ಅಂಕಣ

ವಿವೇಕ ಧಾರೆ: ಸಾಮರ್ಥ್ಯದ ನಿಧಿಯಾಗಲಿ ಯೌವನ

|ಸ್ವಾಮಿ ವೀರೇಶಾನಂದ ಸರಸ್ವತೀ

ಮಾನವಾಭ್ಯುದಯ ವಿಜ್ಞಾನವನ್ನು ಜಗತ್ತಿಗೆ ಧಾರೆಯೆರೆದ ಕೀರ್ತಿ ಸನಾತನ ಭಾರತೀಯ ಸಂಸ್ಕೃತಿಗೆ ಸಲ್ಲುತ್ತದೆ. ಭಾರತೀಯ ದ್ರಷ್ಟಾರರು ಬದುಕಿನುದ್ದಕ್ಕೂ ಜೀವಂತಿಕೆ ಕ್ಷೀಣಿಸದಂತೆ ಎಚ್ಚರವಹಿಸಿದರಲ್ಲದೆ ಬದುಕಿನ ವಿವಿಧ ಹಂತಗಳಲ್ಲಿ ಜೀವಂತಿಕೆಯ ಅಂಶಕ್ಕೆ ಮೇಲ್ಮುಖವಾದ ಆದರ್ಶದ ಫಲವತ್ತತೆಯನ್ನಿತ್ತರು.

ಸನಾತನ ಪರಂಪರೆ ಮಾನವನ ಸಮಗ್ರ ಬದುಕನ್ನು ಬ್ರಹ್ಮಚರ್ಯ, ಗ್ರಾಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಎಂಬ ನಾಲ್ಕು ಆಯಾಮಗಳಾಗಿ ವಿಭಾಗಿಸಿದೆ. ಜೀವನದ ಪರಿಪೂರ್ಣ ಯಶಸ್ಸಿಗೆ ಈ ನಾಲ್ಕು ಆಯಾಮಗಳೂ ಅನಿವಾರ್ಯವೆಂದಾದರೂ ಬ್ರಹ್ಮಚರ್ಯದ ಅವಧಿಯ ಬೆಳವಣಿಗೆಯ ಅಡಿಪಾಯದ ಮೇಲೆ ಇಡೀ ಜೀವನದ ಯಶಸ್ಸಿನ ಸೌಧ ನಿಂತಿರುತ್ತದೆ. ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಪ್ರಾಪ್ತಿ ಪ್ರತಿಯೊಬ್ಬ ಮಾನವನ ಮುಂದಿರುವ ಅಮೃತಫಲಗಳು. ಈ ವಿಚಾರಗಳನ್ನು ಪರಾಮಶಿಸಿದಾಗ ಜೀವನದ ಪ್ರತಿಯೊಂದು ಕ್ಷಣವೂ ಮಹತ್ವದ್ದು ಎಂದೆನಿಸುವುದಿಲ್ಲವೇ?

