂಬ ಸುಂಗತಿಗಳನ್ನು ಕಲಿಸಿಕೊಟ್ಟಿತು. ಹಿರಿಯ ವೈದ್ಯರ ಸಮರ್ಪಣೆ, ಶ್ರದ್ಧೆ ನನಗೆ ಪ್ರೇರಣೆ ಒದಗಿಸಿತು. ರೋಗಿಗಳ ಬದುಕು, ಕ್ಯಾನ್ಸರ್ ರೋಗಿಗಳ ಯಾತನೆ, ಅವರ ಅಸಹಾಯಕತೆ ಜೀವನದರ್ಶನ ಮಾಡಿಸಿತು. ಬದುಕು ಎಷ್ಟು ಕ್ಷಣಿಕ ಎಂಬ ಭಾವ ಮತ್ತೆ ಮತ್ತೆ ಕಾಡಿತು. ವೈದ್ಯರಿಗೆ ಒಂದೊಂದು ಸರ್ಜರಿಯೂ ಅಗ್ನಿಪರೀಕ್ಷೆಯೇ. ಕ್ಯಾನ್ಸರ್ ರೋಗವನ್ನು ಮೊದಲ ಹಂತ, ಎರಡನೆಯ ಹಂತ, ಈಗ ಮೂರನೆಯ ಹಂತದಲ್ಲೂ ಗುಣಪಡಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಹೆದರಬಾರದು. ಮಾನಸಿಕ ಸ್ಥೈರ್ಯ ಬಲವಾಗಿ ಇರಬೇಕು. ಬಡರೋಗಿಗಳು ಬರುತ್ತಿದ್ದರು. ಒಬ್ಬೊಬ್ಬರ ಮನೆಗಳ ಕಥೆಗಳು ಒಂದೊಂದು ಬಗೆ. ರೋಗಿಗಳ ಅವಸ್ಥೆ ಒಂದು ಬಗೆಯಾದರೆ, ಅವರ ಜತೆಗಿನ ಸಂಬಂಧಿಕರ ಸ್ಥಿತಿ ಇನ್ನೊಂದು ಬಗೆಯದ್ದು. ಕೆಲವೊಮ್ಮೆ ರೋಗಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ನನ್ನ ಊಟದ ಡಬ್ಬಿ ನೀಡುತ್ತಿದ್ದೆ. ಒಬ್ಬ ಮಹಿಳಾ ರೋಗಿಯ ಮಕ್ಕಳು ವಿದೇಶದಲ್ಲಿ ಇದ್ದರು, ಗಂಡ ತೀರಿಕೊಂಡಿದ್ದರು. ಆ ಮಹಿಳೆಗೆ ಶಸ್ತ್ರಚಿಕಿತ್ಸೆಯ ನಂತರ ಆಹಾರ ಕೊಡಲು ಕುಟುಂಬದ ಸದಸ್ಯರು ಯಾರೂ ಇರಲಿಲ್ಲ. ಆಗ ಒಂದಿಷ್ಟು ಹಣ್ಣುಗಳನ್ನು ತಂದು ಕೊಡುತ್ತಿದ್ದೆ. ಕರುಣಾಶ್ರಯದ ಸ್ವಯಂಸೇವಕರು ತಿಂಡಿ ಕೊಟ್ಟರು. ಇದೆಲ್ಲ ರೂಢಿಯಾಗಿಬಿಟ್ಟಿತ್ತು. ಅಲ್ಲದೆ, ಹಸಿವು, ಉಪವಾಸ ನನಗೆ ಬಾಲ್ಯದಿಂದಲೇ ಅಭ್ಯಾಸವಾಗಿತ್ತು. ಆ ರೋಗಿಗಳ ಮತ್ತು ಅವರ ಕುಟುಂಬ ಸದಸ್ಯರ ಕಷ್ಟಗಳ ಮುಂದೆ ನಮ್ಮದೆಲ್ಲ ನಗಣ್ಯ. ಬದಲಾಗಿ, ಅವರ ಸೇವೆ ಮಾಡುವ ಅವಕಾಶ, ಅವರನ್ನು ಗುಣಮುಖರನ್ನಾಗಿಸುವ ಅವಕಾಶ ಆ ಶ್ರೀಕೃಷ್ಣ ನೀಡಿದ್ದಾನಲ್ಲ ಎಂಬ ಸಂತೃಪ್ತಿ ನನಗಿದೆ.
