ಆಲಮೇಲ: ಸರ್ಕಾರ ಯೋಜನೆಗಳಿಂದ ವಂಚಿತಗೊಂಡ ಬಡವರನ್ನೂ ಗುರುತಿಸಿ ಸರ್ಕಾರದ ಸೌಲಭ್ಯ ಒದಗಿಸಬೇಕೆಂದು ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮು ಅಗ್ನಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅಧ್ಯಕ್ಷ ಅಶೋಕ ಕೊಳಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿವೆ. ಆಲಮೇಲ ತಾಲೂಕಿನ ಸಿಂದಗಿ ಸಾರಿಗೆ ಘಟಕದ ವಾಹನಗಳಲ್ಲಿ ಇಲ್ಲಿಯವರೆಗೆ ಒಟ್ಟು 12.88 ಲಕ್ಷ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಿಸಿದ್ದಾರೆ. ಇದರಿಂದಾಗಿ ಸರ್ಕಾರ 48.94 ಕೋಟಿ ರೂ. ಸಾರಿಗೆ ವೆಚ್ಚವನ್ನು ಸಾರಿಗೆ ಇಲಾಖೆಗೆ ನೀಡಿದೆ. ಹೀಗಾಗಿ ಸಾರಿಗೆ ಇಲಾಖೆ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ ಹೋಳಿ ಮಾತನಾಡಿ, ತಾಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಸರಿಯಾಗಿ ಲಾನುಭವಿಗಳಿಗೆ ರೇಷನ್ ವಿತರಿಸುತ್ತಿಲ್ಲ. ಸರ್ಕಾರ ನಿಗದಿಗಿಂತಲೂ ಕಡಿಮೆ ಅಕ್ಕಿ ವಿತರಿಸುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹೆಸ್ಕಾಂ ಎಇಇ ಚಂದ್ರಕಾಂತ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಯಶ್ರೀ ದೊಡಮನಿ, ಆಹಾರ ನಿರೀಕ್ಷಕ ರಮೇಶ ತಳವಾರ, ಸಾರಿಗೆ ನಿಯಂತ್ರಕ ಕೆ.ಎಸ್. ಬಿರಾದಾರ, ಉದ್ಯೋಗ ವಿನಿಮಯ ಇಲಾಖೆಯಿಂದ ಮಹೇಶ ಮಾಳವಾಡೇಕಾರ ಆಗಮಿಸಿ ತಮ್ಮ ಇಲಾಖೆ ವರದಿ ಮಂಡಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ದುಲ ವಾಹಬ ಸುಂಬಡ, ಪ್ರಶಾಂತ ನಾಶಿ, ಮಲ್ಲು ಪ್ಯಾಟಿ, ಸಲೀಂ ಕಣ್ಣಿ, ಬಸವರಾಜ ನಂದೂರ, ಮಾಣಿಕ ಕಲಬಾ, ರವೀಂದ್ರ ಹೋಳಿ, ಸಂಗನಗೌಡ ಬಿರಾದಾರ ಇತರರಿದ್ದರು.