ಅಂಕಣ

ಹಿರಿಯರ ಬದುಕಿನ ಹಾದಿಯಲಿ ಹೂವಿರಲಿ..; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ..

ಕಾಲ ಕೆಟ್ಟುಹೋಯಿತು, ಧರ್ಮ ನಾಶವಾಯಿತು, ಹಿರಿಯರ ಬಗ್ಗೆ ಇಂದಿನ ತಲೆಮಾರಿನ ಯುವಕ-ಯುವತಿಯರಿಗೆ, ಮಕ್ಕಳು ಅಥವಾ ಮೊಮ್ಮಕ್ಕಳಿಗೆ ಗೌರವ- ಕಾಳಜಿ ಇಲ್ಲ, ಕೇವಲ ಸ್ವಾರ್ಥಚಿಂತನೆ ಮಾಡುತ್ತಾರೆ- ಅನ್ನುವ ಟೀಕೆ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ ಇದು ಎಲ್ಲವೂ ಸತ್ಯವಲ್ಲ.

ನಾನು ಮುಂಬೈಗೆ ಹೋದಾಗ ಬಂಧುಗಳ ಮನೆಗೆ ತೆರಳುತ್ತಿದ್ದೆ. ಅಲ್ಲಿ 8-10, 6-10 ಚದರ ಅಡಿ ಕೊಠಡಿಯಲ್ಲಿ್ಲ ಸಂಸಾರ ನಡೆಸುತ್ತಾರೆ. ಗಂಡ-ಹೆಂಡತಿ, ಅವರ ಮಕ್ಕಳು, ಅವರ ಮೊಮ್ಮಕ್ಕಳು ಒಟ್ಟಾಗಿ ಜೀವಿಸುತ್ತಿದ್ದರು. ಈ ಸಾಲಿನಲ್ಲಿ ಕೆಲವರು 80-85 ವರ್ಷ ವಯಸ್ಸಾದವರೂ ಇದ್ದರು. ಅವರನ್ನು ನೋಡಿಕೊಳ್ಳುತ್ತಿದ್ದ ರೀತಿ ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿತ್ತು.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ದೀರ್ಘಾಯುಷಿಗಳಿರುತ್ತಾರೆ. ಅವರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇದರ ಜೊತೆಗೆ ಹಿರಿಯರ ನಡವಳಿಕೆ, ಸಂಬಂಧಗಳನ್ನು ಇಟ್ಟುಕೊಂಡು ಉಳಿಸಿಕೊಳ್ಳುವ ರೀತಿ ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ ಸಿನಿಮಾ ಅಥವಾ ಟಿ.ವಿ.ಯಲ್ಲಿ ಬರುವ ಘಟನೆಗಳನ್ನು ನಾವು ನೋಡಬಹುದು. ಒಂದು ಕಡೆ ಒಬ್ಬ ವಯಸ್ಸಾದ ವೃದ್ಧ ಇನ್ನೇನು ಸಾಯುವ ಸ್ಥಿತಿಯಲ್ಲಿರುತ್ತಾನೆ. ಆತನ ಸುತ್ತಮುತ್ತಲು ಅವನ ನಾಲ್ಕು ಜನ ಮಕ್ಕಳು ದುಃಖದಲ್ಲಿದ್ದಾರೆ. ತಂದೆ ಹಿಂದೆ ತನ್ನ ಮಕ್ಕಳಿಗೆ ಆಸ್ತಿಯನ್ನು ಪಾಲು ಮಾಡಿರುವುದಿಲ್ಲ. ಅಂದು ಆಸ್ತಿ ಪಾಲು ಮಾಡಲು ಮುಂದಾಗಿ, ಮನೆ ನಿನಗೆ, ಜಾಗ ನಿನಗೆ, ಅಂಗಡಿ ನಿನಗೆ, ಚಿನ್ನಾಭರಣಗಳು ಹೆಣ್ಣು ಮಕ್ಕಳಿಗೆ ಎಂದಾಗ ಮಕ್ಕಳ ಮುಖದ ಭಾವನೆಗಳೇ ಬದಲಾಗುತ್ತವೆ. ತಂದೆಯ ಮೇಲೆ ಗೌರವವಿದ್ದರೂ, ಅಣ್ಣನಿಗೆ ಜಾಸ್ತಿ, ತನಗೆ ಕಮ್ಮಿ ನೀಡಿದರು ಎನ್ನುವ ಮುನಿಸು ವ್ಯಕ್ತವಾಗುತ್ತದೆ.

