ಅಂಕಣ

ವೈವಾಹಿಕ ಜೀವನದಲ್ಲಿ ಸರಳತೆಯ ಸುಖವಿರಲಿ

ಅನೇಕರನ್ನು ಭೇಟಿಯಾಗುವ ಸಂದರ್ಭಗಳಲ್ಲಿ ಕ್ಷೇತ್ರದ ಯೋಜನೆ, ಕಾರ್ಯಕ್ರಮಗಳಿಂದ ಉಪಕೃತರಾದವರೊಡನೆ ಮಾತನಾಡುವ ಅವಕಾಶವು ನನಗೆ ಆಗಾಗ ಒದಗುತ್ತದೆ. ಅವರೊಂದಿಗೆ ಬೆರೆಯುವ, ಕಷ್ಟ-ಸುಖ ಹಂಚಿಕೊಳ್ಳುವ ಸುಸಂದರ್ಭವೂ ಆಗುತ್ತದೆ. ಒಮ್ಮೆ ದಂಪತಿ ನನ್ನನ್ನು ಭೇಟಿಯಾಗಿ, ‘ಸ್ವಾಮೀ, ನಾವಿಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಿಮ್ಮ ಸಮ್ಮುಖದಲ್ಲೇ ಮದುವೆಯಾಗಿದ್ದು, ಮದುವೆಯಾದ ಕ್ಷಣ ಇಂದಿಗೂ ನೆನಪಿದೆ. ಶ್ರೀ ಸ್ವಾಮಿಯ ಆಶೀರ್ವಾದದಿಂದ ನೆಮ್ಮದಿಯಿಂದ ಇದ್ದೇವೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ದುಡಿಮೆಯೂ ಚೆನ್ನಾಗಿದೆ’ ಎಂಬಿತ್ಯಾದಿಗಳನ್ನು ಹೇಳುತ್ತ ಮನೆವಾರ್ತೆಗಳನ್ನು ಹಂಚಿಕೊಂಡರು. ಅವರ ಮಾತುಗಳನ್ನು ಕೇಳಿ ನನಗಾದ ಸಂತೋಷ ಅಷ್ಟಿಷ್ಟಲ್ಲ. ಯಾಕೆಂದರೆ ಇಂದಿನ ದಿನಗಳಲ್ಲಿ ಸಣ್ಣದಾಗಿ ಮದುವೆ ಮಾಡಬೇಕೆಂದರೂ ಸಾಕಷ್ಟು ಹಣ ಬೇಕಾಗುತ್ತದೆ. ಮದುವೆಛತ್ರ, ಊಟ- ಹೀಗೆ ಕಾರ್ಯಕ್ರಮಕ್ಕೆ ಬೇಕಾದ ಎಲ್ಲವನ್ನೂ ಒಟ್ಟಾಗಿ ಲೆಕ್ಕಹಾಕುವಾಗ ಒಂದೆರಡು ಲಕ್ಷವೂ ಮೀರಬಹುದು. ಇನ್ನು ಅನುಕೂಲಸ್ಥರ ಮದುವೆ ಖರ್ಚಿನ ಬಗ್ಗೆ ಹೇಳಬೇಕಾಗಿಯೇ ಇಲ್ಲ.

