ಅಂಕಣ

ಹನುಮನ ಸಂಜೀವಿನಿ ಬೇಗ ಸಿಗಲೆಂದು ಆಶಿಸುತ್ತ...

vinaymk1969

ಕರೊನಾ ಸನ್ನಿವೇಶ ತಂದೊಡ್ಡಿರುವ ವಿಷಮ ಸನ್ನಿವೇಶದಿಂದಾಗಿ ಭಾರತದ ಆರೋಗ್ಯರಂಗದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ. ಹಾಗೇ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ದೇಶದಲ್ಲಿಯೇ ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಇನ್ನಷ್ಟು ಇಂಬು ದೊರೆಯಲಿದೆ.

ಆತನ ಜೀವನದಲ್ಲಿ ಹೊಸ ಸಂಭ್ರಮ ಉದಿಸಿತ್ತು. ಅನೇಕ ಹರಕೆಗಳ ಫಲವಾಗಿ ಮಗಳು ಜನಿಸಿದ್ದಳು. ಸಾಮಾನ್ಯ ಸಂದರ್ಭವಾಗಿದ್ದರೆ, ಎತ್ತಿಕೊಂಡರೆ ಶಿಶುವಿಗೆ ಏನಾದೀತೋ ಎಂಬ ಅಳುಕಿನೊಂದಿಗೇ ತಂದೆತನದ ಪ್ರೀತಿಯನ್ನೆಲ್ಲ ಒಗ್ಗೂಡಿಸಿಕೊಂಡು ಮಗುವನ್ನು ಆಲಂಗಿಸಿಕೊಂಡು ಆನಂದ ಪಡೆಯುವ ಸಮಯ. ಆದರೆ ಈಗಿನ ಪರಿಸ್ಥಿತಿ ಹಾಗಿರಲಿಲ್ಲ. ತಾಯಿ ಮತ್ತು ನವಜಾತ ಶಿಶು ಆಸ್ಪತ್ರೆ ಮಂಚದ ಮೇಲೆ ಇದ್ದರೆ, ಈತ ಆರಡಿ ದೂರದಿಂದಲೇ ಇಬ್ಬರನ್ನೂ ನೋಡಿ ತೃಪ್ತಿಪಡಬೇಕಾಯಿತು...

ಇಲ್ಲಿ ಉಲ್ಲೇಖಿಸಿದ್ದು ಉತ್ತರ ಪ್ರದೇಶದ ನೊಯ್ಡಾದ ಫೀಲ್ಡ್ ಆಫೀಸರ್ ರಾಜೀವ್ ರೈ ಕುರಿತು. ನೊಯ್ಡಾದಲ್ಲಿ ಕರೊನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಈ ಮಾರಿಯ ನಿಯಂತ್ರಣ ಕಾರ್ಯದಲ್ಲಿ ತೊಡಗಿರುವವರು ಇವರು. ಪ್ರತಿ ಪ್ರಕರಣ ವರದಿಯಾದಾಗಲೂ ಆ ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಬೇಕಾಗುತ್ತದೆ. ಈ ಕಾರ್ಯದಲ್ಲಿ ತೊಡಗಿರುವವರಿಗೂ ಆತಂಕ ತಪ್ಪಿದ್ದಲ್ಲ. ಹೀಗಾಗಿ ಇವರು ಮನೆಯಲ್ಲಿ ಕೆಲ ದಿನಗಳಿಂದ ಸದಸ್ಯರಿಂದ ಅಂತರ ಕಾಪಾಡಿಕೊಂಡೇ ಇರುತ್ತಿದ್ದರು. ಆಸ್ಪತ್ರೆಯಲ್ಲಿದ್ದ ಪತ್ನಿಗೆ ಹೆರಿಗೆಯಾದಾಗ ವೈದ್ಯರ ಸಲಹೆ ಮೇರೆಗೆ ಪತ್ನಿ ಮತ್ತು ಮಗಳನ್ನು ದೂರದಿಂದಲೇ ನೋಡಿ ವಾಪಸ್ ಬರಬೇಕಾಯಿತು. ಇನ್ನೂ ಕೆಲ ದಿನ ಅವರು ಮನೆ ಸದಸ್ಯರಿಂದ ಅಂತರ ಕಾಪಾಡಿಕೊಳ್ಳಬೇಕಾಗುತ್ತದೆ. ನಮ್ಮ ಬೆಳಗಾವಿಯಲ್ಲಿ ನರ್ಸ್ ಒಬ್ಬರ ಮಗಳು ತಾಯಿಯ ಹತ್ತಿರ ಹೋಗಲಾಗದೆ ದೂರದಿಂದಲೇ ಕಣ್ಣೀರಿಟ್ಟ ದೃಶ್ಯ ಎಲ್ಲರ ಮನಕರಗಿಸಿತ್ತು.

