ಅಂಕಣ

ಬೇಡ ಪರೀಕ್ಷೆಯ ಭಯ; ಇರಲಿ ದೊಡ್ಡವರ ಅಭಯ..

Webdesk - Ravikanth

ಕರೊನಾ ಕಾರಣದಿಂದ ಪರೀಕ್ಷೆಗಳು ನಡೆಯುವುದೇ ದೊಡ್ಡ ಸವಾಲಾಗಿದೆ. ಈಗಾಗಲೇ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದಾಗಿದ್ದು, ಪಿಯು ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ನಡೆದರೂ ಆಫ್​ಲೈನ್ ಅಥವಾ ಆನ್​ಲೈನ್ ಎಂಬುದೂ ಗೊಂದಲವಿದೆ. ಇದರಿಂದಾಗಿ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಕೆಲವರು ಖಿನ್ನತೆಗೂ ಜಾರುತ್ತಿದ್ದಾರೆ. ಅಂಥವರಲ್ಲಿ ಧೈರ್ಯ ತುಂಬಲು ಇಲ್ಲಿವೆ ಉಪಯುಕ್ತ ಟಿಪ್ಸ್.

| ಡಾ. ಆದಿತ್ಯ ಪಾಂಡುರಂಗಿ

‘ಕಳೆದ ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ ಸರ್... ಭಯ ಆಗ್ತಿದೆ. ಪರೀಕ್ಷೆ ಬರೆಯುತ್ತಿರುವ ಹಾಗೆ ಒಮ್ಮೆ ಅನ್ನಿಸಿದರೆ, ಇನ್ನೊಮ್ಮೆ ಪರೀಕ್ಷೆಯಲ್ಲಿ ಏನೂ ಉತ್ತರ ಬರೆಯಲಾಗದ ಸ್ಥಿತಿ ಎದುರಿಸಿದಂತೆ ಅನ್ನಿಸುತ್ತದೆ. ಇದರಿಂದ ಆತಂಕ ಎದುರಾಗಿದೆ ಸರ್... ಏನು ಮಾಡಲಿ? ಊಟ, ತಿಂಡಿ ಯಾವುದಕ್ಕೂ ಮನಸ್ಸಾಗುತ್ತಿಲ್ಲ. ಜೀವನವೇ ಬೇಸರವಾಗಿಬಿಟ್ಟಿದೆ...’

ಹೀಗೆಂದು ಇತ್ತೀಚೆಗೆ ಒಬ್ಬ ವಿದ್ಯಾರ್ಥಿ ಕರೆ ಮಾಡಿ ತನ್ನ ಆತಂಕ, ಗೋಳು ತೋಡಿಕೊಂಡ. ಬಹುಶಃ ಇದು ಒಬ್ಬ ವಿದ್ಯಾರ್ಥಿ ಎದುರಿಸುತ್ತಿರುವ ಆತಂಕವಲ್ಲ್ಲ ಬಹುತೇಕ ಎಲ್ಲ ವಿದ್ಯಾರ್ಥಿಗಳ ಮನಸ್ಥಿತಿಯೂ ಇದೇ ಆಗಿದೆ. ಇದಕ್ಕೆ ಕಾರಣ ಪರೀಕ್ಷೆಯ ವಿಷಯದಲ್ಲಿ ಉಂಟಾಗಿರುವ ಅನಿಶ್ಚಿತತೆ. ಕರೊನಾ ಕಾರಣದಿಂದ ಈ ವರ್ಷ 12ನೇ ತರಗತಿ ಪರೀಕ್ಷೆಯನ್ನು ಸಿಬಿಎಸ್​ಇ ರದ್ದುಗೊಳಿಸಿದೆ. ಆದರೆ, ಪಿಯು ಪರೀಕ್ಷೆ ಕುರಿತು ರಾಜ್ಯ ಸರ್ಕಾರ ಇನ್ನೂ ನಿರ್ಧಾರ ಪ್ರಕಟಿಸಬೇಕಿದೆ. ಖಾಸಗಿ ಸೇರಿದಂತೆ ಹಲವು ಕಾಲೇಜುಗಳು ಈಗಾಗಲೇ ಆನ್​ಲೈನ್ ಮೂಲಕವೇ ಸಿಲೆಬಸ್ ಮುಗಿಸಿವೆ. ವಿದ್ಯಾರ್ಥಿಗಳು ಕೂಡ ಈ ವ್ಯವಸ್ಥೆಗೆ ಅಡ್ಜಸ್ಟ್ ಆಗಿ ಪಾಠ ಕಲಿತಿದ್ದಾರೆ. ಆದರೆ ಪರೀಕ್ಷೆಯ ಮಾದರಿ ಆನ್​ಲೈನ್ ಆದರೆ ಹೇಗೆ ಎದುರಿಸುವುದು ಎನ್ನುವ ಆತಂಕವೂ ಅವರಲ್ಲಿದೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಪದ್ಧ್ಧಯ ಮೇರೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ಆದರೆ ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಯಾವುದನ್ನೂ ಹೇಳುವುದು ಕಷ್ಟ.

