ಅಂಕಣ

ಯುವಜನತೆಯಲ್ಲಿ ಕ್ರೀಡಾಸ್ಪೂರ್ತಿ ಹೆಚ್ಚಲಿ

ಇದೀಗ ಹಬ್ಬಗಳು ಆರಂಭವಾಗಿವೆ. ನವರಾತ್ರಿ, ದೀಪಾವಳಿ ಹಬ್ಬಗಳ ಆಚರಣೆ ಒಂದೆಡೆಯಾದರೆ, ಕ್ರಿಕೆಟ್ ಹಬ್ಬವೂ ಈಗಾಗಲೇ ಶುರುವಾಗಿದೆ. ಇಂದಿನ ಮಕ್ಕಳನ್ನು, ‘ನೀನು ಏನಾಗಬೇಕು?’ ಎಂದು ಕೇಳಿದರೆ, ಕ್ರಿಕೆಟಿಗನಾಗಬೇಕೆಂದು ಹೇಳುವವರೇ ಹೆಚ್ಚು. ಟಿ.ವಿ.ಯಲ್ಲಿ ಕಾಣುವ ಕ್ರಿಕೆಟ್ ಆಟಗಾರರಂತೆ, ನಾವು ಕೂಡ ಫೋರ್, ಸಿಕ್ಸ್ ಹೊಡೆಯಬೇಕೆಂಬ ಆಸೆ ವ್ಯಕ್ತಪಡಿಸುತ್ತಾರೆ. ತಾವು ನೋಡಿದ ಕ್ರಿಕೆಟ್ ಆಟಗಾರರನ್ನು ಇಷ್ಟಪಟ್ಟಿರುತ್ತಾರೆ. ಹಾಗೂ ಅವರ ಹಾಗೆ ಆಗಬೇಕೆಂದು ಕನಸು ಕಾಣುತ್ತಾರೆ. ಕೆಲವರು ಕ್ಷೇತ್ರಕ್ಕೆ ಬಂದಾಗ ಹೇಳುವುದುಂಟು, ‘ಸ್ವಾಮಿ, ಮಕ್ಕಳು ಕ್ರಿಕೆಟ್ ಬಿಟ್ಟು ಬೇರೇನೂ ಆಡುವುದಿಲ್ಲ. ಓದುವುದು ಬಿಟ್ಟು ಕ್ರಿಕೆಟ್ ಆಡಲು ಹೋಗುತ್ತಾರೆ’. ಆಗ, ‘ಇದು ಮಕ್ಕಳ ವಯೋಸಹಜ ಆಸೆಗಳು. ಅವರು ಪ್ರೌಢರಾದಂತೆ ಅವರ ಆಸೆ-ಆಕಾಂಕ್ಷೆಗಳು ಕೂಡ ಬದಲಾಗುತ್ತಲೇ ಇರುತ್ತವೆ. ಯಾವುದೇ ಭಯ ಬೇಡ. ಮಕ್ಕಳು ಮೊಬೈಲ್​ಗೇಮ್ ವಿಡಿಯೋಗೇಮ್ ಆಡದೆ ಕ್ರಿಕೆಟ್ ಅನ್ನು ಆಡುತ್ತಾರಲ್ಲ ಅದು ಪುಣ್ಯ. ಮಕ್ಕಳಿಗೆ ದೈಹಿಕ ಶ್ರಮ ಬೇಕು. ಮೈದಾನದಲ್ಲಿ ಆಡುವಾಗ ದೇಹದ ಎಲ್ಲ ಅವಯವಗಳೂ ಕೆಲಸಮಾಡುತ್ತವೆ ಹಾಗೂ ದೈಹಿಕ, ಮಾನಸಿಕ ಕ್ಷಮತೆ ಹೆಚ್ಚಲು ಸಹಕಾರಿಯಾಗುತ್ತವೆ’ ಎಂದು ಹೇಳುತ್ತೇನೆ.