ಕರೊನಾ ಎಂಬ ಮಹಾಮಾರಿ ಜಗತ್ತಿನಲ್ಲಿ ಏನೆಲ್ಲ ಸಂಕಟ, ತಲ್ಲಣ, ವಿಲಕ್ಷಣ ಪರಿಸ್ಥಿತಿಗಳನ್ನು ತಂದೊಡ್ಡುತ್ತಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ. ಮತ್ತಷ್ಟು ಆತಂಕದ ಸಂಗತಿ ಎಂದರೆ, ಕೆಲ ಕಡೆಗಳಲ್ಲಿ ಕರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯೇ ಈ ಸೋಂಕಿಗೆ ಈಡಾಗುತ್ತಿದ್ದಾರೆ. ಎಷ್ಟೋ ಮಂದಿ ವೈದ್ಯರು ಮತ್ತು ಸಿಬ್ಬಂದಿ ಈ ಅವಧಿಯಲ್ಲಿ ಮನೆಗಳಿಗೆ ಹೋಗುತ್ತಿಲ್ಲ ಅಥವಾ ಮನೆಯಲ್ಲಿಯೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಕರೊನಾಪೀಡಿತರ ಚಿಕಿತ್ಸೆಯಲ್ಲಿ ತೊಡಗಿದ್ದ ಮಧ್ಯಪ್ರದೇಶದ ಇಂದೋರ್​ನ ವೈದ್ಯರೊಬ್ಬರು ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಕರೊನಾಪೀಡಿತರ ಚಿಕಿತ್ಸೆಯಲ್ಲಿ ತೊಡಗಿದ್ದ ಸುಮಾರು 100 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದರೆ ಅಲ್ಲಿನ ಪರಿಸ್ಥಿತಿ ಊಹಿಸಿ. ಹಾಗಂತ, ಸಾರ್ವಜನಿಕರಾಗಲಿ, ವೈದ್ಯಲೋಕವಾಗಲಿ ಅಥವಾ ಇತರರಾಗಲಿ ಭಯಭೀತಗೊಳ್ಳಬೇಕಾದ ಕಾಲವಲ್ಲ. ಸಾವಧಾನದಿಂದ ಆಲೋಚಿಸಿ ಮುನ್ನಡಿಯಿಡಬೇಕಾದ ಸಂದರ್ಭ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೊನಾ ಹರಡುವಿಕೆ ಮತ್ತು ಸಾವಿನ ಪ್ರಮಾಣ ಕಡಿಮೆಯೇ ಇದೆ ಎಂದು ಅಂಕಿಅಂಶಗಳು ಹೇಳುತ್ತವೆ.

‘ಇದು ಒಂದು ರೀತಿಯಲ್ಲಿ ಯುದ್ಧ ಇದ್ದ ಹಾಗೇ. ಹೇಗೆ ಯುದ್ಧದಲ್ಲಿ ಸೈನಿಕರು ಸಕಲ ಸಜ್ಜಿತರಾಗಿ ಹೋಗಬೇಕಾಗುತ್ತದೆಯೋ ಹಾಗೇ ವೈದ್ಯರೂ ಎಲ್ಲ ವೃತ್ತಿಪರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಪಾಯ ಎಂದು ಇದರಿಂದ ಹಿಂದೆಗೆಯುವ ಪ್ರಶ್ನೆಯೇ ಇಲ್ಲ. ಏಕೆಂದರೆ ಈ ವೃತ್ತಿಯೇ ಹಾಗೆ’ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಸುದರ್ಶನ ಬಲ್ಲಾಳ್.