ಇದಕ್ಕೆಲ್ಲ ಪರಿಹಾರ ಒದಗಿಸಲು ಸಾಧ್ಯವಾಗುವುದೋ ಎಂದು ಮಾತೃಶ್ರೀ ರತ್ನಮ್ಮನವರೊಡನೆ ಮಾತುಕತೆ ನಡೆಸಿದಾಗ ‘ಸಾಮೂಹಿಕ ವಿವಾಹ’ದ ಪರಿಕಲ್ಪನೆ ಉಂಟಾಯಿತು. ಅದರಂತೆ 1972ರಲ್ಲಿ ಶ್ರೀಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ನಡೆಸಲಾಯಿತು. ಅಂದು 88 ಜೋಡಿಗಳು ದಂಪತಿಗಳಾದರು. ಇದುವರೆಗೂ ಒಟ್ಟು 12,393 ದಂಪತಿ ಹಸೆಮಣೆಯನ್ನೇರಿದ್ದು, ಈ ಬಾರಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ 50ನೇ ವರ್ಷಾಚರಣೆಯಲ್ಲಿದ್ದೇವೆ. ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲರಿಗೂ ಅವರವರ ಸಂಪ್ರದಾಯದಂತೆ ಧಾರ್ವಿುಕ ಕಾರ್ಯಕ್ರಮಗಳು ನಡೆಯುತ್ತವೆ. ಅಂಗವಿಕಲರು ಕೂಡ ವಿವಾಹವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಲೂ ಅನೇಕರು ಉತ್ಸಾಹ ತೋರುತ್ತಿದ್ದಾರೆ. ಪ್ರಾಪ್ತ ವಯಸ್ಕರಾದ ಗಂಡು, ಹೆಣ್ಣು ಸೂಕ್ತ ದಾಖಲಾತಿಗಳೊಂದಿಗೆ ನಮೂದು ಮಾಡಿಕೊಂಡ ಬಳಿಕವೇ ವಿವಾಹಕ್ಕೆ ಅವಕಾಶವಿದೆ. ಎರಡನೇ ವಿವಾಹಕ್ಕೆ ಅವಕಾಶವಿಲ್ಲ. ವಧು-ವರರಿಗೆ ಸೀರೆ, ಧೋತಿ, ಮಾಂಗಲ್ಯ ಮುಂತಾದವುಗಳನ್ನು ಶ್ರೀಕ್ಷೇತ್ರದಿಂದಲೇ ನೀಡಲಾಗುತ್ತಿದೆ. ಈ ಬಾರಿ ಏಪ್ರಿಲ್ 27ರಂದು ಗೋಧೂಳಿ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮವು ಸರಳವಾಗಿ ನಡೆಯಲಿದೆ. ಜೊತೆಗೆ ಸರಳ ವಿವಾಹದ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ.

ಅಂದು ಬಡವರಿಗೆ ಪ್ರಯೋಜನವಾಗಲೆಂದು ಆರಂಭಿಸಿದ ವಿವಾಹ ಕಾರ್ಯಕ್ರಮದಲ್ಲಿ ಕ್ರಮೇಣವಾಗಿ ಬಡವರು ಮಾತ್ರವಲ್ಲದೆ ವಿವಿಧ ವರ್ಗಗಳ, ಕೃಷಿಕ, ಕೂಲಿ ಕಾರ್ವಿುಕರಿಂದ ಹಿಡಿದು ಸರ್ಕಾರಿ ಅಧಿಕಾರಿಗಳೂ ಶ್ರೀಕ್ಷೇತ್ರದಲ್ಲಿ ಸರಳ ಮದುವೆಯಾಗುವ ಉದ್ದೇಶದಿಂದ ನೋಂದಣಿ ಮಾಡಲಾರಂಭಿಸಿದರು. ಈ ಕಾರ್ಯಕ್ರಮದ ಬಳಿಕ ಮದುವೆಗಾಗಿ ಸಾಲ ಮಾಡುವ ಸಂದರ್ಭಗಳೂ ಕಡಿಮೆಯಾದವು.

