‘ಕಾನೂನು ಪ್ರಕಾರ ಸಮಾನ ನ್ಯಾಯ ಎನ್ನುವುದು ಸುಪ್ರೀಂ ಕೋರ್ಟ್ ಕಟ್ಟಡಗಳ ಮೇಲಿನ ಬರಿಯ ಬರಹವಲ್ಲ. ಅದು ಬಹುಶಃ ನಮ್ಮ ಸಮಾಜದ ಅತ್ಯಂತ ಸ್ಪೂರ್ತಿದಾಯಕ ಆದರ್ಶವಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಅಂತಿಮ ಗುರಿಗಳಲ್ಲಿ ಅದೂ ಒಂದಾಗಿದೆ. ಯಾರದೇ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ, ನೀಡಬೇಕಾದ ನ್ಯಾಯವು ಲಭ್ಯತೆ ಹಾಗೂ ಗುಣದಲ್ಲಿ ಸಮಾನವಾಗಿರಬೇಕು’.
| ಲೂಯಿಸ್ ಪಾವೆಲ್ ಅಮೆರಿಕ ಸುಪ್ರೀಂ ಕೊರ್ಟ್ನ ನ್ಯಾಯಮೂರ್ತಿ
ನ್ಯಾಯ ಪಡೆಯುವುದು ಪ್ರತಿಯೊಬ್ಬ ಮಾನವ ಜೀವಿಯ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ನ್ಯಾಯ ಪಡೆಯುವಿಕೆ ನ್ಯಾಯ ವ್ಯವಸ್ಥೆಯ ಎರಡು ಮೂಲಭೂತ ಉದ್ದೇಶಗಳ ಮೇಲೆ ಗಮನ ಕೇಂದ್ರೀಕರಿಸಿರುತ್ತದೆ. ನ್ಯಾಯ ವ್ಯವಸ್ಥೆ ಎಲ್ಲರಿಗೂ ಎಟಕುವಂತಿರಬೇಕು ಹಾಗೂ ಅದು ಪರಿಣಾಮಕಾರಿಯಾಗಿರಬೇಕು ಎನ್ನುವುದು ಮೊದಲ ಉದ್ದೇಶ. ಆ ಲಭ್ಯತೆಯ ಪರಿಣಾಮ ವ್ಯಕ್ತಿಗತವಾಗಿಯೂ ಸಾಮಾಜಿಕವಾಗಿಯೂ ನ್ಯಾಯಸಮ್ಮತವಾಗಿರಬೇಕೆನ್ನುವುದು ಎರಡನೇ ಉದ್ದೇಶ. ಎಲ್ಲರಿಗೂ ಸಮಾನವಾಗಿ ಹಾಗೂ ನಿಷ್ಪಕ್ಷಪಾತವಾಗಿ ನ್ಯಾಯವನ್ನು ಒದಗಿಸಬೇಕೆನ್ನುವುದು ಭಾರತದ ಸಂವಿಧಾನದ ಸದಾಶಯ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಸಂವಿಧಾನದ 14ನೇ ವಿಧಿ (ಆರ್ಟಿಕಲ್) ಹೇಳುತ್ತದೆ. ಬಂಧಿತನಾದ ಯಾವುದೇ ವ್ಯಕ್ತಿ ವಕೀಲರೊಂದಿಗೆ ಸಮಾಲೋಚಿಸುವ ಹಕ್ಕಿನಿಂದ ವಂಚಿತವಾಗಬಾರದು ಎಂದು ಆರ್ಟಿಕಲ್ 22 (1) ಹೇಳುತ್ತದೆ. ತಮ್ಮ ಆಯ್ಕೆಯ ವಕೀಲರಿಂದ ವಾದ ಮಂಡನೆ ಮಾಡುವ ಹಕ್ಕನ್ನು ಅದು ಖಾತರಿಪಡಿಸುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ವ್ಯವಸ್ಥೆಯನ್ನು ಖಾತರಿಪಡಿಸಿ ಜನತೆಯ ಸಾಮಾಜಿಕ ಕಲ್ಯಾಣವನ್ನು ರಕ್ಷಿಸಲು ಪ್ರಭುತ್ವ (ಸರ್ಕಾರ) ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂಬುದು ಸಂವಿಧಾನದ 38ನೇ ವಿಧಿಯ ನಿರ್ದೇಶನ. ಈ ಎಲ್ಲ ವಿಧಿಗಳು ಸಂವಿಧಾನದ ಮುನ್ನುಡಿಯಲ್ಲಿ ಆಶಿಸಿರುವಂತೆ ಭಾರತ ಗಣರಾಜ್ಯದ ಸರ್ವ ಜನತೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಪಡೆಯುವ ಹಕ್ಕಿಗೆ ಅನುಗುಣವಾಗಿವೆ.