ಜಗತ್ತನ್ನಿಡಿ ಆವರಿಸಿರುವ ಕರೊನಾ ವಿರುದ್ಧ ಕೋಟ್ಯಂತರ ಮಂದಿ ತಂತಮ್ಮ ನೆಲೆಯಲ್ಲಿ ಹೋರಾಡುತ್ತಿದ್ದಾರೆ. ರಾಮಸೇತುವನ್ನು ನಿರ್ವಿುಸುವಾಗ ಒಂದು ಅಳಿಲು ಸಹ ತನ್ನ ಕೈಲಾದ ಸೇವೆ ಮಾಡಿತಂತೆ. ಹಾಗೇ ಈ ಮಹಾಯುದ್ಧದಲ್ಲಿ ಹಲವು ರಂಗ ಗಳವರ ಸಹಕಾರ, ಒಗ್ಗಟ್ಟಿನ ಕಾರ್ಯ ಬೇಕಾಗುತ್ತದೆ. ನಿತ್ಯ ಕಸ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವ ಪೌರಕಾರ್ವಿುಕರು, ಕಾನೂನುಸುವ್ಯವಸ್ಥೆ ನಿರ್ವಹಿಸುವ ಪೊಲೀಸರು... ಹೀಗೆ ಈ ಕರೊನಾ ಯೋಧರ ಸಂಖ್ಯೆ ದೊಡ್ಡದಿದೆ. ಆದರೂ ಆರೋಗ್ಯ ವಿಷಯದಲ್ಲಿ ವೈದ್ಯಕೀಯ ರಂಗದವರ ಕಾರ್ಯ ಸಹಜವಾಗಿಯೇ ಹೆಚ್ಚು ಆದ್ಯತೆ ಪಡೆಯುತ್ತದೆ.