ನಾನು ಗಮನಿಸಿದಂತೆ ಇತ್ತೀಚೆಗೆ ಕೆಲವು ವರ್ಷಗಳಿಂದ ದಾಂಪತ್ಯ ಕಲಹಗಳು ಹೆಚ್ಚುತ್ತಿವೆ. ಅವುಗಳಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಸಂಧಾನದ ಮೂಲಕ ಬಗೆಹರಿಸಿಕೊಂಡು ಮತ್ತೆ ದಾಂಪತ್ಯ ಜೀವನವನ್ನು ಮುಂದುವರಿಸಿದರೆ ಬಹುತೇಕ ಪ್ರಕರಣಗಳು ಕೊನೆಯಾಗುವುದು ವಿಚ್ಛೇದನದ ಮೂಲಕವೇ. ಈ ದಾಂಪತ್ಯ ಕಲಹದ ಮೊದಲ ಬಲಿಪಶು ಮಕ್ಕಳೇ ಆಗಿರುತ್ತಾರೆ. ಹೆತ್ತವರೇನೋ ತಾನು ದುಡಿಯುತ್ತಿದ್ದೇನೆ. ಮಕ್ಕಳನ್ನು ನಾನೊಬ್ಬನೇ/ಳೇ ನೋಡಿಕೊಳ್ಳಬಲ್ಲೆ ಎಂದು ಹೇಳಬಹುದು. ಆದರೆ ತಾಯಿ-ತಂದೆಯರಿಬ್ಬರ ಪ್ರೀತಿ-ವಾತ್ಸಲ್ಯವನ್ನು ತುಂಬಲು ಸಾಧ್ಯವಾಗುವುದೇ ಎಂದು ಯೋಚಿಸಬೇಕಾದ ಸಂಗತಿ.

ಇಲ್ಲೋರ್ವ ದಂಪತಿಯದ್ದು ಸುಖೀ ಕುಟುಂಬವಾಗಿತ್ತು. ಮದುವೆಯಾದ ಆರಂಭಕ್ಕೆ ಎಲ್ಲವೂ ಚೆನ್ನಾಗಿತ್ತು. ಗಂಡ ಕೆಲಸಕ್ಕೆ ಹೋದ ಬಳಿಕೆ ಆಕೆ ಮನೆಯಲ್ಲಿ ಒಬ್ಬಳೇ ಇರಲು ಉದಾಸೀನವಾಗುತ್ತಿತ್ತು. ಅಲ್ಲದೆ ಮನೆಖರ್ಚಿಗೆ ಮತ್ತು ತನ್ನ ಖರ್ಚಿಗೆ ಆಗುತ್ತದೆ ಎಂದು ಆಕೆಯೂ ಕೆಲಸಕ್ಕೆ ಹೋಗತೊಡಗಿದಳು. ಮೂರು-ನಾಲ್ಕು ವರ್ಷದೊಳಗೆ ಎರಡು ಮಕ್ಕಳನ್ನು ಪಡೆದರು. ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಯಿತು. ಮಕ್ಕಳನ್ನು ನೋಡಿಕೊಳ್ಳಲು ಒಬ್ಬಾಕೆಯನ್ನು ನೇಮಿಸಿದರೂ ಆಕೆಗೆ ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಇತ್ಯಾದಿ ಮಾಡಿಕೊಂಡು ಕೆಲಸಕ್ಕೆ ಹೋಗಲು ಕಷ್ಟವಾಗತೊಡಗಿತು. ಬರಬರುತ್ತ ಹೆಂಡತಿ ಗಂಡನನ್ನು ದೂರತೊಡಗಿದಳು. ‘ನಾನೂ ಕೆಲಸ ಮಾಡಿ ಬರುವವಳೇ... ಇಲ್ಲಿ ಮನೆಗೆ ಬಂದೂ ನಿಮಗೆಲ್ಲ ಬೇಯಿಸಿ ಹಾಕಬೇಕು. ಮನೆಗೆಲಸದಲ್ಲಿ ಏನೂ ಸಹಾಯ ಮಾಡುವುದಿಲ್ಲ’ ಎಂದೆನ್ನತೊಡಗಿದಳು. ಆತನೂ ಸುಮ್ಮನಿರದೆ, ‘ಅದಕ್ಕೆಯೇ ಅಲ್ಲವೇ ಮದುವೆಯಾಗಿದ್ದು. ನೀನು ಕೆಲಸಕ್ಕೆ ಹೋಗಬೇಡ ಮನೆಯಲ್ಲೇ ಇರು’ ಎಂದಾಗ ಆಕೆಗೆ ತನ್ನ ಸಂಕಟ ಯಾರ ಬಳಿ ಹೇಳಿಕೊಳ್ಳಲಿ ಎಂದೆನಿಸಿತು. ಸಣ್ಣಪುಟ್ಟ ಕಿರಿಕಿರಿ ದೊಡ್ಡ ಗಲಾಟೆಯಾಗಿ ಮಾರ್ಪಟ್ಟು ಕೋರ್ಟ್ ಮೆಟ್ಟಿಲೇರಿತು. ಮಾತುಕತೆಯಲ್ಲಿ ಬಗೆಹರಿಯದ ಸಮಸ್ಯೆ ವಿಚ್ಛೇದನದಲ್ಲಿ ಮುಕ್ತಾಯವಾಯಿತು. ಒಂದು ಮಗು ತಾಯಿಯೊಡನೆ ಮತ್ತು ಇನ್ನೊಂದು ಮಗು ತಂದೆಯೊಡನೆ ಇರುವುದೆಂದು ನಿರ್ಧಾರವಾಯಿತು. ಇಬ್ಬರೂ ಅಹಂಕಾರ, ಪ್ರತಿಷ್ಠೆಗಳನ್ನು ಸಡಿಲಿಸಿಕೊಳ್ಳಲಿಲ್ಲ. ಪರಿಣಾಮ, ಮಕ್ಕಳಿಗೆ ತಾಯಿ-ತಂದೆಯರಿಬ್ಬರ ಪ್ರೀತಿ ಪೂರ್ಣವಾಗಿ ದೊರಕಲೇ ಇಲ್ಲ.

ದಾಂಪತ್ಯಕ್ಕೆ ಬಡತನದ ಕುಂದುಕೊರತೆಗಳು ಅಡ್ಡಿಯಾಗುವುದಿಲ್ಲ. ಪರಸ್ಪರರು ಅರ್ಥಮಾಡಿಕೊಂಡು, ಸಹಬಾಳ್ವೆಯ ಜೀವನ ನಡೆಸಿದರೆ ಬಾಳೇ ಸೊಗಸು. ಅದನ್ನು ವರಕವಿ ಬೇಂದ್ರೆಯವರು ಕವನದ ಮೂಲಕ ಸೊಗಸಾಗಿ ಹೇಳಿದ್ದಾರೆ- ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು. ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂದು ವರ್ಣಿಸಿದ್ದಾರೆ.

ವರದಕ್ಷಿಣೆಗಾಗಿ ಹೆಂಡತಿಯನ್ನು ಪೀಡಿಸುವ ಗಂಡ ಮತ್ತು ಆತನ ಮನೆಯವರು ಮತ್ತು ತನ್ನ ಶಕ್ತಿ ಸಾಮರ್ಥ್ಯಕ್ಕಿಂತ ಹೆಚ್ಚಿನದ್ದನ್ನು ಕೊಡಿಸಲು ಗಂಡನನ್ನು ಪೀಡಿಸುವ ಹೆಂಡತಿಯರು ಅರ್ಥ ಮಾಡಿಕೊಳ್ಳಬೇಕೆನೆಂದರೆ ಬದುಕೆಂದರೆ ಕೇವಲ ದುಡ್ಡು, ಕಾರು-ಬಂಗಲೆ, ಬಂಗಾರ ಮುಂತಾದ ಐಶ್ವರ್ಯಗಳಲ್ಲ. ಪ್ರೀತಿ, ಕರುಣೆ, ಸಹನೆ, ಮಾನವೀಯತೆ ತುಂಬಿದ ಪರಸ್ಪರ ಅರ್ಥೈಸುವ, ಗೌರವಿಸುವ ಮನಸ್ಸುಳ್ಳವರೊಡನೆ ಉತ್ತಮ ಸಾಮರಸ್ಯದ ಜೀವನವನ್ನು ಹೊಂದುವಂತಿರಬೇಕು. ಕಷ್ಟ-ನಷ್ಟ, ಸುಖ-ದುಃಖಗಳಲ್ಲಿ ಪರಸ್ಪರ ಹೆಗಲು ನೀಡುತ್ತ ಅನ್ಯೋನತೆಯಿಂದ ಇದ್ದರೇನೇ ಬದುಕು ಸೊಗಸು.