ನಮ್ಮ ಸಂವಿಧಾನ ಬಡವರು, ಕಾರ್ವಿುಕರು ಹಾಗೂ ಮಾನವಹಕ್ಕುಗಳ ಪರವಾದ ಮಹತ್ವದ ದಾಖಲೆಪತ್ರ ವಾಗಿದೆ. ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಉದ್ದೇಶದಿಂದ ಸಂವಿಧಾನ ಮತ್ತು ಹಲವು ಕಾನೂನುಗಳು ಬಂಧಿತ ವ್ಯಕ್ತಿಗೆ ಹಕ್ಕುಗಳನ್ನು ನೀಡಿವೆ, ಕೌಟುಂಬಿಕ ಹಿಂಸೆಯಿಂದ ಮಕ್ಕಳು ಮತ್ತು ಮಹಿಳೆಯರಿಗೆ ರಕ್ಷಣೆ ಒದಗಿಸಿವೆ. ಮಕ್ಕಳನ್ನು ಶೋಷಣೆ ಮತ್ತು ತಾರತಮ್ಯದಿಂದ ರಕ್ಷಿಸಿವೆ. ಕೃಷಿಯ ಅಭಿವೃದ್ಧಿ ಮತ್ತು ಸಣ್ಣರೈತರ ಸಬಲೀಕರಣವನ್ನು ಖಾತರಿಪಡಿಸಿವೆ ಎನ್ನುವುದು ಗಮನಾರ್ಹ. 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಕಾನೂನನ್ನು ರೂಪಿಸಿದ್ದರಿಂದ ಸರ್ಕಾರವು ಜನರಿಗೆ ಕಡ್ಡಾಯವಾಗಿ ಕಾನೂನು ನೆರವನ್ನು ಒದಗಿಸುವ ನಿರ್ಬಂಧಕ್ಕೆ ಒಳಗಾಗಿದೆ.
ವಾಸ್ತವತೆ ಏನಿದೆ?: ‘ಎಲ್ಲರಿಗೂ ನ್ಯಾಯ ಒದಗಿಸುವ’ ಬಗ್ಗೆ ಸಂವಿಧಾನ ಮತ್ತು ಶಾಸನಾತ್ಮಕ ಉಪಕ್ರಮಗಳು ಬಹಳಷ್ಟು ಹೇಳುತ್ತವೆಯಾದರೂ ವಾಸ್ತವ ಬೇರೆಯದೇ ಆಗಿದೆ. ಬುಡಕಟ್ಟು ಜನರು, ಗ್ರಾಮೀಣ ಬಡವರು, ಕಡಿಮೆ ಆದಾಯದ ಮಧ್ಯಮವರ್ಗದ ಜನರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸಮಾನವಾಗಿ ನ್ಯಾಯ ಒದಗಿಸುವ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ಜಹೀರಾ ಹಬಿಬುಲ್ಲಾ ಶೇಖ್ ವರ್ಸಸ್ ಗುಜರಾತ್ ರಾಜ್ಯ ಪ್ರಕರಣದಲ್ಲಿ ಅರಿಜಿತ್ ಪಸಾಯತ್ ಹೇಳಿರುವುದು ಈ ಸಂದರ್ಭದಲ್ಲಿ ಉಲ್ಲೇಖನೀಯ ಹಾಗೂ ಗಮನಾರ್ಹ. ‘ಕಾನೂನುಗಳು ಜೇಡರ ಬಲೆಯಂತೆ ಎಂದು ಜನರು ಹೆಚ್ಚೆಚ್ಚಾಗಿ ಭಾವಿಸುತ್ತಾರೆ. ಹಗುರ ಅಥವಾ ಹೆಚ್ಚು ಭಾರವಿಲ್ಲದ ವಸ್ತು ಅದರ ಮೇಲೆ ಬಿದ್ದರೆ ಬಲೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ದೊಡ್ಡವಸ್ತು ಬಿದ್ದರೆ ಅದು ಹರಿದುಹೋಗುತ್ತದೆ ಹಾಗೂ ತಪ್ಪಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆ’ ಎಂಬುದಾಗಿ ಪಸಾಯತ್ ಹೇಳಿದ್ದರು.
