ಗೋವುಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ಸಮಂಜಸ, ಸ್ವಾಗತಾರ್ಹ. ಹಿಂದೂಗಳಿಗೆ ಗೋವುಗಳು ದೇವರ ಸಮಾನ. ಗಂಗೆಯ ಉಗಮಸ್ಥಾನಕ್ಕೆ ಗೋಮುಖವೆಂದು ಕರೆಯುತ್ತಾರೆ. ‘ಎಲ್ಲಿ ಗೋವುಗಳು ನಿರ್ಭಯವಾಗಿ, ಸ್ವಚ್ಛಂದದಿಂದ ಬದುಕುತ್ತವೆಯೋ ಅಂಥ ರಾಷ್ಟ್ರ ಸಮೃದ್ಧಿಯಾಗುತ್ತದೆ’ ಎಂದಿದ್ದರು ಜಗದ್ಗುರು ಶಂಕರಾಚಾರ್ಯರು. ‘ಗೋದರ್ಶನಂ ಪಾಪನಾಶನಂ’ ಎಂಬ ನಾಣ್ಣುಡಿಯೂ ಇದೆ.
ಆದರೆ, ವಿಪರ್ಯಾಸವೆಂದರೆ ಸರ್ಕಾರದ ಆಜ್ಞೆ ಇದ್ದರೂ ಗೋವುಗಳಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತರು ಮಾಲೂರಿನ ಗೋಕೇಂದ್ರಕ್ಕೆ ಒಪ್ಪಿಸಿದ್ದರು. ಆದರೆ, ಕೆಲವರು ಅವುಗಳನ್ನು ಬಿಡಿಸಿಕೊಂಡು ಹೋಗಿ, ಕಸಾಯಿಖಾನೆಯಲ್ಲಿ ಹತ್ಯೆ ಮಾಡಿದ್ದಾರೆ. ಇಂಥ ಘೋರ ಕೃತ್ಯಗಳು ಒಂದೆರಡಲ್ಲ, ನಿರಂತರವಾಗಿ ನಮ್ಮ ಸುತ್ತಮುತ್ತ ನಡೆಯುತ್ತಲೇ ಇವೆ. ಇದರಿಂದ ರಾಷ್ಟ್ರಪ್ರೇಮಿಗಳಿಗೆ ಅಪಾರ ನೋವಾಗಿದೆ. ಹಾಗಾಗಿ, ಸರ್ಕಾರದ ಗೋರಕ್ಷಣೆ ಕೇವಲ ಕಣ್ಣೋರೆಸುವ ತಂತ್ರವಾಗಬಾರದು. ಗೋರಕ್ಷಣೆ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಕೆಲ ಅಗತ್ಯ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
| ರಾಮಶೇಷ ನಿಡಿಗೆರೆ ಬೆಂಗಳೂರು