| ಅನಿತಾ ನಾಗರಾಜ ಹೆಗಡೆ
ಅವನೋ 8-10 ವರ್ಷದ ಬಾಲಕನಿರಬಹುದು. ಅಂದು ಬಲು ಉತ್ಸಾಹದಿಂದ ತನ್ನ ತಾಯಿಯ ಜೊತೆ ಸೈಕಲ್ ಕಲಿಯಲೆಂದು ರಸ್ತೆಗಿಳಿದಿದ್ದ. ಅಮ್ಮ ಅವನಿಗೆ ಕೆಲವೊಂದಿಷ್ಟು ಸೂಚನೆಗಳನ್ನು ನೀಡಿ ಸೈಕಲ್ ತುಳಿಯುವುದಕ್ಕೆ ಪ್ರೇರೇಪಿಸಿದಳು. ಆತ ವಯೋಸಹಜ ಅತ್ಯುತ್ಸಾಹದಿಂದ ಪೆಡಲ್ ಮೇಲೆ ಕಾಲಿಟ್ಟು ತುಳಿಯಲು ಪ್ರಾರಂಭಿಸಿದ. ಒಂದೆರಡು ಮಾರು ಸಾಗುತ್ತಿದ್ದಂತೆ ತಾಯಿ ಎಣಿಸಿದಂತೆಯೇ ಆಯ ತಪ್ಪಿ ಬಿದ್ದ. ಆಗ ತಾಯಿ ಬಂದು ತನ್ನನ್ನು ಎಬ್ಬಿಸಬಹುದೆಂಬ ಆತನ ನಿರೀಕ್ಷೆ ನಿಜವಾಗಲಿಲ್ಲ. ತಾಯಿ ಅವನ ಸಹಾಯಕ್ಕೆ ಬರಲಿಲ್ಲ. ಬಾಲಕನಿಗೆ ಸಿಟ್ಟು ಬಂದರೂ ಬಿದ್ದ ಸೈಕಲ್ಲನ್ನು ಎತ್ತಿಕೊಂಡು ಮತ್ತೆ ತುಳಿಯಲು ಪ್ರಾರಂಭಿಸಿದ. ಮತ್ತೂ ಎರಡು ಬಾರಿ ಬಿದ್ದ. ಆಗಲೂ ತಾಯಿ ಹುರಿದುಂಬಿಸುತ್ತಿದ್ದಳೆ ವಿನಾ ಅವನ ಬಳಿ ಬರಲಿಲ್ಲ. ಬಾಲಕನಿಗೆ ಬೇಸರದ ಜೊತೆ ಅವಮಾನವೂ ಆಯಿತು. ಹಾಗೆಯೇ ಅಳು ಸಹ ಬಂದಿತು. ಮತ್ತೊಮ್ಮೆ ಏನಾದರಾಗಲಿ ಎಂದು ಸೈಕಲ್ ಏರಿದ. ಆಗ ತಾಯಿ ಸಹಾಯಕ್ಕೆ ಬಂದು ಇನ್ನೂ ಸರಿಯಾದ ಮಾರ್ಗದರ್ಶನ ನೀಡಿ ಮತ್ತೆ ಆಯತಪ್ಪದಂತೆ ನೋಡಿಕೊಂಡಳು. ಹಾಗೆ ಆ ಬಾಲಕ ಸ್ವಲ್ಪ ಸಮಯ ಕಳೆದಂತೆ ಸೈಕಲ್ ಸವಾರಿಯಲ್ಲಿ ಹಿಡಿತ ಸಾಧಿಸಿದ.