ಜೀವನ ಶಿಕ್ಷಣಕ್ಕೆ ಒತ್ತು ನೀಡಿದ ಸನಾತನ ಪರಂಪರೆ ಜೀವನವನ್ನು ‘ಶಕ್ತಿ’ಗೆ ಬರೆದ ಭಾಷ್ಯವೆಂದೇ ಚಿತ್ರಿಸಿದೆ. ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ; ಶಕ್ತಿಯೇ ಆನಂದ, ಶಕ್ತಿಯೇ ಅಮೃತ; ಅದೊಂದೇ ಶಾಶ್ವತ’ ಎಂಬ ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶವು ಉಪನಿಷತ್ತಿನ ‘ಶರೀರಮಾದ್ಯಂ ಖಲುಧರ್ಮಸಾಧನಂ... ನಾಯಮಾತ್ಮಾ ಬಲಹೀನೇನ ಲಭ್ಯಃ’ ಎಂಬ ಉಕ್ತಿಗಳ ಪ್ರತಿಧ್ವನಿಯೇ ಆಗಿದೆ. ಅಲ್ಲದೆ, ‘ಶರೀರವು ನೀರಿನಿಂದ, ಮನಸ್ಸು ಸತ್ಯವಚನದಿಂದ, ಬುದ್ಧಿ ಸುಜ್ಞಾನದಿಂದ ಮತ್ತು ಜೀವಾತ್ಮನು ವಿದ್ಯೆ ಹಾಗೂ ವೈಚಾರಿಕತೆಯ ತಪಸ್ಸಿನಿಂದ ನಿರ್ಮಲನಾಗುತ್ತಾನೆ’ ಎಂಬ ಸನಾತನ ಸಂದೇಶಕ್ಕೆ ವೈಚಾರಿಕತೆಯ ವಲಯಗಳೂ ತಲೆದೂಗಿವೆ. ಮಾನವ ಜೀವನದಲ್ಲಿ ಮುಖ್ಯ ಹಾಗೂ ಅಮೂಲ್ಯವಾದ ಯೌವನದ ಅವಧಿಯನ್ನು ನಾವೆಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದೇವೆಂಬ ಪ್ರಶ್ನೆಯಂತೂ ನಮ್ಮ ಮುಂದಿದೆ. ಮಕ್ಕಳ ಹುಡುಗಾಟಿಕೆ ಸಹ್ಯವಾದರೂ ಜನರ ಬೇಜವಾಬ್ದಾರಿ ಹಾನಿಕಾರಕ, ಮಾರಕ, ನಾಶಕ್ಕೆ ಎಡೆಮಾಡುವಂಥದ್ದಲ್ಲವೇ?

ಜೀವನದುದ್ದಕ್ಕೂ ಯುವ ಸಮುದಾಯಕ್ಕಾಗಿಯೇ ಶ್ರಮಿಸುತ್ತ, ಸಹಸ್ರಾರು ಯುವಜನರ ಬಾಳಪಥಕ್ಕೆ ನಿತ್ಯ ದೀವಿಗೆಯಾಗಿ ಮತ್ತು ನೂರಾರು ಯುವಕ-ಯುವತಿಯರು ತ್ಯಾಗ, ವೈರಾಗ್ಯ ಜೀವನಕ್ಕೆ ಮೊರೆಹೋಗಿ ಸರ್ವಸಂಗ ಪರಿತ್ಯಾಗಿ ಸಂನ್ಯಾಸಿಗಳಾಗಿ ಮಾತೃಭೂಮಿ, ಮಾತೃಧರ್ಮಕ್ಕೆ ಮುಡಿಪಾಗುವುದರಲ್ಲಿ ಶ್ರಮಿಸಿದ ಬ್ರಹ್ಮಲೀನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರು ಯುವಕರನ್ನು ಕುರಿತು ಅಭಿಪ್ರಾಯಿಸಿದ್ದು ಹೀಗೆ: ‘ಯುವಕ! ಎಂತ ಚಮತ್ಕಾರದ ಶಬ್ದವಿದು! ಧೈರ್ಯ, ಸ್ಪೂರ್ತಿ ಉತ್ಸಾಹಗಳ ಪ್ರತೀಕ ಈ ಯುವಕ! ಮೈ ಬಗ್ಗಿದ ಮುದುಕರೂ ಒಮ್ಮೆ ಸೆಟೆದು ನೆಟ್ಟಗೆ ನಿಲ್ಲುವಂತೆ ಮಾಡುವ ಶಬ್ದವಿದು! ಸಮಾಜಕ್ಕೆ ಸಮಾಜವೇ, ರಾಷ್ಟ್ರಕ್ಕೆ ರಾಷ್ಟ್ರವೇ ಯುವಕರ ಬಗ್ಗೆ ಭರವಸೆ ಇರಿಸಿದೆ. ಮಹತ್ತರವಾದ್ದು ಸಿದ್ಧಿಸಬೇಕಾದ್ದು ಈ ಯುವಕರಿಂದಲೇ ಎಂಬ ನಿರೀಕ್ಷೆಯಲ್ಲಿದೆ. ಆಯಾಸದ ಅರಿವೇ ಇಲ್ಲದ, ಕಠಿಣ ಪ್ರಸಂಗಗಳಲ್ಲಿಯೂ ಒಮ್ಮೆಲೇ ಸೋಲೊಪ್ಪಿಕೊಳ್ಳದ, ‘ಏನೇ ಆಗಲಿ, ಸಾಧಿಸಿಯೇ ಸಿದ್ಧ’ ಎಂಬ ಧೀರಮನೋಭಾವದ ಯುವಕನಲ್ಲಿ ಧರ್ಮ, ಸಾಹಿತ್ಯ, ಕಲೆ, ವಿಜ್ಞಾನ, ಕೃಷಿ, ಕೈಗಾರಿಕೆ, ತಾಂತ್ರಿಕತೆಗಳೇ ಮೊದಲಾದ ನೂರಾರು ಸೃಜನಾತ್ಮಕ ವಿಚಾರಗಳಲ್ಲಿ ತರಬೇತು ಪಡೆದು, ಕಾರ್ಯೋನ್ಮುಖವಾಗಿ, ಲೋಕೋತ್ತರವಾಗಿ ಯಶಸ್ಸನ್ನು ಪಡೆಯಲು ಅತ್ಯವಶ್ಯಕವಿರುವ ಬುದ್ಧಿ ಇದೆ. ಆದರೆ, ತನ್ನ ಮುಂದೆ ಅರಳಿ ನಿಂತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಬೇಕಾದ ವಿವೇಕ ಮಾತ್ರ ಅವನು ಗಳಿಸಿಕೊಳ್ಳಬೇಕಿದೆ. ಯುವಕನಲ್ಲಿ ಶರೀರಶಕ್ತಿ, ಮನಃಶಕ್ತಿ, ಉತ್ಸಾಹಶಕ್ತಿ, ಕ್ರಿಯಾಶಕ್ತಿ ಎಲ್ಲವೂ ಇದೆ. ಇವುಗಳೆಲ್ಲವನ್ನೂ ಸಫಲವಾಗಿಸಬಲ್ಲ ವಿವೇಕವನ್ನು ಸೇರಿಸಿಕೊಳ್ಳದಿದ್ದರೆ ಮಾತ್ರ ಎಲ್ಲವೂ ವಿಫಲ!’.

