ಅಂಕಣ

ನಿಮಗೆ ತಿಳಿದಿರಲಿ- ಪ್ರಾಣಿ ಸಂಕುಲಕ್ಕೂ ಅವುಗಳದ್ದೇ ಆದ ಕಾರಿಡಾರ್​ಗಳಿವೆ....

lakshmihegde
ಕರೊನಾ ವೈರಸ್ ಜಗತ್ತಿನಾದ್ಯಂತ ಆವರಿಸಿಕೊಂಡಿದೆ. ಎಲ್ಲರ ಜೀವನವನ್ನೂ ಪ್ರಭಾವಿಸಿದೆ. ಅಮೆರಿಕದ ಎಂಟು, ಹತ್ತು ಲೈನಿನ ದೊಡ್ಡ ದೊಡ್ಡ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಚೀನಾ, ಲಂಡನ್, ಇಟಲಿ, ಭಾರತದಲ್ಲಿ ಸ್ಥಿತಿ ಇದಕ್ಕಿಂತ ಹೊರತೇನಲ್ಲ. ಹೆಚ್ಚು ಸಂಚಾರದಟ್ಟಣೆ ಇರುತ್ತಿದ್ದ ಪ್ರದೇಶಗಳಲ್ಲಿಯೂ ವಾಹನ ಸಂಚಾರ ವಿರಳವಾಗಿದೆ. ಆದರೆ, ಆರ್ಥಿಕತೆಗೆ ಹೆಚ್ಚು ಶಕ್ತಿ ತುಂಬಿರುವುದು ಈ ರಸ್ತೆ ಮತ್ತು ಹೆದ್ದಾರಿಗಳೇ ಎಂಬುದನ್ನು ಮರೆಯುವಂತಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಜಾರಿಗೆ ತಂದ ಸುವರ್ಣ ಚತುಷ್ಪಥ ಯೋಜನೆ ಹೇಗೆ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಯಿತು ಎಂಬುದು ಗೊತ್ತಿರುವಂಥದ್ದೇ.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಕೆಲ ರಸ್ತೆ ಸಂಪರ್ಕ ಜಾಲಗಳನ್ನು ನಿರ್ವಿುಸಿದ್ದರು. ಆದರೆ, ಸ್ವಾತಂತ್ರ್ಯದ ಬಳಿಕ ನೆಹರು ಅಥವಾ ಇಂದಿರಾ ಗಾಂಧಿ ಸರ್ಕಾರವಾಗಲಿ ರಸ್ತೆನಿರ್ವಣದ ದೊಡ್ಡ ಯೋಜನೆಗಳಿಗೆ ಹೆಚ್ಚು ಒತ್ತು ಕೊಡಲಿಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರು ಅಭಿವೃದ್ಧಿಯ ಹಲವು ಕನಸುಗಳನ್ನು ಕಂಡು, ಆ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದರು. ಈ ಪೈಕಿ ‘ಸುವರ್ಣ ಚತುಷ್ಪಥ ರಸ್ತೆ’ ಯೋಜನೆ ಮುಖ್ಯವಾದದ್ದು. ಇದು ಭಾರತದ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದೆ. ಮೇಜರ್ ಬಿ.