ರೋಗಿಗಳ ಹಾಗೂ ಅವರ ಕುಟುಂಬ ಸದಸ್ಯರ ಜತೆ ಸಮಾಲೋಚನೆ, ಚಿಕಿತ್ಸಾ ವಿಧಾನದ ಬಗ್ಗೆ ತಿಳಿವಳಿಕೆ ನೀಡುವುದು, ಸರ್ಜರಿ, ಇತರ ಕ್ಲಿನಿಕಲ್ ಕೆಲಸ, ವೈದ್ಯರಿಗೆ ತರಬೇತಿ ಪಾಠ ಹೀಗೆ ದಿನವಿಡೀ ಚಟುವಟಿಕೆಗಳು ಇದ್ದರೂ ಮನಸ್ಸಿನಲ್ಲಿ ಅಧ್ಯಾತ್ಮದ ಭಾವ ಜಾಗೃತವಾಗಿತ್ತು. 2015ರಲ್ಲಿ ಕಿದ್ವಾಯಿಯಿಂದ ನಿವೃತ್ತಿಯಾದರೂ ಜನಸೇವೆ ಮುಂದುವರಿಸಲು ಸಂಕಲ್ಪಿಸಿದೆ. ಸಮಾಜ ನಮಗೆ ಇಷ್ಟೆಲ್ಲ ಕೊಟ್ಟಿದೆ, ನಮ್ಮಿಂದ ಸಾಧ್ಯವಾದಷ್ಟು ಸಮಾಜದ ಋಣ ತೀರಿಸಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು. ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳಲ್ಲಿ, ಉಪನ್ಯಾಸಗಳಲ್ಲಿ ತೊಡಗಿಸಿಕೊಂಡೆ. 2016ರಲ್ಲಿ ತಮ್ಮನ (ಅಜಯ್) ಅಗಲುವಿಕೆ ತೀವ್ರ ದುಃಖ ತಂದಿತು. ಆ ಘಟನೆ ನಡೆದ ಸ್ವಲ್ಪ ಸಮಯದಲ್ಲೇ ನನಗೆ ಹೃದಯಾಘಾತ ಸಂಭವಿಸಿದ್ದರಿಂದ ಅನಿವಾರ್ಯವಾಗಿ ಎಲ್ಲ ಚಟುವಟಿಕೆ ರದ್ದುಪಡಿಸಿ, ಒಂದಿಷ್ಟು ದಿನ ವಿಶ್ರಾಂತಿ ಪಡೆಯಬೇಕಾಯಿತು. ಬಳಿಕ ಚೇತರಿಸಿಕೊಂಡು, 2021ರಿಂದ ಬೆಂಗಳೂರು ಬಸವನಗುಡಿಯ ಅಬಲಾಶ್ರಮವನ್ನೇ ವಾಸಸ್ಥಾನ ಮತ್ತು ಕಾರ್ಯಸ್ಥಳವನ್ನಾಗಿ ಮಾಡಿಕೊಂಡೆ. ಬಾಲ್ಯದಿಂದಲೂ ಶ್ರೀಕೃಷ್ಣನ ಭಕ್ತೆಯಾದ ನನಗೆ ಕೃಷ್ಣನಿಗೆ ಭಕ್ತಿ ಅರ್ಪಿಸಲು ಏನಾದರೂ ಮಾಡಬೇಕು ಎಂಬ ಇಚ್ಛೆ ಇತ್ತು. ಅಲ್ಲದೆ, ಶ್ರದ್ಧೆ ಹಾಗೂ ಭಕ್ತಿಯಿಂದ ಒಂದು ಒಳ್ಳೆಯ ಕಾರ್ಯವನ್ನು ಮಾಡಬೇಕೆಂದು ಸಂಕಲ್ಪಿಸಿಕೊಂಡು, ಪ್ರಾರ್ಥನೆ ಮಾಡಿದರೆ, ಭಗವಂತ ಖಂಡಿತವಾಗಿಯೂ ಕಾರ್ಯವನ್ನು ನೆರವೇರಿಸಿ ಕೊಡುತ್ತಾನೆ. ಜೀವನದಲ್ಲಿ ಹಲವಾರು ಇಂತಹ ಸಂಕಲ್ಪಗಳು ಕೈಗೂಡಿರುವ ನಿದರ್ಶನಗಳು ನನ್ನ ನಂಬಿಕೆಯನ್ನು ಗಟ್ಟಿಗೊಳಿಸಿವೆ, ಹಾಗಾಗಿ, ಎಲ್ಲರ ಸಹಕಾರದಿಂದ ಬೆಂಗಳೂರಿನ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿ ಶ್ರೀಕೃಷ್ಣ ಮಂದಿರ ಸ್ಥಾಪಿಸಲು ಸಾಧ್ಯವಾಗಿದೆ. ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಹಿಂದು ಸೇವಾ ಪ್ರತಿಷ್ಠಾನ, ವಿಶ್ವ ಹಿಂದು ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಹೀಗೆ ಹಲವು ಸಂಘಟನೆಗಳ ಮೂಲಕ ನನ್ನಿಂದ ಸಾಧ್ಯವಾದಷ್ಟು ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ.
