ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಇಂದು ಕಾಲ ಬದಲಾಗುತ್ತಿದೆ, ಜಗತ್ತಿನಲ್ಲಾಗುತ್ತಿರುವ ಪರಿವರ್ತನೆಗೆ ತಕ್ಕಂತೆ ನಮ್ಮಲ್ಲೂ ಬದಲಾವಣೆ ಅನಿವಾರ್ಯ. ಇಲ್ಲವಾದರೆ ಶೈಕ್ಷಣಿಕ ಅಸಮತೋಲನ ಸಹಜ. ನಮ್ಮ ಮಕ್ಕಳು ಸಹ ಪೈಪೋಟಿ ಯುಗಕ್ಕೆ ತಕ್ಕಂತೆ ತಯಾರಾಗುತ್ತ ಹೋಗಬೇಕಾಗುತ್ತದೆ. ಕಲಿಕೆಯ ಕಂದಕಗಳು ಕಡಿಮೆಯಾಗಬೇಕು, ಕೊರತೆಗಳು ನೀಗಬೇಕೆಂಬ ಪ್ರಯತ್ನ ವಿವಿಧ ಆಯಾಮದಲ್ಲಿ ನಡೆದಿದೆ. ಪ್ರಮುಖವಾಗಿ ಮುಂದಿನ ದಿನಗಳಲ್ಲಿ ಅಂಗನವಾಡಿ ಹಂತದಲ್ಲಿಯೇ ಟ್ಯೂನ್ ಮಾಡಲು ಕಸರತ್ತು ಆರಂಭವಾಗಿದೆ. ಈ ಪ್ರಯತ್ನದ ಪ್ರಧಾನ ಹುರಿಯಾಳುಗಳು ಅಂಗನವಾಡಿ ಕಾರ್ಯಕರ್ತೆಯರು.
ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ ಇನ್ನು ಮುಂದೆ ಮೂರನೇ ವರ್ಷದಿಂದಲೇ ಪ್ರತಿ ಮಗುವಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂಗನವಾಡಿಯ ಕಲಿಕಾ ಸ್ವರೂಪ ಬದಲಾಗಲಿದೆ, ಅಲ್ಲಿರುವ ಕಾರ್ಯಕರ್ತೆಯರು ಬರೀ ಕಾರ್ಯಕರ್ತೆಯರಾಗಿ ಉಳಿಯುವುದಿಲ್ಲ, ಸೂಕ್ತ ತರಬೇತಿ ಪಡೆದು ಮಕ್ಕಳನ್ನು ರೂಪಗೊಳಿಸುವ ಪ್ರಧಾನ ಜವಾಬ್ದಾರಿ ಹೊರುತ್ತಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವುದರಲ್ಲಿ ಕರ್ನಾಟಕವು ದೇಶದಲ್ಲಿ ಅಗ್ರೇಸರನಾಗಿ ಕಾಣಿಸಿದ್ದು, ಇಲ್ಲಿ ಹಂತ-ಹಂತವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಪದವಿ ಹಂತದಲ್ಲಿ ಪ್ರಕ್ರಿಯೆ ಆರಂಭವಾಗಿದೆ, ಪೂರ್ವ ಪ್ರಾಥಮಿಕ ಹಂತದಲ್ಲೂ ಮುಂದಿನ ಶೈಕ್ಷಣಿಕ ಸಾಲಿನಿಂದ ಬದಲಾವಣೆ ತರುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಒಳಗೊಳ್ಳುವಿಕೆ ಪ್ರಮುಖವಾದದ್ದು.