ಹಾಗೆ ನೋಡಿದರೆ ಭಾರತದ ಆರೋಗ್ಯ ರಂಗ ಮಜಬೂತಾಗಿಯೇ ಇದೆ. ಜಗತ್ತಿನ ಖ್ಯಾತನಾಮ ವೈದ್ಯರು ಇಲ್ಲಿದ್ದಾರೆ. ಎಂತೆಂತಹ ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳನ್ನೂ ಬಗೆಹರಿಸಬಲ್ಲ ಪರಿಣತಿ ಮತ್ತು ತಂತ್ರಜ್ಞಾನ ನಮ್ಮಲ್ಲಿದೆ. ಸರ್ಕಾರಗಳು ಕೂಡ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿವೆ. 2022ರ ಹೊತ್ತಿಗೆ ಭಾರತೀಯರ ಸರಾಸರಿ ಆಯುಷ್ಯ ಸುಮಾರು 70 ವರ್ಷಕ್ಕೆ ಹೆಚ್ಚುವುದರಿಂದ ಆರೋಗ್ಯ ವಲಯ ಇನ್ನಷ್ಟು ಸಜ್ಜಾಗಬೇಕಾಗುತ್ತದೆ, ಬೆಳೆಯಬೇಕಾಗುತ್ತದೆ. ಆಸ್ಪತ್ರೆಗಳು, ವೈದ್ಯಕೀಯ ಉಪಕರಣಗಳು, ಕ್ಲಿನಿಕಲ್ ಟ್ರಯಲ್, ಹೊರಗುತ್ತಿಗೆ, ಟೆಲಿ ಮೆಡಿಸಿನ್, ಮೆಡಿಕಲ್ ಟೂರಿಸಂ, ಆರೋಗ್ಯ ವಿಮೆ ಇತ್ಯಾದಿ ಎಲ್ಲವನ್ನೂ ಸೇರಿಸಿ ಆರೋಗ್ಯ ಸೇವಾ ವಲಯ ಎಂದು ಗುರುತಿಸಲಾಗುತ್ತದೆ. ದೇಶದ ಆರೋಗ್ಯ ಸೇವಾ ವಲಯದ ಗಾತ್ರ 2022ರ ಹೊತ್ತಿಗೆ ಈಗಿನ ಮೂರು ಪಟ್ಟು ಅಂದರೆ, 8.6 ಟ್ರಿಲಿಯನ್​ಗೆ ಏರುವ ಲೆಕ್ಕಾಚಾರ ಹಾಕಲಾಗಿದೆ. ಭಾರತದ ಮೆಡಿಕಲ್ ಟೂರಿಸಂ (ಅಂದರೆ ಜನರು ಆರೋಗ್ಯ ಚಿಕಿತ್ಸೆಗಾಗಿ ಬೇರೆ ದೇಶಗಳಿಗೆ ತೆರಳುವುದು)ಮಾರುಕಟ್ಟೆ ಸದ್ಯ ಮೂರು ಬಿಲಿಯನ್ ಗಾತ್ರದ್ದಾಗಿದ್ದು, 2022ರ ವೇಳೆಗೆ 7 ಬಿಲಿಯನ್​ಗೆ ಏರುವ ಅಂದಾಜಿದೆ. ಜನರಲ್ಲಿ ಹೆಚ್ಚಿದ ಆರೋಗ್ಯದ ಅರಿವು, ಏರಿದ ಜೀವನಮಟ್ಟ, ಜೀವನಶೈಲಿಯಿಂದಾಗಿ ಬರುವ ಕಾಯಿಲೆಗಳಲ್ಲಿ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಆರೋಗ್ಯ ರಂಗದ ಬೆಳವಣಿಗೆಯಾಗುತ್ತದೆ ಎಂಬುದು ತಜ್ಞರ ಅಭಿಮತ. ಆದಾಯ ಮತ್ತು ಉದ್ಯೋಗ ಗಾತ್ರದ ದೃಷ್ಟಿಯಿಂದಲೂ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಇದೂ ಒಂದು. ಸದ್ಯ ಸುಮಾರು ಶೇ.20 ಭಾರತೀಯರು ವೈದ್ಯಕೀಯ ವಿಮೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಲಿದೆ.