‘ಬ್ರಹ್ಮಚರ್ಯಾಶ್ರಮ’ ಅರ್ಥಾತ್ ‘ವಿದ್ಯಾರ್ಥಿ ದೆಸೆ’ ಎಂಬುದು ಇಂದು ಅದೆಷ್ಟು ಅಪಾರ್ಥವಾಗಿದೆ! ಅಪಮೌಲ್ಯವಾಗಿದೆ, ಅಲ್ಲವೇ?

ವಿನಯಂತು ಸುತಾನ್ ಸಂತಃ ಸ್ವಸಂಪಾದ್ಯಾಃ ಪುನಃರ್ಗಣಾಃ|

ಸರ್ವಂ ಕೃಷಾಣಾಃ ಕುರ್ವಂತು ಬೀಜಂ ಸೂತೇಕುರಂ ಸ್ವತಃ||

ಸಜ್ಜನ ಮಾತಾಪಿತೃಗಳು ಮತ್ತು ಗುರುಹಿರಿಯರು ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಕರ್ತವ್ಯವಷ್ಟೆ. ಮಕ್ಕಳೇ ಸದ್ಗುಣಗಳನ್ನು ಸಂಪಾದಿಸಿಕೊಳ್ಳಬೇಕು. ರೈತರು ಉಳಿದೆಲ್ಲ ಕೆಲಸವನ್ನೂ ಮಾಡುತ್ತಾರೆ, ಆದರೆ ಮೊಳೆಯುವುದು ಬೀಜದ ಕೆಲಸ! ಅನುಭಾವಿಗಳ ಈ ಮಾತು ಗಹನ, ನಿಗೂಢ!