ಕ್ರಿಕೆಟ್ ಜಗತ್​ಪ್ರಸಿದ್ಧ ಆಟ. ವಿಶ್ವದ ಯಾವುದೇ ರಾಷ್ಟ್ರಕ್ಕೂ ಹೋದರೂ ಕ್ರಿಕೆಟ್ ಆಟವನ್ನು ಕಾಣಬಹುದು. ನಮ್ಮ ದೇಶದಲ್ಲೂ ಅಷ್ಟೇ ಬಹಳ ಹಿಂದೆಯೇ ಕ್ರಿಕೆಟ್ ಆಟವಿತ್ತು. ರಾಜ್ಯದ ಕರಾವಳಿ ಭಾಗದಲ್ಲಂತೂ ತೆಂಗಿನ ಮರದ ದಂಡನ್ನು ಬಳಸಿಕೊಂಡು ಟೆನಿಸ್ ಬಾಲ್ ಸಿಗದಿದ್ದರೆ ಪ್ಲಾಸ್ಟಿಕ್​ಕವರ್​ಜೋಡಿಸಿ ಚೆಂಡು ಮಾಡಿ ಆಟವಾಡುವ ಕಾಲವಿತ್ತು. ಕ್ರಿಕೆಟ್ ಹುಚ್ಚು ಎಷ್ಟಿತ್ತೆಂದರೆ ಎಲ್ಲರೂ ಒಂದೊಂದು ರೂಪಾಯಿ ಹಾಕಿ ಬಾಲ್ ಕೊಳ್ಳಲಾಗುತ್ತಿತ್ತು. ದಕ್ಷಿಣ ಕನ್ನಡದಲ್ಲಿ ಅಂಡರ್ ಆಮ್ರ್ ಬೌಲಿಂಗ್ ಪ್ರಚಲಿತದಲ್ಲಿತ್ತು. ಯಾವಾಗ ಟಿ.ವಿ.ಯಲ್ಲಿ ಕ್ರಿಕೆಟ್​ನ್ನು ನೋಡಲಾರಂಭಿಸಿದೆವೋ ಅದರ ಬಳಿಕ ಓವರ್ ಆಮ್ರ್ ಕ್ರಿಕೆಟ್ ಆಟ ಹೆಚ್ಚು ಬಳಕೆಗೆ ಬಂತು.

ನಾನು ಬೆಂಗಳೂರಿನ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಶಾಲೆಯಿಂದ ಧರ್ಮಸ್ಥಳ ಸೇರಿ ದಕ್ಷಿಣಕನ್ನಡದ ಹಲವೆಡೆಗಳಿಗೆ ಪ್ರವಾಸ ಆಯೋಜಿಸಲಾಗಿತ್ತು. ಪ್ರವಾಸ ಮುಗಿಸಿ ಶಾಲೆಗೆ ಹೋದ ಬಳಿಕ ಅಧ್ಯಾಪಕರು ಮಕ್ಕಳನ್ನು ಉದ್ದೇಶಿಸಿ, ‘ಪ್ರವಾಸದಲ್ಲಿ ಏನೆಲ್ಲ ಕಂಡಿರಿ?’ ಎಂದು ಕೇಳಿದರು. ಆಗ ಮಕ್ಕಳೆಲ್ಲ ಎರಡು ವಿಷಯಗಳನ್ನು ಮುಖ್ಯವಾಗಿ ಹೇಳಿದರು. ಅಲ್ಲಿ ರಸ್ತೆ ಬದಿಯಲ್ಲಿನ ಮರಗಳ ಎಲೆಗಳೆಲ್ಲ ಕೆಂಪಾಗಿರುತ್ತವೆ ಮತ್ತು ಅಲ್ಲಿ ಕ್ರಿಕೆಟ್​ನ್ನು ಅಂಡರ್ ಆಮರ್್​ನ್ನು ಆಡುವುದೆಂದರು. ಆಗ ಅಧ್ಯಾಪಕರು ಆ ಕುರಿತಾಗಿ ಉತ್ತರ ಸಿಗಬಹುದೇ ಎಂದು ನನ್ನ ಮುಖವನ್ನು ನೋಡತೊಡಗಿದರು. ಆಗ ನಾನು, ‘ಸರ್, ನಮ್ಮಲ್ಲಿ ಡಾಂಬರ್ ಇಲ್ಲದ ಮಣ್ಣಿನ ರಸ್ತೆಗಳೇ ಇವೆ. ಹಾಗಾಗಿ ರಸ್ತೆಯಲ್ಲಿ ವಾಹನ ಚಲಿಸಿದಾಗ ಧೂಳೆದ್ದು, ಅವು