ಇನ್ನೊಂದು ಘಟನೆ. ಒಬ್ಬ ವೃದ್ಧ ತಂದೆ ತನ್ನ ಅಂತಿಮ ಕಾಲದಲ್ಲಿ ಮಕ್ಕಳಿಗೆ ವಿಲ್ ಬರೆದಿಡಲು ತಯಾರಿ ನಡೆಸುತ್ತಾನೆ. ಅವನು ವಕೀಲರನ್ನು ಕರೆದು ವಿಲ್ ಬರೆದು ಸಹಿ ಮಾಡುವಾಗ ಮನೆಯ ಮೇಲೆ ತಾರಸಿಯ ತೂತಿನಲ್ಲಿ ತೊಟ್ಟಿಕ್ಕುತ್ತಿದ್ದ ನೀರ ಹನಿ ಕಾಗದದಲ್ಲಿ ಸಹಿ ಹಾಕಿದ ಜಾಗದಲ್ಲಿ ಬೀಳುತ್ತದೆ. ಹಾಕಿದ ಸಹಿ ಮಾಸುತ್ತದೆ. ಅದೇ ವೇಳೆ ಆತ ಅಸುನೀಗುತ್ತಾನೆ. ಆ ವಿಲ್ ನಿಷ್ಪ್ರಯೋಜಕವಾಗುತ್ತದೆ. ತಂದೆಯ ಅಂತ್ಯಸಂಸ್ಕಾರದ ಮುನ್ನವೇ ಅಲ್ಲಿ ಮಕ್ಕಳ ನಡುವೆ ಕಲಹ ಪ್ರಾರಂಭವಾಗುತ್ತದೆ. ಇದರಿಂದ ನಮಗೆ ಎರಡು ಸಂದೇಶಗಳು ಸಿಗುತ್ತವೆ. ಒಂದು- ಹಿರಿಯರು ಗಟ್ಟಿಮುಟ್ಟಾಗಿರುವಾಗಲೇ ಭೂಮಿಯನ್ನು ಸರಿಯಾದ ರೀತಿಯಲ್ಲಿ ಯಾರಿಗೂ ಅನ್ಯಾಯವಾಗದ ಹಾಗೆ, ನೋವಾಗದ ಹಾಗೆ ಹಂಚಿಕೆ ಮಾಡಬೇಕು. ಸಂಸಾರದಲ್ಲಿ 40-50 ವರ್ಷ ಬೆಳೆದ ಮಕ್ಕಳಿದ್ದಾಗ, ವಯಸ್ಸಿಗೆ ಬಂದ, ಮದುವೆಗೆ ಬಂದ ಮೊಮ್ಮಕ್ಕಳಿದ್ದಾಗ ಆಸ್ತಿ, ಚಿನ್ನಾಭರಣ ಇವುಗಳನ್ನೆಲ್ಲ ಸರಿಯಾಗಿ ಪಾಲು ಮಾಡಲಿಲ್ಲ ಎನ್ನುವ ಭಾವನೆ ಬಂದರೆ ಮಕ್ಕಳ ತಿರಸ್ಕಾರಕ್ಕೊಳಗಾಗುತ್ತಾರೆ. ಉದಾಹರಣೆಗೆ ಅನೇಕ ಮಂದಿ ಶ್ರೀ ಕ್ಷೇತ್ರಕ್ಕೆ ಬಂದು ಐವತ್ತು ವರ್ಷಕ್ಕೆ ಹಿಂದೆ ಹಿರಿಯರು ವಿಲ್ ಮಾಡಿದ ಸಂದರ್ಭದಲ್ಲಿ ತಮಗೆ ಸರಿಯಾಗಿ ನ್ಯಾಯ ದೊರೆಯಲಿಲ್ಲ, ಸರಿಯಾದ ಪಾಲು ದೊರೆಯಲಿಲ್ಲ ಎಂದು ದೇವರಲ್ಲಿ ದೂರು ಹೇಳುವುದಿದೆ.