‘ಜೀವನವು ಬಯಸದೇ ಬಂದ ಭಾಗ್ಯ’ ಎಂದಿದ್ದಾರೆ ಭಾರತರತ್ನ ವಿಶ್ವೇಶ್ವರಯ್ಯ. ಜೀವನವೆಂಬುದೊಂದು ಒಂದು ಸುದೀರ್ಘ ಸಮರ! ಮಾನವ ಇತಿಹಾಸ ಸಾಬೀತುಪಡಿಸಿರುವ- ್ಝ ಪ್ರಾಣಿಗಳು ಆನಂದಿಸುವ ಇಂದ್ರಿಯಸುಖಕ್ಕಿಂತ ಮನುಷ್ಯನು ವೈಚಾರಿಕ ಸುಖವನ್ನು ಹೆಚ್ಚು ಆನಂದಿಸುತ್ತಾನೆ. ್ಝ ಜಗತ್ತಿನ ಇತಿಹಾಸದಲ್ಲಿ ಶ್ರೀಮಂತಿಕೆಯ ಮೆತ್ತನೆಯ ಹಾಸಿಗೆಗಷ್ಟೇ ಹಾತೊರೆದ ಸಾಮ್ರಾಜ್ಯಗಳು ಅದೇ ಹಾಸಿಗೆಗಳಲ್ಲಿ ಹೂಳಲ್ಪಟ್ಟಿವೆ! ಎಂಬ ವಾಸ್ತವ ಸತ್ಯಗಳನ್ನು ಯುವಜನತೆ ಆಲೋಚಿಸಬೇಕಿದೆ.

1. ಜೀವನಧ್ಯೇಯ: ಇಂದಿನ ಯುವಸಾಮ್ರಾಜ್ಯವನ್ನು ಸುಭಾಷಿತವೊಂದರ ಸಹಾಯದಿಂದ ವಿವರಿಸಬಹುದಾಗಿದೆ. ಮದುವೆ ಒಂಟೆಗಳದ್ದಂತೆ, ಆಹ್ವಾನಿತ ಸಂಗೀತಗಾರರು ಕತ್ತೆಗಳಂತೆ! ಇವರೀರ್ವರೂ ಪರಸ್ಪರರನ್ನು ಶ್ಲಾಘಿಸಿಕೊಳ್ಳುತ್ತಿದ್ದುದು ಹೀಗೆ: ಕತ್ತೆಗಳು ಒಂಟೆಗಳನ್ನು ಕುರಿತು, ‘ಆಹಾ ಏನು ರೂಪ!’ ಎಂದರೆ ಒಂಟೆಗಳು ಕತ್ತೆಗಳ ಗಾನ ಕೇಳಿ, ‘ಆಹಾ ಎಷ್ಟು ಇಂಪಾದ ಧ್ವನಿ!’ ಎಂದವಂತೆ! ಜೀವನವು ಮುಳ್ಳಿನ ಗಿಡದಲ್ಲಿ ಇರುವ ಹೂವಿನಂತೆ. ಹೂವು ಸೊಗಸಾಗಿದೆ, ಆದರೆ ಮುಳ್ಳಿನಿಂದ ಅಪಾಯವಿದೆ. ಹಾಗೆಂದ ಮಾತ್ರಕ್ಕೆ ಹೂವನ್ನು ತಿರಸ್ಕರಿಸಲಾಗದು. ಮುಳ್ಳಿನ ಬಗ್ಗೆ ಎಚ್ಚರಿಕೆ ವಹಿಸಿ ಹೂವನ್ನು ಆನಂದಿಸಬೇಕಿದೆ. ಸ್ವಾಮಿ ವಿವೇಕಾನಂದರೆನ್ನುವಂತೆ, ‘ಪೌರುಷದಿಂದ ಪ್ರಯತ್ನ ಮಾಡದಿದ್ದರೆ ಎಂತಹ ದೈವಬಲವೂ ನಿನ್ನ ತಮಸ್ಸನ್ನು ತೊಲಗಿಸಲಾರದು’ ಎಂಬುದನ್ನು ಯುವಕರು ಅರಿಯಬೇಕು.