ಮರಗಳ ಮೇಲೆ ಕೂರುತ್ತವೆ. ಹಾಗಾಗಿ ಎಲೆಗಳೆಲ್ಲ ಕೆಂಪಾಗಿ ಕಾಣುತ್ತವೆ’ ಎಂದೆ. ಎಲ್ಲ ಮಕ್ಕಳು ಜೋರಾಗಿ ನಕ್ಕರು. ಹಾಗೆಯೇ ನಮಲ್ಲಿ ಓವರ್ ಆಮ್ರ್ ಕ್ರಿಕೆಟ್ ಆಡುವ ಅಭ್ಯಾಸವೇ ಇಲ್ಲ. ಅದರ ಬಗ್ಗೆ ತಿಳಿದಿಲ್ಲ ಎಂದೆ. ಓವರ್ ಆಮ್ರ್ ಕ್ರಿಕೆಟ್ ಆಡಬಹುದು ಎಂದು ನನಗೂ ತಿಳಿದಿದ್ದೇ ಬೆಂಗಳೂರಿನಲ್ಲಿ ಶಾಲೆಗೆ ಹೋಗಿ ಸೇರಿದ ಮೇಲೆ. ಟೆನಿಸ್ ಬಿಟ್ಟು ಹಾರ್ಡ್​ಬಾಲ್​ನಲ್ಲಿ ಕ್ರಿಕೆಟ್ ಆಡುತ್ತಾರೆ ಎಂದೂ ಆಗಲೇ ತಿಳಿದು ಬಂತು.

ಉಜಿರೆಯಲ್ಲಿ 4-5 ದಶಕದ ಹಿಂದೆ ಮಕ್ಕಳ ಮೇಳವನ್ನು ಆಯೋಜನೆ ಮಾಡಿದ್ದೆವು. ಅದರಲ್ಲಿ ಮಕ್ಕಳಿಗೆ ಹೊಸ ರೀತಿಯ ಆಟಗಳನ್ನು ಪರಿಚಯ ಮಾಡಿಕೊಡುವ ಕಾರ್ಯಕ್ರಮವೂ ಇತ್ತು. ಅದರಲ್ಲಿ ಫುಟ್ಬಾಲ್, ಹಾಕಿ ಇನ್ನಿತರ ಆಟಗಳಿದ್ದವು. ವಿಶೇಷವಾಗಿ ಸ್ಕೇಟಿಂಗ್​ನ್ನು ಪರಿಚಯಿಸಿದ್ದೆವು. ಕಾಲಿಗೆ ಚಕ್ರ ಕಟ್ಟಿಕೊಂಡು ಹೋಗುವ ಈ ಆಟದ ಕಲ್ಪನೆ ಕೂಡ ಮಕ್ಕಳಿಗೆ ಇರಲಿಲ್ಲ. ಬಹಳಷ್ಟು ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೆ ಬರಿಗಾಲಲ್ಲಿ ಓಡುತ್ತಿದ್ದರು. ಹೆಣ್ಣುಮಕ್ಕಳಂತೂ 7ನೇ ತರಗತಿಯ ನಂತರ ಯಾವುದೇ ರೀತಿಯ ಆಟೋಟಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಯಾಕೆಂದರೆ ಹೆಣ್ಣುಮಕ್ಕಳು ಅರ್ಧಚಡ್ಡಿಯಂತಹ ಕ್ರೀಡಾ ಉಡುಗೆ ತೊಡುವುದು ತಪ್ಪು ಅನ್ನುವ ಭಾವನೆ ಆ ಕಾಲದಲ್ಲಿ ಹಲವರಲ್ಲಿತ್ತು. ಈ ಮಕ್ಕಳ ಮೇಳದ ಬಳಿಕ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಶಾಲಾ ಆಟದ ಸಮಯದಲ್ಲಿ ವಿವಿಧ ಆಟಗಳನ್ನು ಆಡಲು ಆರಂಭಿಸಿದರು. ಹೀಗೆ ಆಟೋಟಗಳ ಬಗ್ಗೆ ಸಾಕಷ್ಟು ತಿಳಿಯಲು ಮಕ್ಕಳ ಕೂಟ ಸಹಕಾರಿಯಾಯಿತು.