ಸಿ. ಖಂಡೂರಿ ಆಗ ಹೆದ್ದಾರಿ ಅಭಿವೃದ್ಧಿ ಮಂತ್ರಿಯಾಗಿದ್ದರು. ಸುವರ್ಣ ಚತುಷ್ಪಥ ಯೋಜನೆಗೆ ಮಂತ್ರಿಗಳ ರಾಷ್ಟ್ರೀಯ ಟಾಸ್ಕ್​ಫೋರ್ಸ್ ರೂಪಿಸಲಾಗಿತ್ತು. ಅನಂತಕುಮಾರ್ ಈ ಟಾಸ್ಕ್​ಫೋರ್ಸ್​ನ ಸದಸ್ಯರಾಗಿದ್ದರು ಮತ್ತು ಈ ಯೋಜನೆಯಲ್ಲಿ ಕರ್ನಾಟಕಕ್ಕೆ ಸಣ್ಣ ಪಾಲು ದೊರೆಯುತ್ತಿದ್ದದ್ದನ್ನು ಗಮನಿಸಿದರು. ಆ ಬಳಿಕ ಅನಂತಕುಮಾರ್ ಮಾಡಿದ ಪ್ರಯತ್ನಗಳ ಫಲವಾಗಿ ಬೆಳಗಾವಿ- ಹುಬ್ಬಳ್ಳಿ, ಬೆಂಗಳೂರನ್ನು ಸೇರಿ 500 ಕಿಲೋ ಮೀಟರ್ ಹೆದ್ದಾರಿ ಕರ್ನಾಟಕದ ಮೂಲಕ ಹಾದುಹೋಗುವಂತೆ ಮಾಡಲಾಯಿತು ಎಂಬುದು ಗಮನಾರ್ಹ. ಇದರಿಂದ ರಾಜ್ಯಕ್ಕೆ ದೊಡ್ಡಮಟ್ಟದಲ್ಲಿ ಲಾಭ ಆಗಿರುವುದು ನಿಜ. ಅಲ್ಲದೆ, ‘ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆಯಡಿ ಹಳ್ಳಿಗಳಿಗೆ ರಸ್ತೆಭಾಗ್ಯ ಲಭಿಸಿತು, ಮುಖ್ಯವಾಗಿ, ರೈತರಿಗೆ ತಮ್ಮ ಬೆಳೆಗಳು ಸೇರಿ ಇತರೆ ಕೃಷಿ ಉತ್ಪನ್ನಗಳನ್ನು ಪಟ್ಟಣಕ್ಕೆ ಕಳುಹಿಸಲು ಅನುವಾಯಿತು.

ನಗರಗಳಲ್ಲಂತೂ, ಫ್ಲೈಓವರ್, ಹೊರವರ್ತಲ ರಸ್ತೆಗಳು ಸಂಚಾರ ದಟ್ಟಣೆಯ ಪ್ರಮಾಣವನ್ನು ಕಡಿಮೆ ಮಾಡಿ, ಜನರಿಗಾಗುತ್ತಿದ್ದ ಸಮಸ್ಯೆಯ ತೀವ್ರತೆಯನ್ನು ತಗ್ಗಿಸಿದವು ಮತ್ತು ಸರಕುಸಾಗಣೆಗೂ ಅನುಕೂಲವಾಯಿತು. ಇದೆಲ್ಲ ಸರಿ. ಈಗ, ‘ದಾರಿ’ ಕುರಿತಾದ ಮತ್ತೊಂದು ಆಯಾಮದತ್ತ ಗಮನ ಹರಿಸೋಣ. ‘ಅದಮ್ಯ ಚೇತನ’ ಸಂಸ್ಥೆ ಪ್ರತಿ ವರ್ಷ ವರ್ಷಾಂತ್ಯದ ಹೊತ್ತಿಗೆ ‘ಸೇವಾ ಉತ್ಸವ’ ಆಯೋಜಿಸುತ್ತದೆ. ಕೆಲ ವರ್ಷಗಳ ಹಿಂದೆ ಸೇವಾ ಉತ್ಸವಕ್ಕೆ ‘ನಮ್ಮ ಸುತ್ತಮುತ್ತ ಇರುವ ಜೀವವೈವಿಧ’ ಎಂಬ ವಿಷಯ ಆಯ್ಕೆ ಮಾಡಲಾಗಿತ್ತು. ಅದರಂತೆ, ಹಲವು ಶಾಲೆಗಳು ಒಂದೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಆ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಮಾಹಿತಿ ಕ್ರೋಡೀಕರಿಸಿ, ಪ್ರದರ್ಶಿಸಿದ್ದವು. ಮಕ್ಕಳ ಉತ್ಸಾಹ ಅಸಾಧಾರಣವಾಗಿತ್ತು. ಬೆಂಗಳೂರಿನ ಒಂದು ಶಾಲೆಯ ಹುಡುಗರು ಪಾತರಗಿತ್ತಿ ಕುರಿತು ಅದ್ಭುತವಾಗಿ ವಿಷಯಮಂಡನೆ ಮಾಡಿದರು. ಅವರಿಗೆ ಒದಗಿಸಲಾದ ಮಳಿಗೆಯಲ್ಲಿ, ಚಿಟ್ಟೆಗಳ ಕುರಿತು ಅರ್ಥಪೂರ್ಣ ಮಾಹಿತಿ ಒದಗಿಸಿದರು.