2. ಆದರ್ಶದ ಮಹತ್ವ: ‘ಸರ್ವೆಷಾಮಪಿ ಸರ್ವಕಾರಣಮಿದಂ ಶೀಲಂ ಪರಂ ಭೂಷಣಮ್-ಭರ್ತಹರಿಯ ನೀತಿಶತಕ. ‘ಎಲ್ಲಕ್ಕೂ ಮುಖ್ಯ ಕಾರಣವಾದ ಶೀಲವೇ ಶ್ರೇಷ್ಠ ಭೂಷಣ’. ಆದ್ದರಿಂದ ಯುವಕರು ತಮ್ಮ ಶೀಲವರ್ಧನೆಗೆ ಒತ್ತು ನೀಡಲೇಬೇಕು. ‘ಕಾಮಿನೋ ಮಂದ-ಬುದ್ಧಯಃ’ -‘ಎಲ್ಲಿ ಕಾಮವು ಚುರುಕಾಗುತ್ತದೆಯೋ ಅಲ್ಲಿ ವ್ಯಕ್ತಿಯ ಬುದ್ಧಿ ಮಂಕಾಗುತ್ತದೆ!’ ಎಂದಿದೆ ಭಗವದ್ಗೀತೆ. ಅವಿವೇಕವು ಆಪತ್ತುಗಳಿಗೆ ಎಡೆಮಾಡುತ್ತದೆ, ನಡತೆಗೆಟ್ಟವನು ಹಣವಂತನಾದರೂ ದುರ್ಗತಿಯನ್ನೇ ಹೊಂದುತ್ತಾನೆ. ಚಿಂತಕ ಕಾನ್​ರಾಡ್ ಲಾರೆನ್ಸ್ ತನ್ನ ‘The Eight capital sins of civilized mankind’ ಪುಸ್ತಕದಲ್ಲಿ ‘Under the impact of secular lifestyle, we kill our very spiritual motivations, our noblest and highest qualities’ ಎಂದಿದ್ದಾರೆ.

3) ಭಾರತದ ಶ್ರೇಷ್ಠತೆ: ಶಿಕ್ಷಣವು ಮಾನವನನ್ನು ಸರ್ವ ವಿಧಗಳ ಅಜ್ಞಾನದಿಂದ ನಿವೃತ್ತಿಗೊಳಿಸುವಂಥದ್ದೆಂದು ಸನಾತನ ಪರಂಪರೆ ಸಾರಿದೆ. ಶಿಕ್ಷಣವು ವಿಷಯ, ಬುದ್ಧಿ ಮತ್ತು ಪ್ರಜ್ಞೆಗಳ ಮೂರು ಹಂತಗಳ ಮೂಲಕ ಸಾಗಬೇಕೆಂಬುದೇ ವಿವೇಕಾನಂದರಂಥ ಯುಗಪ್ರವರ್ತಕರ ನಿಚ್ಚಳ ಅಭಿಮತ. ಆದರೆ ಆಧುನಿಕ ಶಿಕ್ಷಣ ವಿಷಯಬುದ್ಧಿಯನ್ನಷ್ಟೇ ಪ್ರಚೋದಿಸಿ ಮನುಷ್ಯನನ್ನು ಪ್ರಜ್ಞಾಶೂನ್ಯನನ್ನಾಗಿಸಿದೆ!

ಆಧುನಿಕ ಶಿಕ್ಷಣದ ಘೊರ ದುಷ್ಪರಿಣಾಮವನ್ನು ವಿವೇಕಾನಂದರು ವಿವರಿಸಿದ್ದು ಹೀಗೆ: ‘ಪ್ರಾರಂಭದಲ್ಲಿ ಹೆಚ್ಚಿನ ಆಹಾರ, ಸುಖಸಂಪತ್ತುಗಳ ಸಂಪಾದನೆಗೆ ಒತ್ತು ನೀಡುವ ಶಿಕ್ಷಣ ತದನಂತರ ಅವನತಿಯ ಹಾದಿಯಲ್ಲಿ ಸಾಗುತ್ತದೆ! ವಸ್ತುಸ್ವರೂಪದ ಸಂಪನ್ಮೂಲದ ವೃದ್ಧಿಯೊಂದಿಗೆ ಅದು ಮಾನವನ ವ್ಯಕ್ತಿತ್ವದಲ್ಲಿ ಅಡಗಿ ಕುಳಿತಿರುವ ಅಸೂಯೆ ಮತ್ತು ಮಾತ್ಸರ್ಯಗಳು ಭುಗಿಲೇಳುವಂತೆ ಮಾಡುತ್ತದೆ! ಅನಾರೋಗ್ಯಕರ ಸ್ಪರ್ಧೆ ಮತ್ತು ಕರುಣಾರಹಿತ ಕ್ರೌರ್ಯಗಳು ವಿಜೃಂಭಿಸುತ್ತವೆ!’