ಋಣ ಎನ್ನುವುದು ಇದೆ. ಅಂದರೆ ಭೂಮಿ, ಚಿನ್ನಾಭರಣದ ಋಣ, ಬಂಧುತ್ವದ ಋಣ ಇತ್ಯಾದಿಯನ್ನು ತೀರಿಸಬೇಕು. ಇಲ್ಲಿ ನಾವು ತಿಳಿದೋ ತಿಳಿಯದೆಯೋ ಏನಾದರೂ ವಂಚನೆ ಮಾಡಿದರೆ ವಂಚನೆಗೆ ಒಳಗಾದವರು ಮನಸ್ಸಿನಲ್ಲಿ ಕೊರಗಿದರೂ ಶಾಪವಾಗಿ ಪರಿಣಮಿಸುತ್ತದೆ ಎನ್ನುವಂಥದ್ದು ಧಾರ್ವಿುಕರ ನಂಬಿಕೆ. ಹಿಂದೆ ಹಳ್ಳಿಗಳಲ್ಲಿ ನೂರಾರು ಜನರು ಕೂಡು ಕುಟುಂಬವಾಗಿ ಇರುತ್ತಿದ್ದರು. ನಾನು ಬೆಳಗಾವಿಯ ಒಂದು ಮನೆಗೆ ಭೇಟಿ ನೀಡಿದಾಗ ಅಲ್ಲಿ 120ಕ್ಕೂ ಮಿಕ್ಕಿ ಮಂದಿ ವಾಸವಾಗಿದ್ದರು. ಇಂದು ಅಂತಹ ಕೂಡು ಕುಟುಂಬ ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ. ಎಲ್ಲರೂ ತಾನು, ತನ್ನ ಹೆಂಡತಿ, ಮಕ್ಕಳು ಅನ್ನುವ ಸಣ್ಣ ಮನೆಗೆ ಸೀಮಿತವಾಗಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯೂ ವೃದ್ಧಾಪ್ಯಕ್ಕೆ ತನ್ನನ್ನು ತಾನು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಮೂಲಕ ತಿಂಗಳಿಗೆ ಇಂತಿಷ್ಟು ಎಂದು ಪಾವತಿಸಿದರೆ ವೃದ್ಧಾಪ್ಯದಲ್ಲಿ ವೇತನ ರೂಪದಲ್ಲಿ ತಿಂಗಳಿಗೆ ನಿರ್ದಿಷ್ಟ ಮೊತ್ತದ ಪಿಂಚಣಿಯನ್ನು ಸರ್ಕಾರ ನೀಡುತ್ತದೆ. ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಕಾರ್ವಿುಕರಿಗೆ ಭಾರತ ಸರ್ಕಾರ ಪ್ರಾರಂಭಿಸಿದ ಪಿಂಚಣಿ ಯೋಜನೆ ಆಟಲ್ ಪಿಂಚಣಿ ಯೋಜನೆ. ಸ್ವಾವಲಂಬನ್ ಯೋಜನೆ (ಎನ್.ಪಿ.ಎಸ್- National Pension Scheme) ಹೆಸರಿನ ಹಿಂದಿನ ಯೋಜನೆಯ ಬದಲಿಯಾಗಿ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಅಟಲ್ ಪಿಂಚಣಿ ಯೋಜನೆ ಎಂದು ಪ್ರಾರಂಭಿಸಲಾಯಿತು,

ಅಟಲ್ ಪಿಂಚಣಿ ಯೋಜನೆಯ ಕನಿಷ್ಠ ಹೂಡಿಕೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿ ನಿವೃತ್ತಿಯ ನಂತರದ ಪಿಂಚಣಿ ಮೊತ್ತವಾಗಿ 1,000 ರೂ. ಗಳಿಸಲು ಬಯಸಿದರೆ ಮತ್ತು 18 ವರ್ಷಗಳು ಆಗಿದ್ದರೆ ಆದರ ಕೊಡುಗೆ ತಿಂಗಳಿಗೆ 42 ರೂಪಾಯಿಗಳಾಗಿರುತ್ತದೆ. ಅದೇ ವ್ಯಕ್ತಿ ನಿವೃತ್ತಿಯ ನಂತರ 5,000 ರೂ. ಪಿಂಚಣಿ ಬಯಸಿದರೆ ಕೊಡುಗೆ ಮೊತ್ತ ತಿಂಗಳಿಗೆ 210 ರೂ. ಆಗಿರುತ್ತದೆ. ಗರಿಷ್ಠ ಹೂಡಿಕೆಯೂ ಭಿನ್ನವಾಗಿರುತ್ತದೆ. ಉದಾಹರಣೆಗೆ, 39 ವರ್ಷ ವಯಸ್ಸಿನ ಮತ್ತು ಪಿಂಚಣಿ ಆದಾಯವಾಗಿ 1,000 ರೂ. ಹೊಂದಲು ಬಯಸಿದ ವ್ಯಕ್ತಿಗೆ ಕೊಡುಗೆ ತಿಂಗಳಿಗೆ 264 ರೂ., ಅದೇ ವ್ಯಕ್ತಿ ಪಿಂಚಣಿ ಮೊತ್ತವನ್ನು 5,000 ರೂ. ಬಯಸಿದರೆ ತಿಂಗಳಿಗೆ 1,318 ರೂ. ಪಾವತಿಸಬೇಕಾಗುತ್ತದೆ.

