ಅಂಕಣ

ಆ ದಿನಗಳು ಬೇಗನೆ ಬರಲಿ

vinaymk1969

ಕರೊನಾ ಪೀಡೆಯಿಂದ ಉಳಿಯಲು ಮನೆಯಲ್ಲೇ ಇರಿ ಹಾಗೂ ಅಂತರ ಕಾದುಕೊಂಡಿರಿ ಎಂಬುದೇ ಮೂಲಮಂತ್ರ ಎಂಬುದು ಈಗ ಎಲ್ಲರಿಗೂ ಮನವರಿಕೆ ಆಗುತ್ತಿದೆ. ಲಾಕ್​ಡೌನ್, ಸೀಲ್​ಡೌನ್ ಘೊಷಣೆ ಆಗುತ್ತಿದಂತೆ ಹೆಚ್ಚಿನ ಎಲ್ಲ ಶ್ರದ್ಧಾಕೇಂದ್ರಗಳೂ ಇದಕ್ಕೆ ಸಾಥ್ ನೀಡಿ ದೇಶಕ್ಕಾಗಿ, ಜೀವಕ್ಕಾಗಿ ಸಹಕರಿಸಿವೆ.

ಈ ಪೈಕಿ ಶ್ರೀಕ್ಷೇತ್ರ ಧರ್ಮಸ್ಥಳ ಮುಂಚೂಣಿಯಲ್ಲಿ ನಿಲ್ಲುತ್ತದೆ ಎನ್ನಲಡ್ಡಿಯಿಲ್ಲ. ಶ್ರೀಕ್ಷೇತ್ರದ ಎಲ್ಲ ಪೂಜಾ ವಿಧಾನಗಳು ಪರಂಪರೆಯಂತೆ ಶ್ರದ್ಧಾ, ಭಕ್ತಿಪೂರ್ವಕವಾಗಿ ನಡೆಯುತ್ತಿದ್ದರೂ ಭಕ್ತರು ಬಂದು ಸೇರಿ, ಅವರಿಗೆ ಆತಂಕವಾಗಬಾರದು ಎಂಬ ಕಾರಣದಿಂದ ಸಾರ್ವಜನಿಕ ದರ್ಶನಕ್ಕೆ ತೆರೆ ಎಳೆಯಲಾಯಿತು. ಶ್ರೀಕ್ಷೇತ್ರದಲ್ಲಿ ವಿಶೇಷವಾಗಿ ನಡೆಯುವ ಉತ್ಸವಗಳು, ನೇಮಗಳು ಎಲ್ಲದಕ್ಕೂ ಪ್ರಶ್ನಾಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು. ಸಾವಿರಾರು ಮಂದಿ ಸೇರುವ ಯಕ್ಷಗಾನ, ಬಯಲಾಟವನ್ನು ಮೊಟಕುಗೊಳಿಸಿ ಮೇಳದ ದೇವರು, ಮೇಳದವರನ್ನೆಲ್ಲ ಕ್ಷೇತ್ರಕ್ಕೆ ಅವಧಿಗೂ ಸುಮಾರು 45 ದಿನ ಮುಂಚಿತವಾಗಿಯೇ ಬರಮಾಡಿಕೊಳ್ಳಲಾಯಿತು.

ರಾಜಧರ್ಮ, ವ್ಯಾವಹಾರಿಕ ಧರ್ಮ, ಸಾಮಾಜಿಕ ಧರ್ಮಗಳ ಬಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾದರಿಯಾಗಿ ನಡೆದುಕೊಂಡಿದ್ದಾರೆ. ಕರೊನಾ ಎದುರಿಸುವಲ್ಲಿ ಶ್ರೀಕ್ಷೇತ್ರದ ಎಲ್ಲ ನಡವಳಿಕೆಗಳನ್ನು ಅವರು ಮಾರ್ಗದರ್ಶಕ ಗುರುಸ್ಥಾನದಲ್ಲಿ ನಿಂತು ನಿರ್ವಹಿಸಿದ ರೀತಿ ಅತ್ಯದ್ಭುತ. ಆದರೂ ಕರೊನಾ ಯಶಸ್ವಿಯಾಗಿ ಎದುರಿಸುವಲ್ಲಿ ಎಲ್ಲರೂ ನೆರವಾದರೆ ಈ ಲಾಕ್​ಡೌನ್​ನಿಂದ ಹೊರಬರಲು ಸಾಧ್ಯವಾಗಬಹುದು. ಅದಕ್ಕಾಗಿ ‘ಎಲ್ಲರೂ ಸಹಕರಿಸಿ’ ಎಂದು ಹೆಗ್ಗಡೆಯವರು ವಿನಂತಿಸಿದ್ದಾರೆ. ಈಗಾಗಲೇ ಮನೆಯಲ್ಲೇ ಕೂತವರ ತಾಳ್ಮೆ, ಕೊಡುಗೆಗಳ ಬಗ್ಗೆ ಗೌರವ ಸೂಚಿಸುತ್ತ ಮುಂದೆ ತೊಂದರೆ ಆಗದಂತೆ ನಿಧಾನವಾಗಿ ಎಲ್ಲ ವ್ಯವಹಾರಗಳತ್ತ ಗ್ರಾಮ ಗ್ರಾಮಗಳು ತೆರೆದುಕೊಳ್ಳುವ ದಿನಗಳು ಬೇಗನೆ ಬರಲಿ ಎಂಬುದೇ ಆಶಯ.

| ಎನ್.ಎಸ್. ಗೋಖಲೆ, ಮುಂಡಾಜೆ, ಯಕ್ಷಗಾನ ಅರ್ಥಧಾರಿ