ಭಾರತೀಯ ಶಿಕ್ಷಣದ ಚರಮಧ್ಯೇಯ ಮಾನವನನ್ನು ವಿವೇಕಿಯನ್ನಾಗಿಸುವುದು, ಪ್ರಜ್ಞಾವಂತನನ್ನಾಗಿಸುವುದು. ಮಾನವನು ಪ್ರಜ್ಞಾವಂತನಾದಾಗ ಅವನಿಗೆ ಎರಡು ಮೌಲ್ಯಗಳು ಹೃದ್ಗತವಾಗುತ್ತವೆ. ಮೊದಲನೆಯದೆಂದರೆ, ‘ಐಶ್ವರ್ಯವೆಂಬುದು ಒಬ್ಬರನ್ನು ತೊರೆದು ಮತ್ತೊಬ್ಬರಲ್ಲಿ ಆಶ್ರಯ ಪಡೆಯುತ್ತದೆ. ಭೂಮಿ ಒಬ್ಬರಿಂದ ಮತ್ತೊಬ್ಬರಿಗೆ ಪರಭಾರೆ ಆಗುತ್ತದೆ. ಆದರೆ ಕೀರ್ತಿ ಎಂಬುದೊಂದೇ ಪತಿವ್ರತೆಯಂತೆ ಸಾಧಕನಲ್ಲಷ್ಟೇ ನಿಷ್ಠೆ ಹೊಂದಿರುತ್ತದೆ’. ಎರಡನೆಯ ವಿಷಯವೆಂದರೆ, ‘ಒಳ್ಳೆಯ ಮಾರ್ಗದಲ್ಲಿ ನಡೆಯುವವರೆಲ್ಲ ಒಂದು ರೀತಿಯಲ್ಲಿ ಸ್ವತಂತ್ರರೇ. ಇತರರ ಏಳ್ಗೆಗೆ ಸಂತೋಷಪಡೋಣ. ಪರೋಪಕಾರಿಗಳನ್ನು ಸಮಾಜದಲ್ಲಿ ಹೆಮ್ಮೆಯಿಂದ, ಧೈರ್ಯದಿಂದ ಅಭಿನಂದಿಸೋಣ’.

ಪರಿಪೂರ್ಣ ಶಿಕ್ಷಣವನ್ನು ಪೂರ್ಣ ವಿಕಸನಗೊಂಡ ಕಮಲಪುಷ್ಪಕ್ಕೆ ಹೋಲಿಸಬಹುದಾದರೆ ಶಾಲಾ-ಕಾಲೇಜುಗಳಿಂದ ಪಡೆದ ಶಿಕ್ಷಣವು ಆ ವಿಕಸಿತ ಕಮಲದ ಒಂದು ದಳ ಮಾತ್ರ! ‘ಸುಂದರ ವಸ್ತುಗಳೆಲ್ಲ ಯೋಗ್ಯವೆಂದು ಹೇಳಲಾಗದು, ಆದರೆ ಯೋಗ್ಯವಾದವುಗಳೆಲ್ಲ ಸುಂದರ’ ಎಂಬ ವಿದುರ ನೀತಿಯ ಆದರ್ಶವು ಮಾನವನ ವಿಕೃತಸ್ವಭಾವದ ನಡವಳಿಕೆಗೆ ಉತ್ತಮ ಪುಸ್ತಕಗಳು ಆದರ್ಶತಾಯಿಯಂತೆ ಮಾರ್ಗದರ್ಶನ ನೀಡಬಲ್ಲವೆಂಬ ವಿವೇಕವನ್ನು ಉದ್ದೀಪನಗೊಳಿಸುತ್ತದೆ. ಹಣವಷ್ಟೇ ಜೀವನದ ಚರಮೋದ್ದೇಶವಲ್ಲ. ಹಣ ಸ್ವರ್ಗದಿಂದ ಬಂದ ಆಶೀರ್ವಾದವೂ ಆಗಬಹುದು, ಅಲ್ಲದೆ ಎಚ್ಚರ ತಪ್ಪಿದರೆ ನರಕಕ್ಕೆ ಟಿಕೆಟ್ಟೂ ಆಗಬಹುದಂತೆ!

