| ಡಾ. ಪೂರ್ಣಿಮಾ ಶಶಿಧರ್ಬಾವಿ
ನಮ್ಮ ಮನಸ್ಸಿಗೆ, ಭಾವನೆಗಳಿಗೆ ಇಲ್ಲ-ಸಲ್ಲದ ಘಾಸಿ ಮಾಡಿಕೊಳ್ಳುವುದು ಒಂದು ತೆರನಾದರೆ, ಇನ್ನೊಬ್ಬರಿಂದ ಭಾವನೆಗಳಿಗೆ ಚ್ಯುತಿ ಉಂಟುಮಾಡುತ್ತಾ, ಜೀವನವನ್ನು ವಿರೂಪಗೊಳಿಸುವುದೂ ಭಾವನಾತ್ಮಕ ದೌರ್ಜನ್ಯವೇ. ಇದರ ಬಗ್ಗೆ ಮಾಹಿತಿ ಸಂಗ್ರಹಣೆ, ಅಂಕಿ-ಅಂಶಗಳ ಲೆಕ್ಕಾಚಾರ ಅಸಾಧ್ಯದ ಕೆಲಸ ಎಂದೆನಿಸಲು ಸಾಧ್ಯವೇ ಇಲ್ಲ. ಕಾರಣ ಇಂದಿನ ಒಟ್ಟಾರೆ ಜನಸಂಖ್ಯೆಯ ಪ್ರಮಾಣದಲ್ಲಿ ಶೇ. 5ರಿಂದ ಶೇ. 80ರಷ್ಟು ಜನ ಹಾಗೂ ಶೇ. 11ರಷ್ಟು ಮಕ್ಕಳು ಒಂದಲ್ಲಾ ಒಂದು ತೆರನಾದ ಭಾವನಾತ್ಮಕ ದೌರ್ಜನ್ಯಕ್ಕೆ ಒಳಪಟ್ಟವರೇ. ಅನೇಕ ದೈಹಿಕ ಹಿಂಸಾತ್ಮಕ ಘಟನೆಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ದಾಖಲಾಗುತ್ತಿರುವುದನ್ನು ಗಮನಿಸಿರುತ್ತೇವೆ. ಆದರೆ ಹೆಜ್ಜೆ ಹೆಜ್ಜೆಗೂ ನಡೆಯುವ ಭಾವನಾತ್ಮಕ ದೌರ್ಜನ್ಯಗಳು ದಾಖಲಾಗದೇ ಶೇ. 25ರಿಂದ ಶೇ. 29ರಷ್ಟು ಮಾತ್ರ ದಾಖಲಾಗುತ್ತಿರುವುದು ನಮ್ಮ ಸಮಾಜದ ಹುಳುಕಿಗೆ ಹಿಡಿದ ಕನ್ನಡಿ ಎಂದೇ ಹೇಳಬಹುದು.
ಇದಕ್ಕೆಲ್ಲ ಕಾರಣ ಹಲವಿರಬಹುದು. ಮೊದಲಿ ನಿಂದಲೂ ದೌರ್ಜನ್ಯವನ್ನು ಹತ್ತಿಕ್ಕುತ್ತ, ಆಕೆಯ ಮಾತುಗಳನ್ನು, ಭಾವನೆಗಳನ್ನು ಗಮನಿಸುತ್ತಾ, ಇನ್ನೂ ಮುಂದುವರಿದು ಹೇಳಿದರೆ ಕುಟುಂಬದ ಆರೋಗ್ಯ, ಅಸ್ತವ್ಯಸ್ತವಾಗಬಹುದೆಂಬ ಭಯ ಭೀತಿ... ಹೀಗೆ ನಾವೆಲ್ಲ ಸೇರಿ ಆಕೆಯ ಮೇಲೆ ಹಾಕುತ್ತಿರುವ ಒತ್ತಡ ಎಷ್ಟಿರಬಹುದು ಎಂದು ಊಹಿಸುವುದು ಕಷ್ಟಸಾಧ್ಯ.