ವಿದೇಶದಲ್ಲಿ ನಾನು ಕಂಡಂತೆ 75-80 ವರ್ಷದ ವೃದ್ಧರು ಮುಪ್ಪಿನಲ್ಲೂ ಅತ್ಯುತ್ತಮವಾಗಿ ಜೀವಿಸುತ್ತಾರೆ. ಎಷ್ಟೋ ಕಡೆ ಜಂಟಿಯಾಗಿ ವ್ಯಾಯಾಮ ಮಾಡುತ್ತಾರೆ. ನಗುವಿನ ಕ್ಲಬ್ (Laughing club) ಹೆಚ್ಚಾಗುತ್ತಿವೆ. ಪರಾವಲಂಬನೆ ಇಲ್ಲದೆ ಸ್ವಾವಲಂಬನೆಯ ಉದ್ದೇಶದಿಂದ ಈ ರೀತಿ ಮಾಡುತ್ತಾರೆ.

ಒಂದು ಕಥೆಯಿದೆ. ಓರ್ವ ಮಗ ವೃದ್ಧ ತಂದೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಅನಾಥಾಶ್ರಮಕ್ಕೆ ಸೇರಿಸಲು ಹೋಗುತ್ತಾನೆ. ದಾರಿಯಲ್ಲಿ ದಣಿವಾರಿಸಿಕೊಳ್ಳಲು ತಂದೆಯನ್ನು ಎತ್ತರದ ಜಾಗದಲ್ಲಿ ಕುಳ್ಳಿರಿಸಿ ಯೋಚಿಸುತ್ತಾನೆ. ಕೆಲವು ದಿನಗಳಿಂದ ವೃದ್ಧಾಶ್ರಮಕ್ಕೆ ಸೇರಿಸುವ ಬಗ್ಗೆ ಮಾತುಕತೆ ನಡೆದಾಗಲೂ ತಂದೆ ಸಿಟ್ಟು ಮಾಡಿಕೊಳ್ಳಲಿಲ್ಲ, ಕೆಟ್ಟದಾಗಿ ಬೈಯಲಿಲ್ಲ. ಇನ್ನು ಮತ್ತೆ ಮನೆಗೆ ಮರಳುವುದಿಲ್ಲ ಎಂದು ತಿಳಿದಿದ್ದರೂ ಮುಖದಲ್ಲಿ ಅದೇ ಮುಗುಳ್ನಗೆ ಇದೆ. ‘ಅಪ್ಪಾ ನಿಮ್ಮನ್ನು ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋಗುತ್ತೇನೆಂದು ಗೊತ್ತಿದ್ದರೂ ಮುಗುಳ್ನಗುತ್ತಿದ್ದೀರಲ್ಲ’ ಎಂದು ಕೇಳುತ್ತಾನೆ. ಅದಕ್ಕೆ ಅಪ್ಪ ‘ನನಗೆ ನನ್ನ ಭವಿಷ್ಯ ಸ್ಪಷ್ಟವಾಗಿ ಕಾಣುತ್ತಿದೆ, ಆದರೆ ನಿನ್ನ ಮಗ ನಿನ್ನನ್ನು ನನ್ನಂತೆಯೇ ಹೊತ್ತುಕೊಂಡು ವೃದ್ಧಾಶ್ರಮಕ್ಕೆ ಹೋಗುವಾಗ ನೀನು ಹೇಗಿರುತ್ತಿ ಎಂದು ಯೋಚಿಸಿ ನಗುತ್ತಿದ್ದೇನೆ’ ಎಂದನಂತೆ. ವಿದೇಶದಲ್ಲಿ ಈ ದೃಶ್ಯ ಮತ್ತು ವೃದ್ಧಾಪ್ಯ ವಾಸ ಸಾಮಾನ್ಯ. ಆದರೆ ಜೀವನಕ್ಕೆ ಭದ್ರತೆ ಮಾಡಿಕೊಂಡಿರುವ ಹಿರಿಯರು ಆಘಾತಕ್ಕೆ ಒಳಗಾಗುವುದಿಲ್ಲ. ವಿದೇಶದಲ್ಲಿ ಹೆತ್ತವರಿಗೆ ‘ಧನ್ಯವಾದ ಸಮರ್ಪಣಾ ದಿನ’ (Thanks giving Day)) ಇದೆ. ಆ ದಿನ ಮಕ್ಕಳು ಕರೆ ಮಾಡಿ ಹೆತ್ತವರಿಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ಈ ವಿಚಾರವಾಗಿ ನನಗೊಬ್ಬರು ಒಂದು ಮನಮಿಡಿಯುವ ಘಟನೆ ತಿಳಿಸಿದರು. ಒಬ್ಬ ತನ್ನ ತಾಯಿಗೆ ಧನ್ಯವಾದ ತಿಳಿಸಲು ಕರೆ ಮಾಡಿದ. ಆದರೆ ಅತ್ತಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಎಷ್ಟೇ ಕರೆ ಮಾಡಿದರೂ ಉತ್ತರ ಬಾರದಿದ್ದಾಗ ಅನುಮಾನಗೊಂಡು ಪೊಲೀಸರಿಗೆ ತಿಳಿಸುತ್ತಾನೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ತಾಯಿ ನಿಧನರಾಗಿ ಎರಡು ದಿನ ಆದ ವಿಚಾರ ಬೆಳಕಿಗೆ ಬರುತ್ತದೆ.