ವಿವಾಹವೆಂದರೆ ವಿಶೇಷವಾದ ಸಾಮಾಜಿಕ ಹೊಣೆಗಾರಿಕೆಯೂ ಹೌದು. ‘ವಿಶೇಷ ವಹನಂ’ ಗೃಹಸ್ಥನಾಗಿ ಕುಟುಂಬದ ನಿರ್ವಹಣೆ, ಬ್ರಹ್ಮಪಿತೃ, ಯಜ್ಞಾದಿಗಳು, ದೇವಋಣ, ಋಷಿಋಣ, ಪಿತೃಋಣ, ತ್ರಯಗಳನ್ನು ತೀರಿಸಲು ಅಧಿಕಾರ ಪಡೆಯುವುದೇ ವಿವಾಹ ಬಂಧನ. ಈ ಅನುರೂಪ ಬಂಧನವನ್ನು ದೃಢವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಮದುವೆಯೆಂಬ ಸಂಸ್ಕಾರದಲ್ಲಿ ಒಬ್ಬರನ್ನೊಬ್ಬರು ಪರಿಚಯ ಮತ್ತು ಪರಸ್ಪರ ತಿಳಿವಳಿಕೆಗಳಿಲ್ಲದೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಜೊತೆ-ಜೊತೆಗೆ ಹೆಜ್ಜೆ ಇಡುವ ಗಂಡು-ಹೆಣ್ಣಿಗೆ ಆರಂಭದಲ್ಲಿ ಹೊಂದಿಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಈಗಿನ ಕಾಲದಲ್ಲಿ ಬಹುಬೇಗನೆ ಹೊಂದಿಕೊಳ್ಳುತ್ತಾರೆ. ಆದರೆ ಮದುವೆಯಾಗಿ ವರ್ಷಗಳು ಉರುಳಿದಂತೆ, ದಂಪತಿಗೆ ಮಕ್ಕಳಾದಂತೆ ಕುಟುಂಬಗಳಲ್ಲಿ ಸಹಜವಾಗಿ ಬರುವ ಬೇಕು-ಬೇಡಗಳು, ಭಿನ್ನಾಭಿಪ್ರಾಯಗಳನ್ನು ಸಾವಧಾನದಿಂದ ಪರಿಹರಿಸಿಕೊಳ್ಳಬೇಕು. ಸಂಸಾರದ ಜಗಳ ಬೀದಿಗೆ ಬರುವ ಮುನ್ನವೇ ಕುಳಿತುಕೊಂಡು ಪರಸ್ಪರ ಮಾತನಾಡಿಕೊಂಡು ಮನವನ್ನು ತಿಳಿಯಾಗಿಸಬೇಕು. ಕುಟುಂಬದ ಹಿರಿಯರ ಅಥವಾ ಆಪ್ತರ ಸಲಹೆ ಪಡೆದರೂ ತಪ್ಪಿಲ್ಲ. ಇಲ್ಲದಿದ್ದರೆ ಸರ್ಕಾರವು ಕೆಲವೊಂದು ಸಹಾಯವಾಣಿಗಳನ್ನು ತೆರೆದಿದ್ದು ಅವರೊಡನೆ ಮುಕ್ತವಾಗಿ ಮಾತನಾಡಿ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದಾಗಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಎಲ್ಲರದೂ ಚಿಕ್ಕಕುಟುಂಬ. ಮನೆಯಲ್ಲಿ ತಂದೆ-ತಾಯಿ, ಒಬ್ಬರೋ ಇಬ್ಬರು ಮಕ್ಕಳು. ಕುಟುಂಬವೆಂದ ಮೇಲೆ ಸಣ್ಣ-ಪುಟ್ಟ ಕೋಪ-ತಾಪಗಳು ಸಾಮಾನ್ಯ. ಆದರೆ ಯಾವುದೇ ವಿಚಾರವನ್ನೇ ಆದರೂ ಕಡ್ಡಿಯನ್ನು ಗುಡ್ಡ ಮಾಡಬಾರದು. ಕರೊನಾ ಅದೆಷ್ಟು ಹಾನಿ ಮಾಡಿದರೂ ಜನಸಮೂಹಕ್ಕೆ ಮಾನವೀಯತೆ ಹಾಗೂ ಸರಳತೆಯ ಬದುಕಿನ ಪಾಠವನ್ನು ಕಲಿಸಿದ್ದಂತೂ ಸತ್ಯ. ಸಂಬಂಧದ ಮೌಲ್ಯವನ್ನು, ಅರಿವನ್ನು ಕರೊನಾ ಮೂಡಿಸಿದೆ. ಕರೊನಾ ಸಂದರ್ಭದಲ್ಲಿ ಅನಿವಾರ್ಯವಾಗಿ ಸರ್ಕಾರವು ಮದುವೆ, ಗೃಹಪ್ರವೇಶ ಮತ್ತಿತರ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆಗ ಪೂರ್ವನಿಗದಿಯಾಗಿದ್ದ ಅದೆಷ್ಟೋ ಮದುವೆಗಳು ಮನೆಯಲ್ಲೇ, ಸರಳವಾಗಿ ನಡೆದಿವೆ. ಇಂದು ಮದುವೆ, ಆರತಕ್ಷತೆ ಮುಂತಾದ ಕಾರ್ಯಕ್ರಮವನ್ನು ಅಬ್ಬರದಿಂದ ಮಾಡುವುದನ್ನು ಪ್ರತಿಷ್ಠೆ ಎಂದು ಭಾವಿಸುವವರಿದ್ದಾರೆ. ಅಗತ್ಯಕ್ಕಿಂತ ಹೆಚ್ಚಾಗಿ ಮಾಡುವ ಆಡಂಬರವು ಹಣದ ದುಂದುವೆಚ್ಚವೇ ಆಗಿದೆ. ವಿವಾಹಕ್ಕೆ ಶ್ರೀಮಂತರು ಪ್ರತಿಷ್ಠೆಗಾಗಿ ವೆಚ್ಚ ಮಾಡಿದರೆಂದು ನಾವೂ ಸಾಲ-ಸೋಲ ಮಾಡಿ ಅವರನ್ನೇ ಅನುಕರಿಸಿದರೆ ಸಾಲದ ಶೂಲ ನಮ್ಮನ್ನು ಇರಿಯದೇ ಇರದು. ನಮ್ಮ-ನಮ್ಮ ಶಕ್ತಿ, ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆ ಹಾಕಿಕೊಂಡು ಖರ್ಚು ಮಾಡಬೇಕು. ಹಾಗೂ ಹಣವಾಗಲಿ, ಆಹಾರ ಇತ್ಯಾದಿಯಾಗಲಿ ಯಾವುದೂ ಕೂಡ ಪೋಲಾಗದಂತೆ ಎಚ್ಚರ ವಹಿಸುವುದು ಅಗತ್ಯ.