ಚಿಟ್ಟೆ ಬಗ್ಗೆ ಓರ್ವ ವಿದ್ಯಾರ್ಥಿನಿ ವಿವರಿಸಿದಳು. ‘ಚಿಟ್ಟೆಗಳಿಗೂ ಒಂದು ಕಾರಿಡಾರ್ ಇದೆ. ಅವು ಮೇ-ಜೂನ್-ಜುಲೈ ಅವಧಿಯಲ್ಲಿ ಪಶ್ಚಿಮಘಟ್ಟದಿಂದ ಪೂರ್ವಘಟ್ಟಕ್ಕೆ ಹೋಗುತ್ತವೆ. ಈ ಅವಧಿಯಲ್ಲಿ ಚಿಟ್ಟೆಗಳು 300-400 ಕಿ.ಮೀ.ನಷ್ಟು ಪಯಣಿಸುತ್ತವೆ. ಅವುಗಳದ್ದೇ ಆದ ರಸ್ತೆ ಮುಖಾಂತರವೇ ಪಯಣಿಸುತ್ತವೆ. ಅದರಲ್ಲಿ ಬೆಂಗಳೂರಿನ ಪೀಣ್ಯ, ಯಶವಂತಪುರ ಕೂಡ ಬರುತ್ತದೆ. ಆದರೆ, ಮಾನವನ ಅತಿ ಚಟುವಟಿಕೆಗಳಿಂದ ಈ ಕಾರಿಡಾರ್​ಗೆ ಧಕ್ಕೆ ಆಗಿದೆ’ ಎಂಬುದನ್ನು ಆ ವಿದ್ಯಾರ್ಥಿನಿ ಹೇಳಿದಾಗ ಅಚ್ಚರಿಯೂ, ಆತಂಕವೂ ಒಟ್ಟೊಟ್ಟಿಗೆ ಆಯ್ತು.

ಪಕ್ಷಿಗಳಂತೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುತ್ತವೆ. ಅಷ್ಟೇ ಅಲ್ಲ, ನಿಗದಿತ ಕಾಲದಲ್ಲಿ ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸುತ್ತವೆ. ಆದರೆ, ಪಕ್ಷಿಯ ಪುಟ್ಟ ಮಿದುಳು ಇದನ್ನೆಲ್ಲ ಗ್ರಹಿಸಿ ಹೇಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ, ದಾರಿ ತೋರಿಸುವ ಯಾವುದೇ ಉಪಕರಣಗಳು ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೇಗೆ ಕರಾರ್​ವಾಕ್ ಆಗಿ ಆಗಮಿಸುತ್ತವೆ ಎಂಬುದು ಅಚ್ಚರಿಯೇ. ಯಾವುದೇ ಪಾಸ್​ಪೋರ್ಟ್ ಇಲ್ಲದೆ, ನಾವು ಬಳಸುವ ಯಾವುದೇ ಆಧುನಿಕ ಉಪಕರಣಗಳು ಇಲ್ಲದೆ ಪಕ್ಷಿಗಳು ದೀರ್ಘ ಪಯಣ ಮಾಡುವ ಪರಿಯೇ ಸೋಜಿಗ. ಕಾಡುಗಳಲ್ಲಂತೂ ಇರುವೆ, ಜೇನುನೊಣದಿಂದ ಹಿಡಿದು ಆನೆ, ಸಿಂಹ, ಚಿರತೆಯಂಥ ದೊಡ್ಡ ಪ್ರಾಣಿಗಳಿಗೆಲ್ಲ ಅವುಗಳದ್ದೇ ಆದ ಓಡಾಟದ ಕಾರಣಗಳಿವೆ, ಪರಿ ಇದೆ, ಅವುಗಳದ್ದೇ ರಸ್ತೆ ಇದೆ, ಸಮಯ ಕೂಡ ಇದೆ. ನಿಗದಿತ ಸಮಯಕ್ಕೆ ನಿಗದಿತ ದಾರಿಯಿಂದ ಓಡಾಡುತ್ತ ಕ್ರಮಿಸುವುದನ್ನು ನಮ್ಮ ವನ್ಯಜೀವಿ ಸಂರಕ್ಷಕರು, ಗಮನಿಸಿ, ದಾಖಲಿಸಿ ನಮಗೆಲ್ಲ ತಿಳಿಸುತ್ತ ಬಂದಿದ್ದಾರೆ.

ಆಕಾಶದಲ್ಲಿ ಪಕ್ಷಿಗಳಿಗೆ ಕೂಡ ತನ್ನದೇ ಆದ ರಸ್ತೆಗಳಿವೆ. ಸಮುದ್ರದಲ್ಲಿ, ನದಿಗಳಲ್ಲೂ ಅಷ್ಟೇ. ಆಮೆ, ತಿಮಿಂಗಲ, ಮೀನುಗಳು ನಿರ್ದಿಷ್ಟ ಅವಧಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಸಂಚರಿಸುತ್ತವೆ. ಅವುಗಳಿಗೆ ನಿಗದಿತ ವೇಗವಿದೆ, ಓಡಾಟದ ದಾರಿ, ತಲುಪಬೇಕಾದ ಸ್ಥಳ ನಿಗದಿಯಾಗಿರುತ್ತದೆ. ಜಲವಿಜ್ಞಾನಿಗಳು ಹಲವು ಸಂಶೋಧನೆಗಳ ಮೂಲಕ ಇದನ್ನು ದೃಢಪಡಿಸಿದ್ದಾರೆ. ಆನೆಗಳ ಓಡಾಟದ ದಾರಿಯನ್ನು ತೋರಿಸುವ (ಕಾರಿಡಾರ್) ‘ಗಜ’ ಎಂಬ ವಿವರವಾದ ವರದಿಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರಸಕ್ತ ವರ್ಷದಲ್ಲಿ (2020) ಬಿಡುಗಡೆಗೊಳಿಸಿದೆ. ಆನೆಗಳು ಸಂಚರಿಸುವ 90ಕ್ಕಿಂತ ಅಧಿಕ ಮಾರ್ಗಗಳನ್ನು ಮತ್ತು ಅವುಗಳ ಪ್ರಸಕ್ತ ಸ್ಥಿತಿ ಹೇಗಿದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. ಈ ಎಲ್ಲ ಮಾರ್ಗಗಳನ್ನು ರಕ್ಷಿಸಬೇಕು ಮತ್ತು ಅವುಗಳಿಗೆ ಅಡ್ಡಲಾಗಿ ರೆಸಾರ್ಟ್ ಆಗಲಿ, ಇತರೆ ಅಭಿವೃದ್ಧಿ ಕಾರ್ಯಗಳಾಗಲಿ ಮಾಡಬಾರದು ಎಂಬುದನ್ನು ನ್ಯಾಯಾಲಯ ತನ್ನ ನಿರ್ಣಯದಲ್ಲಿ ಈ ಹಿಂದೆಯೇ ಸೂಚಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಮಿಳುನಾಡಿನ ಮಧುಮಲೈ ಕಾಡಿನಿಂದ ಕರ್ನಾಟಕದ ಬನ್ನೇರುಘಟ್ಟ, ಅಲ್ಲಿಂದ ನಾಗರಹೊಳೆ ಮಾರ್ಗದಲ್ಲಿ ಆನೆ, ಚಿರತೆ, ಹುಲಿಗಳ ಓಡಾಟ ಇದ್ದೇ ಇರುತ್ತದೆ. ಆದರೆ, ಕೆಲ ವರ್ಷಗಳಿಂದ ಆನೆ ಸೇರಿ ಮೇಲ್ಕಂಡ ಪ್ರಾಣಿಗಳ ಓಡಾಟಕ್ಕೆ ಮನುಷ್ಯ ಚಟುವಟಿಕೆಗಳು