ಅಂದಹಾಗೆ, ವೈದ್ಯಕೀಯ ವೆಚ್ಚಕ್ಕೂ, ಬಡತನಕ್ಕೂ ಸಂಬಂಧ ಇದೆ ಎಂದರೆ ಅಚ್ಚರಿಯಾಗುತ್ತದೆಯಲ್ಲವೆ? ಹೌದು, 2017ರಲ್ಲಿ ಪ್ರಕಟವಾದ ಒಂದು ವರದಿ ಪ್ರಕಾರ, ಭಾರತದ ಒಂದು ಕುಟುಂಬದ ಒಟ್ಟಾರೆ ವೆಚ್ಚದಲ್ಲಿ ಸುಮಾರು ಶೇ.70 ಔಷಧದ ವೆಚ್ಚವೇ ಆಗಿರುತ್ತದೆ. ಜನರು ಬಡವರಾಗಲು ಇದೂ ಒಂದು ಕಾರಣ ಎಂದು ಆ ವರದಿ ಬೊಟ್ಟುಮಾಡಿತ್ತು. ಇತರೆ ಕೆಲ ದೇಶಗಳಲ್ಲಿ ಈ ಪ್ರಮಾಣ ಎಷ್ಟಿದೆ ನೋಡಿ: ಅಮೆರಿಕ-ಶೇ. 13.4, ಇಂಗ್ಲೆಂಡ್-ಶೇ.14 ಮತ್ತು ಚೀನಾ ಶೇ.10. ಕೆಳ-ಮಧ್ಯಮ ಆದಾಯ ಹೊಂದಿರುವ 59 ದೇಶಗಳ ಸಮೂಹದಲ್ಲಿ, ಆರೋಗ್ಯ ಸೇವೆಗಾಗಿ ಜನರು ತಮ್ಮ ಕಿಸೆಯಿಂದಲೇ ಹಣ ವ್ಯಯಿಸಬೇಕಾದ ಆರನೇ ದೊಡ್ಡ ದೇಶ ಭಾರತ ಎಂದು ಆ ವರದಿ ಹೇಳಿರುವುದು ನಮ್ಮಲ್ಲಿನ ಸಮಸ್ಯೆಯನ್ನು ಎತ್ತಿತೋರುತ್ತದೆ. ಸದ್ಯ ದೇಶದ ಬಜೆಟ್​ನಲ್ಲಿ ಆರೋಗ್ಯ ವಲಯದ ಪ್ರಮಾಣ ಜಿಡಿಪಿಯ ಸುಮಾರು ಶೇ.2ರಷ್ಟಿದೆ. ಈ ಪ್ರಮಾಣ ಶೇ.5 ಅಥವಾ 6ಕ್ಕೆ ಏರಿದರೆ ಈ ವಲಯದಲ್ಲಿ ಸುಧಾರಣೆ ಕಂಡುಬಂದು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸವಲತ್ತು ಕಲ್ಪಿಸಲು ಸ್ವಲ್ಪ ಅನುವಾಗುತ್ತದೆ ಎಂಬುದು ತಜ್ಞರ ಅಂಬೋಣ. ನಮ್ಮ ದೇಶದಲ್ಲಿ ಗ್ರಾಮೀಣ ಭಾಗ ಜಾಸ್ತಿ ಇದ್ದರೂ, ಇಲ್ಲೆಲ್ಲ ಸರ್ಕಾರಿ ಆಸ್ಪತ್ರೆಗಳೇ ಹೆಚ್ಚು. ಆದರೆ ಸರ್ಕಾರಿ ಆರೋಗ್ಯ ವಲಯ ಹಲವು ಸಮಸ್ಯೆಗಳಿಂದ ನರಳುತ್ತಿದೆ (ಇದೇನೇ ಇದ್ದರೂ ಸದ್ಯ ಕರೊನಾ ಸ್ಥಿತಿಯನ್ನು ಸರ್ಕಾರಿ ವ್ಯವಸ್ಥೆಯೇ ನಿರ್ವಹಿಸುತ್ತಿದೆ ಎಂಬುದು ಗಮನಾರ್ಹ). ಇನ್ನು, ಸರಿಸುಮಾರು ಶೇ.74ರಷ್ಟು ವೈದ್ಯರು ನಗರಪ್ರದೇಶಗಳಲ್ಲಿದ್ದಾರೆ; ಹೈಟೆಕ್ ಸವಲತ್ತುಗಳು ಸಹ ನಗರಕೇಂದ್ರಿತವಾಗಿವೆ. ಖಾಸಗಿಯವರು ಹಳ್ಳಿಗಳಲ್ಲಿ ಮೇಲ್ದರ್ಜೆಯ ಆಸ್ಪತ್ರೆ ತೆರೆಯಲು ಬಂಡವಾಳ ಹೂಡುವುದಿಲ್ಲ ಮತ್ತು ಅಲ್ಲಿ ಅಷ್ಟು ಆದಾಯವೂ ಬರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣವೇ ಇದಕ್ಕೆ ಪರಿಹಾರ ಎಂಬುದು ತಜ್ಞರ ಅಭಿಮತ.