ಜನರು ಎಲ್ಲಿ ವಾಸಿಸುತ್ತಾರೆ ಅಥವಾ ಅವರು ಯಾವ ವರ್ಗಕ್ಕೆ ಸೇರಿದವರು ಎಂಬುದರ ಪರಿಗಣನೆಯಿಲ್ಲದೆ ಜನರು ನ್ಯಾಯ ಪಡೆಯುವಂತಾಗಬೇಕು ಎಂಬುದು ಸಮಾನ ನ್ಯಾಯ ಪರಿಕಲ್ಪನೆಯ ಅಂಶವಾಗಿದೆ. ಆದರೆ ಭಾರತದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ- ಇತ್ಯಾದಿಯಾದ ಹಲವು ಅಡೆತೆಗಳಿದ್ದು ಈ ಪರಿಕಲ್ಪನೆಯ ಸಾಕಾರಕ್ಕೆ ಅಡ್ಡಿಯಾಗಿ ವರ್ತಿಸುತ್ತವೆ.
ಬಡತನದಿಂದಾಗಿ ಜೈಲಲ್ಲೇ ಇರುವ ಸ್ಥಿತಿ: ವಿಚಾರಣಾಪೂರ್ವ ಕೈದಿಗಳ ಪೈಕಿ ಶೇಕಡ 65ರಷ್ಟು ಮಂದಿ ಸೆರೆಮನೆಯಲ್ಲೇ ಇರುತ್ತಾರೆ. ಆರ್ಥಿಕ ಬಡತನ ಹಾಗೂ ಕಾನೂನು ಅರಿವಿನ ಕೊರತೆ ಇದಕ್ಕೆ ಕಾರಣ ಎನ್ನುತ್ತದೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (ಯುಎನ್ಡಿಪಿ) ಬಡವರ ಕಾನೂನು ಸಬಲೀಕರಣ ಕುರಿತ ಆಯೋಗದ ವರದಿ. ತಿಹಾರ್ ಜೈಲಿನಲ್ಲಿರುವವರ ಪೈಕಿ 85%ಕ್ಕಿಂತ ಹೆಚ್ಚಿನವರು ವಿಚಾರಣಾಧೀನ ಕೈದಿಗಳೇ ಆಗಿದ್ದಾರೆ. ಜಾಮೀನು ಪಡೆಯಲು ಅಥವಾ ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಲು ಅವರಲ್ಲಿ ಹಣ ಇಲ್ಲದಿರುವುದೇ ಇದಕ್ಕೆ ಕಾರಣ. ಬಡವರು ಅರ್ಥಪೂರ್ಣವಾಗಿ ನ್ಯಾಯ ಪಡೆಯಬೇಕಾದರೆ ಮೊದಲನೆಯದಾಗಿ ವಕೀಲರ ಲಭ್ಯತೆ ಇರಬೇಕು. ಇಲ್ಲಿ ಅದು ನಾಸ್ತಿಯಾಗಿದೆ.