66,361: ರಾಜ್ಯದಲ್ಲಿರುವ ಅಂಗನವಾಡಿಗಳು
64795: ಕಾರ್ಯಕರ್ತೆಯರು
ರಾಜ್ಯದಲ್ಲಿ ಒಟ್ಟು 63030 ಅಂಗನವಾಡಿಗಳು, 3331 ಮಿನಿ ಅಂಗನವಾಡಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಒಟ್ಟು 64,795 ಕಾರ್ಯಕರ್ತೆಯರು, 59,769 ಸಹಾಯಕಿಯರಿದ್ದಾರೆ. ಈ ದೊಡ್ಡ ಪಡೆಯನ್ನು ಬಳಸಿಕೊಂಡು ಮಕ್ಕಳನ್ನು ತಯಾರು ಮಾಡುವ ದೊಡ್ಡ ಟಾಸ್ಕ್ ವಹಿಸಲಾಗುತ್ತಿದೆ. ಇದೇ ಕಾರಣಕ್ಕೆ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರನ್ನು ವರ್ಗೀಕರಣ ಮಾಡಿ, ಅವರ ಸಾಮರ್ಥ್ಯ ಪರಿಶೀಲನೆ ಮಾಡಿದೆ. ಎಸ್ಎಸ್ಎಸ್ಸಿ ಪೂರೈಸಿದವರು 41,574 ಮಂದಿ ಇದ್ದರೆ, ಪಿಯುಸಿ ಪೂರ್ಣಗೊಳಿಸಿದವರು 15,880, ಪದವೀಧರರು 6436, ಸ್ನಾತಕೋತ್ತರ ಪದವೀಧರರು 905 ಮಂದಿ ಇದ್ದಾರೆ. ಇವರಲ್ಲಿ 40 ವರ್ಷಕ್ಕೂ ಮೇಲ್ಪಟ್ಟ ಹಾಗೂ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವವರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬೋಧಿಸಲು ಸೂಕ್ತ ತರಬೇತಿ ನೀಡಲು ಸರ್ಕಾರ ಭೂಮಿಕೆ ಸಿದ್ಧಪಡಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗ ಸೂಚಿಯನ್ವಯ ಶಾಲಾ ಪೂರ್ವ ಶಿಕ್ಷಣಕ್ಕಾಗಿ ಈಗಾಗಲೇ 6 ಉಪ ಸಮಿತಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ಶಿಫಾರಸಿನಂತೆ ಒಂದು ಪಠ್ಯಕ್ರಮ ರಚಿಸಲಾಗುತ್ತದೆ. ಈ ಪಠ್ಯಕ್ರಮದ ಅನುಸಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಕೈಪಿಡಿ ಒದಗಿಸಲಾಗುವುದು. ಅದರ ಆಧಾರದ ಮೇಲೆ ತರಬೇತಿ ನೀಡಿ, ಇಪ್ಪತ್ತು ಸಾವಿರ ಅಂಗನವಾಡಿಗಳಲ್ಲಿ ಮೊದಲ ಹಂತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಕಲಿಕೆ ಶುರುಮಾಡಲಾಗುತ್ತದೆ. ನಂತರ ಅವಶ್ಯವಿದ್ದಲ್ಲಿ, ಮಾರ್ಗಸೂಚಿಯಂತೆ 6ರಿಂದ 1 ವರ್ಷದವರೆಗಿನ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಿ ಮತ್ತು ಖಾಸಗಿಯಲ್ಲಿನ ವಾತಾವರಣ ಸಂಪೂರ್ಣ ವಿಭಿನ್ನ. ದೊಡ್ಡ ಕಂದಕವೇ ಕಾಣಿಸುತ್ತದೆ. ಖಾಸಗಿಯಲ್ಲಿ ಹೆಚ್ಚು ಪ್ರಾಧಾನ್ಯತೆ, ಮಹತ್ವ ಸಿಗುತ್ತಿದೆ. ಅನೇಕ ಸಂಗತಿಗಳು ಅಂಗನವಾಡಿಗಳಲ್ಲಿ ಸಾಧ್ಯವಾಗದೇ ಹೋಗುತ್ತಿದೆ. ಎನ್ಇಪಿ ಜಾರಿಯಾದರೆ ಈ ಕಂದಕ ಕಡಿಮೆಯಾಗಬಹುದೆಂಬ ಅಪೇಕ್ಷೆ ಸರ್ಕಾರದ್ದಾಗಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಸರ್ಕಾರಿ ಶಾಲೆಯ ಪ್ರೌಢಶಾಲೆ ಹಂತ ದಾಟಿದರೂ ವರ್ಣಮಾಲೆ ಮತ್ತು ಎಣಿಕೆ ವಿಷಯದಲ್ಲಿ ಮಕ್ಕಳು ಹಿಂದೆ ಬೀಳುತ್ತಿದ್ದಾರೆ. ಅಂತವರ ಮುಂದಿನ ಶೈಕ್ಷಣಿಕ ಹಂತದ ಹಿನ್ನಡೆಯಾಗುತ್ತಿದೆ. ಶೈಕ್ಷಣಿಕ ತಳಪಾಯ ಗಟ್ಟಿಯಾಗದೇ ಇರುವುದು ಇದಕ್ಕೆ ಪ್ರಧಾನ ಕಾರಣ. ಇದನ್ನು ಶಿಕ್ಷಣ ತಜ್ಞರು ಸರ್ಕಾರದ ಗಮನಕ್ಕೆ ತಂದಿದ್ದು, ಬದಲಾಗಬೇಕಾದ್ದು ತಳಪಾಯ ಎಂದರಿತು ಈಗ ಅಂಗನವಾಡಿ ಹಂತವನ್ನೇ ಗಟ್ಟಿಗೊಳಿಸುವ ಕೆಲಸಕ್ಕೆ ಕೈಹಾಕಲಾಗಿದೆ. ಈ ಕಾರ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮವೇ ಪ್ರಧಾನಪಾತ್ರವಾಗಿರಲಿದೆ.