ನಾನು ಏನೂ ಹೇಳಲಿಲ್ಲ. ಅವರು ಮುಂದುವರಿಸಿದರು, ‘ನೀವು ಸಹ ಖಂಡಿತವಾಗಿಯೂ ಇದನ್ನು ಮಾಡುತ್ತಿರುತ್ತೀರಿ’. ನಾನು ಹೇಳಿದೆ, ‘ಇಲ್ಲ, ಈಗ ಯಾವುದೇ ವಿಮಾನಗಳಿಲ್ಲದ ಕಾರಣ ನಾನು ಎಲ್ಲಿಯೂ ಹಾರಾಡುತ್ತಿಲ್ಲ’. ಮುಂದುವರಿದು ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ವಿಚಾರಿಸಿ ಸಂಭಾಷಣೆಯನ್ನು ಮುಕ್ತಾಯಗೊಳಿಸಿದೆ. ಅವರು ನನ್ನೊಂದಿಗೆ ‘ಸೂಕ್ಷ್ಮ ಶರೀರ ಪ್ರಯಾಣ’ದ ಕುರಿತು ಸಂಭಾಷಣೆಯನ್ನು ನಿರೀಕ್ಷಿಸುತ್ತಿದ್ದ ಕಾರಣ ಅವರು ಬಹಳ ನಿರಾಶಗೊಂಡಿದ್ದರು ಎಂದು ನನಗೆ ಅರ್ಥವಾಯಿತು! ದುರದೃಷ್ಟವಶಾತ್, ಈ ಜಗತ್ತಿನಲ್ಲಿ ಅಧ್ಯಾತ್ಮವೆಂದರೆ ಇದೇ ಆಗಿದೆ. ಅಧ್ಯಾತ್ಮದ ಹೆಸರಿನಲ್ಲಿ ಅನೇಕ ಅಸಂಬದ್ಧತೆಗಳನ್ನು ಕೊಡಲಾಗುತ್ತಿದೆ.
ಅಧ್ಯಾತ್ಮವು, ನಮ್ಮ ಕುತೂಹಲ ಮತ್ತು ಭೌತಿಕ ಆಸೆಗಳನ್ನು ಪೂರೈಸುವುದಕ್ಕಾಗಿ ಪ್ರಕೃತಿಯ ನಿಯಮಗಳನ್ನು ಬಗ್ಗಿಸಲು ಅಭೌತಿಕ ತಂತ್ರಗಳನ್ನು ಅನ್ವಯಿಸುವ ಬಗ್ಗೆ ಇಲ್ಲ. ಅಥವಾ ಕೆಲವು ಗುಪ್ತ ತತ್ವಶಾಸ್ತ್ರ ಅಥವಾ ಸಾಂತ್ವನಕಾರಿ ನಂಬಿಕೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಅಲ್ಲ. ಇದು ಜೀವನಕ್ಕೆ ಭೌತಿಕತೆಯನ್ನು ಮೀರಿದ ಗಹನವಾದ ಆಯಾಮವನ್ನು ತೋರುವ ಪ್ರಾಯೋಗಿಕ ಸಾಧನವಾಗಿದೆ. ಇದು, ಸ್ವಯಂರಕ್ಷಣೆಯ ಪ್ರವೃತ್ತಿಯನ್ನು ಮೀರಿ, ಭವಿಷ್ಯಕ್ಕೆ ನಾವೇ ಯಜಮಾನರಾಗುವುದರ ಕಡೆಗೆ ಆಂತರ್ಯವನ್ನು ನಿಭಾಯಿಸುವ ಬಗ್ಗೆ ಆಗಿದೆ.