ಕೇಂದ್ರ ಸರ್ಕಾರ 2019ರ ನವೆಂಬರ್​ನಲ್ಲಿ ಸಂಸತ್​ನಲ್ಲಿ ನೀಡಿದ ಕೆಲ ಮಾಹಿತಿಗಳು ಇಂತಿವೆ: ದೇಶದ ಜನಸಂಖ್ಯೆ ಸುಮಾರು 135 ಕೋಟಿಯಿದ್ದು, ಸರಾಸರಿ 1445 ಜನರಿಗೆ ಒಬ್ಬ ವೈದ್ಯರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಪ್ರಕಾರ ಈ ಅನುಪಾತ 1:1000 ಇರಬೇಕು. 2019ರ ಮಾರ್ಚ್ 31ರ ವೇಳೆಗೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಮತ್ತು ರಾಜ್ಯ ವೈದ್ಯಕೀಯ ಮಂಡಳಿಗಳಲ್ಲಿ ನೋಂದಾಯಿಸಲ್ಪಟ್ಟ ಅಲೊಪಥಿ ವೈದ್ಯರ ಸಂಖ್ಯೆ 11,59,309ರಷ್ಟಿತ್ತು. ಇವರಲ್ಲಿ ಶೇ.80 ವೈದ್ಯರು ಸೇವೆಗೆ ಲಭ್ಯರಿರುತ್ತಾರೆ ಎಂಬ ಆಧಾರದಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತ ಲೆಕ್ಕಿಸಲಾಗಿದೆ. ಇದರ ಹೊರತಾಗಿ, ಆಯುರ್ವೆದ, ಯುನಾನಿ ಮತ್ತು ಹೋಮಿಯೊಪಥಿ ವೈದ್ಯರ ಸಂಖ್ಯೆ 7.88 ಲಕ್ಷದಷ್ಟಿದೆ. ಇವರಲ್ಲಿ ಸಕ್ರಿಯ ವೈದ್ಯರ ಪ್ರಮಾಣ ಶೇ.80 ಎಂದು ಲೆಕ್ಕಿಸಿದರೆ 6.30 ಲಕ್ಷ ವೈದ್ಯರು ಸೇವೆಗೆ ಸಿಕ್ಕಂತಾಗುತ್ತದೆ. ಎಲ್ಲ ಪದ್ಧತಿಗಳನ್ನು ಒಟ್ಟುಗೂಡಿಸಿದರೆ ವೈದ್ಯ-ರೋಗಿ ಅನುಪಾತ 1:860 ಆಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಮಾಹಿತಿ ನೀಡಿದ್ದರು. ಈ ಅಂಕಿಸಂಖ್ಯೆಯಲ್ಲಿ ಈಗ ಸ್ವಲ್ಪ ವ್ಯತ್ಯಾಸವಾಗಿರಬಹುದು.

ಈ ಎಲ್ಲ ಅಂದಾಜುಗಳು ಕರೊನಾ ಪರಿಸ್ಥಿತಿಗಿಂತ ಮುಂಚಿನದು. ಈಗ ಆರೋಗ್ಯ ರಂಗ ಎಂದಲ್ಲ, ಎಲ್ಲ ಕ್ಷೇತ್ರಗಳಲ್ಲೂ ಅಲ್ಲೋಲಕಲ್ಲೋಲ ಸ್ಥಿತಿಯಿದೆ. ಇಡೀ ವಿಶ್ವ ಅಯೋಮಯ ಸ್ಥಿತಿಯಲ್ಲಿದೆ. ಹೀಗಾಗಿ ನಾಳೆ ಅಥವಾ ಮುಂದಿನ ತಿಂಗಳು ಅಥವಾ ಮುಂದಿನ ವರ್ಷ ಏನಾಗಬಹುದು ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ಆದರೆ ಈ ಕರೊನಾ ಸನ್ನಿವೇಶ ತಂದೊಡ್ಡಿರುವ ವಿಷಮ ಸನ್ನಿವೇಶದಿಂದಾಗಿ ಭಾರತದ ಆರೋಗ್ಯರಂಗದಲ್ಲಿ ಒಂದಷ್ಟು ಬದಲಾವಣೆಗಳಾಗುತ್ತವೆ ಎಂಬುದಂತೂ ನಿಜ. ಅಂದರೆ, ವೈದ್ಯಕೀಯ ಸನ್ನದ್ಧತೆ ಹೆಚ್ಚುವ ನಿಟ್ಟಿನಲ್ಲಿ ಕ್ರಮಗಳಾಗಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ. ಹಾಗೇ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ದೇಶದಲ್ಲಿಯೇ ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಇಂಬು ದೊರೆಯಲಿದೆ. ಇದರಿಂದ ರಫ್ತು ಹೆಚ್ಚಿದಲ್ಲಿ ದೇಶಕ್ಕೆ ಅನುಕೂಲ.

ನಿಜ, ಕೆಲ ವೈದ್ಯರ ಬಗ್ಗೆ, ಖಾಸಗಿ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ಅನುಮಾನಗಳಿವೆ. ಅನಗತ್ಯವಾಗಿ ಟೆಸ್ಟ್​ಗಳನ್ನು ಮಾಡಿಸುತ್ತಾರೆ; ಹೆಚ್ಚು ಹಣ ಪೀಕುತ್ತಾರೆ; ಸೇವೆಯ ಬದಲು ವಾಣಿಜ್ಯ ಹಿತಾಸಕ್ತಿಯೇ ಹೆಚ್ಚು ಮುಖ್ಯವಾಗಿದೆ ಇತ್ಯಾದಿ. ಇದಕ್ಕೆ ಖಾಸಗಿ ಯವರು ತಮ್ಮದೇ ಆದ ಸಮರ್ಥನೆಗಳನ್ನೂ ನೀಡುತ್ತಾರೆ. ಇದೆಲ್ಲ ಏನೇ ಇದ್ದರೂ, ಈ ಕರೊನಾ ವಿಷಮಸ್ಥಿತಿಯನ್ನು ಭಾರತದ ಆರೋಗ್ಯ ರಂಗದ ಸುಧಾರಣೆಗೆ ಉಪಯೋಗಿಸಿ ಕೊಳ್ಳುವ ಜಾಣ್ಮೆ ಮತ್ತು ವಿವೇಕವನ್ನು ಎಲ್ಲರೂ ತೋರಬೇಕಿದೆ. ಜನಸಾಮಾನ್ಯರಿಗೆ ಕೈಗೆಟುಕುವ ಆರೋಗ್ಯ ಸವಲತ್ತು ದೊರೆಯುವಂತಾಗಬೇಕಾದುದು ಮುಖ್ಯ.

ಕೊನೇ ಮಾತು: ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಯನ್ನು ಕಳುಹಿಸಿಕೊಡುವಂತೆ ಭಾರತವನ್ನು ಕೋರಿದ ಬ್ರೆಜಿಲ್ ಅಧ್ಯಕ್ಷರು ರಾಮಾಯಣದ ಸಂಜೀವಿನಿ ಪ್ರಸಂಗವನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು. ಕರೊನಾ ಮಾರಿಯನ್ನು ಕಟ್ಟಿಹಾಕಲು ಆಧುನಿಕ ಕಾಲದ ‘ಸಂಜೀವಿನಿ’ ಆದಷ್ಟು ಬೇಗ ಆವಿಷ್ಕಾರಗೊಳ್ಳಲೆಂದು ಪ್ರಾರ್ಥಿಸೋಣ!

ಇತರ ದೇಶಗಳಿಗೆ ಹೋಲಿಸಿದರೆ ಅದೃಷ್ಟವಶಾತ್ ಭಾರತದಲ್ಲಿ ಕರೊನಾ ಸೋಂಕು ಪಸರಿಸುವಿಕೆ ಹಾಗೂ ಸಾವಿನ ಪ್ರಮಾಣ ಕಡಿಮೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಿ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ, ಖಾಸಗಿ ವಲಯ ಹಾಗೂ ಸಮಾಜ ಹೀಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಈ ಅಪಾಯವನ್ನು ಸಮರ್ಥವಾಗಿ ಎದುರಿಸಿ ಪಾರಾಗಬಹುದು. | ಡಾ.ಸುದರ್ಶನ ಬಲ್ಲಾಳ್ ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