ವೃದ್ಧಾಪ್ಯದ ವೇಳೆಗೆ ಸ್ವಂತ ಸೂರಿದ್ದರೆ ಬದುಕಿಗೆ ಗಟ್ಟಿತನವನ್ನು ನೀಡುತ್ತದೆ. ಮಕ್ಕಳು ಅನಾಥಾಶ್ರಮಕ್ಕೆ ಸೇರಿಸುತ್ತಾರೋ ಎಂಬ ಭಯ, ದುಗುಡವನ್ನು ನಿವಾರಿಸುತ್ತದೆ. ಅಂತೆಯೇ ನಗರದಲ್ಲಿ ಮಕ್ಕಳೂ ಈಗ ವಯಸ್ಸಾದ ಹೆತ್ತವರಿಗೆ ಅನೇಕ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಯಲ್ಯ ಕಾರ್ಯಕ್ರಮದ ಮೂಲಕ ಅಶಕ್ತರ ಬಾಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಫಲಾನುಭವಿಗಳ ಮನೆ ಭೇಟಿ, ಆರೋಗ್ಯ ಕ್ಷೇಮ ವಿಚಾರಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹಿರಿಯ ಜೀವಿಗಳ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿದಾಗ ನಮ್ಮ ಕಾರ್ಯಕರ್ತರಿಂದ ಬಂದ ವರದಿಯಲ್ಲಿ ಅವರ ಬವಣೆ ಬೆಳಕಿಗೆ ಬಂದಿದೆ.