ನಾವು ಮಕ್ಕಳಾಗಿದ್ದಾಗ, ನಮ್ಮ ಭೌತಿಕತೆಯ ಮಿತಿಗಳು ನಮ್ಮ ಅರಿವಿನಲ್ಲಿತ್ತು. ದುರದೃಷ್ಟವಶಾತ್, ವಯಸ್ಕರಾಗಿ ಬೆಳೆದಂತೆ, ಹೆಚ್ಚು ಜಾಗೃತರಾಗುವ ಬದಲು, ನಮ್ಮಲ್ಲಿ ಹೆಚ್ಚಿನವರು ತಮ್ಮ ಭೌತಿಕ ಗಡಿಗಳ(ಮಿತಿಗಳ) ಅಗತ್ಯವನ್ನು ತಮ್ಮ ಮಾನಸಿಕ, ಭಾವನಾತ್ಮಕ ಮತ್ತು ಪ್ರಾಣಶಕ್ತಿಯ ರಚನೆಗಳಲ್ಲೂ ವಿಸ್ತರಿಸಲು ಪ್ರಾರಂಭಿಸಿದ್ದಾರೆ. ಈ ರೀತಿಯಾದಾಗ ನಮ್ಮ ಗಡಿಗಳೇ ನಮ್ಮ ಅಸ್ತಿತ್ವದ ಆಧಾರವಾಗುತ್ತವೆ. ಇದರಿಂದಲೇ ನಮ್ಮ ಪ್ರತ್ಯೇಕತೆ, ಗುರುತು ಮತ್ತು ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಗಡಿಗಳ ಅಗತ್ಯವು ಭೌತಿಕತೆಯ ಒಂದು ನೈಸರ್ಗಿಕ ಗುಣಲಕ್ಷಣ ಮತ್ತು ಬದುಕುವ ಪ್ರವೃತ್ತಿಯ ಅಭಿವ್ಯಕ್ತಿ. ಆದಾಗ್ಯೂ, ಇದು ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿ ವ್ಯವಸ್ಥೆಗೆ ವಲಸೆ ಹೋದಾಗ, ಸುತ್ತಲೂ ರಕ್ಷಣಾತ್ಮಕ ಪಂಜರವನ್ನು ನಿರ್ವಿುಸಿಕೊಳ್ಳಲು ಪ್ರಾರಂಭಿಸುತ್ತೇವೆ ಮತ್ತು ಅದು ಒಂದು ನಿರ್ಬಂಧಿತ ಜೀವನವಾಗುತ್ತದೆ. ಅಂತಿಮವಾಗಿ ಭೌತಿಕತೆಯ ಸ್ವಭಾವವನ್ನು ಇಡೀ ಜಗತ್ತಿಗೆ ವಿಸ್ತರಿಸುತ್ತೇವೆ. ದೈಹಿಕ ರೂಪವು ಬದುಕುವ ಒಂದು ಸಾಧನವಾಗಿದೆ ಮತ್ತು ಬದುಕುವುದಷ್ಟೇ ಜೀವನದ ಏಕೈಕ ಉದ್ದೇಶವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಹೆಚ್ಚಿನ ಆಧ್ಯಾತ್ಮಿಕ ಪ್ರಕ್ರಿಯೆಗಳು ‘ಅಭ್ಯಾಸ’ದ ಒಂದು ನಿರ್ದಿಷ್ಟ ಆಯಾಮವನ್ನು ಹೊಂದಿವೆ. ಈ ಆಯಾಮವು ಯೋಗಕ್ಷೇಮ, ಆರೋಗ್ಯ ಮತ್ತು ಶರೀರವ್ಯವಸ್ಥೆಯ ಒಟ್ಟಾರೆ ಸಮಗ್ರತೆಗಾಗಿ, ದೈಹಿಕ ಮತ್ತು ಪ್ರಾಣಶಕ್ತಿಯ ರೂಪಗಳ ಚೈತನ್ಯವನ್ನು ಸುಧಾರಿಸುವ ಮತ್ತು ಹೆಚ್ಚಿಸುವ ಕುರಿತಾಗಿರುತ್ತದೆ. ಆದಾಗ್ಯೂ, ಇದನ್ನೇ ಪ್ರಮುಖವಾಗಿ ತೆಗೆದುಕೊಳ್ಳಬಾರದು. ದೇಹವು ಸ್ಥಿರವಾಗಿ ಮತ್ತು ಆರಾಮವಾಗಿರುವಾಗ ಮಾತ್ರ, ಭೌತಿಕತೆಯನ್ನು ಮೀರಿದ ಸಾಧ್ಯತೆಗಳ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದು. ಆಧ್ಯಾತ್ಮಿಕ ಪ್ರಕ್ರಿಯೆಗಳ ಮತ್ತೊಂದು ಆಯಾಮವೆಂದರೆ ಮಾನಸಿಕ ಮತ್ತು ಭಾವನಾತ್ಮಕ ಕಟ್ಟುಪಾಡುಗಳನ್ನು ಸಡಿಲಗೊಳಿಸುವುದು, ಇದರಿಂದ ಪ್ರಸ್ತುತ ಗಡಿಗಳನ್ನು ಮೀರಿ ದೊಡ್ಡ ಸಾಧ್ಯತೆಗೆ ರೂಪಾಂತರಗೊಳ್ಳಬಹುದು. ರೂಪಾಂತರದ ಪ್ರಯಾಣವನ್ನು ಮುಂದುವರಿಸಿದಂತೆ, ಒಂದು ದಿನ ನಾವು ನಿರಾಕಾರರಾಗುತ್ತೇವೆ. ನಿರಾಕಾರರಾಗುವುದು ಎಂದರೆ ಭೌತಿಕ ರೂಪವನ್ನು ಕಳೆದುಕೊಳ್ಳುತ್ತೇವೆ ಎಂದರ್ಥವಲ್ಲ. ಇದರರ್ಥ ಇನ್ನು ಮುಂದೆ ಯಾವುದೇ ರೂಪ ಅಥವಾ ಗುರುತಿಗೆ ಬದ್ಧರಾಗಿಲ್ಲ. ನಾವು ಏನಾಗಬೇಕೆಂದು ಬಯಸುತ್ತೇವೆಯೋ ಅದನ್ನು ಆಯ್ಕೆ ಮಾಡಲು ಸ್ವತಂತ್ರರಾಗಿದ್ದೇವೆ ಎಂದರ್ಥ.
ಹಾಗಾದರೆ ಈ ರೂಪಾಂತರವನ್ನು ಸಾಧಿಸುವುದು ಹೇಗೆ? ಇದನ್ನು ಸುಲಭವಾಗಿ ತರಗತಿಯಲ್ಲಿ ಶಿಕ್ಷಕರು ಕಲಿಸಲು ಸಾಧ್ಯವಿಲ್ಲ. ಅದು ಸಂಭವಿಸಲು, ಒಂದು ‘ಧಾರೆಯೆರೆಯುವಿಕೆ’ ಇರಬೇಕು. ಶಿಕ್ಷಕರು ಉಪಯುಕ್ತ ಮಾಹಿತಿ ಮತ್ತು ತಿಳಿವಳಿಕೆಯನ್ನು ನೀಡಲು ತರಬೇತಿ ಪಡೆದವರು, ಆದರೆ ಯಾವುದೇ ‘ಧಾರೆಯೆರೆಯುವಿಕೆ’ಗೆ ಸಂಪೂರ್ಣವಾಗಿ ಅಸಮರ್ಥನಾಗಿರಬಹುದು. ಒಂದು ಬೋಧನೆಯನ್ನು ವಿಶ್ಲೇಷಿಸಬಹುದು ಮತ್ತು ಅರ್ಥಮಾಡಿಕೊಳ್ಳಬಹುದು ಮತ್ತು ನಮ್ಮ ದೃಷ್ಟಿಕೋನಗಳು ಮತ್ತು ಮನೋಭಾವಗಳಲ್ಲಿ ಬದಲಾವಣೆಗಳನ್ನು ಪ್ರೇರೇಪಿಸಬಹುದು. ಆದಾಗ್ಯೂ, ಅದು ಮೂಲಭೂತ ರೀತಿಯಲ್ಲಿ ರೂಪಾಂತರಿಸುವುದಿಲ್ಲ. ‘ಧಾರೆಯೆರೆಯುವಿಕೆ’ಯು ನಾವು ಯಾರು ಎಂಬುದರ ಅಸ್ತಿತ್ವವನ್ನು ಆಮೂಲಾಗ್ರವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಒಂದು ಬೋಧನೆಯು ಬಾಗಿಲನ್ನು ತಟ್ಟಿದಂತೆ. ಬಾಗಿಲು ಕೇವಲ ಒಂದು ಸಾಧ್ಯತೆಯಾಗಿ ತೆರೆಯುತ್ತದೆ. ‘ಧಾರೆಯೆರೆಯುವಿಕೆ’ಯ ಮೂಲಕ ಮಾತ್ರ ಅದು ವಾಸ್ತವವಾಗುತ್ತದೆ.
ಅನೇಕ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಭಾರತದಲ್ಲಿ, ಋಷಿಗಳು, ದಾರ್ಶನಿಕರು ಮತ್ತು ಯೋಗಿಗಳ ಸುದೀರ್ಘ ಪರಂಪರೆ ಇದೆ, ಅವರು ಈ ‘ಧಾರೆಯೆರೆಯುವಿಕೆ’ಗೆ ಸಮರ್ಥರಾಗಿದ್ದರು. ಅವರಲ್ಲಿ ಅನೇಕರು ಎಂದಿಗೂ ಗುರುತಿಸಲ್ಪಟ್ಟಿಲ್ಲ, ಏಕೆಂದರೆ ಪ್ರಪಂಚದ ಅನೇಕ ಸಂಸ್ಕ ೃಗಳು ಅವರ ‘ಧಾರೆಯೆರೆಯುವಿಕೆ’ಯ ಮೌಲ್ಯವನ್ನು ಗುರುತಿಸುವಷ್ಟು ಸೂಕ್ಷ್ಮ ಅಥವಾ ಪ್ರಜ್ಞಾವಂತರಾಗಿರಲಿಲ್ಲ. ಸಮಾಜದಲ್ಲಿ ಯಾರನ್ನಾದರೂ ಅವರ ಕಾರ್ಯಗಳು ಅಥವಾ ಭೌತಿಕ ಕೊಡುಗೆಗಳಿಗಾಗಿ ಅಲ್ಲದೆ, ಅವರ ಉಪಸ್ಥಿತಿ ಮತ್ತು ಆಧ್ಯಾತ್ಮಿಕ ಸಾರಕ್ಕಾಗಿ ಗುರುತಿಸಲು ನಿರ್ದಿಷ್ಟ ಮಟ್ಟದ ಅರಿವು ಬೇಕಾಗುತ್ತದೆ. ಅವರು ಜ್ಞಾನವನ್ನು ‘ಧಾರೆ’ಯೆರೆಯುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದ ಕೆಲವರು, ಅವರ ಉಪಸ್ಥಿತಿಯಲ್ಲಿ ಮಿಂದೆದ್ದು ಅದ್ಭುತ ಪ್ರಯೋಜನಗಳನ್ನು ಪಡೆದರು.