ಶುಲ್ಕವಿಲ್ಲದೆ ಅಥವಾ ಅತಿ ಕಡಿಮೆ ಶುಲ್ಕ ಪಡೆದು ಕಾನೂನು ನೆರವು ಒದಗಿಸುವ (ಪ್ರೊ ಬೊನೊ) ಖಾಸಗಿ ಅಟಾರ್ನಿಗಳಾಗಲೀ ಕಾನೂನು ಸಂಸ್ಥೆಗಳಾಗಲೀ ನಮ್ಮ ದೇಶದಲ್ಲಿಲ್ಲ. ಈ ವಿಚಾರದಲ್ಲಿ ನಾವು ಆಸ್ಟ್ರೇಲಿಯಾದಿಂದ ಪಾಠ ಕಲಿಯಬೇಕು. ತೀರಾ ಒಳನಾಡು ಪ್ರದೇಶಗಳ ಜನರಿಗೆ ಅಲ್ಲಿ ಉಚಿತ ಕಾನೂನು ಸೇವೆ ಒದಗಿಸುವ ಒಂದು ಉತ್ತಮ ಜಾಲ ಹಾಗೂ ಪರಂಪರೆಯೇ ಇದೆ.
2007ರಲ್ಲಿ ಆಸ್ಟ್ರೇಲಿಯಾದ 25 ಅತಿ ದೊಡ್ಡ ಕಾನೂನು ಸಂಸ್ಥೆಗಳು ಸುಮಾರು ಎರಡು ಲಕ್ಷ ಗಂಟೆಗಳಷ್ಟು ಉಚಿತ ಕಾನೂನು ಸೇವೆ ಒದಗಿಸಿದ್ದವು ಎಂದು ಆಸ್ಟ್ರೇಲಿಯನ್ ನ್ಯಾಷನಲ್ ಪ್ರೊ ಬೊನೊ ಸಂಪನ್ಮೂಲ ಕೇಂದ್ರದ 2008ರ ಸಮೀಕ್ಷೆ ತಿಳಿಸಿದೆ. ಜನರು ನ್ಯಾಯ ಪಡೆಯುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಬೃಹತ್ ಕೊಡುಗೆ ಇದಾಗಿದೆ. ಹಣದ ಥೈಲಿ ಇರುವವರಿಗೆ ಮಾತ್ರ ನ್ಯಾಯ ಸಿಗುವಂಥದ್ದಲ್ಲ. ಬಡವರಿಗೂ ಅದು ಸಾಧ್ಯಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲೂ ಈ ರೀತಿಯ ಪದ್ಧತಿ ಬೆಳೆದು ಬಂದರೆ ಒಳ್ಳೆಯದು.
ಪ್ರಾಧಿಕಾರಗಳ ಕೊಡುಗೆ: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಲವು ರಾಜ್ಯಗಳ ರಾಜ್ಯ ಮಟ್ಟದ ಕಾನೂನು ಸೇವಾ ಪ್ರಾಧಿಕಾರಗಳು ಕಳೆದ ಕೆಲವು ವರ್ಷಗಳಲ್ಲಿ ಈ ವಿಚಾರದಲ್ಲಿ ಗಣನೀಯ ಕೆಲಸ ಮಾಡಿವೆ. ಅವುಗಳು ಪರ್ಯಾಯ ನ್ಯಾಯ ವೇದಿಕೆಗಳಾಗಿ ಲೋಕ ಅದಾಲತ್ಗಳನ್ನು ನಡೆಸಿವೆ. ಮಾತ್ರವಲ್ಲದೆ ಅರೆ-ಕಾನೂನು ಸ್ವಯಂಸೇವಕರನ್ನು ತರಬೇತಿಗೊಳಿಸಲಾಗುತ್ತಿದೆ. ಈ ಸ್ವಯಂಸೇವಕರು ಆರ್ಥಿಕವಾಗಿ ದುರ್ಬಲ ವರ್ಗದ ಜನರಿಗೆ ಕಾನೂನು ಸೇವೆ ಪಡೆಯುವಲ್ಲಿ ನೆರವಾಗುತ್ತಾರೆ. ಈ ರೀತಿಯ ಸೇವೆ ಪಡೆಯುವುದು ಆ ಜನರ ಹಕ್ಕು ಎಂಬ ಜಾಗೃತಿಯನ್ನೂ ಅವರು ಮೂಡಿಸುತ್ತಾರೆ.