ಇದೆಲ್ಲದರ ಮಧ್ಯೆ ಪರೀಕ್ಷೆ ನಡೆಯುವುದಾದರೂ ಯಾವಾಗ? ವೇಳಾಪಟ್ಟಿಯೇ ನಿಗದಿಯಾಗದ ಕಾರಣ ವಿದ್ಯಾರ್ಥಿಗಳಲ್ಲಿ ಒಂದು ತರಹ ಎದೆಗುದಿ, ಆತಂಕ ಸೃಷ್ಟಿಯಾಗಿದೆ. ಪಿಯುಸಿ ಎಂದಾಕ್ಷಣ ಜೀವನದ ಪ್ರಮುಖ ಘಟ್ಟ ಭವಿಷ್ಯ ರೂಪಿಸುವ ಹಂತ. ಸಹಜವಾಗಿಯೇ ಪಾಲಕರ ಮತ್ತು ಶಿಕ್ಷಕರ ನಿರೀಕ್ಷೆಯ ಭಾರ ವಿದ್ಯಾರ್ಥಿಗಳ ಮೇಲೆ ಇದ್ದೇ ಇರುತ್ತದೆ. ಎಂಜಿನಿಯರಿಂಗ್, ಮೆಡಿಕಲ್ ಅಥವಾ ಇನ್ನಾ್ಯವುದೇ ವೃತ್ತಿಪರ ಕೋರ್ಸ್​ಗಳನ್ನು ಕಲಿಯಲು ಪಿಯುಸಿ ನಿರ್ಣಾಯಕ. ಇಲ್ಲಿನ ಸಾಧನೆಯೇ ಮುಂದಿನದಕ್ಕೆ ರಹದಾರಿ. ಹೀಗಾಗಿ ಉತ್ತಮ ಫಲಿತಾಂಶದ ನಿರೀಕ್ಷೆ ವಿದ್ಯಾರ್ಥಿಯೂ ಸೇರಿದಂತೆ ಎಲ್ಲರದ್ದಾಗಿರುತ್ತದೆ. ಇಂತಹದರಲ್ಲಿ ಅನಿ್ಚ್ಚಶಿತತೆ ಎದುರಾದಾಗ ವಿದ್ಯಾರ್ಥಿಗಳು ಮಾನಸಿಕ ಆತಂಕ ಎದುರಿಸುವುದು ಅಥವಾ ಖಿನ್ನತೆಗೆ ಒಳಗಾಗುವುದು, ಭಯ ಬೀಳುವುದು ಸಹಜ. ಆದರೆ ಇದಕ್ಕೆ ಹೆದರುವುದು ಬೇಡ. ಇದು ಸಹಜ. ಎಂತಹ ಜಾಣ ವಿದ್ಯಾರ್ಥಿಯಾದರೂ ಇಂತಹ ಸ್ಥಿತಿ ಎದುರಾದಾಗ ಗೊಂದಲ ಇದ್ದದ್ದೇ. ಆದರೆ ಇದಕ್ಕೆ ಪರಿಹಾರವಿದೆ. ಇದು ಮನಸ್ಸಿಗೆ ಸಂಬಂಧಿಸಿದ ವಿಷಯ. ಅಷ್ಟೇ ಸೂಕ್ಷ್ಮವಾದುದು. ಕೆಲವು ಮಕ್ಕಳು ಪಾಲಕರ ಹತ್ತಿರ ಹೇಳಿಕೊಳ್ಳಲಾಗದೆ ಒಳಗೊಳಗೇ ಕೊರಗುವುದು ಅಥವಾ ಗೊಂದಲಕ್ಕೆ ಒಳಗಾಗಿದ್ದನ್ನು ನಾವು ನೋಡಿದ್ದೇವೆ. ಇದು ಸ್ವಲ್ಪ ಸಮಾಧಾನದಿಂದ ಎಲ್ಲರೂ ಕುಳಿತು ಪರಿಸ್ಥಿತಿಯ ಅನಿವಾರ್ಯತೆ ಅರಿತು ರ್ಚಚಿಸಿ ಮುಂದೆ ಸಾಗಬೇಕಾದ ವಿಷಯ. ವಿದ್ಯಾರ್ಥಿಗಳೇ, ಜೀವನದಲ್ಲಿ ಶಾಲಾ-ಕಾಲೇಜುಗಳ ಪರೀಕ್ಷೆಯೇ ಅಂತಿಮವಲ್ಲ. ಪರೀಕ್ಷೆಗಿಂತ ಬದುಕು ದೊಡ್ಡದು. ಭಯಪಡಬೇಡಿ.