ದೊಡ್ಡಮಟ್ಟದಲ್ಲಿ ಅಡ್ಡಿ ಉಂಟು ಮಾಡಿದ್ದು, ಅದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆನೆಗಳು ಕೃಷಿ ಭೂಮಿಗೆ ನುಗ್ಗಿ ಬೆಳೆಗಳನ್ನು ಹಾಳು ಮಾಡುತ್ತಿರುವುದು, ಊರಿಗೆ ಬಂದು ಹಾನಿ ಮಾಡುತ್ತಿರುವುದು, ಯಾರನ್ನೋ ತುಳಿದು ಸಾಯಿಸುವ ಘಟನೆ ಆಗಿರಬಹುದು, ಇದನ್ನೆಲ್ಲ ಮಾಧ್ಯಮಗಳಲ್ಲಿ ಓದುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷ ಹೆಚ್ಚುತ್ತಲೇ ಇದೆ. ಆನೆಗಳ ದಾರಿಗೆ ನಾವು ಅಡ್ಡಿಯಾಗದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ರೈಲ್ವೆಮಾರ್ಗ ನಿರ್ವಣ, ಹೆದ್ದಾರಿ, ಹೆಚ್ಚುತ್ತಿರುವ ಕೃಷಿ ಭೂಮಿ, ಬೆಳೆಯುತ್ತಿರುವ ನಗರಗಳು, ರೆಸಾರ್ಟ್​ಗಳು ಇವೆಲ್ಲ ಕಾಡಿನ ಸಂಪರ್ಕವನ್ನು ಕಡಿದು ಹಾಕುತ್ತಿರುವುದು ಮಾತ್ರವಲ್ಲ ಕಾಡನ್ನು ತುಂಡು-ತುಂಡು ಮಾಡುತ್ತಿವೆ. ಹೆದ್ದಾರಿಗಳ ಕೆಳಗಿನಿಂದ ಕಾಡಿಗೆ ರಸ್ತೆ ಮಾಡುವ ಸಣ್ಣ ಪ್ರಯತ್ನಗಳೂ ನಡೆಯುತ್ತಿವೆ. ಆದರೆ, ಇದು ಎಷ್ಟು ಪ್ರಮಾಣದಲ್ಲಿ ಫಲ ನೀಡಬಹುದು ಎಂಬುದು ಕಾದು ನೋಡಬೇಕು. ಇದು ದೊಡ್ಡ ಸಮಸ್ಯೆ ನಿಜ. ಹಾಗೆಯೇ, ಇದರ ಪರಿಹಾರದ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬುದು ಕೂಡ ದೊಡ್ಡ ಪ್ರಶ್ನೆಯೇ. ನಮ್ಮ ದಾರಿ ಮಾತ್ರ ನಿರ್ವಿುಸಿಕೊಳ್ಳದೆ, ಪ್ರಾಣಿಗಳ ಮಾರ್ಗಕ್ಕೆ ಅಡ್ಡಿಯಾಗದೆ ಈ ಭೂಮಿ, ಕಾಡು, ಜೀವವೈವಿಧ್ಯ ಉಳಿಸಲು ಮುಂದಾಗಬೇಕಿದೆ. ಪ್ರಾಣಿ, ಪಕ್ಷಿಗಳಿಗೆ ದಾರಿ ಮಾಡಕೊಡಬೇಕಿದೆ ಎಂಬುದೇನೋ ನಿಜ. ಅದಕ್ಕೂ ಮುಂಚೆ ಅವುಗಳ ದಾರಿಗೆ ನಾವುಗಳು ಅಡ್ಡ ಹಾಕುವುದನ್ನು ಸಂಪೂರ್ಣ ನಿಲ್ಲಿಸಬೇಕಿದೆ. ಕರ್ನಾಟಕದ ನಿದರ್ಶನವನ್ನೇ ತೆಗೆದುಕೊಳ್ಳುವುದಾದರೆ, ಕುದುರೆಮುಖ, ನಾಗರಹೊಳೆ, ಬನ್ನೇರುಘಟ್ಟ ಕಾಡು... ಹೀಗೆ ರಕ್ಷಿಸಬೇಕಾದ ಜೀವ ವೈವಿಧ್ಯದ ಹಲವು ತಾಣಗಳಿವೆ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯೋಚಿಸುವ ನಾವು ಬನ್ನೇರುಘಟ್ಟ ಕಾಡಿನಲ್ಲಿ ಓಡಾಡುವ ಆನೆ, ಇತರೆ ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಬಗ್ಗೆ ಯೋಚಿಸುವುದು ಬೇಡವೇ? ನಗರಗಳ ಪ್ರಖರವಾದ ಬೆಳಕು, ಹೊಗೆ ಉಗುಳುವ ಕಾರ್ಖಾನೆಗಳು, ಅಷ್ಟೇ ಏಕೆ, ವಿಂಡ್ ಎನರ್ಜಿ ತಯಾರಿಸುವಂಥ ದೊಡ್ಡ ಉಪಕರಣಗಳು-ಇವೆಲ್ಲವು ಪಕ್ಷಿಗಳ ದಾರಿಗೆ ತೊಂದರೆ ನೀಡುತ್ತಿವೆ. ಇನ್ನು, ನಾವುಗಳು ನೀರಿನಲ್ಲಿ ಬಿಸಾಕುವ ತ್ಯಾಜ್ಯ, ಪ್ಲಾಸ್ಟಿಕ್ ಚೂರುಗಳು, ಲೋಹದ ಚೂಪಾದ ತುಂಡುಗಳು ಆಮೆ, ಮೀನು, ತಿಮಿಂಗಿಲದಂಥ ಜಲಚರಗಳ ದಾರಿಗೆ ಅಡ್ಡ ಬರುತ್ತಿವೆ. ಅರಣ್ಯಗಳ ಒತ್ತುವರಿ, ಕೃಷಿಭೂಮಿಯ ಹೆಚ್ಚಳ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

ಸಮುದ್ರಗಳು ಹೇಗೆ ಒಂದಕ್ಕೊಂದು ಬೆಸೆದುಕೊಂಡಿರುತ್ತವೆಯೋ ಹಾಗೆಯೇ ಕಾಡುಗಳು ಕೂಡ ನೈಸರ್ಗಿಕವಾಗಿ ಒಂದಕ್ಕೊಂದು ಪರಸ್ಪರ ಬೆಸೆದುಕೊಂಡಿರುತ್ತವೆ. ಆದರೆ, ಮನುಷ್ಯ ಅವುಗಳಿಗೆ ಕಂಟಕವಾಗುತ್ತಿರುವ ಪರಿಣಾಮ ಪ್ರಾಣಿಗಳ ಸಹಜ, ಸ್ವಾಭಾವಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅರಣ್ಯಗಳಿಗೆ ಅಂಟಿಕೊಂಡು