ಟಿ.ವಿ. ಬಳಕೆ ಬಂದ ಮೇಲೆಯೇ ಕ್ರಿಕೆಟ್ ಬಗ್ಗೆ ಅನೇಕ ವಿಚಾರಗಳು ಜನರಿಗೆ ತಿಳಿಯಿತು. ಅದುವರೆಗೂ ಅಂಡರ್​ಆಮರ್್​ಗೆ ಸೀಮಿತವಾಗಿದ್ದ ಕ್ರಿಕೆಟ್ ಓವರ್ ಆಮರ್್​ನತ್ತ ವಾಲಿತು. ಈಗಲೂ ಅಷ್ಟೇ ದಕ್ಷಿಣ ಕನ್ನಡದ ಭಾಗಗಳಲ್ಲಿ ಓವರ್ ಆಮ್ರ್ ಕ್ರಿಕೆಟ್ ಇದ್ದರೂ ಅಂಡರ್ ಆಮ್ರ್ ಕ್ರಿಕೆಟ್​ಗಳು ಅಲ್ಲಲ್ಲಿ ಆಯೋಜನೆಯಾಗುತ್ತಿರುತ್ತವೆ. ಕ್ರಿಕೆಟ್​ನಲ್ಲಿ ಬಾಲ್ ಎಸೆಯುವುದು, ಬ್ಯಾಟ್ ಬೀಸುವುದು ಇಷ್ಟೇ ಅಲ್ಲ, ಆಟವನ್ನು ಚಾಕಚಕ್ಯತೆಯಿಂದ ಕೂಡ ಆಡಬೇಕು, ಆಟವಾಡಲು ದೇಹದಾರ್ಢ್ಯ ಮಾತ್ರ ಇದ್ದರೆ ಸಾಕಾಗದು, ಕ್ಷಮತೆಯೂ ಮುಖ್ಯವಾಗುತ್ತದೆ ಎಂಬ ಅರಿವು ಹೆಚ್ಚಿನವರಲ್ಲಿ ಮೂಡಿತು. ವಿಶ್ವಕಪ್ ಅಂಗವಾಗಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಮ್ಯಾಚ್​ನಲ್ಲಿ ಭಾರತದ ಮೊದಲ ಮೂರು ವಿಕೆಟ್​ಗಳು ಬೇಗನೆ ಉರುಳಿದ್ದವು. ಆ ಹಂತದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಒಂದೊಂದೇ ರನ್ ಪೇರಿಸಿಕೊಂಡು ಆಟದ ಶೈಲಿಯನ್ನು ಬದಲಾಯಿಸಿದರು. ಈ ರೀತಿಯ ಆಟದ ಕರಾಮತ್ತುಗಳು ಭಾರತೀಯರಿಗೆ ಅದರಲ್ಲೂ ಹಳ್ಳಿ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಎಲ್ಲರಿಗೂ ಬ್ಯಾಟ್ ಬೀಸಿ ದಾಂಡಿಗರಾಗಬೇಕು, ಫೋರ್, ಸಿಕ್ಸ್ ಹೊಡೆಯಬೇಕು ಎಂಬ ಕಲ್ಪನೆಯಿತ್ತೇ ಹೊರತು, ಸ್ಕೋರ್ ಹೇಗೆ ಪೇರಿಸಬೇಕು ಎಂಬ ಅರಿವಿರಲಿಲ್ಲ. ಹೀಗಾಗಿ ನಿಧಾನವಾಗಿ ಸ್ಕೋರನ್ನು ಪೇರಿಸಿಕೊಂಡು ಹೋಗುವುದು ಅಂದರೆ ಪ್ರತೀ ಓವರ್​ನಲ್ಲಿ ಆರು ರನ್ ತೆಗೆದರೂ 50 ಓವರ್​ನಲ್ಲಿ 300 ರನ್ ತೆಗೆಯಬಹುದು ಎಂಬ ಯೋಚನೆ ಇರಲಿಲ್ಲ. ಇಂತಹ ಆಟದ ಶೈಲಿ ಅಥವಾ ಟೆಕ್ನಿಕ್​ಗಳು ಟಿ.ವಿ.ಯಲ್ಲಿನ ನೇರಪ್ರಸಾರದಿಂದ ಜನಪ್ರಿಯಗೊಂಡಿತು.

ಆಟ ಆಡುವುದಕ್ಕಿಂತ ಹೆಚ್ಚು ಆಟದಲ್ಲಿ ನಮ್ಮನ್ನು ನಾವು ತೊಡಗಿಸುವುದು ಬಹಳ ಮುಖ್ಯ. ಒಂದು ದಿನದ ಅಥವಾ ಕೆಲವು ಗಂಟೆಗಳ ಕಾಲ ಆಟ ಆಡುವುದಕ್ಕೆ ಆಟಗಾರನು ಅದೆಷ್ಟೋ ದಿನಗಳ ಕಾಲ ಶ್ರಮಪಡಬೇಕಾಗುತ್ತದೆ. ಹಗಲು-ರಾತ್ರಿ ಕಷ್ಟಪಡಬೇಕಾಗುತ್ತದೆ. ಇಲ್ಲಿ ಆಟಗಾರರಿಗೆ ತರಬೇತಿ ನೀಡುವವರೂ ಮಹತ್ವದ ಪಾತ್ರ ವಹಿಸುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ವನಿಗೆ ಬೌಲಿಂಗ್ ಕಡೆ ಒಲವಿತ್ತಂತೆ. ಅವರ ತರಬೇತುದಾರರು ಒಂದು ದಿನ ಆತನ ಬ್ಯಾಟಿಂಗ್ ನೋಡಿ ‘ನೀನು ಉತ್ತಮ ಬ್ಯಾಟರ್ ಆಗಬಲ್ಲೆ’ ಎಂದು, ಬ್ಯಾಟಿಂಗ್ ಕಡೆ ಗಮನ ಕೊಡುವಂತೆ ತರಬೇತು ನೀಡಿದರಂತೆ. ಮುಂದಿನದು ಇತಿಹಾಸ.

ಆಟಗಾರನು ಹೇಗೆ, ಎಷ್ಟರಮಟ್ಟಿಗೆ ಕಠಿಣ ತರಬೇತಿ ಪಡೆಯಬೇಕಿರುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಟಿ.ವಿ.ಯಲ್ಲಿ ಮಹಾಭಾರತ ಮತ್ತು ರಾಮಾಯಣ ಯುದ್ಧದ ದೃಶ್ಯಗಳನ್ನು ನೋಡುವಾಗ ಮಂತ್ರಗಳನ್ನು ಪ್ರಯೋಗಿಸಿ ಬಾಣಗಳನ್ನು ಆಕಾಶಕ್ಕೆ ಬಿಡುತ್ತಿದ್ದರು. ತನ್ನತ್ತ ಬರುವ ಬಾಣ ಗಳನ್ನು ನಾಶ ಮಾಡಲು ಅಥವಾ ತಡೆ ಒಡ್ಡಲು ಎದುರಾಳಿಯು ಬಾಣಗಳನ್ನು ಪ್ರತಿಮಂತ್ರಿಸಿ ಬಿಡುತ್ತಿದ್ದರು. ಆಗ ಆಕಾಶದಲ್ಲಿಯೇ ಘರ್ಷಣೆಯಾಗಿ ಅದರಲ್ಲೊಂದು ಬಾಣ ಕೆಳಗೆ ಬೀಳುತ್ತಿತ್ತು. ಉದಾಹರಣೆಗೆ ಆಗ್ನೇಯಾಸ್ತ್ರವನ್ನು ಬಿಟ್ಟಾಗ ಅದರ ಮರ್ಮವನ್ನರಿತು ವರುಣಾಸ್ತ್ರವನ್ನು ಪ್ರಯೋಗ ಮಾಡಿದರೆ ಬೆಂಕಿಯ ವಿರುದ್ಧವಾಗಿ ನೀರು ಚೆಲ್ಲಿ ಆಗ್ನೇಯಾಸ್ತ್ರ ನಿಷ್ಪ್ರೊಜಕವಾಗುತ್ತದೆ. ನನ್ನ ಅನುಮಾನವೆಂದರೆ ಬಾಣ ಪ್ರಯೋಗಿಸಿ ದವನು ಯಾವ ಬಾಣ ಪ್ರಯೋಗಿಸಿದ, ಎಷ್ಟು ಶಕ್ತಿಯುಳ್ಳದ್ದು, ಅದಕ್ಕೆ ಪ್ರತಿಯಾಗಿ ಯಾವ ಶಸ್ತ್ರಾಸ್ತ್ರ ಬಳಸಬೇಕು? ಅದನ್ನು ಹೇಗೆ ಎದುರಿಸಬೇಕು ಎಂಬಿತ್ಯಾದಿಯನ್ನು ತಿಳಿದು ಪ್ರತಿಶಸ್ತ್ರವನ್ನು ಹೂಡಲು ಎದುರಾಳಿಗೆ ಸಮಯ ಉಂಟೇ? ಆತ ಹೇಗೆ ನಿಖರವಾಗಿ ಪ್ರತ್ಯಾಸ್ತ್ರವನ್ನು ಪ್ರಯೋಗಿಸುತ್ತಾನೆ ಎಂಬುದಾಗಿತ್ತು.

ಒಮ್ಮೆ ವಿದ್ವಾಂಸರೊಬ್ಬರು ಮಹಾಭಾರತದ ಕಥೆಯನ್ನು ವಿವರಿಸುವಾಗ ನನ್ನಲ್ಲಿದ್ದ ಸಂದೇಹಕ್ಕೆ ಅವರ ಬಳಿ ಉತ್ತರ ಸಿಗಬಹುದೇನೋ ಎಂದು ಹೇಳಿಕೊಂಡೆ. ಆಗ ಅವರು ಅವೆಲ್ಲ ಕ್ಷಣಾರ್ಧದಲ್ಲಿ ಘಟಿಸುವಂತಹುಗಳು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಏನೇನೆಲ್ಲ ಆಗಿ ಹೋಗಿರುತ್ತದೆ ಎಂದ ಅವರು ಕ್ರಿಕೆಟ್​ನ ಉದಾಹರಣೆ ನೀಡಿದರು. ಕ್ರಿಕೆಟ್ ಮ್ಯಾಚ್​ನಲ್ಲಿ ವೇಗದ ಬೌಲರ್​ನು 140 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯುವಾಗ ಬ್ಯಾಟ್ಸ್​ಮ್ಯಾನ್ ಆ ಬಾಲ್ ಹೇಗೆ ಬರುತ್ತದೆ? ಯಾವ ಕಡೆಯಿಂದ ಬರುತ್ತದೆ ಎಂಬಿತ್ಯಾದಿ ಸುಳಿವನ್ನು ತಿಳಿದುಕೊಂಡು ಬ್ಯಾಟ್ ಮಾಡಬೇಕಾಗುತ್ತದೆ. ಹಾಗೆಯೇ ಬಾಣ ಪ್ರಯೋಗದಲ್ಲೂ ಪ್ರತ್ಯಾಸ್ತ್ರ ಬಿಡುವಾಗ ಎಲ್ಲ ರೀತಿಯಲ್ಲೂ ವಿಶ್ಲೇಷಣೆ, ವಿಮರ್ಶೆ, ಆಲೋಚನೆ, ಊಹೆಗಳನ್ನೆಲ್ಲ ಮಾಡಬೇಕಾಗುತ್ತದೆ ಎನ್ನುತ್ತ ವೇಗದ ಬಾಲ್​ನ್ನು ಎದುರಿಸುವ ಸಂದರ್ಭದ ಸಾಮ್ಯತೆಯೊಂದಿಗೆ ವಿವರಿಸಿದರು ಹಾಗೂ ಅದಕ್ಕೆ ಸಾಕಷ್ಟು ಅಭ್ಯಾಸ ಮಾಡಬೇಕಾದ ವಾಸ್ತವ ಸಂಗತಿಯನ್ನು ತಿಳಿಸಿದರು.