ಖಿನ್ನತೆಯ ಲಕ್ಷಣಗಳೇನು?

ನಿಮ್ಮ ಮಗ ಅಥವಾ ಮಗಳು ಪ್ರತಿದಿನ ಇದ್ದಂತೆ ಇರದೇ ಯಾವಾಗಲೂ ಸುಮ್ಮನೆ ಕುಳಿತುಕೊಳ್ಳುವುದು, ಸಿಟ್ಟು ಮಾಡಿಕೊಳ್ಳುವುದು, ವಿನಾಕಾರಣ ಅಥವಾ ಕ್ಷುಲ್ಲಕ ಕಾರಣಗಳಿಗೆ ಅಳುವುದು, ಊಟ- ತಿಂಡಿಯಲ್ಲಿ ನಿರಾಸಕ್ತಿ ತೋರಿಸುವುದು, ನಿದ್ದೆ ಮಾಡದೇ ಇರುವುದು... ಮುಂತಾದ ಲಕ್ಷಣಗಳನ್ನು ತೋರಿಸುತ್ತಿದ್ದಾರೆಯೇ? ಅಥವಾ ತನಗೆ ಇತ್ತೀಚೆಗೆ ಜೀವನವೇ ಬೇಸರವಾಗಿಬಿಟ್ಟಿದೆ ಎಂದು ಯಾರ ಬಳಿಯಾದರೂ ಹೇಳಿಕೊಂಡಿದ್ದಾರೆಯೇ? ಅದು ಖಿನ್ನತೆಯ ಲಕ್ಷಣ.

ಪಾಲಕರು ಮತ್ತು ಶಿಕ್ಷಕರು ಏನು ಮಾಡಬೇಕು?

ಈ ತರಹದ ಗೊಂದಲಕ್ಕೆ ಒಳಗಾದ ವಿದ್ಯಾರ್ಥಿಗಳ ಚಲನವಲನವನ್ನು ನಿಕಟವಾಗಿ ಮತ್ತು ನಿರಂತರವಾಗಿ ಗಮನಿಸುತ್ತಿರಬೇಕು. ಅವರ ವರ್ತನೆಯಲ್ಲಿ ಏನಾದರೂ ಬದಲಾವಣೆ ಗಳನ್ನು ಕಂಡರೆ, ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ತನ್ನಿಂತಾನೇ ಸರಿಹೋಗುತ್ತಾರೆ ಎಂದುಕೊಳ್ಳಬಾರದು. ಅವರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಪ್ರೀತಿಯಿಂದ ಮಾತನಾಡಿ. ಧೈರ್ಯ ತುಂಬಿ. ಏನೂ ಆಗುವುದಿಲ್ಲ, ನೀನು ಸಮರ್ಥನಿದ್ದೀಯಾ ಮತ್ತು ನಾವು ನಿನ್ನ ಜತೆಗಿದ್ದೇವೆ ಎಂದು ಮನವರಿಕೆ ಮಾಡಿಕೊಡಿ. ತಡಮಾಡದೇ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ.