ಉಪಕಾರ ಮಾಡುತ್ತ ಹೋಗಬೇಕು, ಅದರ ಆನಂದ ಪಡೆಯುತ್ತ ಹೋಗಬೇಕು ಅಷ್ಟೇ. ಇತ್ತೀಚಿನ ಯುವಕರು ಕಷ್ಟ, ಸಮಸ್ಯೆಗಳಿಗೆ ಹೆದರಿ, ತುಂಬ ಬೇಗ ಹತಾಶರಾಗುತ್ತಾರೆ. ಆದರೆ, ಜೀವನದಲ್ಲಿ ಸೋಲುಗಳು ಇರುವಂತೆ, ಖುಷಿಯ ಅಚ್ಚರಿಗಳೂ ಇರುತ್ತವೆ. ತಾಳ್ಮೆ ಮತ್ತು ಛಲದಿಂದ ಮುಂದೆ ಸಾಗಬೇಕಷ್ಟೇ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ಅವರಿಂದ ಪದ್ಮಶ್ರೀ ಗೌರವವನ್ನು ಸ್ವೀಕರಿಸಿದಾಗ ಧನ್ಯತೆಯ ಭಾವ ಆವರಿಸಿತು. ಕಲಬುರಗಿಯಿಂದ ರಾಷ್ಟ್ರಪತಿ ಭವನದವರೆಗಿನ ಪಯಣ ಬೆರಗುಗೊಳಿಸಿತು. ನನ್ನಂಥ ಸಾಮಾನ್ಯ ಮಹಿಳೆ ಕಷ್ಟ, ಛಲದಿಂದ ಎದ್ದು ಬಂದು ಇಷ್ಟೆಲ್ಲ ಮಾಡಲು ಸಾಧ್ಯವಿದೆ ಎಂದರೆ ಅದು ಇತರರಿಗೂ ಖಂಡಿತ ಸಾಧ್ಯವಿದೆ. ಅವಕಾಶಗಳು ಬಂದಿಲ್ಲ ಅಥವಾ ಕಷ್ಟಗಳು ಅವಕಾಶ ಕಸಿದುಕೊಂಡವು ಎಂದು ಚಿಂತಿತರಾಗಬೇಡಿ. ಅವಕಾಶಗಳನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಅಂಥ ಮನೋಬಲ, ಆತ್ಮಬಲವನ್ನು ಭಗವಂತ ಖಂಡಿತವಾಗಿಯೂ ಒದಗಿಸುತ್ತಾನೆ. ಕೊನೆಗೊಂದು ಮಾತು- ಇದ್ಯಾವುದೂ ಬರೀ ನನ್ನ ಸಾಧನೆಯಲ್ಲ. ಕಾಲಕಾಲಕ್ಕೆ ಹುರಿದುಂಬಿಸುವವರು, ಪ್ರೋತ್ಸಾಹ ಮಾಡುವವರು, ಸಹಾಯ ಮಾಡುವವರು ಸಿಕ್ಕರು. ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದೆಯೂ ಸಮಾಜದ ಒಳಿತಿಗೆ ಕೆಲಸ ಮಾಡುವ ಶಕ್ತಿ ನೀಡು ಎಂಬುದಷ್ಟೇ ಶ್ರೀಕೃಷ್ಣನಲ್ಲಿ ಪ್ರಾರ್ಥನೆ. ಯಶಸ್ಸು, ಸಂಪತ್ತು ಇದೆಲ್ಲವೂ ಜೀವನದ ಭಾಗಗಳು. ಯುವಸಮೂಹ ಮಾನವೀಯ ಮೌಲ್ಯ, ಕಾಳಜಿಯನ್ನೇ ಜೀವಾಳವಾಗಿಸಿಕೊಂಡಲ್ಲಿ ಸೇವೆಯ ಮತ್ತಷ್ಟು ಸುಂದರ ಪುಷ್ಪಗಳು ಭಾರತ ಮಾತೆಯ ಸೇವೆಗೆ ಸಮರ್ಪಣೆ ಆಗಬಲ್ಲವು. ಅಂಥ ಸಾರ್ಥಕ ಬದುಕು ನಮ್ಮೆಲ್ಲರದೂ ಆಗಲಿ.
ನಿರೂಪಣೆ: ರವೀಂದ್ರ ಎಸ್. ದೇಶಮುಖ್