ಇಷ್ಟಾಗಿಯೂ ವಿಶಾಲವಾದ ಗ್ರಾಮೀಣ ಪ್ರದೇಶಗಳು ಹಾಗೂ ಒಳನಾಡು ಪ್ರದೇಶಗಳಲ್ಲಿ ಪ್ರೊ ಬೊನೊ ಆಗಿ ಕಾರ್ಯ ನಿರ್ವಹಿಸುವ ವ್ಯಕ್ತಿ ಹಾಗೂ ಸಂಸ್ಥೆಗಳ ಸಂಖ್ಯೆ ಬಹಳಷ್ಟು ಹೆಚ್ಚಬೇಕಿದೆ ಎನ್ನುವುದು ನಿರಾಕರಿಸಲಾಗದ ಸತ್ಯ. ಕೋರ್ಟ್ಗಳಲ್ಲಿ ಹೆಚ್ಚಿದ ಬಾಕಿಯಿರುವ ಪ್ರಕರಣಗಳು, ಕೋರ್ಟ್ ಕಲಾಪಗಳಲ್ಲಿ ಅದಕ್ಷತೆ, ನ್ಯಾಯಾಲಯಗಳಲ್ಲಿ ಸಿಬ್ಬಂದಿ ಮತ್ತು ಸಂಪನ್ಮೂಲ ಕೊರತೆ, ವಿಳಂಬವಾಗುವಿಕೆ ಹಾಗೂ ಹೆಚ್ಚಿನ ವೆಚ್ಚ -ಇವೇ ಮುಂತಾದವು ಸಮಾನ ನ್ಯಾಯ ಪಡೆಯುವಲ್ಲಿ ಇರುವ ಪ್ರಮುಖ ಅಡೆತಡೆಗಳಾಗಿವೆ. ಕಾನೂನು ಅರಿವಿನ ಕೊರತೆ (ಕಾನೂನು ಅನಕ್ಷರತೆ) ಮತ್ತು ಸಮಾಜದ ನಿರ್ದಿಷ್ಟ ವಿಭಾಗಗಳಲ್ಲಿರುವ ಮುಗ್ಧತೆ ನಿಜವಾಗಿಯೂ ಭಾರತದಲ್ಲಿನ ಮೂಲಭೂತ ಸಮಸ್ಯೆಯಾಗಿದೆ.