ಮಕ್ಕಳಿಗೆ ಟೈಂ ಕೊಡಿ

ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಥಿತಿ ಹಾಗೂ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅವರಲ್ಲಿನ ಮಾನಸಿಕ ತುಮುಲಗಳನ್ನು ಅರಿಯುವ ಯತ್ನ ಮಾಡಬೇಕು. ಇದ್ದಕ್ಕಿದ್ದ ಹಾಗೆ ಮಕ್ಕಳು ಅದೇಕೆ ಭಯ ಪಡುತ್ತಿದ್ದಾರೆ? ಇಷ್ಟು ದಿನ ಎಲ್ಲ ಪರೀಕ್ಷೆಗಳನ್ನು ಸಮರ್ಥವಾಗಿ ಬರೆದಿರುವ ಇವರ ಇಂದಿನ ಈ ಮನಸ್ಥಿತಿಗೆ ಕಾರಣವೇನು? ಎಂಬುದರ ಬಗ್ಗೆ ವಿಸ್ತೃತ ಆಲೋಚನೆ ಮಾಡಬೇಕು. ದಿಢೀರನೇ ಅವರನ್ನು ಬೈಯುವುದು ಸರಿಯಲ್ಲ. ಅಥವಾ ನೀನು ಹೀಗೆ ಓದದೇ ಕುಳಿತರೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಸೀಟು ಸಿಗುವುದು ಸಾಧ್ಯವೇ ಇಲ್ಲ ಎಂಬುದಾಗಿ ಮೂದಲಿಸುವುದೂ ಬೇಡ. ಅವರ ಮನಸ್ಥಿತಿ ಸುಧಾರಿಸಲು ಏನು ಮಾಡಬಹುದು? ಅದಕ್ಕೆ ಪರಿಹಾರವೇನಾದರೂ ಇದೆಯಾ ಎಂಬುದರ ಬಗ್ಗೆ ಆಲೋಚಿಸಬೇಕು. ಸಾಮಾನ್ಯವಾಗಿ ಮಕ್ಕಳ ಜತೆಗೆ ಸಮಯ ಕಳೆದು ಅವರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ಯತ್ನಿಸಿದಾಗ ಅವರ ಮನಸ್ಸಿನಲ್ಲಿರುವ ಸಮಸ್ಯೆಗಳು ನಮಗೆ ಅರ್ಥವಾಗುತ್ತವೆ. ಅವಶ್ಯಕತೆ ಬಿದ್ದಲ್ಲಿ ಹತ್ತಿರದ ಆಪ್ತ ಸಲಹೆಗಾರರು ಅಥವಾ ಮನೋವೈದ್ಯರನ್ನು ಸಂರ್ಪಸಬೇಕು. ಅದಕ್ಕೆ ಅವರು ಸೂಕ್ತ ಪರಿಹಾರ ಸೂಚಿಸುತ್ತಾರೆ. ಇದು ಖಂಡಿತವಾಗಿಯೂ ನಿರ್ಲಕ್ಷ್ಯ ಮಾಡುವ ಸಂಗತಿಯಲ್ಲ. ಮನೋವೈದ್ಯರ ಬಳಿ ಹೋದರೆ ಎಲ್ಲಿ ಸುತ್ತಮುತ್ತಲಿನ ಜನರು ‘ಇವರ ಮಗನಿಗೆ ಹುಚ್ಚು ಹಿಡಿದಿದೆ’ ಅಂತ ಅಂದುಕೊಳ್ಳುತ್ತಾರೆಯೋ ಎಂದು ಭಯಪಡಬೇಡಿ.

Wish you best of luck and do your best.

(ಲೇಖಕರು ಮನೋವೈದ್ಯರು, ಧಾರವಾಡ)