4. ಶ್ರಮ ಸಂಸ್ಕೃತಿ: ‘ತುಕ್ಕು ಹಿಡಿಯುವುದಕ್ಕಿಂತ ಸವೆಯುವುದೇ ಲೇಸು!’ ಪರಿಶ್ರಮದ ಬೇರುಗಳು ಔಷಧದಂತೆ ಕಹಿ, ಆದರೆ ಅದರ ಫಲಗಳು ಸಿಹಿ ಹಾಗೂ ಶಕ್ತಿದಾಯಕ!‘Youth is the wonderful time in life. When energy is limitless, human creativity is at its best and ‘never say die’ spirit is at its peak’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಯುವಕರು ಎಂದಿಗೂ ತಮ್ಮ ಸಾಹಸದ ವಿಷಯಗಳನ್ನು ಇತರರೊಂದಿಗೆ ವಿನಿಮಯ ಮಾಡಿಕೊಳ್ಳಬೇಕೇ ಹೊರತು ತನ್ನ ಧೈರ್ಯಹೀನತೆಯನ್ನಲ್ಲ! ಯುವಕರು ಎಂದೂ ವಸ್ತು ದೂರದ ಸಂಪತ್ತಿಗಾಗಿ ಸದ್ಗುಣಗಳನ್ನು ಒತ್ತೆ ಇಡಬಾರದು.

ಸೋಮಾರಿ ಕರ್ತವ್ಯವಿಮುಖನಾಗಿರುತ್ತಾನೆ. ಆದ್ದರಿಂದ ಅವನಿಗೆ ಅದೃಷ್ಟ ಮತ್ತು ಭವಿಷ್ಯಗಳಲ್ಲಿ ನಂಬಿಕೆ ಇಲ್ಲ. ಆದರೆ ಅದೃಷ್ಟವು ಶ್ರಮಸಂಸ್ಕೃತಿಯ ಪಕ್ಷಪಾತಿ! ಮನುಷ್ಯ ತನ್ನ ಪರಿಶ್ರಮದ ಮೂಲಕ ಭಾಗ್ಯವನ್ನು ಬದಲಾಯಿಸಿಕೊಳ್ಳಬಲ್ಲ! ಕೆಲಸವನ್ನು ಕಲಿತರಷ್ಟೇ ಸಾಲದು, ಅದನ್ನು ಪ್ರೀತಿಯಿಂದ ನಿರ್ವಹಿಸಬೇಕು. ಕೆಲಸವನ್ನು ಪ್ರೀತಿಸುವವನಿಗೆ ಒಂಟಿತನವಿಲ್ಲ, ನಿರಾಶೆಯಿಲ್ಲ, ಆರೋಗ್ಯದ ಕೊರತೆಯಂತೂ ಇಲ್ಲ. ಪ್ರತಿಕ್ಷಣವೂ ನಮ್ಮ ಮುಂದೆ ಕರ್ತವ್ಯ ಮತ್ತು ಮನರಂಜನೆಯ ನಡುವೆ ಆಯ್ಕೆ ಉಂಟಾಗುತ್ತದೆ. ಯೋಗ್ಯನು ಪ್ರಥಮತಃ ಕರ್ತವ್ಯವನ್ನು ಆಯ್ಕೆ ಮಾಡುತ್ತಾನೆ. ಆನಂತರ ಮನರಂಜನೆ! ವಿವೇಕಿಯಾದ ಯುವಕನು ಪ್ರತಿಕ್ಷಣದ ಪರಿಶ್ರಮ ಮತ್ತು ಪರಿಶ್ರಮ ಸಾಧನೆಯ ನಿರಂತರ ಮುಂದುವರಿಕೆಗೆ ಒತ್ತು ನೀಡುತ್ತಾನೆ. ದುರ್ಬಲ ಯುವಕರು ತಮ್ಮ ಚಿಂತೆಯಿಂದ ಪಾರಾಗಲು ಮದ್ಯ ಹಾಗೂ ಮಾದಕವಸ್ತುಗಳಿಗೆ ದಾಸರಾಗುತ್ತಿರುವುದು ಹಾಲಿನಂಥ ನಮ್ಮ ಜೀವನವನ್ನು ಹಾಲಾಹಲ ವಿಷದಂತೆ ಆಗಿಸಿದಂತಾಗುವುದಿಲ್ಲವೇ?