ಎಲ್ಲರಿಗೂ ಕಾನೂನು ಲಭ್ಯತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾನೂನು ಶಿಕ್ಷಣ ಸಂಸ್ಥೆಗಳು ದೊಡ್ಡ ಕೊಡುಗೆ ನೀಡಬಹುದಾಗಿದೆ. ಇದೊಂದು ಕೇವಲ ಪರಿಕಲ್ಪನೆಯಾಗಿರದೆ ಕಾರ್ಯಸಾಧ್ಯ ಗುರಿ ಎಂಬುದನ್ನು ನಿರೂಪಿಸಲು ಅವುಗಳು ಮಹತ್ವದ ಪಾತ್ರ ವಹಿಸಬಹುದಾಗಿದೆ. ಸಮಾಜದಲ್ಲಿ ನ್ಯಾಯದ ಗುಣಮಟ್ಟ ಖಾತರಿಪಡಿಸುವಲ್ಲಿ ವಕೀಲರ ವಿಶೇಷ ಹೊಣೆಗಾರಿಕೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಅನೇಕ ಕಾನೂನು ಕಾಲೇಜ್ಗಳು ಸಾರ್ವಜನಿಕ ಪ್ರಜೆಯಾಗಿ ವಕೀಲರಲ್ಲಿ ನೈತಿಕತೆ ಬೆಳೆಸಲು ನವನವೀನ ಮಾರ್ಗಗಳನ್ನು ಅನುಸರಿಸುತ್ತಿವೆ. ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸುವ ದಿಸೆಯಲ್ಲಿ ವಕೀಲರಲ್ಲಿ ಸಾಮಾಜಿಕ ಬದ್ಧತೆ ಪ್ರೇರೇಪಿಸಲು ಕಾನೂನು ಅಕಾಡೆಮಿ ಮತ್ತು ವೃತ್ತಿಪರ ಸಂಘಟನೆಗಳು ಹೆಚ್ಚು ಕೆಲಸ ಮಾಡಬೇಕಿದೆ. ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಅಥವಾ ನ್ಯಾಯದ ವಿಷಯಗಳಲ್ಲಿ ಹೆಚ್ಚು ಬದ್ಧತೆಯಿಂದ ತೊಡಗಿಸಿಕೊಳ್ಳುವ ದಿಸೆಯಲ್ಲಿ ಕಾನೂನು ಕಾಲೇಜ್ಗಳು ಪಠ್ಯಕ್ರಮ ರೂಪಿಸಬೇಕು. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ- ಈ ಮೂರರ ಪೈಕಿ ಯಾವುದರಲ್ಲೇ ಆಗಲಿ, ನ್ಯಾಯ ನೀಡಿಕೆ ವ್ಯವಸ್ಥೆಯಲ್ಲಿ ಕೆಲವು ದಿಟ್ಟ ಹಾಗೂ ನವೀನ ಸುಧಾರಣೆಗಳನ್ನು ತರಬೇಕಾಗಿದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಬೇಕಾದರೆ ಸರ್ಕಾರದ ಎಲ್ಲ ಕಾರ್ಯಗಳಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆ ನಿಗದಿಪಡಿಸುವಿಕೆ ಖಾತರಿಪಡಿಸುವುದು ಅಗತ್ಯ.
ಕಾನೂನು ವೃತ್ತಿಯಲ್ಲಿ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಬಡವರ ಪರವಾದ ಸಹಾನುಭೂತಿ ಮನೋಭಾವ ಬೆಳೆಸುವ ದೃಷ್ಟಿಯಿಂದ ಕಾನೂನು ಶಿಕ್ಷಣವನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಜೋಡಿಸುವುದು ಅಗತ್ಯ. ಶಿಕ್ಷಣ ಸಂಸ್ಥೆಗಳು ಸಾಮುದಾಯಿಕ ಶಿಕ್ಷಣದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುವಂತೆ ಹಾಗೂ ನ್ಯಾಯಾಂಗ ಸಂಸ್ಥೆಗಳ ಮೇಲೆ ನಿಗಾ ಇರಿಸಿ ತನ್ಮೂಲಕ ನ್ಯಾಯ ಪಡೆಯಲು ಸಮಾನ ಅವಕಾಶವನ್ನು ಖಾತರಿಪಡಿಸಲು ಉತ್ತೇಜನ ನೀಡುವಂತಾಗಬೇಕು. ಒಟ್ಟನಲ್ಲಿ ಎಲ್ಲರಿಗೂ ನ್ಯಾಯ ಖಾತರಿಪಡಿಸುವ ಉದ್ದೇಶ ಸಾಧನೆಗೆ ಭಾರತ ಕ್ರಮಿಸಬೇಕಾದ ಹಾದಿ ಬಹಳ ದೊಡ್ಡದಿದೆ.
(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)