ಹೇಗೆ ವ್ಯಾಖ್ಯಾನಿಸಬಹುದು?: ಕಾನೂನಾತ್ಮಕವಾಗಿ ಯಾವುದೇ ವ್ಯಕ್ತಿ ಶಬ್ದಗಳಿಂದ ಅಥವಾ ಚಿಹ್ನೆ, ಸಂಜ್ಞೆಗಳಿಂದ ಅಥವಾ ದೃಶ್ಯರೂಪದಿಂದ ಆರೋಪ ಮಾಡುವುದು, ಅವಮಾನ ಅಥವಾ ಮಾನಹಾನಿ ಉಂಟುಮಾಡುವ ಉದ್ದೇಶದಿಂದ ಪ್ರಜ್ಞಾಪೂರ್ವಕವಾಗಿ ನೋವು, ಹಾನಿ ಉಂಟುಮಾಡುವುದು ಭಾವನಾತ್ಮಕ ದೌರ್ಜನ್ಯ ಎಂದೆನಿಸಿಕೊಳ್ಳುತ್ತದೆ. ಇದಕ್ಕೆ ವಯಸ್ಸಿನ ಚೌಕಟ್ಟು ಇರುವುದಿಲ್ಲ. ಚಿಕ್ಕ ಮಗುವಿನಿಂದ ಹಿಡಿದು ವೃದ್ಧರವರೆಗೂ, ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ, ವ್ಯಕ್ತಿಯ ಉದ್ಯೋಗ ಸ್ಥಳಗಳಲ್ಲಾಗಲಿ ಎಲ್ಲೆಂದರಲ್ಲಿ ಎಸಗಬಹುದಾದ ಅಪರಾಧ ಎನಿಸುತ್ತದೆ.
ಕಾನೂನು ಏನು ಹೇಳುತ್ತದೆ?: ‘ಗೌರಿಯ ದುಃಖ ಗಂಡಿಗೇನು ಗೊತ್ತು’ ಎನ್ನುವ ಮಾತಿರಬಹುದು. ಆದರೆ ಗೌರಿಯ ದುಃಖ, ಅದಕ್ಕೆ ಪರಿಹಾರ ಖಂಡಿತ ಕಾನೂನಿಗೆ ಗೊತ್ತು. ಕಲಂ 509ರನ್ವಯ ಒಬ್ಬ ಮಹಿಳೆಯ ಮಾನಕ್ಕೆ, ಭಾವನೆಗಳಿಗೆ ಚ್ಯುತಿ ಉಂಟುಮಾಡುವ ಉದ್ದೇಶದಿಂದ, ಶಬ್ದ, ಸಂಜ್ಞೆಗಳು ಇನ್ನಿತರ ಕೃತ್ಯಗಳ ಮೂಲಕ ಹಾನಿ ಉಂಟುಮಾಡಿದರೆ ಒಂದು ವರ್ಷ ಕಾರಾಗೃಹ ವಾಸ, ಶಿಕ್ಷೆ, ದಂಡ ಎರಡನ್ನೂ ವಿಧಿಸತಕ್ಕದ್ದು ಎಂದು ಹೇಳಿದೆ. ಕಲಂ 354, ಕಲಂ 355 ಕೂಡ, ಮಹಿಳೆಯ ಗೌರವ, ಘನತೆ ಕಾಪಾಡಲೆಂದೇ ಕಾನೂನಾತ್ಮಕವಾಗಿ ನ್ಯಾಯ ದೊರಕಿಸಲು ಇರುವ ವ್ಯವಸ್ಥೆ ನಮ್ಮಲ್ಲಿರುವುದು ತುಸು ಹೆಮ್ಮೆ ಹಾಗೂ ಸಮಾಧಾನದ ಸಂಗತಿ.
