ಅಂಕಣ

ಜನಮತ: ಕಿಸಾನ್ ಯೋಜನೆ ಸಹಾಯಧನ ಮುಂದುವರಿಸಲಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ರಸಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಸಿದ ರೈತರು ಬಿತ್ತನೆ ಮಾಡದೆ ಕೂರುವಂತಹ ಪರಿಸ್ಥಿತಿ ನಿರ್ವಣವಾಗಿದೆ. ಈಗಾಗಲೇ ಬಿತ್ತನೆ ಕಾಲವೂ ಮೀರಿ ಹೋಗಿದ್ದು, ಬೆಳೆ ಕೈಗೆ ಬರುತ್ತದೆ ಎಂಬ ನಂಬಿಕೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳೇ ರೈತರ ಬೆನ್ನೆಲುಬಾಗಿ ನಿಲ್ಲುವುದು ಅವಶ್ಯವಾಗಿದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿದ್ದ 10 ಸಾವಿರ ರೂ. ಸಹಾಯಧನದಲ್ಲಿ ರಾಜ್ಯ ಸರ್ಕಾರ ನೀಡುತ್ತಿದ್ದ ಶೇ. 40ರಷ್ಟು ಸಹಾಯಧನವನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ರೈತರ ಸಮಸ್ಯೆಯನ್ನು ಮನಗಂಡು ರಾಜ್ಯ ಸರ್ಕಾರ ಈ ಸಹಾಯಧನವನ್ನು ಪುನರಾರಂಭಿಸಬೇಕಿದೆ. ಅಲ್ಲದೆ, ಹಿಂಗಾರು ಬೆಳೆ ಬಿತ್ತನೆ ಪ್ರಾರಂಭವಾಗುತ್ತಿದ್ದು, ಮುಂಗಾರು ಬೆಳೆಯ ನಷ್ಟಕ್ಕೆ ಪರಿಹಾರ ನೀಡುವುದರ ಜತೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ, ರಸಗೊಬ್ಬರವನ್ನೂ ರಿಯಾಯಿತಿ ದರದಲ್ಲಿ ಒದಗಿಸುವ ಕೆಲಸ ಮಾಡಬೇಕಿದೆ.

| ಚೇತನ ಸಜ್ಜನ ಬೆಳ್ಳಿಹಾಳ, ರಾಯಚೂರು

ರಸ್ತೆ ಬದಿ ಗಿಡ ಬೆಳೆಸಿ

ಬೇರೆ ದೇಶಗಳಿಗೆ ಹೋಲಿಸಿದರೆ ವಿಶಾಲ ಭೂ ಪ್ರದೇಶವಿರುವ ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆಯ ಕಡೆಗೆ ನಾವು ನೀಡುವ ಗಮನ ಏನೇನೂ ಸಾಲದು. ತಾಪಮಾನ ಏರಿಕೆ, ಕೃತಕ ನೆರೆ, ಹವಾಮಾನ ವೈಪರೀತ್ಯ ಮುಂತಾದವುಗಳಿಗೆ ನಮ್ಮ ನಿರ್ಲಕ್ಷ್ಯವೇ ಬಹುಪಾಲು ಕಾರಣ. ನದಿಗಳನ್ನು ತಿರುಗಿಸಲೆಂದು ಸುರಿದ ಸಹಸ್ರ ಕೋಟಿ ರೂಪಾಯಿಗಳಿಂದ ಸಹಸ್ರ ಮರಗಳನ್ನು ಕಳೆದುಕೊಂಡು, ಘಟ್ಟಗಳು ಕುಸಿದದ್ದೇ ಬಂತು. ಹಾಗೆಯೇ ಮೊದಲೆಲ್ಲ ರಸ್ತೆಯ ಎರಡೂ ಬದಿಗಳಲ್ಲಿ ದೊಡ್ಡ ಮರಗಳಿದ್ದು ಬಿರುಬಿಸಿಲಿನಿಂದ ಜನರಿಗೆ, ಪ್ರಾಣಿಗಳಿಗೆ ನೆರಳು ಒದಗಿಸುತ್ತ ಪಕ್ಷಿಗಳ ವಾಸಸ್ಥಾನವೂ ಆಗಿರುತ್ತಿದ್ದವು. ವಾಹನಗಳಲ್ಲಿ ಓಡಾಡುವಾಗ ತಂಪಾದ ಗಾಳಿ ಬೀಸುತ್ತಿತ್ತು. ಆದರೆ, ಈಗ ಯಾವುದೇ ಕಾಲದಲ್ಲಿ ವಾಹನಗಳಲ್ಲಿ ಸಂಚರಿಸಿದರೂ ಬಿರುಬಿಸಿಲೇ ಗತಿ. ನೀರು ಕುಡಿಯಲೆಂದೋ ಅಥವಾ ಜತೆಯಲ್ಲೇ ತಂದ ತಿಂಡಿ ತಿನ್ನಲೆಂದೋ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದರೆ ನೆರಳು ನೀಡಲು ಮರಗಳೇ ಇಲ್ಲ! ನೆರಳು ನೀಡುವ ಮರ ಗಿಡಗಳ ಬದಲು ಈಗ ಅತಿ ವೇಗವೇ ಪ್ರಧಾನವಾಗಿದೆ! ಜನಪ್ರತಿನಿಧಿಗಳು ಊರ ನಾಗರಿಕರೊಡನೆ ಸೇರಿ ಸರ್ಕಾರದ ಖಾಲಿ ಜಾಗಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವುದನ್ನು ಆದ್ಯತೆಯಾಗಿ ತೆಗೆದುಕೊಂಡರೆ ಇದು ನಾವು ಮುಂದಿನ ಜನಾಂಗಕ್ಕೆ ಕೊಡುಗೆ ನೀಡಿದಂತಾಗುತ್ತದೆ. ಇದಲ್ಲದೆ, ಇಂತಹ ಗಿಡಗಳನ್ನು ಪೋಷಿಸಲು ಜನರನ್ನು ನೇಮಿಸಿದರೆ ಉದ್ಯೋಗ ಸೃಷ್ಟಿಯೂ ಉಂಟಾದೀತು.

| ಬಿ ಎನ್. ಭರತ್ ಮಾರುತಿ ಬಡಾವಣೆ, ಬೆಂಗಳೂರು