ಪ್ರಪಂಚದಲ್ಲಿ ಜ್ಞಾನವನ್ನು ‘ಧಾರೆಯೆರೆಯುವ’ ಸಾಮರ್ಥ್ಯವುಳ್ಳವರು ದೊಡ್ಡ ಮೌಲ್ಯವನ್ನು ಹೊಂದಿರುತ್ತಾರೆ. ಇದು ನಾವು ಮಾಡುವ ಕೆಲಸಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ‘ಧಾರೆಯೆರೆಯುವಿಕೆ’ಗೆ ಪರಿಣಾಮಕಾರಿ ಸಾಧನವಾಗಲು ನಮಗೆ ಹೆಚ್ಚು ಜನರು ಬೇಕು. ಇದು ಸಂಭವಿಸಬೇಕಾದರೆ, ಮಾನಸಿಕ ಮತ್ತು ಭಾವನಾತ್ಮಕ ದೇಹಗಳ ನಿರ್ಬಂಧತೆಯ ಜೊತೆಗೆ ಶಕ್ತಿದೇಹದ ನಿರ್ಬಂಧತೆಯನ್ನೂ ನೀಗಿಸಲು ನಿರ್ದಿಷ್ಟ ಮಟ್ಟದ ಆಧ್ಯಾತ್ಮಿಕ ಪ್ರಕ್ರಿಯೆಯ ಅಗತ್ಯವಿದೆ. ಹಾಗೆಯೇ, ಭೌತಿಕತೆಯ ಮೂಲಭೂತ ರಚನೆಯನ್ನು ಬಲಪಡಿಸಬೇಕು, ಇದರಿಂದ ಜೀವನ ಪ್ರಕ್ರಿಯೆಯನ್ನು ಸ್ವಲ್ಪವೂ ದಣಿಸದೆ ಧಾರೆಯೆರೆಯಲು ಸಾಕಷ್ಟು ಬಲಶಾಲಿಗಳಾಗುತ್ತೇವೆ.
ಒಮ್ಮೆ ಶಕ್ತಿದೇಹವನ್ನು ತೆರೆದಿಟ್ಟುಕೊಂಡು ತೀವ್ರವಾದ ಸ್ಥಿತಿಯಲ್ಲಿರಲು ಕಲಿತರೆ, ಈ ‘ಧಾರೆ’ಯ ಬಗ್ಗೆ ಅರಿವಿರಲಿ ಅಥವಾ ಇಲ್ಲದಿರಲಿ, ಪ್ರತಿಯೊಬ್ಬರೂ ಇದರಿಂದ ಪ್ರಯೋಜನ ಪಡೆಯುತ್ತಾರೆ. ಆಧ್ಯಾತ್ಮಿಕ ಪ್ರಕ್ರಿಯೆಯ ಪರಮೋದ್ದೇಶ ಕೇವಲ ಸ್ವಯಂರೂಪಾಂತರವಲ್ಲದೆ ಪ್ರಪಂಚದ ರೂಪಾಂತರವಾಗಿದೆ. ಪ್ರಪಂಚದಲ್ಲಿ ಈಗ ಬೇಕಾಗಿರುವುದು ಪ್ರಜ್ಞೆಯ ಮೂಲಕ ರೂಪಾಂತರ. ನಿಜವಾಗಿಯೂ ಪ್ರಜ್ಞಾವಂತ ಪ್ರಪಂಚವನ್ನು ಹುಟ್ಟುಹಾಕಲು ಬಯಸಿದರೆ, ‘ಧಾರೆಯೆರೆಯುವಿಕೆ’ಯೇ ನಮ್ಮ ಮುಂದಿರುವ ದಾರಿ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)