‘ಮದುವೆಯ ಊಟ ಉಪು್ಪ-ಉಪ್ಪಾಗಿತ್ತು ಎಂದು ದೂರಬೇಡಿ. ಅದು ಮದುಮಗಳ ತಂದೆಯ ಕಣ್ಣೀರು ಹೆಚ್ಚಾಗಿ ಉಪು್ಪ ಜಾಸ್ತಿಯಾಗಿದ್ದಿರಬೇಕು’ ಎಂದು ಎಲ್ಲೋ ಓದಿದ ನೆನಪು. ಹೌದು, ಮಕ್ಕಳ ಮದುವೆ ಮಾಡಲು ಹೆತ್ತವರು ಅದೆಷ್ಟು ಕಷ್ಟಪಡುತ್ತಾರೋ ಅವರಿಗೇ ಗೊತ್ತು. ಯಾವುದೇ ಬ್ಯಾಂಕ್​ಗಳಲ್ಲಿ ಮದುವೆಯ ಕಾರಣಕ್ಕಾಗಿ ಸಾಲಸೌಲಭ್ಯವಿಲ್ಲ. ಆದರೆ ಹಣದ ಅವಶ್ಯಕತೆ ಇರುವುದರಿಂದ ಅನೇಕ ಜನರು ಬೇರೆ ಕಾರಣಕ್ಕಾಗಿ ಸಾಲ ಮಾಡಿ ಅದನ್ನು ಮದುವೆಗಾಗಿ ಬಳಸಿಕೊಳ್ಳುತ್ತಾರೆ. ಇದು ಅವರಿಗೆ ಅನಿವಾರ್ಯವೂ ಆಗಿರುವ ಸಂದರ್ಭಗಳೇ ಹೆಚ್ಚು. ಮಕ್ಕಳ ಮದುವೆಯ ಜವಾಬ್ದಾರಿ ನಿರ್ವಹಿಸಲು ತಮ್ಮೊಳಗಿನ ನೋವುಗಳನ್ನು ಮರೆತು ಮಕ್ಕಳ ಏಳಿಗೆಗೆ ಮುಂದಿನ ಜೀವನಕ್ಕೆ ಗಟ್ಟಿ ಅಡಿಪಾಯ ಒದಗಿಸಲು ಶ್ರಮಿಸುತ್ತಾರೆ. ವಿವಾಹ ಸಂದರ್ಭದಲ್ಲಿ ಕನ್ಯಾ ಪಿತೃವು ವರನಿಗೆ ಕನ್ಯೆಯನ್ನು ಒಪ್ಪಿಸುವಾಗ ವರನ ಕಡೆಯವರು ಮತ್ತು ವಧುವಿನ ಕಡೆಯವರು ಶಾಸ್ತ್ರೋಕ್ತವಾಗಿ ಮಾಡುವ ಪ್ರತಿಜ್ಞೆ ಇಂತಿದೆ. ‘ಸಮಾನ ಹೃದಯನಿವಃ, ಸಮಾನ ವಸ್ತುವೋ ಮನೋ ಯಥಾವಃ ಸುಹಾಸತಿ’. ಅಂದರೆ ‘ಇನ್ನು ಮುಂದೆ ಎರಡೂ ಕಡೆಯವರ ಅಭಿಪ್ರಾಯಗಳು, ಮನಸ್ಸುಗಳು, ಭಾವನೆಗಳು ಒಂದಾಗಿರಲಿ. ಎರಡೂ ಕುಟುಂಬದವರೂ ಶಾಂತಿ-ಸೌಹಾರ್ದದಿಂದ ಬಾಳೋಣ’ ಎಂಬುದೇ ಇದರರ್ಥ. ಮದುವೆ, ಬೀಗರ ಊಟ ಮುಂತಾದ ಸಾಂಪ್ರಾದಾಯಿಕ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುವುದು ಕೇವಲ ಆಡಂಬರವಷ್ಟೇ. ಮದುವೆ ಎನ್ನುವುದು ಮನಸ್ಸುಗಳ ಮಿಲನ. ಮನಸ್ಸುಗಳೆರಡು ಕೂಡಿ ಬಾಳಿದರೆ ಸ್ವರ್ಗಸುಖ ಎನ್ನುವುದು ವಿವಾಹದ ಮೂಲಅರ್ಥ. ಇದನ್ನರಿತವರೇ ಅನೇಕ ಕಷ್ಟಗಳ ಸಂದರ್ಭ ಬಂದರೂ ಎದೆಗುಂದದೆ ಎದುರಿಸಿ ಕಷ್ಟದಲ್ಲೂ ಸುಖ ಕಾಣುವರು. ಯಶಸ್ವಿ ದಾಂಪತ್ಯ ನಡೆಸುವರು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)