ಆಗ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮ್ಯಾನ್ ಹೇಗೆ ಅಭ್ಯಾಸ ಮಾಡಬೇಕಾಗುತ್ತದೆ ಹಾಗೂ ತನ್ನ ಸ್ಕೋರ್​ನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲ ಕಷ್ಟಪಡಬೇಕೆಂದು ಯೋಚಿಸಿ ಅವರ ಮೇಲೆ ಅಭಿಮಾನ ಉಂಟಾಗಿತ್ತು.

ಕ್ರಿಕೆಟ್ ಎಂಬುದು ಒಂದು ಟೀಮ್ರ್ಕ್. ಅಲ್ಲಿ ಒಬ್ಬ ಮಾತ್ರ ಆಟ ಆಡಿದರೆ ಸಾಲದು. ಎಲ್ಲರೂ ಪರಸ್ಪರ ಸಹಕಾರ ನೀಡಿದಾಗ ಮಾತ್ರ ಆಟ ಯಶಸ್ವಿಗೊಳ್ಳಲು ಸಾಧ್ಯ. ಟೀಮ್ರ್ಕ್ ಎಂಬುದು ಆಟದ ವೈಖರಿಯಾದರೂ ನಾವು ಟೀಮ್ರ್ಕ್ ಮಾಡುವ ಯಾವುದೇ ಕೆಲಸ-ಕಾರ್ಯಗಳ ಸೋಲು, ಗೆಲುವಿಗೂ ಮಾತ್ರವಲ್ಲದೆ- ಕುಟುಂಬ, ಸಮಾಜದಲ್ಲಿರುವ ನಮ್ಮೆಲ್ಲರ ಬದುಕಿಗೂ ಅನ್ವಯಿಸಿಕೊಳ್ಳಬಹುದು. ನಮ್ಮ ಟೀಮ್ ನಮ್ಮ ದೇಶ, ನಮ್ಮ ಕುಟುಂಬ, ಸಮಾಜ ಎಂಬ ಪ್ರೀತಿಯೊಂದಿಗೆ ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ, ಆಟ ಆಡುತ್ತೇವೆ ಎಂಬ ಸಂಕಲ್ಪ ಹೊಂದುವುದು ಅಗತ್ಯ.

ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಉಜಿರೆಯ ಎಸ್​ಡಿಎಂ ಕಾಲೇಜ್ ಅನ್ನು ಪ್ರಾರಂಭಿಸಿದಾಗಲೇ ಸ್ಪೋರ್ಟ್ಸ್ ಕ್ಲಬ್ ಆರಂಭಿಸಿದೆವು. ಪ್ರಾಥಮಿಕ ಶಾಲೆಯಿಂದ ತೊಡಗಿ ಪದವಿ, ಸ್ನಾತಕೋತ್ತರ ಪದವಿ ಪಡೆಯುವವರೆಗೆ ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಪೂರ್ತಿಯನ್ನು ತುಂಬುವುದು ನಮ್ಮ ಆಶಯವಾಗಿತ್ತು. ಅದರಂತೆ ಪ್ರಾಥಮಿಕ ಶಾಲೆಯಲ್ಲಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಪೋ›ತ್ಸಾಹ, ತರಬೇತಿ ನೀಡಿ, ಪ್ರೌಢಶಾಲೆ, ಪಿಯುಸಿ, ಪದವಿ ಮಟ್ಟದಲ್ಲೂ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಕ್ರೀಡಾಪಟುವಾಗಿ ಹೊಮ್ಮುವಂತೆ ಎಲ್ಲ ರೀತಿಯ ಸಹಕಾರ ನೀಡ ಲಾಗುತ್ತದೆ. ಅದಕ್ಕಾಗಿ ಕ್ರೀಡಾ ವಿದ್ಯಾರ್ಥಿಗಳಿಗೆಂದೇ ಅದರಲ್ಲೂ ಹುಡುಗರು ಮತ್ತು ಹುಡುಗಿಯರಿಗಾಗಿ ಪ್ರತ್ಯೇಕವಾದ ಹಾಸ್ಟೇಲ್ ವ್ಯವಸ್ಥೆ, ಪೌಷ್ಠಿಕ ಆಹಾರ, ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಮಾತ್ರವಲ್ಲದೆ ಶಾಲಾ-ಕಾಲೇಜಿನ ಫೀಸ್​ಗಳಲ್ಲಿ ರಿಯಾಯಿತಿ ಹಾಗೂ ಉಚಿತ ಸೌಲಭ್ಯಗಳೂ ಇವೆ.

ಆಟವೆಂದರೆ ಕ್ರಿಕೆಟ್ ಮಾತ್ರ ಎಂಬ ಭಾವನೆ ಬೇಡ. ಇತ್ತೀಚೆಗೆ ಚೀನಾದಲ್ಲಿ ನಡೆದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ಮೊದಲ ಬಾರಿಗೆ 107 ಪದಕಗಳನ್ನು ಗೆದ್ದು ದಾಖಲೆ ನಿರ್ವಿುಸಿದೆ ಹಾಗೂ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಇದು ಹೆಮ್ಮೆ ಪಡುವ ಸಂಗತಿ. ಹೀಗೆಯೇ ಒಲಿಂಪಿಕ್ಸ್ ಹಾಗೂ ಇನ್ನಿತರ ಅಂತಾರಾಷ್ಟ್ರೀಯ ಮಟ್ಟದ ಆಟಗಳಲ್ಲೂ ಭಾರತದ ಕ್ರೀಡಾ ಪ್ರತಿಭೆಗಳು ಇನ್ನಷ್ಟು ಸಾಧನೆಯನ್ನು ಮಾಡಲಿ. ನಮ್ಮ ದೇಹದ ಸದೃಢತೆ ಕಾಪಾಡಿ

ಕೊಳ್ಳಲು ಕ್ರೀಡೆ ಸಹಕಾರಿಯಾದುದು. ಸ್ಪರ್ಧೆಗಾಗಿ ಮಾತ್ರವಲ್ಲ, ಮನರಂಜನೆ, ಆರೋಗ್ಯವೃದ್ಧಿ, ಉತ್ಸಾಹ, ಸಂತೋಷಕ್ಕಾಗಿ ಕ್ರೀಡೆಗಳಲ್ಲಿ ತೊಡಗಿಕೊಳ್ಳೋಣ. ಮುಖ್ಯವಾಗಿ ಮಕ್ಕಳನ್ನು ಮೊಬೈಲ್​ಗೇಮ್ ಕಂಪ್ಯೂಟರ್ ಗೇಮ್ ಟಿ.ವಿ.ಗಳಿಗೆ ಸೀಮಿತಗೊಳಿಸದೆ, ಮೈ-ಮನಸ್ಸಿಗೆ ಶಕ್ತಿ ತುಂಬುವ, ದೇಹದ ಕಸುವು ಹೆಚ್ಚಿಸುವ ಬಯಲಲ್ಲಿ ಆಡುವ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡುತ್ತ ಎಲ್ಲರಲ್ಲೂ ಕ್ರೀಡಾಸ್ಪೂರ್ತಿಯನ್ನು ಬೆಳೆಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)