ಸಂತೈಸುವ ಮನಸ್ಸುಗಳು ಎಷ್ಟಿವೆ...?: ಭಾವನಾತ್ಮಕವಾಗಿ ಹಿಂಸೆಗೆ ಒಳಪಟ್ಟ ಮಹಿಳೆಯರಲ್ಲಿ ಹೆಚ್ಚಾಗಿ, ಮಾರಣಾಂತಿಕ ಕಾಯಿಲೆಗಳು ದೃಢಪಡುತ್ತಿರುವುದು ಆತಂಕಕಾರಿಯಾದ ವಿಷಯ. ಇವರಲ್ಲಿ ಖಿನ್ನತೆ, ತೂಕ ಇಳಿಕೆ, ಉಸಿರಾಟದ ಸಮಸ್ಯೆ, ಐಬಿಎಸ್ (irritable bowel syndrome) ತಲೆನೋವು ಆಮ್ಲಪಿತ್ತದಂತಹ ಲಕ್ಷಣಗಳು ಸರ್ವೆ ಸಾಮಾನ್ಯ. ಮಾನಸಿಕವಾಗಿ ಜರ್ಜರಿತಳಾದ ಹೆಣ್ಣನ್ನು ಸಾವಧಾನದಿಂದ ಸಂತೈಸುವ ಮನಸ್ಸುಗಳು ಎಷ್ಟಿವೆ? ಆಕೆಯ ದುಃಖ, ದುಮ್ಮಾನಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವ ಪರಿಣಾಮಕಾರಿ ವೇದಿಕೆಗಳು ಎಷ್ಟಿವೆ? ಅಥವಾ ಆಕೆಯ ನೋವು, ಅನುಭವಿಸುತ್ತಿರುವ ಅವಮಾನಗಳನ್ನು ಬಂಡವಾಳವನ್ನಾಗಿಸಿ, ವ್ಯಾಪಾರೀಕರಿಸಿ ಹಂಚುವ ಹೃದಯ(ಹೀನ) ಮನಸ್ಸುಗಳು, ಕೈಗಳು ಎಷ್ಟಿವೆ? ಈ ಎಲ್ಲ ಪ್ರಶ್ನೆಗಳು ಖಂಡಿತವಾಗಿಯೂ ನಮ್ಮ ನೈತಿಕ ಪ್ರಜ್ಞೆಯನ್ನು ಕೆಣಕಲೇಬೇಕು. ಆಕೆಯ ಮನಃಸ್ಥಿತಿಯನ್ನು ಅರ್ಥೈಸಿ, ಸಂತೈಸಲು ಸಮಯ ಬೇಕು. ಇದು ಇಂದು ಅತಿ ಅಗತ್ಯವಾಗಿದೆ. ಸಮಾಜ, ಕುಟುಂಬದ ಪ್ರೀತಿ, ವಿಶ್ವಾಸ, ಸಹಕಾರ ಆಕೆಯ ಘನತೆಯನ್ನು ಕಾಪಾಡುವುದು ಅವಶ್ಯ. ಅದೆಲ್ಲಕ್ಕಿಂತ ಹೆಚ್ಚಾಗಿ ಹೆಣ್ಣೇ ಮುಕ್ತವಾಗಿ ರ್ಚಚಿಸುತ್ತಾ ಮಹಿಳಾ ಹಕ್ಕುಗಳ ಕುರಿತಾದ ಅರಿವು ಗಳಿಸುತ್ತಾ ಬೇರೆ ಯಾರೋ ದುಃಖ ಶಮನಮಾಡುತ್ತಾರೆ ಎಂದು ಕೂಡದೆ, ತಾನೇ ಮುಂದಾಗಿ ನ್ಯಾಯ ದೊರಕಿಸಿಕೊಳ್ಳುವತ್ತ ಹೆಜ್ಜೆ ಇಟ್ಟರೆ ಎಷ್ಟು ಚೆನ್ನ! ಇಲ್ಲದಿದ್ದರೆ ಮನದೊಳಗಣ ಕಿಚ್ಚು ನಿಮ್ಮನ್ನೇ ಸುಡುತ್ತದೆ.
ಎಷ್ಟು ಜನರಿಗೆ ಇದರ ಅರಿವಿದೆ?: ಆಕೆಗಾಗುತ್ತಿರುವ ಅವಮಾನ, ಹೀಯಾಳಿಕೆಗಳನ್ನು ನುಂಗಿಕೊಳ್ಳುತ್ತಾ, ಕುಟುಂಬದಲ್ಲಾಗುವ ಅಸ್ತವ್ಯಸ್ತಕ್ಕೆ ಹೆದರಿ ‘ಮೌನಗೌರಿ’ಯಾಗಿರುವವರ ದಂಡೇ ನಮ್ಮಲ್ಲಿದೆ. ಆದರೆ ಮುಂದೆ ಇದೇ ಹೆಮ್ಮರವಾಗಿ ಬೆಳೆದು, ತನಗೆ ತಾನೇ ಹಾನಿ ಉಂಟು ಮಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಇದಾಗದಂತೆ ತಡೆಯಲು ಕೆಲ ಹೆಣ್ಣು ಮಕ್ಕಳಿಗೆ ಅರಿವಿನ ಅಗತ್ಯವಿದೆ.