ನಂತರ ತಾಯಿ ಅವನ ಗಾಯಗಳಿಗೆ ಮುಲಾಮು ಹಚ್ಚುತ್ತ, ‘ನೀನು ಬಿದ್ದಾಗ ನಾನು ಬೇಕೆಂದೇ ಸಹಾಯಕ್ಕೆ ಬರಲಿಲ್ಲ. ಏಕೆ ಗೊತ್ತಾ? ಒಂದು ಬಾರಿ ಬಿದ್ದಾಗ ಸಹಾಯಕ್ಕೆ ಬಂದರೆ ಮುಂದಿನ ಬಾರಿಯೂ ಯಾರಾದರೂ ನೆರವಿಗೆ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಮನಸ್ಸಿಟ್ಟು ಸ್ವಂತ ಪ್ರಯತ್ನ ಮಾಡುವುದಿಲ್ಲ. ಅದೇ ಸಹಾಯಕ್ಕೆ ಬರದೆ ಇದ್ದರೆ? ಅವಮಾನವಾದಂತಾದರೂ ತಾವೇ ಸಂಭಾಳಿಸಿಕೊಳ್ಳುತ್ತಾರೆ; ಜಿದ್ದಿಗೆ ಬಿದ್ದು ಪ್ರಯತ್ನಿಸುತ್ತಾರೆ. ಪದೇಪದೆ ಯತ್ನಿಸಿಯೂ ಯಶಸ್ಸು ಸಿಗದಿದ್ದರೆ ನೆರವು ಪಡೆಯುವುದರಲ್ಲಿ ತಪ್ಪೇನಿಲ್ಲ. ಅದರಿಂದ ಯಾವುದೇ ವಿದ್ಯೆ ಇನ್ನಷ್ಟು ಮನದಟ್ಟಾಗುತ್ತದೆ. ಹೀಗಾಗಿ ನಾನು ಮೊದಲಿಗೇ ನಿನ್ನ ಸಹಾಯಕ್ಕೆ ಬರಲಿಲ್ಲ’ ಎಂದು ವಿವರಿಸಿ, ಸ್ವಪ್ರಯತ್ನದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟಳು. ಮಕ್ಕಳಿಗೆ ಬಾಲ್ಯದಲ್ಲೇ ಸರಿಯಾದ ಸಂಸ್ಕಾರ ಮತ್ತು ಮೌಲ್ಯಗಳನ್ನು ತುಂಬಿದರೆ ಮುಂದೆ ಉತ್ತಮ ವ್ಯಕ್ತಿತ್ವದವರಾಗಿ ರೂಪುಗೊಳ್ಳುತ್ತಾರೆ. ಜೀಜಾಮಾತೆ ಛತ್ರಪತಿ ಶಿವಾಜಿಗೆ, ಕೌಸಲ್ಯೆ ಶ್ರೀರಾಮಚಂದ್ರನಿಗೆ ನೀಡಿದ ಮೌಲ್ಯ, ಸಂಸ್ಕಾರಗಳು ಎಂಥ ಪರಿವರ್ತನೆ ತಂದವು ಎಂಬುದು ಗೊತ್ತಿರುವಂಥದ್ದೇ.
ಅಷ್ಟಕ್ಕೂ, ಸೋಲಿನ ರುಚಿ ನೋಡದೇ ಗೆದ್ದ ಶೂರನಿಲ್ಲ. ಒಂದು ವೇಳೆ ಗೆದ್ದರೂ ಪ್ರಯೋಜನವಿಲ್ಲ. ಏಕೆಂದರೆ ಸೋಲದೆ ಗೆದ್ದವನಿಗೆ ಗೆಲುವಿನ ನಿಜವಾದ ಬೆಲೆ ತಿಳಿಯುವುದಿಲ್ಲ. ಆದ್ದರಿಂದ ಸೋತಾಗ ಖುಷಿಪಡುವುದನ್ನು ಕಲಿಯಬೇಕು. ಏಕೆಂದರೆ ಅಲ್ಲಿಂದಲೇ ಗೆಲುವಿನ ಪಯಣ ಆರಂಭವಾಗುವುದು. ಅವಮಾನವಾದಾಗಲೇ ನಮ್ಮ ಆತ್ಮಸಾಕ್ಷಿಗೆ ನೋವಾಗುತ್ತದೆ. ಆತ್ಮಸಾಕ್ಷಿಗೆ ನೋವಾದಾಗಲೇ ಜವಾಬ್ದಾರಿ ಮೂಡುತ್ತದೆ. ಏನಾದರೂ ಸಾಧಿಸಬೇಕೆಂಬ ಕಿಚ್ಚು ಹೊತ್ತಿಕೊಳ್ಳುತ್ತದೆ. ಹಾಗಾಗಿ ಅವಮಾನಗಳನ್ನು ತುಚ್ಛವಾಗಿ ಕಾಣದೇ ಅವುಗಳನ್ನೇ ಗೆಲುವಿನ ಕಡೆ ಕರೆದೊಯ್ಯುವ ದಾರಿದೀಪಗಳನ್ನಾಗಿ ಮಾಡಿಕೊಳ್ಳೋಣ, ಬಾಳನ್ನು ಹಸನಾಗಿಸಿಕೊಳ್ಳೋಣ.
(ಲೇಖಕಿ ಪದವಿ ವಿದ್ಯಾರ್ಥಿನಿ)