ಕೈಗಾರಿಕಾ ಝೋನ್​ಗಳು ನಿರ್ವಣವಾಗುತ್ತಿವೆ, ಅರಣ್ಯಗಳ ಒಡಲಲ್ಲೇ ಗಣಿಗಾರಿಕೆ ನಡೆಯುತ್ತಿದೆ. sensitive zone ಕ್ರಮೇಣ ಕಡಿಮೆ ಆಗುತ್ತಿದೆ. ಅರಣ್ಯಗಳ ಸಮೀಪ ಹಳ್ಳಿಗಳು, ನಗರಗಳು ಬೆಳೆಯುತ್ತ ಹೋದರೆ ಅದರಿಂದ ಮನುಷ್ಯರಿಗೂ ತೊಂದರೆ, ಕಾಡುಪ್ರಾಣಿಗಳಿಗೂ ತೊಂದರೆ ಎಂಬುದನ್ನು ಅರಿಯಬೇಕು. ಮಧ್ಯಪ್ರದೇಶದ ಕಾನ್ಹಾ ಮತ್ತು ಪೆಂಚ್ ಎಂಬ 2 ಕಾಡುಗಳ ನಡುವಿನ ಹೆದ್ದಾರಿ ಅಡಿಯಲ್ಲಿ ಇತ್ತೀಚೆಗೆ ಅಂಡರ್​ಪಾಸ್ ನಿರ್ವಿುಸಿ ಪ್ರಾಣಿಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಒಟ್ಟಾರೆ ಪರಿಹಾರ ಏನು?
  • ಪ್ರಕೃತಿಗೆ ವಿರುದ್ಧವಾಗಿರುವ ಸಂಗತಿಗಳನ್ನು ತ್ಯಜಿಸೋಣ. ಸರಳ, ಸಹಜ ಜೀವನ ರೂಪಿಸಿಕೊಳ್ಳೋಣ.
  • ನಮ್ಮ ಮನೆಯ ಮಹಡಿಗಳಲ್ಲಿ ಪಕ್ಷಿಗಳಿಗಾಗಿ ನೀರು ಇಡೋಣ. ಚಿಟ್ಟಿಗಳಿಗಾಗಿ ಬೇಕಾಗುವ ಗಿಡಗಳನ್ನು ಮನೆಯ ಸುತ್ತ ಹಾಕೋಣ.
  • ಮನೆಗಳ ಹತ್ತಿರ ಪಕ್ಷಿಗಳು ತಿಂದು ಹೋಗಬಹುದಾದ ಹಣ್ಣುಗಳ ಗಿಡ ಬೆಳೆಸೋಣ.

ಒಟ್ಟಾರೆಯಾಗಿ, ಪರಿಸರಸ್ನೇಹಿಯಾಗಿ ಬದುಕುವ ಸಂಕಲ್ಪ ಕೈಗೊಂಡು, ಆ ನಿಟ್ಟಿನಲ್ಲಿ ಮುಂದೆ ಸಾಗೋಣ. ಮುಖ್ಯವಾಗಿ, ಪಶ್ಚಿಮ ಘಟ್ಟದ ಬಗ್ಗೆ, ಅಲ್ಲಿನ ಜೀವವೈವಿಧ್ಯದ ಬಗ್ಗೆ ಮತ್ತು ಪ್ರಾಣಿ, ಪಕ್ಷಿಗಳ ಸಂಚಾರದ ಬಗ್ಗೆ ನಾವು ತಿಳಿದುಕೊಳ್ಳೋಣ, ಇತರರಲ್ಲೂ ಅರಿವು, ಜಾಗೃತಿ ಮೂಡಿಸೋಣ. ವೈಯಕ್ತಿಕವಾಗಿ ಮಾಡಲು ಸಾಧ್ಯವಾಗದಿದ್ದರೆ ನಮ್ಮ ಜನಪ್ರತಿನಿಧಿಗಳ ಜತೆ ಚರ್ಚೆ ಮಾಡಿ, ಸರ್ಕಾರದ ಪರಿಸರವಿರೋಧಿ ನಿರ್ಣಯಗಳನ್ನು ಬದಲಾಯಿಸಲು ಒತ್ತಡ ಹಾಕೋಣ.