ಒಂದು ಮನೆಯಲ್ಲಿ ನಾಲ್ಕು ಮಂದಿ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಮಗ ಅನಾಥಾಶ್ರಮಕ್ಕೆ ಸೇರಿಕೊಂಡ. ಮನೆಯ ಜವಾಬ್ದಾರಿ ಸೊಸೆಯ ಹೆಗಲ ಮೇಲೆ ಬಿತ್ತು. ಬೀಡಿ ಕಟ್ಟಿ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ. ಬಾಳಿನ ಸಂಜೆಯ ಕಾಲದಲ್ಲೂ ಸೊಸೆಯ ಜೊತೆ ಸೇರಿ ಹೇಗೋ ಜೀವನ ಸವೆಸುತ್ತಿದ್ದಾರೆ. ಮತ್ತೊಂದು ಉದಾಹರಣೆ- ವೃದ್ಧ ದಂಪತಿ ಮನೆಗೆ ಆಧಾರಸ್ತಂಭವಾಗಬೇಕಾಗಿದ್ದ 20 ವರ್ಷದ ಮಗನನ್ನು ಕಳೆದುಕೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ವಾಸಿಸಲು ಮನೆಯಿದೆ ಹಾಗೂ ಒಂದಷ್ಟು ಹಡೀಲು ಬಿದ್ದ ಜಮೀನು ಇದೆ. ಹೆಣ್ಣು ಮಕ್ಕಳು ಅಲ್ಪ-ಸ್ವಲ್ಪ ಸಹಾಯ ಮಾಡುತ್ತಿದ್ದಾರೆ. ಜಮೀನು ಅಭಿವೃದ್ಧಿಪಡಿಸಬೇಕಾದರೆ ಹಾಗೂ ಹೆತ್ತವರನ್ನು ನೋಡಿಕೊಳ್ಳಬೇಕಾದರೆ ಜಮೀನನ್ನು ಪಾಲು ಮಾಡಬೇಕೆಂದು ಅಳಿಯಂದಿರು ತಾಕೀತು ಮಾಡಿದ್ದಾರೆ. ಯೋಜನೆಯ ಮೂಲಕ ಇವರ ಬಾಳಿಗೆ ಸಹಾಯ ಹಾಗೂ ಶಕ್ತಿ ತುಂಬುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವೃದ್ಧಾಪ್ಯದ ಸಮಯದಲ್ಲಿ ಸ್ವತಂತ್ರವಾಗಿ ಬದುಕುವ ನಿಟ್ಟಿನಲ್ಲಿ ನಿಯಮಿತವಾಗಿ ತಿಂಗಳ ಆದಾಯ ಪಡೆಯುವಂತಾಗಬೇಕು.

ವಯಸ್ಸಾದ ಮೇಲೆ ಆರೋಗ್ಯದ ಕಡೆ ಗಮನ ನೀಡಬೇಕು. ಹಿಂದೊಮ್ಮೆ ಸುಮಾರು 90 ವರ್ಷದ ಹಿರಿಯರನ್ನು ಭೇಟಿಯಾಗಿದ್ದಾಗ ಅನಾರೋಗ್ಯದಿಂದ ಬಳಲಿ ಹಳ್ಳಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಂಡು ಲವಲವಿಕೆಯಿಂದ ಇದ್ದರು. ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ವಿಧಾನಗಳಿವೆ. ಯೋಗ-ವ್ಯಾಯಾಮಗಳನ್ನು ಮಾಡಬಹುದು. ವಯಸ್ಸಾದ ಅನೇಕರಿಗೆ ವ್ಯವಹಾರದಲ್ಲಿ, ಮನೆ ವಿಚಾರದಲ್ಲಿ ಅಥವಾ ಮಕ್ಕಳ ವಿಷಯದಲ್ಲಿ ಚಿಂತೆಗಳು ಕಾಡುತ್ತವೆ. ಆದರೆ ಚಿಂತೆ ಮಾಡಿ, ಅನಾರೋಗ್ಯಕ್ಕೊಳಗಾಗಬೇಡಿ. ಪೂಜೆ ಮಾಡಿ, ಭಗವಂತನನ್ನು ಪ್ರಾರ್ಥಿಸಿ. ಮಕ್ಕಳ, ಮೊಮ್ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಜೀವನವನ್ನು ಕಳೆಯಿರಿ. ಮುಪ್ಪೆಂಬ ಅಲೆ ಎಲ್ಲರ ಬದುಕಿನಲ್ಲೂ ಬಂದೇ ಬರುತ್ತದೆ. ಆ ಸಮಯದಲ್ಲಿ ಹೆತ್ತವರನ್ನು ಗೌರವಿಸಬೇಕಾದುದು ಮಕ್ಕಳ ಕರ್ತವ್ಯ. ಹಿರಿಯರು ಇಳಿವಯಸ್ಸಿನ ಜೀವನವನ್ನು ಹೂವಿನಂತೆ ನಡೆಸುವಲ್ಲಿ ಯುವಜನಾಂಗ ಮುಖ್ಯಭೂಮಿಕೆ ವಹಿಸಬೇಕು. ನಾವು ಎಳೆಯರಾಗಿದ್ದಾಗ ಕೈ ಹಿಡಿದು ಮುನ್ನಡೆಸಿದ ಹಿರಿಯರಿಗೆ ಅವರ ಮುಪ್ಪಿನ ವೇಳೆಯಲ್ಲಿ ಕೈ ಹಿಡಿದು ಮುನ್ನಡೆಸಬೇಕಾದ ಜವಾಬ್ದಾರಿ ಬಗ್ಗೆ ತಿಳಿದಿರೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)