ಉಪಸಂಹಾರ: ‘ಶಕ್ತಿಶಾಲಿಯೂ, ಪೌರುಷವಂತನೂ ಆದ ದುಷ್ಟನನ್ನಾದರೂ ನಾನು ಗೌರವಿಸುತ್ತೇನೆ, ಹೇಡಿಯನ್ನಲ್ಲ! ಸಂತನಿಗೆ ಹಿಂದಿನ ಜನ್ಮಗಳ ಸಂಸ್ಕಾರದ ಬಲಬೆಂಬಲ ಇರುವುದೆಂಬುದನ್ನು ನಂಬಬಹುದಾದರೆ, ದುಷ್ಟನಿಗೂ ಸಜ್ಜನನಾಗಿ ಪರಿವರ್ತಿತನಾಗಲು ಅವಕಾಶವಿರಲೇಬೇಕು’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಭರ್ತಹರಿಯ ನೀತಿಶತಕ ಹೇಳುತ್ತದೆ, ‘ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ತತ್ತ್ವಗಳನ್ನು ಮನುಷ್ಯ ಗ್ರಹಿಸದೇ ಹೋದ. ಯೋಗ್ಯ ರೀತಿಯಲ್ಲಿ ಧರ್ವನುಷ್ಠಾನ ಮಾಡದೆ ಅಭ್ಯುದಯ ಸಾಧಿಸಲಿಲ್ಲ, ಅರ್ಥ ಕಾಮಗಳನ್ನು ಗ್ರಹಿಸದೆ ಭೋಗ ಭಾಗ್ಯಗಳಿಗೆ ಅರ್ಹನಾಗಲಿಲ್ಲ, ಮೋಕ್ಷ ಸಾಧನೆಗೆ ಶಿವನ ಧ್ಯಾನ ಮಾಡಲಿಲ್ಲ. ನಮ್ಮ ಜನ್ಮ ವ್ಯರ್ಥವಾಯ್ತು. ನಾವು ಹುಟ್ಟಿ ಏನನ್ನೂ ಸಾಧಿಸಲಿಲ್ಲ, ಬದಲಾಗಿ ನಮ್ಮ ತಾಯಿಯ ಯೌವನ ಹಾಳಾಯ್ತು!’

ಯುವಜನರೇ, ನಾವು ಜನ್ಮಕೊಟ್ಟ ರಾಷ್ಟ್ರಮಾತೆಗೆ ಈ ರೀತಿ ನಷ್ಟ ಮಾಡಬಾರದು. ಸ್ವಾಮಿ ವಿವೇಕಾನಂದರು, ‘ನನ್ನ ಭರವಸೆ ಇರುವುದು ಯುವ ಸಮುದಾಯದಲ್ಲಿ, ಆಧುನಿಕ ತಲೆಮಾರಿನಲ್ಲಿ. ನನ್ನ ಸುತರು ಸಿಂಹಸದೃಶರಾಗಿ ಕಾರ್ಯಶೀಲರಾಗಿ ನಾ ಕಂಡ ಕನಸುಗಳನ್ನು ನನಸಾಗಿಸುತ್ತಾರೆ’ ಎಂದಿದ್ದಾರೆ. ಸಮಯೋಚಿತವಾದ ಯೋಗ್ಯ ನಡೆ ನಮ್ಮನ್ನು ಉದ್ದಾರದ ಹೆದ್ದಾರಿಯಲ್ಲಿ ಮುನ್ನಡೆಸಬಲ್ಲದು.

‘A stitch in time saves nine’ ಅಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)